Dr Rajkumar Birthday: ಇಂದು ಡಾ. ರಾಜ್‌ಕುಮಾರ್ ಹುಟ್ಟುಹಬ್ಬ; ವರನಟನ ಜಯಂತ್ಯೋತ್ಸವ ನಿಮಿತ್ತ ಏನೆಲ್ಲ ಇರಲಿದೆ?
ಇಂದು (ಏ. 24) ವರನಟ ಡಾ. ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬ. ಬರೀ ರಾಜ್ ಕುಟುಂಬ ಮಾತ್ರವಲ್ಲದೆ, ಅವರ ಅಪಾರ ಅಭಿಮಾನಿಗಳೂ ಈ ವಿಶೇಷ ದಿನವನ್ನು ಅಷ್ಟೇ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Dr Rajkumar Birthday: ಇಂದು (ಏ. 24) ವರನಟ, ನಟಸಾರ್ವಭೌಮ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬ. ದೈಹಿಕವಾಗಿ ಎಲ್ಲರನ್ನಗಲಿ 18ವರ್ಷಗಳು ಕಳೆದರೂ, ಇಂದಿಗೂ ಅವರ ಕೋಟ್ಯಂತರ ಅಭಿಮಾನಿಗಳು ರಾಜ್ ಸ್ಮರಿಸದ ದಿನವಿಲ್ಲ. ಅದರಲ್ಲೂ ಅವರ ಜಯಂತಿ ಮತ್ತು ಪುಣ್ಯಸ್ಮರಣೆ ದಿನವಂತೂ ಬಗೆ ಬಗೆ ಕಾರ್ಯಕ್ರಮಗಳ ಮೂಲಕ ಅವರನ್ನು ಮತ್ತೆ ನೆನಪಿಸಿಕೊಳ್ಳುವ ಕಾರ್ಯಗಳು ನಡೆಯುತ್ತವೆ. ಈ ಸಲವೂ ಅವರ 95ನೇ ಬರ್ತ್‌ಡೇ ನಿಮಿತ್ತ ರಾಜ್ಯಾದ್ಯಂತ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷವೂ ಈ ದಿನದಂದು ಬರೀ ಕುಟುಂಬಸ್ಥರು, ಬರೀ ಅಭಿಮಾನಿಗಳು ಮಾತ್ರವಲ್ಲದೇ ಸರ್ಕಾರವೂ ಈ ದಿನವನ್ನು ಅಷ್ಟೇ ಅರ್ಥಪೂರ್ಣವಾಗಿ ಆಚರಿಸುತ್ತದೆ. ಲೋಕಸಭೆ ಚುನಾವಣೆ ಕಾವಿನ ನಡುವೆಯೂ ಅಣ್ಣಾವ್ರ ಬರ್ತ್‌ಡೇಗೆ ವಿವಿದ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕಂಠೀರವ ಸ್ಡುಡಿಯೋದಲ್ಲಿನ ಡಾ. ರಾಜ್ ಸಮಾಧಿಗೆ ಹೂಗಳ ಅಲಂಕಾರ ಮಾಡಲಾಗಿದೆ. ಅದರಂತೆ, ಇಂದು ಪುಣ್ಯಭೂಮಿಯತ್ತ ದೌಡಾಯಿಸುವ ಅಭಿಮಾನಿಗಳು ಹೆಚ್ಚಿರುವುದರಿಂದ ಅವರಿಗೂ ಎಲ್ಲ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಸಮಾಧಿ ಬಳಿ ರಕ್ತದಾನ, ಅನ್ನದಾನ, ನೇತ್ರದಾನ
ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದ ರಾಜ್‌ಕುಮಾರ್, ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಈಗ ಪ್ರತಿ ವರ್ಷದಂತೆ, ಸಮಾಧಿ ಸ್ಥಳದ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆಯಲಿವೆ. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಲಿದೆ. ಅಷ್ಟೇ ಅಲ್ಲ ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿರುವ ಡಾ. ರಾಜ್ ಪ್ರತಿಮೆಗಳಿಗೂ ಇಂದು ವಿಶೇಷ ಅಲಂಕಾರ. ಜತೆಗೆ ಅನ್ನ ಸಂತರ್ಪಣೆಯಂಥ ಕಾರ್ಯಕ್ರಮಗಳು ನಡೆಯಲಿವೆ.
ಕುಟುಂಬದಿಂದಲೂ ವಿಶೇಷ ಪೂಜೆ
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಡಾ. ರಾಜ್ ಕುಟುಂಬದಿಂದ ರಾಜ್ ಸಮಾಧಿಗೆ ವಿಶೇಷ ಪೂಜೆಯೂ ನೆರವೇರಲಿದೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿ ಇಡೀ ರಾಜ್ ಕುಟುಂಬ ಸಮಾಧಿ ಸ್ಥಳಕ್ಕೆ ಆಗಮಿಸಲಿದೆ. ಚಿತ್ರೋದ್ಯಮದ ಸೆಲೆಬ್ರಿಟಿಗಳೂ ಡಾ. ರಾಜ್ ಸಮಾಧಿಗೆ ಆಗಮಿಸಿ ನಮಿಸಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಇದೀಗ ರಾಜ್ ಸ್ಮರಣೆ ಶುರುವಾಗಿದ್ದು, ಒಂದಷ್ಟು ಸಿನಿಮಾ ತಂಡಗಳು ರಾಜ್ ಫೋಟೋಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರೀಕರಣ ಆರಂಭಿಸುತ್ತಿವೆ.
ಮೈ ನೇಮ್ ಇಸ್ ರಾಜ್ ಕಾರ್ಯಕ್ರಮ
ರಾಜಕುಮಾರ್ ಅವರ 95ನೇ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ 6 ಗಂಟೆಯ ನಂತರ ಮೈ ನೇಮ್ ಇಸ್ ರಾಜ್ (ಭಾಗ 3) ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ಈ ಸಮಾರಂಭ ಆಯೋಜಿಸಿದೆ. ಈ ಸಲ ರಾಜ್ ಗೀತ ನಮನ ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ಡಾ. ರಾಜ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.
