ಡಬ್ಬಿಂಗ್ ವಿಚಾರದಲ್ಲಿ ಧ್ರುವಗೆ ಒತ್ತಡ ಹಾಕ್ಬೇಡ, ಆತನಿಗೆ ನೋವಾಗುತ್ತೆ; ದರ್ಶನ್ ಕಾಳಜಿ ನೆನೆದ ಪ್ರಥಮ್
ಅಣ್ಣನ ರಾಜಮಾರ್ತಾಂಡ ಚಿತ್ರದ ಡಬ್ಬಿಂಗ್ ವಿಚಾರದಲ್ಲಿ ತುಂಬ ನೋವುಂಡಿದ್ದ ಧ್ರುವ ಸರ್ಜಾ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಈ ವಿಚಾರದಲ್ಲಿ ದರ್ಶನ್ ಅವರ ಕಾಳಜಿ ಹೇಗಿತ್ತೆಂದು ವಿವರಿಸಿದ್ದಾರೆ.

Rajamarthanda Trailer: ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ಮಿಂಚಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಚಿಕ್ಕವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು ಚಿರಂಜೀವಿ ಸರ್ಜಾ. ಚಿರು ನಟನೆಯ ಕೊನೇ ಸಿನಿಮಾ ರಾಜಮಾರ್ತಾಂಡ ಇದೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಸಿನಿಮಾದ ಶೂಟಿಂಗ್ ಮುಗಿಸಿದ್ದ ಚಿರು, ಚಿತ್ರಕ್ಕೆ ಡಬ್ ಮಾಡುವುದಕ್ಕೂ ಮುನ್ನ ಅಕಾಲಿಕ ಸಾವಿಗೀಡಾದರು. ಬಳಿಕ ಸಿನಿಮಾ ಕೈಗೆತ್ತಿಕೊಂಡಿದ್ದ ಧ್ರುವ, ತಾವೇ ಅಣ್ಣನ ಚಿತ್ರಕ್ಕೆ ಡಬ್ ಮಾಡಿದ್ದರು. ಇದೀಗ ಸಿನಿಮಾ ಇದೇ ಅಕ್ಟೋಬರ್ 6ರಂದು ರಿಲೀಸ್ ಆಗುತ್ತಿದೆ. ಟ್ರೇಲರ್ ಸಹ ಹೊರಬಂದಿದೆ.
ಅಣ್ಣನ ಸಿನಿಮಾಕ್ಕೆ ಸಲೀಸಾಗಿ ಧ್ರುವ ಡಬ್ ಮಾಡಿರಬಹುದು ಎಂದು ಅನಿಸಬಹುದು. ಆದರೆ, ಅಸಲಿ ವಿಚಾರ ಮಾತ್ರ ಬೇರೆಯದೇ ಇದೆ. ಡಬ್ಬಿಂಗ್ ದಿನಗಳು ಧ್ರುವ ಪಾಲಿಗೆ ನಿಜಕ್ಕೂ ದುಃಖದ ದಿನಗಳಾಗಿದ್ದವು. ತೆರೆಮೇಲೆ ಅಣ್ಣ ಚಿರು ಕಾಣುತ್ತಿದ್ದರೆ, ನೋವಿನಿಂದಲೇ ಧ್ರುವ ಡಬ್ಬಿಂಗ್ ಮಾಡುತ್ತಿದ್ದರು. ಆ ನೋವು ಹೇಗಿತ್ತು ಎಂಬುದನ್ನು ನಟ ಪ್ರಥಮ್, ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ರಾಜಮಾರ್ತಾಂಡ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಇಡೀ ಚಿತ್ರತಂಡದ ಜತೆಗೆ ಧ್ರುವ ಸರ್ಜಾ, ಮೇಘನಾ ರಾಜ್, ಸುಂದರ್ ರಾಜ್, ಪ್ರಥಮ್ ಸೇರಿ ಸಾಕಷ್ಟು ಮಂದಿ ಆಸೀನರಾಗಿದ್ದರು. ಆ ಪೈಕಿ ಮೈಕ್ ಸಿಗುತ್ತಿದ್ದಂತೆ, ಡಬ್ಬಿಂಗ್ ಸಮಯದಲ್ಲಿ ಧ್ರುವ ಅನುಭವಿಸಿದ ಯಾತನೆ ಹೇಗಿತ್ತು? ಅದಕ್ಕೆ ದರ್ಶನ್ ಹೇಳಿದ ಮಾತೇನಾಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಪ್ರಥಮ್ ಹೇಳಿದ ಮಾತು ಹೀಗಿದೆ..
"ಧ್ರುವ ಸರ್ಜಾ, ಮೇಘನಾ ಮೇಡಂ, ದರ್ಶನ್ ಸರ್ ಈ ಚಿತ್ರಕ್ಕೆ ಮೂರು ಪಿಲ್ಲರ್‌ಗಳು. ನಿರ್ಮಾಪಕ ಶಿವಣ್ಣ ಹೇಳೋರು, ಧ್ರುವ ಒಂದು ಸೀನ್ ಡಬ್ ಮಾಡ್ತಾರೆ, ಹೇಳಲ್ಲ ಕೇಳಲ್ಲ ಮತ್ತೆ ಹೋಗಿ ಬಿಡ್ತಾರೆ. ಅದಕ್ಕೆ ನಾನು ಹೇಳಿದೆ, ಅಣ್ಣನ ಸಿನಿಮಾ ಆಗಿರೋದ್ರಿಂದ, ಅವರನ್ನು ನೋಡಿ ಡಬ್ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಅವರಿಗೂ ನೋವಾಗುತ್ತದೆ. ಸ್ವತಃ ಧ್ರುವ ಅವರು ತಮ್ಮ ಸಿನಿಮಾಕ್ಕೂ ಇಷ್ಟೊಂದು ಸಮಯ ತೆಗೆದುಕೊಂಡಿರಲಿಲ್ಲ. ಅಣ್ಣನ ಸಿನಿಮಾ ಅನ್ನೋ ಕಾರಣಕ್ಕೆ ಫೀಲ್ ಮಾಡಿ, ಅದರಲ್ಲಿ ಇನ್ವಾಲ್ವ್ ಆಗಿ ಡಬ್ ಮಾಡಿದ್ದಾರೆ"
"ಒಮ್ಮೆ ಇದೇ ವಿಚಾರವಾಗಿ ಸ್ವತಃ ದರ್ಶನ್ ಅವರು, ನಿರ್ಮಾಪಕರ ಬಳಿ ಒಂದು ಮಾತು ಹೇಳಿದ್ರು. ಯಾವುದೇ ಕಾರಣಕ್ಕೂ ಡಬ್ಬಿಂಗ್ ವಿಚಾರವಾಗಿ ಧ್ರುವ ಮೇಲೆ ಒತ್ತಡ ಹಾಕಬೇಡ. ಆತ ಎಷ್ಟಾದ್ರೂ ಟೈಮ್ ತೆಗೆದುಕೊಳ್ಳಲಿ. ತುಂಬ ನೋವಾಗುತ್ತೆ. ಕಷ್ಟವಾಗುತ್ತೆ. ಪ್ರತಿ ಹಂತದಲ್ಲೂ ಓಡಾಡಿಕೊಂಡು ಬಂದಂಥ ಅಣ್ಣ ಇಲ್ಲ ಅಂದಾಗ ನೋವಾಗುತ್ತೆ. ಡಬ್ಬಿಂಗ್ ಲೇಟ್ ಆಗುತ್ತಾ ಆಗಲಿ. ಇನ್ನೂ ಒಂದಷ್ಟು ದಿನ ಕಾಯಿ ಎಂದು ದರ್ಶನ್ ಸರ್ ಹೇಳಿದ್ದರು" ಎಂದು ಪ್ರಥಮ್ ಹಳೆಯದನ್ನು ಮತ್ತೆ ರೀಕಾಲ್ ಮಾಡಿಕೊಂಡಿದ್ದಾರೆ.
ದರ್ಶನ್- ಧ್ರುವ ಚೆನ್ನಾಗಿಯೇ ಇದ್ದಾರೆ..
ಮತ್ತೊಂದೆಡೆ ಧ್ರುವ ಮತ್ತು ದರ್ಶನ್ ನಡುವೆ ಯಾವುದೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡ್ತಿದೆ. ಈ ಬಗ್ಗೆಯೂ ಪ್ರಥಮ್ ಹೇಳಿಕೊಂಡಿದ್ದಾರೆ. “ಧ್ರುವ ಆವತ್ತು ಸಪ್ಪಾಗಿರುವುದಕ್ಕೆ ಕಾರಣ ಅವರ ಅಭಿಮಾನಿಯೊಬ್ಬರ ಸಾವು. ಧ್ರುವ ಸರ್ಜಾ ಅವರ ದೊಡ್ಡ ಅಭಿಮಾನಿಯಾಗಿದ್ದ ರಘುನಾಥ ಭಜಂತ್ರಿ, ಬಂದ್‍ಗಿಂತ ಒಂದು ದಿನ ಮುಂಚಿತವಾಗಿ ತೀರಿ ಹೋದರು. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ಅಪಘಾತದಲ್ಲಿ ಕಾರು-ಬಸ್ಸಿನ ನಡುವೆ ಅಪಘಾತ ಸಂಭವಿಸಿತು. ರಘುನಾಥ್ ಭಜಂತ್ರಿ ಅವರಿಗೆ ಒಂದು ಚಿತ್ರ ನಿರ್ದೇಶನ ಮಾಡುವ ಆಸೆ ಇತ್ತು. ಧ್ರುವ ಅವರನ್ನು ಭೇಟಿ ಮಾಡುವ ಆಸೆಯೂ ಇತ್ತು. ಈ ವಿಷಯವನ್ನು ಧ್ರುವ ಅವರಿಗೂ ಹೇಳಿದ್ದೆ. ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವುದಕ್ಕೆ ಧ್ರುವ ಹೇಳಿದ್ದರು. ಆದರೆ, ಅಷ್ಟರಲ್ಲಿ ರಘುನಾಥ್ ನಿಧನರಾದರು" ಎಂದಿದ್ದಾರೆ ಪ್ರಥಮ್.
ಮನರಂಜನೆ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ