Anant Nag: ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ ಎವರ್‌ಗ್ರೀನ್ ನಟ ಅನಂತ್‌ನಾಗ್; ನೀವು ಇನ್ನೂ ನಟಿಸಬೇಕು ಎಂದು ಹಾರೈಸಿದ ಫ್ಯಾನ್ಸ್
ಅನಂತ್ ನಾಗ್ ಅವರ ಹಳೆಯ ಸಿನಿಮಾಗಳಿಂದ ಈಗಿನ ಸಿನಿಮಾಗಳ ಫೋಟೋಗಳನ್ನು ವಿಡಿಯೋ ರೂಪದಲ್ಲಿ ತಯಾರಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ರಿಷಬ್ ಶೆಟ್ಟಿ, ಹಿರಿಯ ನಟನಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಟ ಅನಂತ್ ನಾಗ್, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸುಂದರ ಕ್ಷಣವನ್ನು ಸದಾ ಕಾಲ ನೆನಪಿನಲ್ಲಿಡಲು ಅನಂತ್ ನಾಗ್ ಇತ್ತೀಚೆಗೆ ಚಿತ್ರರಂಗದ ತಮ್ಮ ಆತ್ಮೀಯರನ್ನು ಕರೆದು ಸಣ್ಣ ಪಾರ್ಟಿ ಮಾಡಿದರು. ಕಲಾವಿದರು ಕೂಡಾ ಹಿರಿಯ ನಟನಿಗೆ ಗಿಫ್ಟ್ ನೀಡಿ ಹಾರೈಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕೂಡಾ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
ರಂಗಭೂಮಿ ಕಲಾವಿದ
ಮರಾಠಿ ಕುಟುಂಬಕ್ಕೆ ಸೇರಿದ ಅನಂತ್‌ನಾಗ್ ಸಿನಿಮಾಗೆ ಬರುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂಬೈನಲ್ಲಿ ನೆಲೆಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ದೊರೆತ ನಂತರ ಅನಂತ್‌ನಾಗ್ ಬೆಂಗಳೂರಿಗೆ ಶಿಫ್ಟ್ ಆದರು. ನಂತರ ಸಹೋದರ ಶಂಕರ್‌ನಾಗ್ ಹಾಗೂ ಇತರ ಸ್ನೇಹಿತರನ್ನು ಕೂಡಾ ಕರೆಸಿಕೊಂಡರು. 'ಸಂಕಲ್ಪ' ಚಿತ್ರದ ಮೂಲಕ ಅನಂತ್‌ನಾಗ್ ಸಿನಿಮಾ ಕರಿಯರ್ ಆರಂಭಿಸಿದ್ದರು. ಈ ಸಿನಿಮಾ 1973ರಲ್ಲಿ ತೆರೆ ಕಂಡಿತ್ತು.
ನಾಯಕ, ಪೋಷಕ ನಟನಾಗಿ ನಟನೆ
ಅಲ್ಲಿಂದ ಅನಂತ್ ನಾಗ್ ಹಿಂತಿರುಗಿ ನೋಡಿದ್ದೇ ಇಲ್ಲ. ಅವರು ನಟಿಸದ ಪಾತ್ರಗಳೇ ಇಲ್ಲ. ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಅನುಪಮಾ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಒಲವು ಮೂಡಿದಾಗ, ಅರುಣ ರಾಗ, ಹೆಂಡ್ತಿಗೇಳ್ಬೇಡಿ, ಗಗನ, ಗೌರಿ ಗಣೇಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅನಂತ್‌ನಾಗ್ ನಾಯಕನ ಪಾತ್ರದಲ್ಲಿ ನಟಿಸಿದರು. ಮುಂಗಾರು ಮಳೆ, ಈ ಬಂಧನ, ಅರಮನೆ, ಗಣೇಶ ಮತ್ತೆ ಬಂದ, ಮೈನಾ ಗೂಗ್ಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್, ಗಾಳಿಪಟ 2 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒಪ್ಪಿಸುವ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ದೊರೆಯಬೇಕು ಎಂದು ಇತ್ತೀಚೆಗೆ ಅಭಿಯಾನ ನಡೆದಿತ್ತು.
ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯ
ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಅನಂತ್‌ನಾಗ್ ಅವರಂಥ ನಟನಿಗೆ ಪದ್ಮ ಪ್ರಶಸ್ತಿ ದೊರೆಯಲೇಬೇಕು ಎಂದು ಚಿತ್ರರಂಗದ ಕೆಲವರು ಒತ್ತಾಯಿಸಿದ್ದರು. ''ನಿಮ್ಮ ಪ್ರೀತಿಯ ಮುಂದೆ ನನಗೆ ಬೇರೆ ಯಾವ ಪ್ರಶಸ್ತಿಯೂ ಬೇಡ. ಪ್ರಶಸ್ತಿ ಒಂದಲ್ಲಾ ಒಂದು ದಿನ ಕಳೆದುಹೋಗಬಹುದು, ಹಳೆಯದಾಗಬಹುದು. ಆದರೆ ನಿಮ್ಮೆಲ್ಲರ ಪ್ರೀತಿ ಎಂದಿಗೂ ಶಾಶ್ವತ'' ಎಂದು ಹೇಳುವ ಮೂಲಕ ಅನಂತ್ ನಾಗ್ ದೊಡ್ಡತನ ಮೆರೆದಿದ್ದರು.
ಶುಭ ಕೋರಿದ ರಿಷಬ್ ಶೆಟ್ಟಿ
ಅನಂತ್ ನಾಗ್ ಅವರ ಹಳೆಯ ಸಿನಿಮಾಗಳಿಂದ ಈಗಿನ ಸಿನಿಮಾಗಳ ಫೋಟೋಗಳನ್ನು ವಿಡಿಯೋ ರೂಪದಲ್ಲಿ ತಯಾರಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ರಿಷಬ್ ಶೆಟ್ಟಿ, ಹಿರಿಯ ನಟನಿಗೆ ಶುಭ ಹಾರೈಸಿದ್ದಾರೆ. ''ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ'' ಎಂದು ಬರೆದುಕೊಂಡಿದ್ದಾರೆ. ಸಿನಿಪ್ರಿಯರು ಕೂಡಾ ನೀವು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂದು ಅನಂತ್‌ನಾಗ್ ಅವರಿಗೆ ಶುಭಾಶಯ ಹೇಳಿದ್ದಾರೆ.