Bheema First half Review: ಗಾಂಜಾ ಅಮಲು, ಸಂಗೀತದ ಘಮಲು; ದುನಿಯಾ ವಿಜಯ್ ‘ಭೀಮ’ನ ಮೊದಲಾರ್ಧ ಚಿಂದಿ
ಲೋಕಲ್ ರೌಡಿಸಂ ಹೇಗಿರುತ್ತದೆ ಎಂಬುದನ್ನು ಭೀಮ ಸಿನಿಮಾದಲ್ಲಿ ತೋರಿಸಿದ್ದಾರೆ ದುನಿಯಾ ವಿಜಯ್. ಅವರಿವರ ಬಾಯಲ್ಲಿ ಮಾತು ಮಾತಿಗೂ ಅಮ್ಮ, ಅಕ್ಕ ಬೈಗುಳಗಳು ಫಿಲ್ಟರ್ ಇಲ್ಲದೇ ತೇಲಿ ಬರುತ್ತವೆ. ಗಾಂಜಾ ಅಮಲು, ಸಂಗೀತದ ಘಮಲು ಚಿತ್ರದ ಮೊದಲಾರ್ಧವನ್ನು ತುಂಬಿಸಿವೆ. ಸಂಗೀತ ನಿರ್ದೇಶಕ ಚರಣ್ ರಾಜ್, ಭೀಮನ ರೌಡಿಸಂ ಕಥೆಗೂ ಒಂದೊಳ್ಳೆ ಕಾಡುವ ಸಂಗೀತವನ್ನೇ ನೀಡಿದ್ದಾರೆ.
Bheema First half Review: ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾ ಇಂದು (ಆಗಸ್ಟ್ 9) ಬಿಡುಗಡೆಯಾಗಿದೆ. ವಿಜಯ್ ನಿರ್ದೇಶನದ ಸಲಗ ಸಿನಿಮಾ ಗೆದ್ದ ಬೆನ್ನಲ್ಲೇ ಘೋಷಣೆ ಮಾಡಿದ ಎರಡನೇ ಸಿನಿಮಾ ಈ ಬಲ ಭೀಮ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಇದೀಗ ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಎಲ್ಲೆಡೆಯಿಂದ ಪಾಸಿಟಿವ್ ಟಾಕ್ ಕೇಳಿಬಂದಿದೆ. ಈಗಾಗಲೇ ಟ್ರೇಲರ್ ನೋಡಿದಂತೆ, ಈ ಸಿನಿಮಾದಲ್ಲಿ ರೌಡಿಸಂ ಜತೆಗೆ ಡ್ರಗ್ಸ್ ವ್ಯಸನದ ಬಗ್ಗೆಯೂ ಸಂದೇಶವೊಂದನ್ನು ನೋಡುಗರ ಕಡೆಗೆ ದಾಟಿಸಿದ್ದಾರೆ ವಿಜಯ್. ಹಾಗಾದರೆ ಈ ಸಿನಿಮಾದ ಮೊದಲಾರ್ಧ ಹೇಗಿದೆ? ಏನೆಲ್ಲ ಹೇಳಿದ್ದಾರೆ? ಇಲ್ಲಿದೆ ನೋಡಿ..
ನೈಜತೆಗೆ ಹೆಚ್ಚಿನ ಪ್ರಾಶಸ್ತ್ಯ
ದುನಿಯಾ ವಿಜಯ್ ಸಿನಿಮಾ ಎಂದರೆ ಅಲ್ಲಿ ನೈಜತೆಗೆ ಹೆಚ್ಚಿನ ಆದ್ಯತೆ. ಕಲ್ಟ್ ಕ್ಲಾಸಿಕ್ ಶೈಲಿಯ ಕಥೆಯನ್ನು ಅಷ್ಟೇ ರಿಯಲಿಸ್ಟಿಕ್ ಆಗಿ ತೋರಿಸುವ ತಾಕತ್ತು ವಿಜಯ್‌ಗಿದೆ. ಅದು ಭೀಮನ ಮೂಲಕ ಮತ್ತೆ ಸಾಬೀತಾಗಿದೆ. ನೈಜ ಕಥೆ ಅಂದರೆ, ಅಲ್ಲಿ ಎಲ್ಲಿವೂ ತೀರಾ ಲೋಕಲ್ ಆಗಿರಬೇಕು. ಆ ಕಾರಣಕ್ಕೆ ಪ್ರೇಕ್ಷಕನಿಗೆ ಇಡೀ ಬೆಂಗಳೂರನ್ನೇ ಒಂದು ರೌಂಡ್ ಹೊಡೆದು ಬೀದಿ ಬೀದಿಯನ್ನೂ ತೋರಿಸಿದ್ದಾರೆ. ಇದರ ಜತೆಗೆ ಗಲ್ಲಿ ರೌಡಿಗಳ ಹಾವಳಿ, ಲಾಂಗು ಮಚ್ಚುಗಳ ರಾಶಿಯೂ ಚಿತ್ರದ ಮೊದಲಾರ್ಧದಲ್ಲಿ ಕಣ್ಣಿಗೆ ಕಾಣುತ್ತದೆ.
ಗಾಂಜಾ ಅಮಲು, ಸಂಗೀತ ಘಮಲು
ಮಾಸ್ ಹಾಡಿನ ಮೂಲಕ ಎಂಟ್ರಿಕೊಡುವ ಭೀಮ (ದುನಿಯಾ ವಿಜಯ್) ಲೋಕಲ್ ರೌಡಿಸಂ ಹೇಗಿರುತ್ತದೆ ಎಂಬುದನ್ನೂ ತೋರಿಸಿದ್ದಾನೆ. ಚಿತ್ರದಲ್ಲಿ ಅವರಿವರ ಬಾಯಲ್ಲಿ ಮಾತು ಮಾತಿಗೂ ಅಮ್ಮ, ಅಕ್ಕ ಬೈಗುಳಗಳು ಫಿಲ್ಟರ್ ಇಲ್ಲದೇ ತೇಲಿ ಬರುತ್ತವೆ. ಇದರ ಜತೆಗೆ ಗಾಂಜಾ ಅಮಲು, ಸಂಗೀತದ ಘಮಲು ಚಿತ್ರದ ಮೊದಲಾರ್ಧವನ್ನು ತುಂಬಿಸಿವೆ. ಸಲಗದಲ್ಲಿ ಮೋಡಿ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್, ಭೀಮನ ರೌಡಿಸಂ ಕಥೆಗೂ ಒಂದೊಳ್ಳೆ ಕಾಡುವ ಸಂಗೀತವನ್ನೇ ನೀಡಿದ್ದಾರೆ.
ಒಂದು ಸಲ ಹೊಡೆದರೆ ಜಾಲಿ, ಇನ್ನೊಂದು ಸಲ ಹೊಡೆದರೆ ಶ್ರದ್ದಾಂಜಲಿ ಎಂಬ ಖಡಕ್ ಡೈಲಾಗ್‌ಗಳನ್ನು ಭರ್ತಿಯಾಗಿ ನೀಡಿದ್ದಾರೆ ಸಂಭಾಷಣೆಕಾರ ಮಾಸ್ತಿ. ದುನಿಯಾ ವಿಜಯ್ ಇದ್ದರೆ ಅಲ್ಲಿ ಮಾಸ್ ಆಕ್ಷನ್ ದೃಶ್ಯಗಳಿಗೆ ಕೊರತೆ ಇರದು. ಇಲ್ಲಿಯೂ ಅದೇ ಮುಂದುವರಿದಿದೆ. ಭೀಮ ರೌಡಿಗಳ ಜತೆ ಹೊಡೆದಾಡುತ್ತಿದ್ದರೆ, ನಾಯಕಿ ಆತನ ಫೈಟ್ ನೋಡಿ ಚಪ್ಪಾಳೆ ತಟ್ಟೋದಷ್ಟೇ ಕೆಲಸ.
ಸೇಡಿನ ಕಥೆ..
ಸಿನಿಮಾದ ಮೊದಲಾರ್ಧ ಹಾಸ್ಯ ಮಿಶ್ರಿತವಾಗಿಯೇ ನೋಡಿಸಿಕೊಂಡು ಹೋಗುತ್ತದೆ. ಹಾಡುಗಳಿಂದಲೇ ಮೋಡಿ ಮಾಡುತ್ತದೆ. ಇನ್‌ಸ್ಪೆಕ್ಟರ್ ಗಿರಿಜಾ ಪಾತ್ರವನ್ನು ಸಖತ್ ಆಗಿಯೇ ಕೆತ್ತಿದ್ದಾರೆ ನಿರ್ದೇಶಕ ದುನಿಯಾ ವಿಜಯ್. ಗಾಂಜಾ ಮಾರಾಟ ಮಾಡುವವರ ವಿರುದ್ಧ ಪೊಲೀಸ್ ಅಧಿಕಾರಿ ಜತೆಗೆ ವಿಜಯ್ ಸಹ ಅಖಾಡಕ್ಕಿಳಿದಿದ್ದಾನೆ. ಈ ದಾಳಿಯಲ್ಲಿ ಖಳ ಕಂಬಿ ಹಿಂದೆ ಸೇರಿದ್ದಾನೆ. ದುನಿಯಾ ವಿಜಯ್ ಗೆದ್ದರೂ, ಮತ್ತಷ್ಟು ದುಷ್ಮನ್‌ಗಳು ಹುಟ್ಟಿಕೊಂಡಿದ್ದಾರೆ. ಆತನನ್ನು ಹಣಿಯಲು ಸಂಚು ರೂಪಿಸಿದ್ದಾರೆ. ಅಲ್ಲಿಗೆ ಮಧ್ಯಂತರ.. ಒಟ್ಟಿನಲ್ಲಿ ಭೀಮ ಚಿತ್ರದ ಫಸ್ಟ್ ಹಾಫ್ ಚಿಂದಿ ಗುರೂ..