ಕನ್ನಡ ಸುದ್ದಿ  /  Entertainment  /  Sandalwood News Google India Tweet 2024 Got More Exciting Saw Kantara Teaser Kantara Chapter 1 Release Date Pcp

ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ಗೆ ಬೆರಗಾಯ್ತು ಗೂಗಲ್‌; ವಾಹ್‌, 2024 ಇನ್ನಷ್ಟು ರೋಚಕ ಎಂದು ಟ್ವೀಟ್‌ ಮಾಡಿದ ಸರ್ಚ್‌ ಎಂಜಿನ್‌ ದೈತ್ಯ

Kantara chapter 1 release date: ಕಾಂತಾರ ಚಾಪ್ಟರ್‌ 1 ಟೀಸರ್‌ ಕುರಿತು ಇದೀಗ ಗೂಗಲ್‌ ಇಂಡಿಯಾವು ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದೆ. ತನ್ನ ಟ್ವೀಟ್‌ನಲ್ಲಿ ಕಾಂತಾರ ಎಂದು ಕನ್ನಡದಲ್ಲೇ ಬರೆದ ಗೂಗಲ್‌ ನಡೆಯು ಕನ್ನಡಿಗರನ್ನು ರೋಮಾಂಚನಗೊಳಿಸಿದೆ.

ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ಗೆ ಬೆರಗಾಯ್ತು ಗೂಗಲ್‌
ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ಗೆ ಬೆರಗಾಯ್ತು ಗೂಗಲ್‌

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ವಿಜಯ್ ಕಿರಗಂದೂರು ನಿರ್ಮಾಣದ ಕಾಂತಾರ ಚಾಪ್ಟರ್‌ 1 ಟೀಸರ್‌ ಕುರಿತು ಇದೀಗ ಗೂಗಲ್‌ ಇಂಡಿಯಾವು ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದೆ. ತನ್ನ ಟ್ವೀಟ್‌ನಲ್ಲಿ ಕಾಂತಾರ ಎಂದು ಕನ್ನಡದಲ್ಲೇ ಬರೆದ ಗೂಗಲ್‌ ನಡೆಯು ಕನ್ನಡಿಗರನ್ನು ರೋಮಾಂಚನಗೊಳಿಸಿದೆ. "2024 ಇನ್ನಷ್ಟು ರೋಚಕವಾಗಿದೆ. ಕಾಂತಾರ ಟೀಸರ್‌ ನೋಡಿದೆ. ವಾಹ್‌ ಎಂದು ಹೇಳಬೇಕಿನಿಸಿದೆ" ಎಂದು ಗೂಗಲ್‌ ಇಂಡಿಯಾ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಗೂಗಲ್‌ ಇಂಡಿಯಾವು ಮಾಡಿರುವ ಟ್ವೀಟ್‌ ನೆಟ್ಟಿಗರನ್ನು ಸೆಳೆದಿದೆ. "ಬಹುಶಃ ಇದು ಸುಂದರ್‌ ಪಿಚೈ ಅವರೇ ಟ್ವೀಟ್‌ ಮಾಡಿರಬೇಕು" ಎಂದು ಎಕ್ಸ್‌ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. "ಕನ್ನಡ ಪವರ್‌" ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಟ್ವೀಟ್‌ನಲ್ಲಿ ಕಾಂತಾರ ಎಂಬ ಪದವನ್ನು ಕನ್ನಡದಲ್ಲಿಯೇ ಬರೆಯಲಾಗಿದೆ.

ಕಾಂತಾರ ಚಾಪ್ಟರ್‌ 1 ಬಿಡುಗಡೆ ದಿನಾಂಕ

ಈ ಟ್ವೀಟ್‌ನಲ್ಲಿ ಗೂಗಲ್‌ ಸರ್ಚ್‌ನಲ್ಲಿ ಕಾಂತಾರ ಚಾಪ್ಟರ್‌ 1 ರಿಲೀಸ್‌ ಡೇಟ್‌ ಎಂಬ ಕೀವರ್ಡ್‌ನಲ್ಲಿ ಹುಡುಕುವ ಫೋಟೋ ಇದೆ. 2024 ಎಂಬ ಫಲಿತಾಂಶವೂ ದೊರಕಿದೆ. ಇದೇ ಸಮಯದಲ್ಲಿ ಗೂಗಲ್‌ ಸರ್ಚ್‌ ರಿಸಲ್ಟ್‌ನಲ್ಲಿ ಈ ಸುದ್ದಿಗೆ ಸಂಬಂಧಪಟ್ಟಂತೆ ಫೋಟೋ, ಒಟಿಟಿ, ಸುದ್ದಿ, ಚಿತ್ರಗಳು ಇತ್ಯಾದಿ ವಿಭಾಗಗಳು ಕಾಣಿಸುವ ಫೀಚರ್‌ ಅನ್ನೂ ತೋರಿಸಲಾಗಿದೆ. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಕಾಂತಾರ ಟ್ರೆಂಡಿಂಗ್‌, ಪಂಜುರ್ಲಿಯ ಕೋರೆಹಲ್ಲು ಕಾಂತಾರ ಫಸ್ಟ್‌ಲುಕ್‌ನ ಹೈಲೈಟ್‌; ಗೆಳೆಯನಿಗೆ ರಕ್ಷಿತ್‌ ಶೆಟ್ಟಿ ಹೀಗಂದ್ರು

ಯೂಟ್ಯೂಬ್‌ನಲ್ಲಿ ಕಾಂತಾರ ಟ್ರೆಂಡಿಂಗ್‌

ಯೂಟ್ಯೂಬ್‌ನಲ್ಲಿ ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ ವಿಡಿಯೋ ಇಂದು ನಂಬರ್‌ 1 ಟ್ರೆಂಡಿಂಗ್‌ನಲ್ಲಿದೆ. ಇದೇ ಖುಷಿಗೆ ಗೂಗಲ್‌ ಟ್ವೀಟ್‌ ಮಾಡಿ ಸಂಭ್ರಮಿಸಿದೆ. ಈ ಫಸ್ಟ್‌ಲುಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಹತ್ತು ದಶಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಯೂಟ್ಯೂಬ್‌ನಲ್ಲಿ ನಿನ್ನೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಕಾಂತಾರ ಫಸ್ಟ್‌ಲುಕ್‌ ಬಿಡುಗಡೆಯಾಗಿತ್ತು. ಒಂದೇ ವಿಡಿಯೋದಲ್ಲಿ ಸೆಟ್ಟಿಂಗ್‌ನಲ್ಲಿ ಭಾಷೆ (ಸೌಂಡ್‌ ಟ್ರ್ಯಾಕ್‌) ಬದಲಾಯಿಸುವ ಅವಕಾಶ ನೀಡಲಾಗಿತ್ತು. ಇದನ್ನು ನೋಡಿ: ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಕಾಂತಾರ ಚಿತ್ರಕ್ಕೆ ಅದ್ಧೂರಿ ಮುಹೂರ್ತ VIDEO

ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾತ್ರವಲ್ಲದೆ ಕಾಮೆಂಟ್‌ಗಳ ಪ್ರವಾಹವೇ ಉಂಟಾಗುತ್ತಿದೆ. ಹದಿನೆಂಟು ಸಾವಿರಕ್ಕೂ ಹೆಚ್ಚು ಜನರು ಈ ಫಸ್ಟ್‌ ಲುಕ್‌ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ರಿಷಬ್‌ ಶೆಟ್ಟಿಯವರು ಕೇವಲ ನಟಿಸುತ್ತಿಲ್ಲ, ತನ್ನ ಪಾತ್ರದಲ್ಲಿ ಜೀವಿಸುತ್ತಿದ್ದಾರೆ ಎಂದು ಯೂಟ್ಯೂಬ್‌ ಬಳಕೆದಾರರೊಬ್ಬರು ಬರೆದಿದ್ದಾರೆ. ಈ ಸಿನಿಮಾದಲ್ಲೂ ರೋಮಾಂಚನ ಖಾತ್ರಿ ಎಂದು ಸಾಕಷ್ಟು ಜನರು ಕಾಮೆಂಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದು ನಿಜಕ್ಕೂ ಚೆನ್ನಾಗಿರೋದು, ಪ್ರೀಕ್ವೆಲ್‌ ಎಂದರೆ ಹೀಗಿರಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಂಗಾಳಿ ಭಾಷೆಯಲ್ಲೂ ಬಿಡುಗಡೆ ಮಾಡಿರುವುದಕ್ಕೆ ಕೆಲವು ಬಂಗಾಳಿ ಭಾಷಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಾಂತಾರ ಚಾಪ್ಟರ್‌ 1 ಈ ಯುಗದ ಅದ್ಭುತ ಸಿನಿಮಾವಾಗಲಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇಷ್ಟು ಅದ್ಭುತವಾದ ಟೀಸರ್‌ ಹೊರಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಸಾವಿರಾರು ಕಾಮೆಂಟ್‌ಗಳಲ್ಲಿ ಫಸ್ಟ್‌ಲುಕ್‌ ಕುರಿತು ಶ್ಲಾಘನೆಗಳ ಪ್ರವಾಹವೇ ಹರಿದಿದೆ.

'ಕಾಂತಾರ' ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಭ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

"ಈ ಫಸ್ಟ್‌ಲುಕ್‌ನ ಅತ್ಯುತ್ತಮ ಭಾಗ ಎಂದರೆ ನೀನು ಧರಿಸಿರುವ ಕಿವಿಯೋಲೆ. ಪಂಜುರ್ಲಿಯ ಎರಡು ಕೋರೆ ಹಲ್ಲು ನಿನ್ನ ಗಡ್ಡದ ಮೂಲಕ ಹೊರಬಂದಿರುವಂತೆ ಕಾಣಿಸುತ್ತಿದೆ. ಆಲ್‌ ದಿ ಬೆಸದ್ಟ್‌ ಮಗ. ವಿಜಯ್‌ ಸರ್‌ ಮತ್ತು ಹೊಂಬಾಳೆ ಸಿನಿಮಾಕ್ಕೆ ನನ್ನ ಶುಭ ಹಾರೈಕೆಗಳು" ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ