ದಿಗಂತ್ ನಟನೆಯ ಪೌಡರ್ ಸಿನಿಮಾ ಇಂದು ಬಿಡುಗಡೆ; ಕೃಷ್ಣಂ ಪ್ರಣಯ ಸಖಿ, ಭೀಮ ಬಳಿಕದ ಬಹುನಿರೀಕ್ಷಿತ ಚಿತ್ರವಿದು
Powder Kannada Movie: ದಿಗಂತ್, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲ ಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುವ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಪೌಡರ್ ಸಿನಿಮಾ ಇಂದು (ಆಗಸ್ಟ್ 23) ಬಿಡುಗಡೆಯಾಗಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಆಗಸ್ಟ್ ತಿಂಗಳಲ್ಲಿ ಒಂದಿಷ್ಟು ಲವಲವಿಕೆ, ಚಟುವಟಿಕೆ ಗರಿಗೆದರಿದೆ. ಚಿತ್ರಮಂದಿರಗಳತ್ತ ಕನ್ನಡ ಸಿನಿಮಾ ಪ್ರೇಕ್ಷಕರು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ವಾರ ಪೌಡರ್ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ದಿಗಂತ್ ಮಂಚಾಲೆ ಅಭಿನಯದ ಪೌಡರ್ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಈ ಹಿಂದೆ ಗುಲ್ಟು ಎಂಬ ಸಿನಿಮಾ ನಿರ್ದೇಶಿಸಿದ್ದರು.
ಪೌಡರ್ ಸಿನಿಮಾದ ಕಥೆ
ಈ ಸಿನಿಮಾದಲ್ಲಿ ನಿಗೂಢ ಪೌಡರ್‌ನ ಕಥೆಯಿದೆ. ಹಾಸ್ಯ ಚಟಾಕಿ ಚಿತ್ರವಾಗಿದ್ದು, ಹೊಟ್ಟೆ ತುಂಬಾ ನಗು ಇರುವ ನಿರೀಕ್ಷೆಯಿದೆ. ಇಬ್ಬರು ಯುವಕರು ಈ ಪೌಡರ್ ಪ್ರಭಾವದಿಂದ ಶ್ರೀಮಂತರಾಗಲು ಪ್ರಯತ್ನ ಮಾಡುತ್ತಾರೆ. ಈ ಸಂದರ್ಭದಲ್ಲಿ ಎದುರಾಗುವ ವಿವಿಧ ಘಟನೆಗಳ ಸರಮಾಲೆಗಳೇ ಪೌಡರ್ ಸಿನಿಮಾದ ಪ್ರಮುಖ ಕಥೆ ಎನ್ನಲಾಗಿದೆ.
ಪೌಡರ್ ತಾರಾಗಣ
ಸೂರ್ಯ ಪಾತ್ರದಲ್ಲಿ ದಿಗಂತ್ ಮಂಚಾಲೆ ನಟಿಸಿದ್ದಾರೆ. ನಿತ್ಯ ಪಾತ್ರದಲ್ಲಿ ಧನ್ಯ ರಾಮ್‌ಕುಮಾರ್, ಮಲ್ಲಿಕಾ ಪಾತ್ರದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಕರಣ್ ಪಾತ್ರದಲ್ಲಿ ಅನಿರುದ್ಧ್ ಆಚಾರ್ಯ ನಟಿಸಿದ್ದಾರೆ. ಇದೇ ರೀತಿ ಅಣ್ಣಾಚಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ಪವನ್ ಪಾತ್ರದಲ್ಲಿ ರವಿಶಂಕರ್ ಗೌಡ, ಸುಲೇಮಾನ್ ಪಾತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ, ನಾಗಭೂಷಣ ಅವರು ಡಾಕ್ಟರ್ WHO ಆಗಿ ನಟಿಸಿದ್ದಾರೆ.
ಬೆಂಗಳೂರಿನಲ್ಲಿ 2023ರ ಸೆಪ್ಟೆಂಬರ್ 6ರಂದು ಪೌಡರ್ ಸಿನಿಮಾದ ಮುಹೂರ್ತ ನಡೆದಿತ್ತು. ಸುಮಾರು ಒಂದು ವರ್ಷದ ಬಳಿಕ ಚಿತ್ರ ತೆರೆಗೆ ಬರುತ್ತಿದೆ. ಅಕ್ಟೋಬರ್ 30, 2023ರಂದು ಶೂಟಿಂಗ್ ಆರಂಭಿಸಲಾಗಿತ್ತು.
ಈ ವರ್ಷ ಜುಲೈ ತಿಂಗಳಲ್ಲಿ ಪೌಡರ್ ಸಿನಿಮಾದ ಮಿಷನ್ ಘಮ ಘಮ ಎಂಬ ಮೊದಲ ಹಾಡು ಬಿಡುಗಡೆಯಾಗಿತ್ತು. ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ಖ್ಯಾತ ಗಾಯಕ ಎಂ.ಸಿ. ಬಿಜ್ಜು ಅವರ ಕಾಂಬಿನೇಷನ್‌ನಲ್ಲಿ ಈ ಹಾಡು ಮೂಡಿಬಂದಿತ್ತು. ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್ ಮತ್ತು Rap ಸಂಗೀತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಎಂ.ಸಿ. ಬಿಜ್ಜು ಜತೆಯಾಗಿ ಈ ಹಾಡಿಗೆ ಜೀವತುಂಬಿದ್ದರು.
ಆಗಸ್ಟ್ 23ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ಬುಕ್‌ಮೈಶೋನಲ್ಲಿ ಲಭ್ಯವಿರುವ ಮೂಲಕ ಪೌಡರ್ ಮಾತ್ರವಲ್ಲದೆ ಇನ್ನೂ ಕೆಲವು ಕನ್ನಡ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದೆ.
- ಸಿ ಎಂಬ ಕನ್ನಡ ಸಿನಿಮಾವು ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್ ಸುಬ್ರಹ್ಮಣಿ, ಶ್ರೀಧರ್ ರಾಮ್, ಪ್ರಶಾಂತ್ ನಟನಾ, ರೂಪೇಶ್ ಆರ್ಯ ಮುಂತಾದವರು ನಟಿಸಿದ್ದಾರೆ.
- ರಾಜ್ ರತ್ನ ಬಿ ಆಕ್ಷನ್ ಕಟ್ ಹೇಳಿರುವ ತಾಜ್ ಎಂಬ ಸಿನಿಮಾ ಇಂದು (ಆಗಸ್ಟ್ 23) ಬಿಡುಗಡೆಯಾಗುತ್ತಿದೆ.
- ಅನುಪ್ರಭಾಕರ್, ಹರ್ಷಿಕಾ ಪೂಣಚ್ಚ, ಸಿ ವೇಣು, ಅವಿನಾಶ್, ತಬಲಾ ನಾಣಿ, ಸುಧಾ ಬೆಳವಾಡಿ, ಪ್ರಿಯಾ ಹೆಗಡೆ, ಭವಾನಿ ಪರಕಾಶ್, ಬಸತ್ ನಗರ್ ರವಿ, ಸದಾನಂದ ಕಾಲಿ ಮುಂತಾದವರು ನಟಿಸಿರುವ "ಹಗ್ಗ" ಸಿನಿಮಾ ಬಿಡುಗಡೆಯಾಗುತ್ತಿದೆ.
- ಸುಕ್ರತ್ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಪವನ್ ವೇಣುಗೋಪಲ್, ನಂದಗೋಪಾಲ್ ಮುಂತಾದವರು ನಟಿಸಿದ "ಕಪಟಿ" ರಿಲೀಸ್ ಆಗುತ್ತಿದೆ.
- ಆರ್ಯನ್ ಹರೀಶ್, ರಂಜಿತಾ ಮೂರ್ತಿ, ನಾಗೇಂದ್ರ ಕೋಟೆ ಮುಂತಾದವರು ನಟಿಸಿದ "ದಿ ಜರ್ನಲಿಸ್ಟ್" ಬಿಡುಗಡೆಯಾಗಲಿದೆ.