ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಭೀಮನದ್ದು ಗಜ ಗಾಂಭೀರ್ಯದ ನಡಿಗೆ; ಮೊದಲ ದಿನ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ!
ದುನಿಯಾ ವಿಜಯ್ ಅವರ ಭೀಮ ಸಿನಿಮಾ ಶುಕ್ರವಾರ (ಆಗಸ್ಟ್ 9) ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪಕ್ಕದ ತೆಲುಗು, ತಮಿಳು ರಾಜ್ಯಗಳಲ್ಲಿಯೂ ತೆರೆಕಂಡಿದೆ. ಮೊದಲ ದಿನ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದ್ದಂತೆ, ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ. ಹಾಗಾದರೆ, ಮೊದಲ ದಿನ ಈ ಚಿತ್ರ ಗಳಿಸಿದ್ದೆಷ್ಟು?
Bheema Day 1 Box Office Collection: ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಆಗಸ್ಟ್ 9ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರಿಸಿದೆ. ಸಲಗ ಹಿಟ್ ಬಳಿಕ ವಿಜಯ್, ಭೀಮ ಮೂಲಕ ಮತ್ತೊಂದು ಯಶಸ್ಸನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಕಲೆಕ್ಷನ್ ವಿಚಾರದಲ್ಲಿಯೂ ಭೀಮ ಮುಂದಡಿ ಇರಿಸಿದ್ದಾನೆ. ಹಾಗಾದರೆ, ಮೊದಲ ದಿನ ಭೀಮನ ಬೊಕ್ಕಸಕ್ಕೆ ಬಂದದ್ದು ಎಷ್ಟು ಕೋಟಿ? ಇಲ್ಲಿದೆ ಮಾಹಿತಿ.
ಕೃಷ್ಣ ಸಾರ್ಥಕ್ ಅವರ ಕೃಷ್ಣ ಕ್ರಿಯೇಷನ್‌ಸ್ ಮತ್ತು ಜಗದೀಶ್ ಫಿಲಂಸ್ ಬ್ಯಾನರ್‌ನಲ್ಲಿ ಮೂಡಿಬಂದ ಭೀಮ ಸಿನಿಮಾ ಶುಕ್ರವಾರ (ಆಗಸ್ಟ್ 9) ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪಕ್ಕದ ತೆಲುಗು, ತಮಿಳು ರಾಜ್ಯಗಳಲ್ಲಿಯೂ ತೆರೆಕಂಡಿದೆ. ಮೊದಲ ದಿನ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದ್ದಂತೆ, ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ. ಅದರಂತೆ, ಮಲ್ಟಿಫ್ಲೆಕ್ಸ್ ಮತ್ತು ಏಕಪರದೆ ಚಿತ್ರಮಂದರಿಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಭೀಮ ಸಿನಿಮಾ.
ಪಕ್ಕಾ ಲೋಕಲ್ ಸಿನಿಮಾ..
ಭೀಮ ಪಕ್ಕಾ ಲೋಕಲ್ ಸೊಗಡಿನ ಸಿನಿಮಾ. ಬೆಂಗಳೂರಿನ ಸೌಂದರ್ಯದ ಮುಖ ನೋಡಿದವರಿಗೆ ಇನ್ನೊಂದು ನಿಗೂಢ ಜಗತ್ತನ್ನು ಇದು ಪರಿಚಯಿಸುತ್ತದೆ. ಈ ಸಿನಿಮಾದಲ್ಲಿ ಶುಂಠಿ, ಸೈಕು, ಜುಟ್ಟು, ಮೀಟರ್, ಫೀಲ್ಡು ಇತ್ಯಾದಿ ಲೋಕಲ್ ಹುಡುಗರ ಪದಗಳೇ ಇವೆ. ಸಿನಿಮಾದಲ್ಲಿ ಇರಲಿ ಎಂದು ಎಲ್ಲೂ ಥಳಕುಬಳಕು ಬಳಸಿಲ್ಲ. ಇದು ಕೂಡ ಇಷ್ಟವಾಗುವಂತಹ ಇನ್ನೊಂದು ಅಂಶ. ಗಾಂಜಾ ಅಮಲು, ಸಂಗೀತದ ಘಮಲು ಚಿತ್ರದ ಮೊದಲಾರ್ಧವನ್ನು ತುಂಬಿಸಿವೆ. ಸಲಗದಲ್ಲಿ ಮೋಡಿ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್, ಭೀಮನ ರೌಡಿಸಂ ಕಥೆಗೂ ಒಂದೊಳ್ಳೆ ಕಾಡುವ ಸಂಗೀತವನ್ನೇ ನೀಡಿದ್ದಾರೆ. ಮಾಸ್ತಿ ಬರವಣಿಗೆ ಚಿತ್ರದ ತೂಕ ಹೆಚ್ಚಿಸಿವೆ.
ರಾಜ್ಯಾದ್ಯಂತ ಒಳ್ಳೆಯ ರೆಸ್ಪಾನ್ಸ್
ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರುವ ಭೀಮ ಸಿನಿಮಾ ಆರಂಭದಿಂದಲೂ ಹೈಪ್ ಕ್ರಿಯೇಟ್ ಮಾಡಿತ್ತು. ನೈಜ ಘಟನೆ ಆಧರಿತ ರೌಡಿಸಂ ಮತ್ತು ವ್ಯಸನದ ಹಿನ್ನೆಲೆಯಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದರು ವಿಜಯ್. ಇದೀಗ ಇದೇ ಕಥೆಗೆ ಪ್ರೇಕ್ಷಕ ಜೈ ಎಂದಿದ್ದಾನೆ. ರಾಜ್ಯದ ಪ್ರತಿ ಚಿತ್ರಮಂದಿರದಲ್ಲಿಯೂ ಭೀಮ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದರಂತೆ ಕಲೆಕ್ಷನ್ ವಿಚಾರದಲ್ಲಿಯೂ ಭೀಮನದ್ದು ಗಜ ಗಾಂಭೀರ್ಯದ ನಡಿಗೆ. ಅಂದರೆ, ಮೊದಲ ದಿನವೇ ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಬಾಚಿಕೊಂಡಿದ್ದಾನೆ ಎನ್ನಲಾಗುತ್ತಿದೆ!
ಮೊದಲ ದಿನದ ಕಲೆಕ್ಷನ್ ಎಷ್ಟು?
ಇನ್ನು ಸಿನಿಮಾಗಳ ಕಲೆಕ್ಷನ್ ವಿಚಾರವನ್ನು ಪ್ರೆಡಿಕ್ಟ್ ಮಾಡುವ sacnilk ವೆಬ್‌ಸೈಟ್ ಭೀಮ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟೆಂದು ಅಂದಾಜಿಸಿದೆ. ಅದರಲ್ಲಿ ಮೊದಲ ದಿನ 3.5 ಕೋಟಿ ಗಳಿಸಿರುವ ಸಾಧ್ಯತೆ ಇದೆ ಎಂದಿದೆ. ಆದರೆ, ಗಾಂಧಿನಗರದ ಗಲ್ಲಿಯಿಂದ ಇದೇ ಸಿನಿಮಾ 10 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕುಂದಿಹೋಗಿದ್ದ ಚಿತ್ರಮಂದಿರಗಳಿಗೆ ಭೀಮನ ಆಗಮನ ಹೊಸ ಚೈತನ್ಯ ತಂದಿದೆ. ಮುಚ್ಚುವ ಹಂತದಲ್ಲಿದ್ದ ಚಿತ್ರಮಂದಿರಗಳಲ್ಲಿಯೂ ಭೀಮ ಅಬ್ಬರಿಸುತ್ತಿದ್ದಾನೆ. ಅಧಿಕೃತ ಕಲೆಕ್ಷನ್ ಎಷ್ಟೆಂಬುದನ್ನು ಚಿತ್ರತಂಡವೇ ಘೋಷಿಸಬೇಕಿದೆ.
ಶನಿವಾರ ಭಾನುವಾರವೂ ಮುಂದುವರಿಯಲಿದೆ ಕಮಾಯಿ
ಕರ್ನಾಟಕದಲ್ಲಿ ಭೀಮ ಸಿನಿಮಾಕ್ಕೆ ದೊಡ್ಡ ಓಪನಿಂಗ್ ಸಿಕ್ಕಿದೆ. ಶುಕ್ರವಾರ ಬುಕ್ ಮೈಶೋನಲ್ಲಿಯೂ ಬುಕಿಂಗ್ ಬಿರುಸು ಪಡೆದುಕೊಂಡಿದೆ. ಈ ನಡುವೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲಿಯೇ, ಇಂದು ಶನಿವಾರ ಮತ್ತು ಭಾನುವಾರವೂ ಮೊದಲ ದಿನಕ್ಕಿಂತ ತುಸು ಜಾಸ್ತಿಯೇ ಕಮಾಯಿ ಮಾಡುವ ಸಾಧ್ಯತೆ ಇದೆ. ಒಟ್ಟಾರೆ, ಭೀಮನ ಮೂಲಕ ಕಲೆಕ್ಷನ್ ವಿಚಾರದಲ್ಲಿ ದೊಡ್ಡ ಬದಲಾವಣೆ ಮತ್ತು ಬೆಳವಣಿಗೆ ಕಂಡು ಬಂದಿದೆ.