Actor Dwarakish Death: ನೀ ಬರೆದ ಕಾದಂಬರಿ, ಶ್ರುತಿ ಸೇರಿದಂತೆ ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿದ್ದ ಸೂಪರ್‌ ಹಿಟ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  Actor Dwarakish Death: ನೀ ಬರೆದ ಕಾದಂಬರಿ, ಶ್ರುತಿ ಸೇರಿದಂತೆ ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿದ್ದ ಸೂಪರ್‌ ಹಿಟ್‌ ಸಿನಿಮಾಗಳಿವು

Actor Dwarakish Death: ನೀ ಬರೆದ ಕಾದಂಬರಿ, ಶ್ರುತಿ ಸೇರಿದಂತೆ ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿದ್ದ ಸೂಪರ್‌ ಹಿಟ್‌ ಸಿನಿಮಾಗಳಿವು

Actor Dwarakish Death: 1966ರಲ್ಲಿ ಮಮತೆಯ ಬಂಧನ ಎಂಬ ಚಿತ್ರದ ಮೂಲಕ ಸಹ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್‌ , ನಟನಾಗಿ, ನಿರ್ದೇಶಕನಾಗಿ ಕೂಡಾ ಹೆಸರು ಗಳಿಸಿದರು. ಕರ್ನಾಟಕದ ಕುಳ್ಳ ಎಂದೇ ಹೆಸರಾದ ದ್ವಾರಕೀಶ್‌ ನಿರ್ದೇಶನದ ಸೂಪರ್‌ ಹಿಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.

ದ್ವಾರಕೀಶ್‌ ನಿರ್ದೇಶನದ ಸೂಪರ್‌ ಹಿಟ್‌ ಸಿನಿಮಾಗಳ ಪಟ್ಟಿ
ದ್ವಾರಕೀಶ್‌ ನಿರ್ದೇಶನದ ಸೂಪರ್‌ ಹಿಟ್‌ ಸಿನಿಮಾಗಳ ಪಟ್ಟಿ (PC: dwarakishchitra Website)

ದ್ವಾರಕೀಶ್‌ ನಿರ್ದೇಶನದ ಸಿನಿಮಾಗಳು: ಕರ್ನಾಟಕದ ಕುಳ್ಳ ಎಂದೇ ಕರೆಯಲ್ಪಡುತ್ತಿದ್ದ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ದ್ವಾರಕೀಶ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್‌ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಸಿಡಿಲು ಬಡಿದಂತೆ ಆಗಿದೆ. ನಿನ್ನೆ ರಾತ್ರಿ ಎಲ್ಲರೊಂದಿಗೂ ನಗುತ್ತಲೇ ಮಾತನಾಡಿ ಮಲಗಿದ್ದ ದ್ವಾರಕೀಶ್‌ ಅವರಿಗೆ ಬೆಳಗಿನ ಜಾವ ಕಾಫಿ ಕುಡಿದ ನಂತರ ಹೃದಯಾಘಾತವಾಗಿದೆ.

ಬೆಳಗ್ಗೆ ಏಳುತ್ತಿದ್ದಂತೆ ದ್ವಾರಕೀಶ್‌ ಕಾಫಿ ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಎಬ್ಬಿಸು ಎಂದು ನನಗೆ ಹೇಳಿದ್ದ ಅಪ್ಪ ಮತ್ತೆ ಮೇಲೆ ಏಳಲೇ ಇಲ್ಲ ಎಂದು ದ್ವಾರಕೀಶ್‌ ಹಿರಿಯ ಪುತ್ರ ಮಾಧ್ಯಮಗಳೊಂದಿಗೆ ನೋವು ಹಂಚಿಕೊಂಡಿದ್ದಾರೆ. ಹಿರಿಯ ನಟ ದ್ವಾರಕೀಶ್‌ 81ನೇ ವಯಸ್ಸಿಗೆ ಇಹಲೋಹ ತ್ಯಜಿಸಿದ್ದಾರೆ. ಯಾವುದೇ ಸಿನಿಮಾದಲ್ಲಿ ದ್ವಾರಕೀಶ್‌ ಇದ್ದಾರೆ ಎಂದರೆ ಆ ಚಿತ್ರದಲ್ಲಿ ಮನರಂಜನೆಗೆ ಕೊರತೆ ಇಲ್ಲವೆಂದೇ ಅರ್ಥ. ಹಾಗೇ ಅವರು ನಿರ್ದೇಶಿಸಿದ, ನಿರ್ಮಾಣ ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿರುವ ಜನಪ್ರಿಯ ಚಿತ್ರಗಳ ಲಿಸ್ಟ್‌ ಇಲ್ಲಿದೆ.

ನೀ ಬರೆದ ಕಾದಂಬರಿ

1966ರಲ್ಲಿ ಮಮತೆಯ ಬಂಧನ ಎಂಬ ಚಿತ್ರವನ್ನು ಮೊದಲ ಬಾರಿಗೆ ಸಹ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡ ದ್ವಾರಕೀಶ್‌ 1985ರಲ್ಲಿ ಮೊದಲ ಬಾರಿ ಚಿತ್ರ ನಿರ್ದೇಶನಕ್ಕೆ ಇಳಿದರು. ಅದೂ ಕೂಡಾ ತಮ್ಮ ಅಚ್ಚುಮೆಚ್ಚಿನ ಗೆಳೆಯ ವಿಷ್ಣುವರ್ಧನ್‌ ಅವರ ಸಿನಿಮಾ ಮೂಲಕ. ಮೊದಲ ನಿರ್ದೇಶನದಲ್ಲೇ ದ್ವಾರಕೀಶ್‌ ಸಕ್ಸಸ್‌ ಆದರು. ಭವ್ಯ, ವಿಷ್ಣುವರ್ಧನ್‌, ಸಿಆರ್‌ ಸಿಂಹ, ಹೇಮಾ ಚೌಧರಿ ಹಾಗೂ ಇನ್ನಿತರರು ನಟಿಸಿದ್ದ ನೀ ಬರೆದ ಕಾದಂಬರಿ ಸಿನಿಮಾ ಕಥೆ ಹಾಗೂ ಹಾಡುಗಳು ಇಂದಿಗೂ ಬಹಳ ಫೇಮಸ್.‌ ಈ ಚಿತ್ರವನ್ನು ಸ್ವತಃ ದ್ವಾರಕೀಶ್‌ ತಮ್ಮ ಬ್ಯಾನರ್‌ ಅಡಿ ನಿರ್ಮಿಸಿದ್ದರು.

ನೀ ತಂದ ಕಾಣಿಕೆ

ನೀ ಬರೆದ ಕಾದಂಬರಿ ಸಿನಿಮಾ ಹಿಟ್‌ ಆಗುತ್ತಿದ್ದಂತೆ ದ್ವಾರಕೀಶ್‌, ಮತ್ತೆ ವಿಷ್ಣುವರ್ದನ್‌ ಜೊತೆಗೂಡಿ ನೀ ತಂದ ಕಾಣಿಕೆ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿಮಾ ಕೂಡಾ ಅವರಿಗೆ ಸಕ್ಸಸ್‌ ತಂದುಕೊಟ್ಟಿತು. 1985 ಡಿಸೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು. ಚಿತ್ರದಲ್ಲಿ ವಿಷ್ಣುವರ್ಧನ್‌ ಜೊತೆಗೆ ಜಯಸುಧಾ ನಾಯಕಿಯಾಗಿ ನಟಿಸಿದ್ದರು. ವಿಷ್ಣು ತಂದೆಯಾಗಿ ಗಿರೀಶ್‌ ಕಾರ್ನಾಡ್‌ ನಟಿಸಿದ್ದರು. ಇದೂ ಕೂಡಾ ದ್ವಾರಕೀಶ್‌ ನಿರ್ಮಾಣದ ಸಿನಿಮಾ.

ಆಫ್ರಿಕಾದಲ್ಲಿ ಶೀಲಾ

1986 ಮೇ ತಿಂಗಳಲ್ಲಿ ಆಫ್ರಿಕಾದಲ್ಲಿ ಶೀಲಾ ಸಿನಿಮಾ ತೆರೆ ಕಂಡಿತ್ತು. ಆಫ್ರಿಕಾ ಕಾಡಿನೊಳಗೆ ತಪ್ಪಿಸಿಕೊಳ್ಳುವ ಹೆಣ್ಣು ಮಗುವೊಂದು ಅಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಬೆಳೆದು ದೊಡ್ಡವಳಾದ ನಂತರ ನಾಯಕನ ಸಹಾಯದಿಂದ ನಾಡಿಗೆ ಬರುತ್ತಾಳೆ. ಆದರೆ ನಗರದ ಜೀವನ ಇಷ್ಟವಾಗದೆ ಮತ್ತೆ ಕಾಡಿಗೆ ಹೋಗುವ ಈ ಸಿನಿಮಾ ಕಥೆಯಂತೂ ಚಿತ್ರಪ್ರೇಮಿಗಳಿಗೆ ಬಹಳ ಇಷ್ಟವಾಗಿತ್ತು. ಚಿತ್ರದಲ್ಲಿ ನಾಯಕನಾಗಿ ಚರಣ್‌ ರಾಜ್‌, ನಾಯಕಿಯಾಗಿ ಸಹಿಲಾ ಚಂದ್ರಾ ನಟಿಸಿದ್ದರು. ಚಿತ್ರವನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು.

ಡ್ಯಾನ್ಸ್‌ ರಾಜ ಡ್ಯಾನ್ಸ್‌

ವಿನೋದ್‌ ರಾಜ್‌ ಡ್ಯಾನ್ಸರ್‌ ಆಗಿ ನಟಿಸಿದ್ದ ಈ ಸಿನಿಮಾ ಆಗಿನ ಕಾಲದಲ್ಲಿ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು. 1987 ರಲ್ಲಿ ಸಿನಿಮಾ ತೆರೆ ಕಂಡಿತ್ತು. ಈ ಚಿತ್ರದ ಮೂಲಕ ದ್ವಾರಕೀಶ್‌, ಲೀಲಾವತಿ ಅವರ ಪುತ್ರ ವಿನೋದ್‌ ರಾಜ್‌ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ಈ ಸಿನಿಮಾ ಹಾಡುಗಳಂತೂ ಇಂದಿಗೂ ಬಹಳ ಫೇಮಸ್.‌

ಶ್ರುತಿ

ನಟಿ ಶ್ರುತಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಇದು. ಚಿತ್ರಕ್ಕೆ ದ್ವಾರಕೀಶ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. 1990 ಅಕ್ಟೋಬರ್‌ನಲ್ಲಿ ಸಿನಿಮಾ ತೆರೆ ಕಂಡು ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರದ ಮೂಲಕ ಶ್ರುತಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕಿಯಾಗಿ ಪರಿಚಯವಾದರು. ದ್ವಾರಕೀಶ್‌ ಅವರಿಗೂ ಈ ಸಿನಿಮಾ ಇನ್ನಷ್ಟು ಹೆಸರು ನೀಡಿತು.

ರಾಯರು ಬಂದರು ಮಾವನ ಮನೆಗೆ

1993ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ದ್ವಾರಕೀಶ್‌, ವಿಷ್ಣುವರ್ಧನ್‌ ಜೊತೆಯಾಗಿ ನಟಿಸಿದ್ದರು. ಚಿತ್ರದಲ್ಲಿ ವಿಷ್ಣು ಜೋಡಿಯಾಗಿ ಡಾಲಿ, ಬಿಂದಿಯಾ ನಟಿಸಿದ್ದರು. ಈ ಚಿತ್ರಕ್ಕೆ ಪಿ ಬಲರಾಮ್‌ ಬಂಡವಾಳ ಹೂಡಿದ್ದರು. ಜೈಲು ಶಿಕ್ಷೆ ಅನುಭವಿಸುವ ನಾಯಕ ಮಗುವಿನ ಶಸ್ತ್ರಚಿಕಿತ್ಡೆಗೆ ಹಣ ಹೊಂದಿಸಲು ಜೈಲಿನಿಂದ ತಪ್ಪಿಸಿಕೊಂಡು ಹಣ ಪಡೆದು ನಾಯಕಿಯ ಗಂಡನಾಗಿ ನಟಿಸುವ ನಾಟಕ ಮಾಡುತ್ತಾನೆ. ಆದರೆ ಕೊನೆಗೆ ಆತ ನಾಯಕಿಗೆ ತಾಳಿ ಕಟ್ಟಿದ ಗಂಡ ಅಲ್ಲ ಎಂದು ನಾಯಕಿಯ ತಂದೆಗೆ ತಿಳಿಯುತ್ತದೆ. ಮುಂದೇನು ನಡೆಯುತ್ತದೆ? ಜೈಲಿನಿಂದ ತಪ್ಪಿಸಿಕೊಂಡು ಬಂದ ನಾಯಕನಿಗೆ ಇನ್ನಷ್ಟು ಶಿಕ್ಷೆ ಆಗುವುದಾ? ಅನ್ನೋದು ಚಿತ್ರದ ಕಥೆ. ಈ ಸಿನಿಮಾ ಹಾಡುಗಳು ಇಂದಿನ ಯುವಜನತೆಗೂ ಬಹಳ ಇಷ್ಟ.

ಇದಾದ ನಂತರ 1994 ರಲ್ಲಿ ದ್ವಾರಕೀಶ್‌ ಆಕ್ಷನ್‌ ಕಟ್‌ ಹೇಳಿದ್ದ ರವಿಚಂದ್ರನ್‌, ಭಾನುಪ್ರಿಯಾ ನಟನೆಯ ರಸಿಕ ಸಿನಿಮಾ ಕೂಡಾ ಸೂಪರ್‌ ಹಿಟ್‌ ಆಗಿತ್ತು. ಆದರೆ ನಂತರ ನಿರ್ದೇಶಿಸಿದ ಕಿಲಾಡಿಗಳು, ಗಿಡ್ಡುದಾದಾ, ಹೃದಯ ಕಳ್ಳರು, ಶ್ರುತಿ ಹಾಕಿದ ಹೆಜ್ಜೆ, ಮಜ್ನು ಸಿನಿಮಾ ಹೇಳಿಕೊಳ್ಳುವಂಥ ಹೆಸರು ತಂದುಕೊಡಲಿಲ್ಲ.

Whats_app_banner