2976 ವೈರಲ್ ವಿಡಿಯೋಗಳ ಪೈಕಿ ನಾನೂ ಒಂದನ್ನು ನೋಡಿದೆ; ಪ್ರಜ್ವಲ್ ರೇವಣ್ಣ ವಿಡಿಯೋ ವೀಕ್ಷಿಸಿದ ಹರ್ಷಿಕಾ ಪೂಣಚ್ಚ ಏನಂದ್ರು?
ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಕೊಂಚ ಬೇಸರದಲ್ಲಿಯೇ ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಹರ್ಷಿಕಾ, "ಇದೊಂದು ಹೀನ ಕೊಳಕು ಕೃತ್ಯ. ಈ ವಿಡಿಯೋದಲ್ಲಿ ಇರುವ ಅಸಂಖ್ಯಾತ ಮಹಿಳೆಯರು ಪಾಪದವರು" ಎಂದು ಬರೆದುಕೊಂಡಿದ್ದಾರೆ.
Harshika Poonacha: ಮಹಿಳಾ ವರ್ಗವನ್ನೇ ತಲೆತಗ್ಗಿಸುವಂತೆ ಮಾಡಿರುವ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಕರ್ನಾಟಕದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದ ಹಲವೆಡೆಗಳಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಕೂಡಲೇ ಆರೋಪಿ ಸ್ಥಾನದಲ್ಲಿರುವವರನ್ನು ಬಂಧಿಸುವಂತೆಯೂ ಆಗ್ರಹಿಸುತ್ತಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ತಂದೆ ದೇವೇಗೌಡ ಅವರ ಪದ್ಮನಾಭನಗರದ ಮನೆಯಲ್ಲಿಯೇ ತಲೆ ಮರೆಸಿಕೊಂಡಿದ್ದ ಎಚ್‌ಡಿ ರೇವಣ್ಣ ಅವರನ್ನು ಅತ್ಯಾಚಾರ ಸಂತ್ರಸ್ತೆಯ ಅಪಹರಣ ಕೇಸ್‌ನಡಿ ಶನಿವಾರ ಬಂಧಿಸಲಾಗಿದೆ.
ಈ ನಡುವೆ ಇದೇ ಪ್ರಕರಣಕ್ಕೆ ರಾಜಕೀಯ ಲೇಪನ ಮಾಡಲಾಗುತ್ತಿದ್ದು, ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜಕೀಯ ಮಂದಿಯ ಹೇಳಿಕೆಯ ಜತೆಗೆ ಸಿನಿಮಾ ಮಂದಿಯೂ ರೊಚ್ಚಿಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳೂ ಈ ಬಗ್ಗೆ ಧ್ವನಿ ಎತ್ತಿದ್ದು, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಹ "ಒಂದು ವೇಳೆ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಸುಮ್ನೆ ಬಿಡ್ತಿದ್ರಾ?" ಎಂದು ಕೇಂದ್ರದ ಮೋದಿ ಸರ್ಕಾರಕ್ಕೆ ತಿವಿದಿದ್ದರು. ಈಗ ನಟಿ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಸಹ ಮೌನ ಮುರಿದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಕೊಂಚ ಬೇಸರದಲ್ಲಿಯೇ ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಹರ್ಷಿಕಾ, ಇದೊಂದು ಹೀನ ಕೊಳಕು ಕೃತ್ಯ. ಈ ವಿಡಿಯೋದಲ್ಲಿ ಇರುವ ಅಸಂಖ್ಯಾತ ಮಹಿಳೆಯರು ಪಾಪದವರು" ಎಂದು ಹರ್ಷಿಕಾ ಬರೆದುಕೊಂಡು, ಸಂಬಂಧಪಟ್ಟವರು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಹರ್ಷಿಕಾ ಪೂಣಚ್ಚ ಪೋಸ್ಟ್
"ದುರದೃಷ್ಟವಶಾತ್ ಎಲ್ಲೆಡೆ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ! ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಗಣನೆಗೆ ತೆಗೆದುಕೊಳ್ಳಬೇಕು"
"ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರನ್ನು ನೋಡಿದರೆ ನೋವಾಗುತ್ತದೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸರಳ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ"
"ಹೀಗೆ ವಿಡಿಯೋ ಹರಿ ಬಿಡುವುದಕ್ಕೂ ಮೊದಲು ಅದರಲ್ಲಿನ ಮಹಿಳೆಯರ ಮುಖಗಳನ್ನಾದರೂ ಬ್ಲರ್ ಮಾಡಬಹುದಿತ್ತಲ್ಲವೇ? ಇಂಥ ಘಟನೆಯಿಂದ ಮುಂಬರುವ ಭವಿಷ್ಯದ ದಿನಗಳಲ್ಲಿ ನೋವು ಅನುಭವಿಸಿದವರು ಈ ಸಮಾಜವನ್ನು ಹೇಗೆ ಎದುರಿಸಿ ನಿಲ್ಲುತ್ತಾರೆ? ಆ ಮಹಿಳೆಯರನ್ನು ಜನ ಹೇಗೆ ನೋಡಲಿದ್ದಾರೆ? ಅವರ ಕುಟುಂಬ ಮತ್ತು ಮಕ್ಕಳ ಪರಿಸ್ಥಿತಿ ಏನು? ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನು ಊಹಿಸಿ!!"
"ಹೀಗಾಗುತ್ತೆ ಎಂದು ನೀವು ಯಾವತ್ತಾದರೂ ಊಹಿಸಿದ್ದೀರಾ? ಈ ಕೃತ್ಯ ಎಸಗಿರುವ ವ್ಯಕ್ತಿಗೆ ಯಾವ ಪ್ರಮಾಣದಲ್ಲಿ ಶಿಕ್ಷೆ ವಿಧಿಸುತ್ತಿರೋ, ಈ ವಿಡಿಯೋಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟ ವ್ಯಕ್ತಿಗೂ ಸಮನಾಗಿ ಅದೇ ಶಿಕ್ಷೆ ಆಗಬೇಕು. ನಾನು ಮಹಿಳೆಯರ ಗೌರವ, ಸುರಕ್ಷತೆ ಮತ್ತು ಸಮಾನತೆಯ ಅವರ ಜತೆಗೆ ಸದಾ ನಿಂತಿದ್ದೇನೆ. ಇನ್ನು ಮುಂದೆಯೂ ನಿಲ್ಲಲಿದ್ದೇನೆ. ಈ ಕೇಸ್‌ನಲ್ಲಿ ಮಾನಸಿಕವಾಗಿ ಬಳಲಿ, ನೋವು ಯಾತನೆ ಅನುಭವಿಸುತ್ತಿರುವ ಎಲ್ಲ ಅಮಾಯಕ ಕುಟುಂಬಗಳಿಗೆ ಆ ಭಗವಂತ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜೈ ಹಿಂದ್" ಎಂದಿದ್ದಾರೆ.
ವಿಭಾಗ