ಟಾಕ್ಸಿಕ್ ಸಿನಿಮಾ ಮುಹೂರ್ತ; ಮೊದಲ ದೃಶ್ಯಕ್ಕೆ ಸೆಟ್ ಬಾಯ್ ಕೈಯಲ್ಲಿ ಕ್ಲ್ಯಾಪ್ ಮಾಡಿಸಿ ಸರಳತೆ ಮೆರೆದ ಯಶ್
ನಟ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ಟಾಕ್ಸಿಕ್ ಸಿನಿಮಾದ ಮುಹೂರ್ತ ನೆರವೇರಿದೆ. ಶೂಟಿಂಗ್‌ಗೂ ಚಿತ್ರತಂಡ ಚಾಲನೆ ನೀಡಿದೆ.
Toxic Movie Grand Launch: ಕಳೆದೊಂದು ವರ್ಷದಿಂದ ಸಿನಿಮಾದ ಶೀರ್ಷಿಕೆಯೊಂದನ್ನು ಹೊರತುಪಡಿಸಿದರೆ, ಬೇರಾವ ಅಧಿಕೃತ ಅಪ್‌ಡೇಟ್ ನೀಡಿರಲಿಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನೂರಾರು ಕೋಟಿ ಬಜೆಟ್‌ನ ಈ ಚಿತ್ರವನ್ನು, ಗೀತು ಮೋಹನ್‌ದಾಸ್ ನಿರ್ದೇಶನ ಮಾಡಲಿದ್ದಾರೆ. ಇದೀಗ ಕೆಜಿಎಫ್ ಸಿನಿಮಾ ಯಶ್ ನಾಯಕ ನಟನಾಗಿ ನಟಿಸಲಿರುವ ಈ ಸಿನಿಮಾ ಟೇಕ್ ಆಫ್ ಆಗಿದೆ. ಅಂದರೆ, ಇಲ್ಲಿಯವರೆಗೂ ಪ್ರೀ ಪ್ರೊಡಕ್ಷನ್ಸ್ ಕೆಲಸಗಳಲ್ಲಿಯೇ ವರ್ಷ ಕಳೆದಿದ್ದ ಈ ಸಿನಿಮಾ, ಇದೀಗ ಬೆಂಗಳೂರಿನಲ್ಲಿ ಸರಳ ಮುಹೂರ್ತ ನೆರವೇರಿಸಿಕೊಂಡಿದೆ.
ಸೆಟ್ ಹುಡುಗನಿಂದ ಕ್ಲಾಪ್..
ಮುಹೂರ್ತದ ವಿಚಾರದಲ್ಲಿಯೂ ಒಂದಷ್ಟು ವಿಶೇಷವಾದುದನ್ನೇ ಮಾಡಿದೆ ಟಾಕ್ಸಿಕ್ ಸಿನಿಮಾ. ಸಹಜವಾಗಿ ಸಿನಿಮಾ ಮುಹೂರ್ತ ಅಂದರೆ, ಗಣ್ಯ ವ್ಯಕ್ತಿಗಳ ಕೈಯಿಂದಲೋ, ರಾಜಕಾರಣಿಗಳಿಂದಲೀ, ಸ್ಟಾರ್ ನಟರಿಂದಲೋ ಕ್ಲಾಪ್ ಮಾಡಿಸುವುದು ಸಹಜ. ಆದರೆ, ಟಾಕ್ಸಿಕ್ ಸಿನಿಮಾ ಮಾತ್ರ ಅದ್ಯಾವುದರ ಸಹವಾಸಕ್ಕೆ ಹೋಗಿಲ್ಲ. ಅದರ ಬದಲಿಗೆ ಟಾಕ್ಸಿಕ್ ಸಿನಿಮಾ ಸೆಟ್ ಬಾಯ್ ಸುನೀಲ್ ಎಂಬುವವರು ಕೈಯಿಂದ ಬಹುಕೋಟಿ ವೆಚ್ಚದ ಟಾಕ್ಸಿಕ್ ಚಿತ್ರಕ್ಕೆ ಕ್ಲಾಪ್ ಮಾಡಿಸಿ ಸರಳತೆ ಮೆರೆದಿದೆ ಚಿತ್ರತಂಡ. ಈ ಮೂಲಕ ಸಿನಿಮಾ ತಂತ್ರಜ್ಞ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ ಯಶ್.
ಕೆಜಿಎಫ್ ಬಳಿಕ ಯಶ್ ಗ್ಲೋಬಲ್ ಸಿನಿಮಾ..
ಯಶ್ ಅವರ ಈ ಹಿಂದಿನ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಎರಡು ವರ್ಷದ ಮೇಲಾಯಿತು. 2022ರ ಏಪ್ರಿಲ್ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಆ ಸಿನಿಮಾ 1200 ಪ್ಲಸ್ ಕೋಟಿ ಕಲೆಕ್ಷನ್ ಮಾಡಿತ್ತು. ಆ ಸಿನಿಮಾ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎಂದು ಹೇಳುವುದರಲ್ಲಿಯೇ ವರ್ಷ ಕಳೆಯಿತು. ಅದರಂತೆ, ಕಳೆದ ವರ್ಷ ಟಾಕ್ಸಿಕ್ ಸಿನಿಮಾ ಘೋಷಣೆ ಆಯ್ತು. ಶೂಟಿಂಗ್ ಯಾವಾಗ ಶುರು ಎಂಬುದಕ್ಕೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಮುಹೂರ್ತ ನೆರವೇರಿಸಿಕೊಳ್ಳುವ ಮೂಲಕ ಉತ್ತರ ನೀಡಿದೆ ತಂಡ.
ಶೂಟಿಂಗ್ ಶುರು
ಇಂದು (ಆಗಸ್ಟ್ 08) ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ ಸಿನಿಮಾಕ್ಕೆ ಬೆಂಗಳೂರಿನ HMT ಫ್ಯಾಕ್ಟರಿಯಲ್ಲಿ ಸಿದ್ದವಾಗಿರುವ ಟಾಕ್ಸಿಕ್ ಚಿತ್ರದ ಅದ್ಧೂರಿ ಸೆಟ್‌ನಲ್ಲೇ ಈ ಸಿನಿಮಾದ ಮುಹೂರ್ತ ನೆರವೇರಿದೆ. ಅಷ್ಟೇ ಅಲ್ಲ ಇಂದಿನಿಂದಲೇ ಶೂಟಿಂಗ್ ಸಹ ಆರಂಭವಾಗಿದೆ. ಕೊನೆಗೇ ಯಶ್ 19ನೇ ಸಿನಿಮಾ ಸೆಟ್ಟೇರಿದ್ದಕ್ಕೆ ಅವರ ಫ್ಯಾನ್ಸ್ ವಲಯದಲ್ಲಿ ಖುಷಿ ದುಪ್ಪಟ್ಟಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ.
ಟೆಂಪಲ್ ರನ್ ಮುಗಿಸಿದ ಯಶ್
ಕೆಜಿಎಫ್ ಸಿನಿಮಾದ ಮೂಲಕ ದೇಶ- ವಿದೇಶದಲ್ಲಿ ಖ್ಯಾತಿ ಪಡೆದಿರುವ ನಟ ಯಶ್ ಅವರ ಮುಂಬರುವ ಟಾಕ್ಸಿಕ್ ಸಿನಿಮಾದ ಕುರಿತು ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಶೂಟಿಂಗ್ ಆರಂಭಕ್ಕೂ ಮುನ್ನ ನಟ ಯಶ್ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಮಣ್ಣಿನ ಹರಕೆಯ ಕ್ಷೇತ್ರವೆಂದು ಜನಪ್ರಿಯತೆ ಪಡೆದಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದರ್ಶನ್ ಪಡೆದಿದ್ದರು. ನಟ ಯಶ್ ಮತ್ತವರ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಮಗ ಯಥರ್ವ್ ಜತೆ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಇವರೊಂದಿಗೆ ಟಾಕ್ಸಿಕ್ ಸಿನಿಮಾ ನಿರ್ಮಾಪಕ ವೆಂಕಟ್ ಕೂಡ ಇದ್ದಾರೆ.