ಕಾಟೇರ ನಟ ದರ್ಶನ್‌ಗೆ ರೈತ ಸಂಘದಿಂದ ಹೊಸ ಬಿರುದು, ಗಣರಾಜ್ಯೋತ್ಸವದಂದು ಪಾಂಡವಪುರದಲ್ಲಿ ಅದ್ಧೂರಿ ಕಾರ್ಯಕ್ರಮ
ಕನ್ನಡ ಸುದ್ದಿ  /  ಮನರಂಜನೆ  /  ಕಾಟೇರ ನಟ ದರ್ಶನ್‌ಗೆ ರೈತ ಸಂಘದಿಂದ ಹೊಸ ಬಿರುದು, ಗಣರಾಜ್ಯೋತ್ಸವದಂದು ಪಾಂಡವಪುರದಲ್ಲಿ ಅದ್ಧೂರಿ ಕಾರ್ಯಕ್ರಮ

ಕಾಟೇರ ನಟ ದರ್ಶನ್‌ಗೆ ರೈತ ಸಂಘದಿಂದ ಹೊಸ ಬಿರುದು, ಗಣರಾಜ್ಯೋತ್ಸವದಂದು ಪಾಂಡವಪುರದಲ್ಲಿ ಅದ್ಧೂರಿ ಕಾರ್ಯಕ್ರಮ

Kantara Success: ಜನವರಿ 26ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಮತ್ತು ಕಾಟೇರ ತಂಡಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಅಂದು ದರ್ಶನ್‌ಗೆ ಸಂಘವು ವಿಶೇಷ ಬಿರುದು ನೀಡಲಿದೆ.

ಕಾಟೇರ ಸಿನೆಮಾ
ಕಾಟೇರ ಸಿನೆಮಾ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕಾಟೇರ ಸಿನೆಮಾ ಈಗಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೇ ಸಮಯದಲ್ಲಿ ಕಾಟೇರ ನಟ ದರ್ಶನ್‌ ಮತ್ತು ತಂಡಕ್ಕೆ ಕರ್ನಾಟಕ ರಾಜ್ಯ ರೈತ ಸಂಘವು ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಈ ಕಾರ್ಯಕ್ರಮ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಜನವರಿ 26ರಂದು ನಡೆಯಲಿದೆ. ಅಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ರೈತ ಸಂಘ ಈ ಮುಂದಿನಂತೆ ಮಾಹಿತಿ ನೀಡಿದೆ. ಅನ್ನದಾತ ಆಪ್ತ ಕಾಟೇರ “ಡಿ ಬಾಸ್” ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ವಿಶೇಷ ಬಿರುದನ್ನು ಕೊಟ್ಟು ಹಾಗೂ ಕಾಟೇರನ ದೊಡ್ಡ ಯಶಸ್ಸಿಗೆ ಕಾರಣರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತಂಡದವರಿಗೆ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇವೆ. ಇದೇ ಶುಕ್ರವಾರ ಜನವರಿ 26ರಂದು ಪಾಂಡವ ಕ್ರೀಡಾಂಗಣ ಪಾಂಡವಪುರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ರೈತ ಸಂಘ ಮಾಹಿತಿ ನೀಡಿದೆ.

ಏನೇನು ಕಾರ್ಯಕ್ರಮಗಳು ಇರಲಿವೆ?

25 ಕಲಾ ತಂಡಗಳು 25 ಜೋಡೆತ್ತಿನ ಮೆರವಣಿಗೆ ಮತ್ತು 8 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ದರ್ಶನ್‌ ಮತ್ತು ಪಾಂಡವಪುರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯರವರ ಅದ್ಧೂರಿ ಮೆರವಣಿಗೆಯು ಪಾಂಡವಪುರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಮೆರವಣಿಗೆ ನಡೆಯಲಿದೆ. ಸಂಜೆ 6:30 ರಿಂದ 25,000ಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಕಾಟೇರನ ಭರ್ಜರಿ ಯಶಸ್ಸಿನ ಅದ್ದೂರಿ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷ ಅತಿಥಿಗಳು ಯಾರು?

ದರ್ಶನ್‌ ಅಭಿನಂದನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್, ಪಾಂಡವಪುರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್, ವಿ ಹರಿಕೃಷ್ಣ ,ಸುಧಾಕರ್, ಕೆಎಂ ಪ್ರಕಾಶ್, ಜಡೇಸ್ ಕೆ ಹಂಪಿ, ಮಾಸ್ತಿ, ನಾಯಕ ನಟಿ ಆರಾಧನ ರಾಮ್, ಮಾಲಾಶ್ರೀ, ಶೃತಿ, ಅವಿನಾಶ್, ಬಿರಾದರ್ ,ಕುಮಾರ್ ಗೋವಿಂದ್, ಶ್ವೇತಾ ಪ್ರಸಾದ್ ,ರವಿ ಚೇತನ್, ಮಾಸ್ಟರ್ ಲೋಹಿತ್ ಇನ್ನೂ ಹಲವಾರು ಕಾಟೇಯ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಕನ್ನಡ ಚಲನಚಿತ್ರದ ಹೆಸರಾಂತ ಮೂವರು ನಾಯಕಿ ನಟಿಯರಿಂದ ಅದ್ದೂರಿ ನೃತ್ಯ ಪ್ರದರ್ಶನ ಮತ್ತು ಹೆಸರಾಂತ ಗಾಯಕರ ಗಾಯಕಿರಿಂದ ಗಾಯನ ಕಾರ್ಯಕ್ರಮವಿರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Whats_app_banner