ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು
Friday Release Movies in Theaters: ಈ ವಾರ ಭಾರತದ ಚಿತ್ರಮಂದಿರಗಳಲ್ಲಿ 22ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕನ್ನಡದಲ್ಲಿ ವಿಜಯ ರಾಘವೇಂದ್ರ ನಟನೆಯ ಗ್ರೇ ಗೇಮ್ಸ್ ಬಿಡುಗಡೆಯಾಗಲಿದೆ. ಅಲೈಕ್ಯಾ, ರಾಮನ ಅವತಾರವನ್ನೂ ಈ ವಾರ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಬಹುದು.
ಬೆಂಗಳೂರು: ಕರ್ನಾಟಕದಲ್ಲಿ ಈಗ ವಿವಿಧೆಡೆ ಬಿಸಿಲು-ಮಳೆಯಾಟ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸಿನಿಮಾ ಮಂದಿರಗಳಿಗೆ ಹೋಗಿ ತಣ್ಣನೆಯ ಏಸಿಯಲ್ಲಿ ಕುಳಿತು ಸಿನಿಮಾ ನೋಡಲು ಸಾಕಷ್ಟು ಜನರು ಬಯಸಬಹುದು. ಚಿತ್ರಪ್ರೇಮಿಗಳಿಗೆ ಈ ವಾರ ಖುಷಿಕೊಡುವಂತೆ 22ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿವೆ. ಕನ್ನಡದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿಜಯ ರಾಘವೇಂದ್ರ ಶ್ರುತಿ ಪ್ರಕಾಶ್ ನಟನೆಯ ಗ್ರೇ ಗೇಮ್ಸ್ ಎಂಬ ಸಿನಿಮಾ ರಿಲೀಸ್ ಆಗುತ್ತಿದೆ. ರಿಷಿ ಮತ್ತು ಪ್ರಣೀತಾ ಸುಭಾಷ್ ನಟನೆಯ ರಾಮನ ಅವತಾರವೂ ಈ ವಾರ ರಿಲೀಸ್ ಆಗುತ್ತಿದೆ. ಅಲೈಕ್ಯಾ, 4ಎನ್6 ಎಂಬ ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಇವುಗಳ ಹೆಸರು ಕೇಳಿ ಇದು ಕನ್ನಡ ಸಿನಿಮಾವಲ್ಲ ಎಂದುಕೊಳ್ಳಬೇಡಿ. ಅಲೈಕ್ಯಾ, ಗ್ರೇ ಗೇಮ್ಸ್, 4ಎನ್6 ಎಲ್ಲವೂ ಅಪ್ಪಟ್ಟ ಕನ್ನಡ ಸಿನಿಮಾಗಳೇ. ಇದೇ ಸಮಯದಲ್ಲಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲೂ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಟಿಟಿ ಮಾತ್ರವಲ್ಲದೆ ಚಿತ್ರಮಂದಿರಗಳಲ್ಲಿಯೂ ಈ ವಾರ ಸಿನಿಮಾ ಹಬ್ಬವಿರಲಿದೆ.
ಈ ವಾರ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ಗ್ರೇ ಗೇಮ್ಸ್ (ವಿಜಯ ರಾಘವೇಂದ್ರ- ಶ್ರುತಿ ಪ್ರಕಾಶ್)
ಗ್ರೇ ಗೇಮ್ಸ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಸೋದರಳಿಯ ಜೈ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಸಿನಿಮಾ ಮೇ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ "ಆಯನ" ಚಿತ್ರದ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಚಿತ್ರವಿದು. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಶ್ರುತಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾವನಾ ರಾವ್, ಇಶಿತಾ, ರವಿ ಭಟ್, ಅಪರ್ಣ ವಸ್ತಾರೆ, ರವಿ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಅಲೈಕ್ಯಾ
ಈ ವಾರ ಅಲೈಕ್ಯಾ ಎಂಬ ಹಾರರ್ ಸಿನಿಮಾವೂ ರಿಲೀಸ್ ಆಗುತ್ತಿದೆ. ಜಾಲಿರೈಡಿಗೆ ಹೋದವರೂ ಅತಿಥಿಗೃಹದಲ್ಲಿ ಆತ್ಮಗಳ ಅತಿಥಿಗಳಾಗುವ ಕಥೆ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ 21-21-21 ಎಂಬ ಅಡಿಬರಹ ಕೂಡ ಇದೆ. ಮಳೆಬಿಲ್ಲು ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾತ್ವಿಕ್ ಎಂ.ಭೂಪತಿ ಅವರು ಈ ಅಲೈಕ್ಯಾ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ.
4ಎನ್6
4ಎನ್6 ಎಂಬ ವಿಶೇಷ ಟೈಟಲ್ ಹೊಂದಿರುವ ಈ ಚಿತ್ರ ಮೇ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ರಚನಾ ಇಂದೆರ್, ಭವನಿ ಪ್ರಕಾಶ್, ನವೀನ್ ಕುಮಾರ್ ಮಹಾದೇವ್, ಆದ್ಯ ಶೇಖರ್, ಅರುನ್ ಎಂ ರಾವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರಾಮನ ಅವತಾರ
ರಿಷಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಮನ ಅವತಾರ ಎಂಬ ಸಿನಿಮಾವೂ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ವಿಕಾಸ್ ಪಂಪಾಪತಿ ನಿರ್ದೇಶನದ ಸಿನಿಮಾ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮೆನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮೆನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು ಅವನನ್ನು ಹೇಗೆ ಬದಲಾಯಿಸುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ರಾಮನ ಅವತಾರ ಸಿನಿಮಾ ಉತ್ತರಿಸಲಿದೆ.
ಮೇ 10ರಂದು ಬಿಡುಗಡೆಯಾಗುವ ಹಿಂದಿ ಸಿನಿಮಾಗಳು
ಯಾಥಿಸಾಯ್
ಬೋನಿ ಬಿಯರ್ಸ್: ಮುಮ್ಮಾ ಕಿ ಕೋಜ್
ಈ ಶುಕ್ರವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು
ಸತ್ಯ
ಲಕ್ಷ್ಮಿ ಕಟಾಕ್ಷಂ
ಯಾಥಿಸಾಯ್ (ತೆಲುಗು)
ಆರಂಭಂ
ತಮಿಳು ಸಿನಿಮಾಗಳು
ಮಾಯವನ್ ವೆಟ್ಟೈ
ರಸವತಿ
ಮಲಯಾಳಂ ಸಿನಿಮಾಗಳು
ಗಾರ್ಡಿಯನ್ ಏಂಜೆಲ್
ಪೆರುಮನ್ನಿ
ಮರಾಠಿ ಸಿನಿಮಾ
ಅಪ್ಸರ
ಬಂಗಾಳಿ ಸಿನಿಮಾ
ಚಲ್‌ಚಿತ್ರ ಏಕೋನ್
ನಯನ್ ರಹಸ್ಯ
ದಾಬರು
ಗುಜರಾತಿ ಸಿನಿಮಾ
ಮಾರು ಮನ್ ತಾರು ತಯು
ಇನ್ಸುರೆನ್ಸ್ ಜಿಮ್ಮಿ
ಎಸ್2ಜಿ2- ಎ ರೋಮ್ಯಾಂಟಿಕ್ ಮಿಷನ್
ಹೀಗೆ ಈ ವಾರ ಚಿತ್ರಮಂದಿರಗಳಲ್ಲಿ 20ಕ್ಕೂ ಹೆಚ್ಚು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ