ಅಪ್ಪನ ಬೋಳು ತಲೆ ಕುರಿತು ಹೀಗೆ ಹೇಳೋದ ಮಗನೇ? ಗೌರಿ ನಟ ಸಮರ್ಜಿತ್ ಮಾತಿಗೆ ಇಂದ್ರಜಿತ್ ಲಂಕೇಶ್ ಅಚ್ಚರಿ, ಕಿಚ್ಚ ಸುದೀಪ್ ಚಪ್ಪಾಳೆ
Gowri Kannada Movie: ಆಗಸ್ಟ್ 15ರಂದು ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ನಟನೆಯ ಗೌರಿ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಯದಲ್ಲಿ ತನ್ನ ತಂದೆಯ ಬೋಳು ತಲೆಯ ಕುರಿತು ಸಮರ್ಜಿತ್ ಹೇಳಿದ ಮಾತು ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದೆ. ವಿಶೇಷವಾಗಿ ಕಿಚ್ಚ ಸುದೀಪ್ ನಾನ್ ಸ್ಟಾಪ್ ಚಪ್ಪಾಳೆ ತಟ್ಟಿದ್ದಾರೆ.
ಬೆಂಗಳೂರು: ಈ ಆಗಸ್ಟ್ ತಿಂಗಳಿನಲ್ಲಿ ಹಲವು ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ವಾರ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಜಯ ರಾಘವೇಂದ್ರ ಅತಿಥಿ ಪಾತ್ರದಲ್ಲಿ ನಟಿಸಿರುವ ಜೀನಿಯಸ್ ಮುತ್ತಾ, ಮುಂದಿನ ವಾರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ, ಕೆಜಿಎಫ್ ಅಖಾಡದ ಪೂರ್ವಜರ ಕಥೆಯಿರುವ ತಂಗಲಾನ್, ಸಮರ್ಜಿತ್ ಲಂಕೇಶ್ ನಟನೆಯ ಗೌರಿ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಗೌರಿ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಇಂದ್ರಜಿತ್ ಲಂಕೇಶ್ ಸ್ನೇಹಿತರಾಗಿರುವ ಕಿಚ್ಚ ಸುದೀಪ್ ಕೂಡ ಭಾಗವಹಿಸಿದ್ದರು. ಗೌರಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಸಮರ್ಜಿತ್ ಲಂಕೇಶ್ ಎಂಟ್ರಿ ನೀಡುತ್ತಿದ್ದಾರೆ.
ಏನಿದು ಬೋಳು ಮಂಡೆ ವಿಷ್ಯ?
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಮರ್ಜಿತ್ ಲಂಕೇಶ್ ಹೀಗಂದ್ರು. "ನೀವೆಲ್ಲರೂ ಬಂದಿದ್ದೀರಿ. ಆದರೆ, ಇದು ಯಾವುದೋ ದೊಡ್ಡ ಸ್ಟಾರ್ ಸಿನಿಮಾ ಅಲ್ಲ. ನನಗೆ ಇದು ಮೊದಲ ಸಿನಿಮಾ. ನಮ್ಮ ತಂಡದಲ್ಲಿ ಒಬ್ಬ ಸ್ಟಾರ್ ಇದ್ದಾರೆ. ಅದು ನಮ್ಮ ಶೈನಿಂಗ್ ಸ್ಟಾರ್ ಇಂದ್ರಜಿತ್ ಲಂಕೇಶ್ ಅವರು" ಎಂದು ತನ್ನ ಪ್ರೀತಿಯ ಅಪ್ಪನ ಕುರಿತು ಸಮರ್ಜಿತ್ ಲಂಕೇಶ್ ಹೇಳಿದ್ದಾರೆ. ಮಜಾ ಟಾಕೀಸ್‌ನಲ್ಲಿ ಸೃಜನ್ ಲೋಕೇಶ್ ಅವರು ಇಂದ್ರಜಿತ್ ಅವರನ್ನು ಆಗಾಗ ಶೈನಿಂಗ್ ಸ್ಟಾರ್ ಎಂದು ಕಿಚಾಯಿಸುತ್ತಿದ್ದರು. ಈ ಮಾತು ಕೇಳಿದ ತಕ್ಷಣ ಸುದೀಪ್ ಜೋರಾಗಿ ಚಪ್ಪಾಳೆ ತಟ್ಟಲು ಆರಂಭಿಸಿದರು. "ಯಾರ ಬಗ್ಗೆ ಇವನು ಹೇಳ್ತಾ ಇದ್ದಾನೆ ಅಂತ ಯೋಚಿಸ್ತಾ ಇದ್ದೆ" ಎಂದು ಈ ಸಂದರ್ಭದಲ್ಲಿ ನಗುತ್ತಾ ಇಂದ್ರಜಿತ್ ಲಂಕೇಶ್ ಹೇಳುವ ಮಾತು ಕೇಳಿಸುತ್ತದೆ. ಈ ಮೂಲಕ ಎಲ್ಲರೂ ಕಾರ್ಯಕ್ರಮದಲ್ಲಿ ನಗೆಗಡಲಿನಲ್ಲಿ ಮುಳುಗಿದ್ದಾರೆ.
ಓದಿ: ಕೂದಲು ಉದುರಲು ಮನೆಮದ್ದು
ಇತ್ತೀಚೆಗೆ ನಡೆದ ಗೌರಿ ಸಿನಿಮಾದ ಟ್ರೇಲರ್ ಬಿಡುಗಡೆಯ ಸಂದರ್ಭದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಕಷ್ಟು ಜನರು ಇಂದ್ರಜಿತ್ ಲಂಕೇಶ್ ಮಗನ ಧೈರ್ಯಕ್ಕೆ ಮೆಚ್ಚಿದ್ದಾರೆ. "ಈ ವಾರದ ಕಿಚ್ಚನ ಚಪ್ಪಾಳೆ ಸಮರ್ಜಿತ್ ಅವರಿಗೆ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಸುದೀಪ್ ಏನಂದ್ರು?
ಈ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಇಂದ್ರಜಿತ್ ಲಂಕೇಶ್ ತಮ್ಮ ಸ್ನೇಹ ನೆನಪಿಸಿಕೊಂಡಿದ್ದಾರೆ. "ಇಂದ್ರಜಿತ್ ಮತ್ತು ನಾನು ಹಳೆಯ ಸ್ನೇಹಿತರು. ಇಬ್ಬರೂ ಜೊತೆಗೆ ಈ ಹಿಂದೆ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದೆವು. ಆ ಸಮಯದಲ್ಲಿ ನನಗೆ ಇವರು ಲಂಕೇಶ್ ಅವರ ಮಗ ಅಂತ ಗೊತ್ತಿರಲಿಲ್ಲ. ಆದರೆ, ಬಹಳ ಚೆನ್ನಾಗಿ ಶಟಲ್ ಆಡ್ತಾ ಇದ್ರು. ಈ ಗೌರಿ ಸಿನಿಮಾದ ಟ್ರೇಲರ್ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಇವತ್ತು ಅವರಿಬ್ಬರಿಗೆ ಆಗುವಷ್ಟು ಸಂತೋಷ, ಈ ಜಗತ್ತಿನಲ್ಲಿ ಬೇರೆ ಯಾರಿಗೂ ಆಗೋದಕ್ಕೆ ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್ ಅವರ ಯಶಸ್ಸೂ ಇದೆ" ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಇಂದ್ರಜಿತ್ ಲಂಕೇಶ್ ಮಾತು
"ಕಿಚ್ಚ ಸುದೀಪ್ ಹಾಗೂ ನನ್ನ ಗೆಳೆತನ 2 ದಶಕಗಳಿಗೂ ಮೀರಿದ್ದು. ಸುದೀಪ್ ಜೊತೆ ಈ ಹಿಂದೆ ಶಟಲ್ ಆಟ ಆಡಿದ ದಿನಗಳು ಈಗಲೂ ಕಣ್ಣಮುಂದೆ ಇದೆ. ಹಿಂದೆ ನನ್ನ ನಿರ್ದೇಶನದ ಚಿತ್ರವೊಂದರಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರು ನನ್ನಿಂದ ಯಾವ ಸಂಭಾವನೆಯನ್ನು ಪಡೆದಿರಲಿಲ್ಲ. ಆಮೇಲೆ ನಾನು ಅವರಿಗೆ ಏನು ಕೊಡುವುದು? ಅವರ ಬಳಿ ಎಲ್ಲಾ ಇದೆ ಎಂದು ಕೊಂಡು, ಅವರ ಮಗಳಿಗೆ ವಿಶೇಷ ಉಡುಗೊರೆ ತೆಗೆದುಕೊಂಡು ಅವರ ಮನೆಗೆ ಹೋದೆ. ಆದರೆ ಸುದೀಪ್ ಅವರು ಅದನ್ನು ನನಗೆ ಕೊಡಲು ಬಿಡಲಿಲ್ಲ" ಎಂದು ಇಂದ್ರಜಿತ್ ನೆನಪಿಸಿಕೊಂಡಿದ್ದರು.