ಕನ್ನಡ ಸುದ್ದಿ  /  Entertainment  /  Sandalwood News Gowri Shankar Bindu Shivaram Starrer Kerebete Movie Review And Ratings Kannada Movie Reviews Mnk

Kerebete Review: ಹಸಿರ ನಡುವೆ ಹರಿತವಾದ ಕಥೆ, ‘ಕೆರೆಬೇಟೆ’ಯಲ್ಲಿ ಜಾತಿ ಮತ್ತು ಪ್ರೀತಿಯ ಘಮಲು; ಕೆರೆಬೇಟೆ ಚಿತ್ರ ವಿಮರ್ಶೆ

ಹೆಸರೇ ಹೇಳುವಂತೆ ಕೆರೆಬೇಟೆ ಸಿನಿಮಾ ಒಂದು ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಕಥೆ. ಇಲ್ಲಿ ಕಾಣಿಸುವುದೆಲ್ಲ ಹಸಿರು, ಹಚ್ಚ ಹಸಿರು. ಕಥಾನಾಯಕ ಹುಲಿಮನೆ ನಾಗ ಒಮ್ಮಿಂದೊಮ್ಮೆ ಖಳನ ರೀತಿ ಪೊರೆ ಕಳಚುತ್ತಾನೆ. ಅಚ್ಚರಿಗಳ ಗುಚ್ಛದ ಜತೆಗೆ ಮಲೆನಾಡ ಸೀಮೆಯ ಆಚಾರ ವಿಚಾರ, ಸಂಪ್ರದಾಯ, ಪದ್ಧತಿಗಳೂ ಈ ಸಿನಿಮಾದ ತೋರಣದಂತಿದೆ.

Kerebete Review: ಹಸಿರ ನಡುವೆ ಹರಿತವಾದ ಕಥೆ, ‘ಕೆರೆಬೇಟೆ’ಯಲ್ಲಿ ಜಾತಿ ಮತ್ತು ಪ್ರೀತಿಯ ಘಮಲು; ಕೆರೆಬೇಟೆ ಚಿತ್ರ ವಿಮರ್ಶೆ
Kerebete Review: ಹಸಿರ ನಡುವೆ ಹರಿತವಾದ ಕಥೆ, ‘ಕೆರೆಬೇಟೆ’ಯಲ್ಲಿ ಜಾತಿ ಮತ್ತು ಪ್ರೀತಿಯ ಘಮಲು; ಕೆರೆಬೇಟೆ ಚಿತ್ರ ವಿಮರ್ಶೆ

ಚಿತ್ರ: ಕೆರೆಬೇಟೆ, ನಿರ್ಮಾಣ: ಜನಮನ​, ಚಿತ್ರ ನಿರ್ದೇಶನ: ರಾಜ್​ಗುರು, ತಾರಾಗಣ: ಗೌರಿ ಶಂಕರ್​, ಬಿಂದು ಶಿವರಾಮ್​, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್​, ಸಂಪತ್​ ಮೈತ್ರೇಯ ಇತರರು. ಸ್ಟಾರ್​: 3/5

Kerebete Review: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಮಣ್ಣಿನ ಘಮದ ಸಿನಿಮಾಗಳೇ ಹೆಚ್ಚು ತೆರೆಕಂಡಿವೆ. ಉತ್ತರ ಕರ್ನಾಟಕ ಸೀಮೆಯ ಕೆಲವು ಚಿತ್ರಗಳು ಚಿತ್ರಮಂದಿರಕ್ಕೆ ಬಂದರೆ, ಮಲೆನಾಡ ಸೊಗಡಿನ ಹಚ್ಚ ಹಸುರು ಪರಿಸರದ, ಭಾಷಾ ಗಮ್ಮತ್ತಿನ ಸಿನಿಮಾ ಸಹ ತೆರೆಗೆಕಂಡಿವೆ. ಆ ಪೈಕಿ ಮಲೆನಾಡಿನ ಜನಪದ ಕಲೆ ಕೆರೆಬೇಟೆಯ ಹಿನ್ನೆಲೆಯಲ್ಲಿಯೇ ಸಿನಿಮಾ ಮಾಡಿದ್ದಾರೆ ಅದೇ ಮಲೆನಾಡಿನ ಹುಡುಗ ಗೌರಿ ಶಂಕರ್‌. ಸಿನಿಮಾ ಕಲಿತು, ಒಂದಷ್ಟು ನಿರ್ದೇಶಕರ ಕಡೆಗೆ ಪಳಗಿದ ರಾಜ್‌ಗುರು ಕೆರೆಬೇಟೆ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಶುಕ್ರವಾರ (ಮಾ. 15) ಬಿಡುಗಡೆಯಾಗಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ

ಶಿವಮೊಗ್ಗ ಜಿಲ್ಲೆಯ ಮಲೆನಾಡ ಭಾಗದ ಕಥೆಯೇ ಕೆರೆಬೇಟೆ. ಯಾರ ಮಾತನ್ನೂ ಕೇಳದ, ಯಾರಿಗೂ ಕ್ಯಾರೇ ಎನ್ನದ ಮನಸ್ಥಿತಿ ಕಥಾನಾಯಕನದ್ದು. ಒಂದು ರೀತಿ ಆತ ಇಡೀ ಊರಿಗೆ ಗುಂಡ್ರಗೋವಿ. ಹೆಸರು ಹುಲಿಮನೆ ನಾಗ (ಗೌರಿಶಂಕರ್‌). ಮೋಟು ಬೀಡಿ ಸೇದುತ್ತಾ, ಕುರುಚುಲು ಗಡ್ಡದ, ಕಪ್ಪು ತುಟಿಯುಳ್ಳ ಉಡಾಳ. ಇಂಥ ಹುಡುಗನ ಎದೆಗೆ ಕಾಲಿಟ್ಟವಳು, ಮೇಲ್ಜಾತಿಯ ಮೀನಾ(ಬಿಂದು). ಒಂದು ಸನ್ನಿವೇಶದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆಕೆಯೊಡೆಯುತ್ತದೆ, ಊರ ತುಂಬ ಸುದ್ದಿಯಾಗಿ, ಮನೆ ಮಂದಿಗೂ ವಿಚಾರ ತಿಳಿದು ರಾದ್ಧಾಂತವಾಗುತ್ತದೆ. ಹಾಗಾದರೆ ಇದೊಂದು ಪ್ರೇಮಕಥೆಯೇ? ಇಲ್ಲ ಇಲ್ಲಿಂದಲೇ ಅಸಲಿ ಕಥೆ ಶುರುವಾಗುವುದು!

ಹೆಸರೇ ಹೇಳುವಂತೆ ಕೆರೆಬೇಟೆ ಸಿನಿಮಾ ಒಂದು ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಕಥೆ. ಇಲ್ಲಿ ಕಾಣಿಸುವುದೆಲ್ಲ ಹಸಿರು, ಹಚ್ಚ ಹಸಿರು. ಇದರಾಚೆಗೆ ಆ ಭಾಗದ ಆಚಾರ ವಿಚಾರ, ಸಂಪ್ರದಾಯ, ಭಾಷಾ ಸೊಗಡು, ಅಲ್ಲಿನ ಆಹಾರ ಪದ್ಧತಿ, ಕೆರೆಯಲ್ಲಿ ಮೀನು ಹಿಡಿಯುವ ಪದ್ಧತಿಯನ್ನೂ ತೆರೆಮೇಲೆ ತರುವ ಕಾಯಕವನ್ನು ನಿರ್ದೇಶಕರು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಜತೆಗೆ ಜಾತಿ ಪದ್ಧತಿ ವಿಷವರ್ತುಲವೂ ಇಲ್ಲಿ ಬಿಡಿಸಿಕೊಳ್ಳಲು ಬಾರದ ಬಳ್ಳಿಯಂತೆ ಹಬ್ಬಿದೆ. ಇಂಥ ಜಾತಿಯ ಸುಳಿಗೆ ಸಿಲುಕುವ ಪ್ರೇಮಿಗಳು ಮುಂದೆ ಏನೆಲ್ಲ ಅನುಭವಿಸುತ್ತಾರೆ ಎಂಬ ಕೌತುಕವನ್ನೂ ಭರ್ತಿಯಾಗಿ ತುಂಬಿಸಿದ್ದಾರೆ ರಾಜ್‌ಗುರು.

ಇಡೀ ಸಿನಿಮಾದಲ್ಲಿ ಹುಲಿಮನೆ ನಾಗ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸುವುದೇ ಹೆಚ್ಚು. ಹಾಗಂತ ಅವನಲ್ಲಿ ಒಳ್ಳೆಯ ಗುಣವಿಲ್ಲವೇ? ಕಥಾನಾಯಕ ಒಮ್ಮಿಂದೊಮ್ಮೆ ಖಳನ ರೀತಿ ಪೊರೆ ಕಳಚುತ್ತಾನೆ. ಹೀಗೆ ಒಂದಲ್ಲ ಎರಡಲ್ಲ ಹಲವು ಕೋನಗಳಲ್ಲಿ ಸಿನಿಮಾ ನೋಡುಗನನ್ನು ಸೆಳೆಯುತ್ತ, ನೋಡಿಸಿಕೊಂಡೇ ಹೋಗುತ್ತದೆ. ರೋಚಕತೆಗಳ ಜತೆಗೆ ಸಾಗುವ ಈ ಕೆರೆಬೇಟೆ ಕೊನೆಗೆ ಸುಖಾಂತ್ಯವೂ ಕಾಣುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನ ಅಚ್ಚರಿಗಳು ನೋಡುಗನಿಗೆ ಶಾಕ್‌ ನೀಡಬಹುದು. ಒಟ್ಟಿನಲ್ಲಿ ಹಸಿರ ನಡುವೆ ಹರಿತವಾದ ಕಥೆಯನ್ನೇ ನಿರ್ದೇಶಕರು ಆಯ್ಕೆ ಮಾಡಿದ್ದು ವಿಶೇಷ.

ಪಾತ್ರವರ್ಗ ಮತ್ತು ತಾಂತ್ರಿಕ ಬಳಗಕ್ಕೆ ಪೂರ್ಣಾಂಕ ದಕ್ಕುತ್ತದೆ. ಶಿವಮೊಗ್ಗದ ಸೊರಬ, ಸಾಗರ ಭಾಗದಲ್ಲಿಯೇ ಬಹುತೇಕ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ. ಖಡಕ್‌ ಹೈದನಾಗಿ ಮೋಟು ಬೀಡಿ ಸೇದುತ್ತ, ಇಡೀ ಸಿನಿಮಾ ಪೂರ್ತಿ ಪಂಚೆಯಲ್ಲಿಯೇ ಕಂಡಿದ್ದಾರೆ ಗೌರಿ ಶಂಕರ್‌. ಸಿಕ್ಕ ಪಾತ್ರಕ್ಕೆ ತಯಾರಿ ಮಾಡಿಕೊಂಡೇ ಕಣಕ್ಕಿಳಿದಿದ್ದಾರೆ. ಕನ್ನಡದ ವರ್ಸಟೈಲ್‌ ನಟರ ಸಾಲಿನಲ್ಲಿ ನಿಲ್ಲುವ ಗೋಪಾಲಕೃಷ್ಣ ದೇಶಪಾಂಡೆ ನಟನೆಯಿಂದಲೇ ಇಲ್ಲಿ ಇಷ್ಟವಾಗುತ್ತಾರೆ. ನಟಿ ಹರಿಣಿ ಕಡೆಯಿಂದಲೂ ಅಚ್ಚುಕಟ್ಟು ನಟನೆ ಸಂದಾಯವಾಗಿದೆ. ನಾಯಕಿ ಬಿಂದು ಶಿವರಾಮ್‌ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ, ಕಲಾವಿದರನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ ನಿರ್ದೇಶಕರು.

ಮಲೆನಾಡ ಭಾಗ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಬೈಗುಳಗಳನ್ನು ಯಥಾವತ್ತಾ ಮಿಶ್ರಣ ಮಾಡಿದ್ದಾರೆ. ನೋಡುಗನಿಗೂ ಇದು ಅಸಹನೀಯ ಎನಿಸುತ್ತದೆ. ಇನ್ನುಳಿದಂತೆ, ಸಿನಿಮಾದ ಛಾಯಾಗ್ರಹಣ, ಸಂಗೀತವೂ ಚಿತ್ರಕಥೆಗೆ ಪೂರಕವಾಗಿದೆ. ಸಂಗೀತ ನಿರ್ದೇಶಕ ಗಗನ್‌ ಬಡೇರಿಯಾ ಅವರ ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ. ಕೀರ್ತನ್‌ ಪೂಜಾರಿ ಅವರ ಕ್ಯಾಮರಾ ಕೋನಗಳು ಫ್ರೆಶ್‌ ಎನಿಸುತ್ತವೆ. ಒಟ್ಟಾರೆ, ಮಲೆನಾಡ ಸೀಮೆಯ ಕೆರೆಬೇಟೆ ಕಥೆ, ನೋಡುಗನಿಗೆ ಅಚ್ಚರಿಗೆ ದೂಡುವುದಂತು ನಿಜ.