ತಮಿಳುನಾಡಲ್ಲಿ ಕಾಂತಾರ ಥೀಮ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ; ಕಾಡುಬೆಟ್ಟ, ಪಂಜುರ್ಲಿ ದೈವ, ವರಾಹ ರೂಪಕ ಮರು ಸೃಷ್ಟಿ VIDEO
ಗಣೇಶ ಹಬ್ಬದ ಈ ಸಂದರ್ಭದಲ್ಲಿ ಕಾಂತಾರ ಸಿನಿಮಾದ ಥೀಮ್‌ನಲ್ಲಿ ತಮಿಳುನಾಡಿನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಥೀಮ್‌ನ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.

Kantara Theme Ganesh: ಕಾಂತಾರ ಸಿನಿಮಾ ಮಾಡಿದ ಮೋಡಿ ಸಣ್ಣದೇನಲ್ಲ. ಕೇವಲ 16 ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ 400 ಪ್ಲಸ್ ಕೋಟಿಯ ಫಸಲು ತೆಗೆದಿತ್ತು. ಕನ್ನಡದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿತ್ತು. ರಿಷಬ್ ಶೆಟ್ಟಿಗೆ ರಾತ್ರೋ ರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟಿತು ಕಾಂತಾರ ಸಿನಿಮಾ. ಇತ್ತ ಇದೇ ಚಿತ್ರದ ನಾಯಕಿ ಸಪ್ತಮಿ ಗೌಡ ಸಹ ಬಾಲಿವುಡ್ ಅವಕಾಶ ಗಿಟ್ಟಿಸಿಕೊಂಡರು. ಸಿನಿಮಾ ಗೆಲುವಿಗೆ ಕಥೆ ಒಂದು ಕಡೆ ಸಾಥ್ ನೀಡಿದರೆ, ಮತ್ತೊಂದು ಬದಿಯಲ್ಲಿ ಸಿನಿಮಾ ಮೂಡಿ ಬಂದ ರೀತಿ ಮತ್ತು ಮೇಕಿಂಗ್‌ನಿಂದಲೇ ಎಲ್ಲರನ್ನು ಸೆಳೆದಿತ್ತು.
ಟ್ರೆಂಡಿಂಗ್ ಸುದ್ದಿ
ಗಣೇಶ ಹಬ್ಬ ಬಂದರೆ, ಸಿನಿಮಾಗಳಲ್ಲಿನ ಹೀರೋಗಳ ಲುಕ್‌ಅನ್ನೇ ಹೋಲುವ ರೀತಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತ ಬರಲಾಗುತ್ತದೆ. ಇದೀಗ ಇದೇ ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದರೂ ಮತ್ತೆ ಸುದ್ದಿಯಲ್ಲಿದೆ. ಗಣೇಶ ಹಬ್ಬದ ಪ್ರಯುಕ್ತ ಕಾಂತಾರ ಸಿನಿಮಾದ ಸೆಟ್‌ಗಳನ್ನು ಮತ್ತು ಅದೇ ರೀತಿಯ ಪಾತ್ರಧಾರಿಗಳನ್ನು ಹೋಲುವ ಥೀಮ್‌ನಲ್ಲಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಕಾಂತಾರ ಸಿನಿಮಾದಲ್ಲಿನ ಕಾಡುಬೆಟ್ಟ, ಪಂಜುರ್ಲಿ ದೈವ, ವರಾಹ ಮುಖ, ದೈವ ನರ್ತಕರು, ರಾಜ ಹೀಗೆ ಹಲವು ಬಗೆಯ ಪ್ರತಿಕೃತಿಗಳನ್ನು ನಿರ್ಮಿಸಿ ಥೇಟ್ ಕಾಂತಾರ ಲೋಕವನ್ನೇ ಸೃಷ್ಟಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಕಾಂತಾರ ಲೋಕದ ವಿಡಿಯೋ ವೈರಲ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಲ್ಲಿ ಎಂಬ ಊರಲ್ಲಿ ಕಾಂತಾರ ಥೀಮ್ ಸೃಷ್ಟಿಸಲಾಗಿದೆ. ವಿಡಿಯೋ ಆರಂಭವಾಗುತ್ತಿದ್ದಂತೆ ಬೃಹತ್ ರಾಜನ ಮನೆ, ಆ ಮನೆ ಪ್ರವೇಶಕ್ಕೂ ಮುನ್ನ ವರಾಹ ಮುಖ, ಅದನ್ನು ದಾಟಿ ಒಳಗೆ ಹೋಗುತ್ತಿದ್ದಂತೆ, ಮೆಟ್ಟಿಲು ಮೇಲೆ ಕುಳಿತ ದೈವ ಕಾಣಿಸುತ್ತದೆ.
ಬಳಿಕ ಕಾಡು ಎದುರಾಗುತ್ತದೆ. ಕಾಡನ್ನು ಸೀಳಿಕೊಂಡು ಒಳಗೆ ಹೋಗುತ್ತಿದ್ದಂತೆ, ಗುಳಿಗ ದೈವ ರೂಪಕಗಳು ಕಾಣಿಸುತ್ತವೆ. ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸುವ ರಿಷಬ್ ಶೆಟ್ಟಿಯ ದೈವ ಕುಣಿತದ ಭಂಗಿಯನ್ನೂ ಸೃಷ್ಟಿಸಲಾಗಿದೆ. ಇದೇ ಥೀಮ್‌ನಲ್ಲಿ ಎಲ್ಲವನ್ನು ತ್ಯಜಿಸಿ, ದೈವಕ್ಕೆ ಇಡೀ ಭೂಮಿಯನ್ನು ಬಿಟ್ಟುಕೊಡುವ ರಾಜನಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪಂಜುರ್ಲಿ ದೈವಕ್ಕೆ ಗಣಪತಿಯೇ ಪೂಜೆ ಮಾಡುವ ಭಂಗಿಯಲ್ಲಿ ನಿರ್ಮಿಸಲಾಗಿದೆ.
'ಕಾಂತಾರ 2' ಕೆಲಸ ಶುರು
ಇನ್ನು ಕಾಂತಾರ ಸಿನಿಮಾದ ಪ್ರೀಕ್ವೆಲ್ ಕೆಲಸಗಳಿಗೂ ನಿರ್ದೇಶಕ ರಿಷಬ್ ಶೆಟ್ಟಿ, ಚಾಲನೆ ನೀಡಿದ್ದಾರೆ. ಕೊನೇ ಹಂತದ ಸ್ಕ್ರಿಪ್ಟಿಂಗ್ ಕೆಲಸಗಳು ನಡೆಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್ ಸಹ ಶುರುವಾಗಲಿದೆ. ಹೊಂಬಾಳೆ ಫಿಲಂಸ್ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಮೊದಲ ಭಾಗಕ್ಕಿಂತ ಅದ್ದೂರಿಯಾಗಿಯೇ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಲೇಖನ