ಭಟ್ಟರ ಸಾಹಿತ್ಯಕ್ಕೆ ಮನಸೋಲದವರುಂಟೆ, ಯೋಗರಾಜ್‌ ಭಟ್‌ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ನೋಡಿ ವಾರೇವ್ಹಾ ಎಂದ ಸಿನಿಪ್ರೇಮಿಗಳು
ಕನ್ನಡ ಸುದ್ದಿ  /  ಮನರಂಜನೆ  /  ಭಟ್ಟರ ಸಾಹಿತ್ಯಕ್ಕೆ ಮನಸೋಲದವರುಂಟೆ, ಯೋಗರಾಜ್‌ ಭಟ್‌ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ನೋಡಿ ವಾರೇವ್ಹಾ ಎಂದ ಸಿನಿಪ್ರೇಮಿಗಳು

ಭಟ್ಟರ ಸಾಹಿತ್ಯಕ್ಕೆ ಮನಸೋಲದವರುಂಟೆ, ಯೋಗರಾಜ್‌ ಭಟ್‌ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ನೋಡಿ ವಾರೇವ್ಹಾ ಎಂದ ಸಿನಿಪ್ರೇಮಿಗಳು

Garadi Film Songs: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನ ಮೋಡಿಗೆ ಸೋಷಿಯಲ್‌ ಮೀಡಿಯಾ ಮತ್ತು ಯೂಟ್ಯೂಬ್‌ನಲ್ಲಿ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ನೋಡೋಣ.

ಯೋಗರಾಜ್‌ ಭಟ್‌ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌
ಯೋಗರಾಜ್‌ ಭಟ್‌ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಯೋಗರಾಜ್‌ ಭಟ್‌ ಸಿನಿಮಾಗಳ ಕುರಿತು ಪ್ರೇಕ್ಷಕರಿಗೆ ಏನೋ ಆಕರ್ಷಣೆ. ಅವರ ಸುಂದರ ಬರಹ, ಡೈಲಾಗ್‌ಗಳು ಮೋಡಿ ಮಾಡುವುದು ಸಹಜ. ಗರಡಿ ಸಿನಿಮಾದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದೆ. ಹೊಡಿರಲೆ ಹಲಗಿ ಹಾಡನ್ನು ಈಗಾಗಲೇ ಪ್ರೇಕ್ಷಕರು ಮೆಚ್ಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಕೂಡ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಹಾಡಿನಲ್ಲಿ ಕಾಣಿಸುವ ಗರಡಿ ಮನೆಯ ಚಿತ್ರಣ, ಬಾದಾಮಿಯ ಪರಿಸರ ಎಲ್ಲವೂ ಸುಂದರವಾಗಿದೆ. ಜತೆಗೆ, ಈ ಹಾಡಿನ ಸಾಹಿತ್ಯ ವಾರೇವ್ಹಾ ಸೂಪರ್‌ ಎಂದು ಪ್ರೇಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ.

ಏನೇ ಬರಲಿ ರಟ್ಟೆ ತಟ್ಟು

ಗರಡಿ ಸಿನಿಮಾದ ಈ ಟೈಟಲ್‌ ಟ್ರ್ಯಾಕ್‌ "ಏನೇ ಬರಲಿ ರಟ್ಟೆ ತಟ್ಟು ತೊಡೆಯ ತಟ್ಟು ಹಾಕು ಪಟ್ಟು" ಎಂದು ಆರಂಭವಾಗುತ್ತದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಈ ಹಾಡಿನ ಸಾಹಿತ್ಯದ ಜತೆಗೆ ಮ್ಯೂಸಿಕ್‌ ಕೂಡ ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಇದೆ. ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಕಲಾವಿದರ ದಂಡೇ ಇದ್ದು, ನಾಯಕ ಸೂರ್ಯನ ಗತ್ತು ಕೂಡ ಇಷ್ಟವಾಗುತ್ತದೆ. ಡಿ ಡಿ ಡಿ ಡಿ ಗರಡಿ ಹಾಡು ಮೋಡಿ ಮಾಡುವಂತೆ ಇದ್ದು, ಹಾಡಿನ ದೃಶ್ಯವೈಭವ ಕೂಡ ಇಷ್ಟವಾಗುತ್ತದೆ. ಹಿರಿಯ ನಟ ಬಿಸಿ ಪಾಟೀಲ್‌ ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಫೇಸ್‌ಬುಕ್‌ನಲ್ಲಿ ಗರಡಿ ಹಾಡಿಗೆ ಪ್ರತಿಕ್ರಿಯೆ

ಫೇಸ್‌ಬುಕ್‌ನಲ್ಲಿ ಯೋಗರಾಜ್‌ ಭಟ್‌ ಅವರು ಈ ಗರಡಿ ಚಿತ್ರದ ಟೈಟಲ್‌ ಟ್ರ್ಯಾಕ್‌ನ ಲಿಂಕ್‌ ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಕಾಮೆಂಟ್‌ಗಳು ಬಂದಿವೆ. "ಭಟ್ರ ಹಾಡು ಅಂದ್ರೆ ಸುಮ್ನೆ ನಾ ಸೂಪರ್" ಎಂದು ಗೋಲ್ಡನ್‌ ಬಾಯ್‌ ಮಶಾಕ ಕಾಮೆಂಟ್‌ ಮಾಡಿದ್ದಾರೆ. "ಮಸ್ತ್ ಬಂದಿದೆ , ಭಟ್ರೆ , ಬಾದಾಮಿಯ ಚಂದದ ನೋಟ" ಎಂದು ಕೃಷ್ಣ ಆರ್‌ ಚಿತ್ರಗರ್‌ ಪ್ರತಿಕ್ರಿಯೆ ನೀಡಿದ್ದಾರೆ. "ಏನ್ ಸಾಹಿತ್ಯ ಬರೆದಿದ್ದೀರ ಭಟ್ರೇ . ನಮ್ಮ ಬಾದಾಮಿಯ ಪರಿಸರ, ಗರಡಿ ಮನೆಯ ನೋಟ ಮತ್ತು ಬಹಳ ದಿನಗಳ ನಂತರ ನಿಮ್ಮ ಮತ್ತು ಹರಿ ಸರ್ ಅವರ ಸಂಗೀತದ ಜೋಡಿ ಸೂಪರ್ ಆಗಿದೆ" ಎಂದು ಚರಣ್‌ ಯಾದವ್‌ ಕಾಮೆಂಟ್‌ ಮಾಡಿದ್ದಾರೆ.

ಗರಡಿ ಟೈಟಲ್‌ ಟ್ರ್ಯಾಕ್‌ಗೆ ಸೂಪರ್‌, ಶುಭವಾಗಲಿ ಎಂಬ ಕಾಮೆಂಟ್‌ಗಳ ಪ್ರವಾಹವೇ ಇದೆ. "ನಮ್ಮ ಹಳ್ಳಿ ಗರಡಿ ಎಲ್ಲರೂ ನೋಡಲು ಸಿಗುವಂತೆ ಮಾಡ್ತಾ ಇದೀರಾ" ಎಂದು ಮಂಜು ಸೌಮ್ಯ ಕಾಮೆಂಟ್‌ ಮಾಡಿದ್ದಾರೆ. ಹಣೆ ಬರಹದ ಅಖಾಡಕ್ಕೆ ಎಲ್ಲರೂ ಹೊರಡಿ, ನಾಳೆಯ ಚಿಂತೆಯ ಬಿಟ್ಟು ಇಂದಿನ ಜೀವನಕ್ಕೆ ನೀನು ದುಡಿ, ಆಸೆಯ ರೈಲಿಗೆ ಬ್ರೇಕು ಹಾಕಿ ನೀವು ನಿಮ್ಮನು ನೋಡಿ, ಯೋಗ್ ರಾಜ್ ಭಟ್ರ ಸಿನಿಮಾ ಗರಡಿ, ಪೈರಸಿ ಬಿಟ್ಟು ಚಿತ್ರಮಂದಿರದ ಕಡೆ ನೀವು ಹೊರಡಿ, ಜೈ ಗರಡಿ ಜೈ ಗರಡಿ ಎಂದು ಸೀನಾ ರೆಬೆಲ್‌ ಹಾಡಿನ ಧಾಟಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲೂ ಪ್ರತಿಕ್ರಿಯೆಗಳ ಪ್ರವಾಹ

ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ಗೆ ಯೂಟ್ಯೂಬ್‌ನಲ್ಲೂ ಕಾಮೆಂಟ್‌ಗಳ ಪ್ರವಾಹವೇ ಬಂದಿದೆ. ಎಲ್ಲರೂ ಸೂಪರ್‌, ಶುಭವಾಗಲಿ, ಜೈ ಭಟ್ರೆ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಜೈ ಬಿಸಿ ಪಾಟೀಲ್ ,ಜೈ ಗರಡಿ...ಜೈ ಭಟ್ಟರು, ಹಾಡು ತುಂಬಾ ಚೆನ್ನಾಗಿ ಬಂದಿದೆ. ಜೈ ಗರಡಿ ನಾನೊಬ್ಬ ಯೋಗರಾಜ್ ಭಟ್ ಅವರ ಅಕ್ಷರ ಸಾಹಿತ್ಯಕ್ಕೆ ದೊಡ್ಡ ಅಭಿಮಾನಿ. ಹರಿಕೃಷ್ಣ ಸರ್‌ ನಮ್ಮ ಹೆಮ್ಮೆ. ತುಂಬಾ ದಿನಗಳ ನಂತರ ಅರ್ಥ ಪೂರ್ಣ ಹಾಡೊಂದನ್ನು ಕೇಳುತ್ತಿದ್ದೇವೆ ಎಂದು ಹಲವು ಜನರು ಯೂಟ್ಯೂಬ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಗರಡಿ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಇಲ್ಲಿದೆ

Whats_app_banner