Dr Rajkumar: ಅಣ್ಣಾವ್ರ ಅಪರೂಪದ ಫೋಟೊ ಹಂಚಿಕೊಂಡ ಮೊಮ್ಮಗ ಧೀರೇನ್; ಈ ಫೋಟೊ ನಿಜಕ್ಕೂ ವಿಶೇಷ
Dr Rajkumar Rare Photo: ಕನ್ನಡದ ವರನಟ ಡಾ ರಾಜಕುಮಾರ್ ಎಂದೂ ಮರೆಯಾಗದ ಮಾಣಿಕ್ಯ. ಕರುನಾಡಿನ ಪ್ರೀತಿಯ ಅಣ್ಣಾವ್ರ ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ ಮೊಮ್ಮಗ ಧೀರೇನ್. ಆ ಫೋಟೊದ ವಿಶೇಷವೇನು ನೋಡಿ.

Dr Rajkumar Rare Photo: ಏಪ್ರಿಲ್ ತಿಂಗಳು ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಬಹಳ ವಿಶೇಷ. ಯಾಕೆಂದರೆ ಏಪ್ರಿಲ್ 24 ಡಾ. ರಾಜ್‌ಕುಮಾರ್ ಅವರ ಜನ್ಮದಿನ. ಕನ್ನಡ ಸಿನಿಮಾ ರಂಗದ ಮೇರುನಟ ರಾಜ್‌ಕುಮಾರ್ ಎಂದಿಗೂ ಮರೆಯಾಗದ ಮಾಣಿಕ್ಯ. ತಮ್ಮ ನಟನೆ ಮಾತ್ರವಲ್ಲ ಅದ್ಭುತ ವ್ಯಕ್ತಿತ್ವದ ಕಾರಣದಿಂದಲೂ ಕರುನಾಡಿನಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು ವರನಟ. ಅಭಿಮಾನಿಗಳೇ ದೇವರು ಎಂದು ಕರೆದ ಮಹಾತ್ಮ ನಮ್ಮ ಅಣ್ಣಾವ್ರು.
ಇಂದಿಗೂ ಡಾ. ರಾಜ್‌ಕುಮಾರ್ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ಕನ್ನಡ ನಾಡು ಮಾತ್ರವಲ್ಲದೇ ಭಾರತದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದರು ರಾಜ್‌ಕುಮಾರ್. ಅಣ್ಣಾವ್ರು ನಮ್ಮನ್ನು ಅಗಲಿ 19 ವರ್ಷಗಳು ಕಳೆದರೂ ಅವರ ನೆನಪು ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಹಾಗೇ ಇದೆ. ಅಂದ ಹಾಗೆ ರಾಜ್‌ಕುಮಾರ್ ಸತ್ತಿದ್ದು ಕೂಡ ಏಪ್ರಿಲ್ ತಿಂಗಳಲ್ಲಿ. ಏಪ‍್ರಿಲ್ 12 ರಾಜ್‌ಕುಮಾರ್ ಪುಣ್ಯಸ್ಮರಣೆ. ಅವರ ಸಿನಿಮಾಗಳು, ಹಾಡುಗಳು, ಡೈಲಾಗ್‌ಗಳು ಇಂದಿಗೂ ಸಾಕಷ್ಟು ಜನಪ್ರಿಯ. ಇತ್ತೀಚೆಗಷ್ಟೇ ಡಾ. ರಾಜ್ ಪುಣ್ಯಸ್ಮರಣೆ ಕೂಡ ನೆರವೇರಿತ್ತು. ಇದಾದ ಬೆನ್ನಲ್ಲೇ ಈಗ ಅವರ ಅಣ್ಣಾವ್ರ ಅಪರೂಪದ ಫೋಟೊವೊಂದು ವೈರಲ್ ಆಗುತ್ತಿದೆ.
ಈ ಫೋಟೊವನ್ನು ಡಾ. ರಾಜ್ ಕುಮಾರ್ ಮೊಮ್ಮಗ ಧೀರೇನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೊ ಖಂಡಿತ ವಿಶೇಷವಾಗಿದೆ. ಯಾಕೆ ಎನ್ನುವುದನ್ನು ಧೀರೇನ್ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ಫೋಟೊದ ವಿಶೇಷವೇನು
ಈ ಫೋಟೊದಲ್ಲಿ ಡಾ. ರಾಜ್‌ಕುಮಾರ್ ಎಂದಿನಂತೆ ಬಿಳಿ ಶರ್ಟ್ ಧರಿಸಿದ್ದು, ಕಪ್ಪು ಕನ್ನಡಕ ಹಾಕಿಕೊಂಡಿದ್ದಾರೆ. ಇದು ಫೋಟೊವನ್ನು ಪುನೀತ್ ರಾಜ್‌ಕುಮಾರ್ ಅವರ ಅಜಯ್ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆಯಲಾಗಿದೆ.
ಈ ಬಗ್ಗೆ ಬರೆದುಕೊಂಡಿರುವ ಧೀರೇನ್ ‘ಇದು ನಮ್ಮ ಅಜ್ಜಿಯ ನೋಕಿಯಾ ಫೋನ್‌ನಲ್ಲಿ ಸೆರೆ ಹಿಡಿದ ಚಿತ್ರ. ಚಿಕ್ಕಮಾಮನ ಅಜಯ್ ಸಿನಿಮಾ ಕಾಸ್ಟ್ಯೂಮ್ ಟ್ರಯಲ್ ಮಾಡುವಾಗ ಈ ಚಿತ್ರ ತೆಗೆದಿದ್ದು‘ ಎಂದು ಬರೆದುಕೊಂಡಿದ್ದಾರೆ.
ಅಣ್ಣಾವ್ರ ಈ ಅಪರೂಪದ ಫೋಟೊ ನೋಡಿರುವ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ, ತಮ್ಮ ಖುಷಿಯನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ‘ಡಾ. ರಾಜ್‌ಕುಮಾರ್ ಎವರ್‌ಗ್ರೀನ್ ಹೀರೊ‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ದಿ ರಿಯಲ್ ಕನ್ನಡಿಗ. ನಮ್ಗೆ ನಿನ್ ಋಣ ಬೇಡ, ನಮ್ಮ ಋಣದಲ್ಲಿ ಇರು ಆಯ್ತಾ ಅನ್ನುವಂತಿದೆ ಆ ನೋಟ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡುವ ಮೂಲಕ ಫೋಟೊದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ದೇವರು‘ ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ‘ಸ್ಟೈಲ್ ಕಿಂಗ್‘ ಎಂದು ಕೂಡ ರಾಜ್‌ಕುಮಾರ್ ಅವರನ್ನು ಕರೆದಿದ್ದಾರೆ.
