ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ, VIP ಟ್ರೀಟ್‌ಮೆಂಟ್ ಹೇಗಿರುತ್ತದೆ?; ದರ್ಶನ್ ಜತೆ ದಿನ ಕಳೆದು ಬಿಡುಗಡೆಯಾದ ವ್ಯಕ್ತಿ ಹೇಳಿದ್ದಿಷ್ಟು
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದ್ದಾರೆ? ಅವರಿಗೆ ಅಲ್ಲಿ ಸಿಗುತ್ತಿರುವ ಸೌಕರ್ಯಗಳೇನು? ವಿಐಪಿ ಟ್ರೀಟ್‌ಮೆಂಟ್ ಅಂದರೆ, ಹೆಚ್ಚುವರಿಯಾಗಿ ಸಿಗುವ ಸವಲತ್ತುಗಳೇನು? ಈ ಎಲ್ಲದರ ಬಗ್ಗೆ ಅವರ ಜತೆ ದಿನಕಳೆದು ಸನ್ನಡತೆ ಆಧಾರದ ಮೇಲೆ ಜೈಲಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
How is actor Darshan Thoogudeepa in jail: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ನಟ ದರ್ಶನ್. ಈ ನಡುವೆ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಸಂಬಂಧಿಕರು, ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇದ್ದಾರೆ. ಈ ನಡುವೆ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆಯೂ ಕೆಲವರು ಮಾತನಾಡುತ್ತಿದ್ದಾರೆ. ದರ್ಶನ್ ಜ್ವರದಿಂದ ಬಳಲುತ್ತಿದ್ದಾರೆ ಎಂದೂ ಜೈಲಿಗೆ ಭೇಟಿದವರು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ.
ಹೊರಗಿನವರಿಗೆ ಜೈಲಿನ ವಾತಾವರಣ ಹೇಗಿರುತ್ತದೆ? ಎಂಬ ಕುತೂಹಲ ಜಾಸ್ತಿ. ಸಿನಿಮಾಗಳಲ್ಲಿ ತೋರಿಸಿದಂತೆ ಎಲ್ಲವೂ ಅಲ್ಲಿರಲ್ಲ. ಆರೋಪಿ, ಅಪರಾಧಿಗಳನ್ನು ಜೈಲಿನ ಸಿಬ್ಬಂದಿ ಹೇಗೆ ಅವರನ್ನು ನಡೆಸಿಕೊಳ್ಳುತ್ತಾರೆ ಎಂಬುದೂ ಹಲವರಿಗೆ ಅಚ್ಚರಿ. ಹಾಗಾದರೆ ನಟ ದರ್ಶನ್ ಅವರನ್ನು ಜೈಲಿನಲ್ಲಿ ಹೇಗೆ ಟ್ರೀಟ್ ಮಾಡಲಾಗುತ್ತಿದೆ. ಸಹಜ ಕೈದಿಯಂತೆಯೇ ಇದ್ದಾರಾ? ಅವರಿಗೆ ಸಿಗ್ತಿರುವ ಸೌಲಭ್ಯಗಳೇನು? ಈ ಎಲ್ಲದರ ಬಗ್ಗೆ ಜೈಲಿಂದ ರಿಲೀಸ್ ಆದ ವ್ಯಕ್ತಿ ಹೇಳಿಕೊಂಡಿದ್ದಾರೆ.
ಕಳೆದ 22 ವರ್ಷಗಳಿಂದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ತುರುವನೂರು ಸಿದ್ಧಾರೂಢ, ಇತ್ತೀಚೆಗಷ್ಟೇ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದರು. ರಿಲೀಸ್ ಆಗುವುದಕ್ಕೂ ಮುನ್ನ ನಟ ದರ್ಶನ್ ಸಹ ಜೈಲಿನಲ್ಲಿರುವ ವಿಚಾರ ತಿಳಿದಿತ್ತು. ಸಿದ್ಧಾರೂಢ ಬಿಡುಗಡೆಗೂ ಎರಡು ದಿನಗಳ ಮುನ್ನ, ಕೋರಿಕೆಯ ಮೇರೆಗೆ, ನಾನೂ ದರ್ಶನ್ ಅವರ ಅಭಿಮಾನಿ ಎಂದು ಹೇಳಿ ಅವರನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದರು. ಈ ವಿಚಾರವನ್ನು ಥರ್ಡ್ ಐ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜೈಲಿನಲ್ಲಿನ ಮಾತುಕಥೆಯನ್ನು ಬಿಚ್ಚಿಟ್ಟಿದ್ದಾರೆ.
ದರ್ಶನ್‌ಗೆ ಜೈಲಿನಲ್ಲಿ ಏನೆಲ್ಲ ವ್ಯವಸ್ಥೆ ಸಿಗುತ್ತಿದೆ?
"ದರ್ಶನ್ ಸರ್ ಅವರಿಗೆ ವಿಐಪಿ ಸೆಲ್‌ನಲ್ಲಿ ಇರಿಸಲಾಗಿದೆ. ಸಾಮಾನ್ಯ ಕೈದಿಗಳಿಗಿಂತ ವಿಐಪಿ ಸೆಲ್‌ನಲ್ಲಿ ಸೌಕರ್ಯ ಜಾಸ್ತಿ. ಹಾಸಿಗೆ, ಸೊಳ್ಳೆ ಪರದೆ, ಎರಡು ಚೇರ್, 20 ಲೀಟರ್ ಕುಡಿಯುವ ನೀರಿನ ಕ್ಯಾನ್ ವ್ಯವಸ್ಥೆ ಇರುತ್ತದೆ. ಟಿವಿ ವೀಕ್ಷಿಸಬಹುದು. ಓದಲು ದಿನ ಪತ್ರಿಕೆ ಮತ್ತು ಪುಸ್ತಕಗಳನ್ನೂ ನೀಡಲಾಗುತ್ತದೆ. ವಿಐಪಿ ಸೆಲ್‌ಗೆ ಊಟ ತಂದು ಕೊಡುತ್ತಾರೆ. ದರ್ಶನ್ ಅವ್ರೂ ಜೈಲೂಟ ಮಾಡುತ್ತಿದ್ದಾರೆ.
ವಿಐಪಿ ಸೆಲ್‌ನಲ್ಲಿದ್ದರೂ ಅದು ಒಂದು ರೀತಿ ನರಕ!
"ದರ್ಶನ್ ಅವರಿಗೆ ಯಾವುದೇ ರೀತಿಯ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಅದು ಹೆಸರಿಗಷ್ಟೇ ವಿಐಪಿ ಸೆಲ್ ಆದರೂ ಕೂಡ ಅಲ್ಲಿ ಇದಕ್ಕಿತ ಹೆಚ್ಚಿನ ಯಾವುದೇ ಸೌಲಭ್ಯ ಇರುವುದಿಲ್ಲ. ಕಾಮನ್ ಸೆಲ್‌ನಲ್ಲಿ ಎಲ್ಲರೂ ಇರುತ್ತಾರೆ, ಮಾತಾಡಿಕೊಂಡು ಹೇಗೋ ಸಮಯ ಕಳೆಯಬಹುದು. ಸಿಂಗಲ್ ಸೆಲ್‌ನಲ್ಲಿ ಒಬ್ಬರೇ ಇರೋದು ಸಿಕ್ಕಾಪಟ್ಟೆ ನರಕ"
"ವಿಐಪಿ ಎಂದ ಮಾತ್ರಕ್ಕೆ ಬೇರೆ ಕೈದಿಗಳನ್ನು ಭೇಟಿ ಮಾಡುವ ಯಾವ ಅವಕಾಶವೂ ಇರಲ್ಲ. ದರ್ಶನ್ ಅವರನ್ನು ಯಾರನ್ನಾದರೂ ಭೇಟಿ ಮಾಡಲು ತೆರಳುತ್ತಿದ್ದಾಗ, ಉಳಿದ ಸೆಲ್‌ನಲ್ಲಿದ್ದವರು ಅವರನ್ನು ನೋಡಬಹುದು. ಮುಖತಃ ಭೇಟಿ ಕಷ್ಟ. ಬಿಡುಗಡೆ ಆಗ್ತಿದ್ದೇನೆ. ಒಂದೇ ಒಂದು ಸಲ ದರ್ಶನ್ ಅವರ ಭೇಟಿಗೆ ಅವಕಾಶ ಕೋರಿದ್ದೆ. ತಕ್ಷಣ ಕೊಟ್ಟರು."
ಧ್ಯಾನ ಹೇಳಿಕೊಟ್ಟೆ..
"ಅವರ ವಿಐಪಿ ಕೋಣೆಗೆ ಹೋಗ್ತಿದ್ದಂತೆ, ನನ್ನ ಕೈ ಕುಲುಕಿ ತಬ್ಬಿಕೊಂಡು ಮಾತನಾಡಿಸಿದರು. ಅವರ ಬಳಿಯಿದ್ದ ಬಿಸ್ಕಟ್ ನೀಡಿ ತುಂಬ ಆತ್ಮೀಯವಾಗಿ, ಹತ್ತಿರದವರೇನು ಅನ್ನುವ ರೀತಿಯಲ್ಲಿ ಮಾತನಾಡಿದರು. ನನ್ನ ಬಗ್ಗೆಯೂ ಕೇಳಿದರು. ಯಾವ ಕೇಸ್ ಮೇಲೆ ಬಂದಿದ್ದೀರಿ ಎಂದರು. ನನ್ನದೇನು ಬಿಡಿ, ನಿಮ್ಮದು ಹೇಳಿ ಅಣ್ಣ ಅಂದೆ. ನನ್ನದೇನಿದೆ? ಎಲ್ಲವೂ ಟಿವಿಯಲ್ಲಿ ಬರ್ತಾಯಿದೆಯಲ್ಲ ಅಂದ್ರು. ಆ ತಕ್ಷಣಕ್ಕೆ ಅವರ ಮನಸಿನ ದುಗುಡ ದೂರ ಮಾಡಲು, ಅವರಿಗೆ ಧ್ಯಾನ ಹೇಳಿಕೊಟ್ಟೆ. ಈ ಸಮಯದಲ್ಲಿ ಧ್ಯಾನ ಬಹಳ ಮುಖ್ಯ ಎಂದೆ"
"ನನ್ನ ಮಾತನ್ನು ಅಲ್ಲಗೆಳೆಯದೆ 10 ನಿಮಿಷಗಳ ಕಾಲ ಒಟ್ಟಿಗೆ ಧ್ಯಾನ ಮಾಡಿದೆವು. ಅವರೂ ಅಲ್ಲಿ ಒಂಟಿ. ಒಳಗಡೆಯೇ ಯಾರಾದರೂ ಮಾತನಾಡಿಸಲಿ ಎಂದು ಕಾಯುತ್ತಿರುತ್ತಾರೆ. ಯಾಕೋ ಅವರ ಮುಖದಲ್ಲಿ ಹಳೇ ಕಳೆ ಇಲ್ಲ. ಚೂರು ಡಲ್ ಆಗಿದ್ದಾರೆ. ತಪ್ಪು ಮಾಡಿದ್ದೇನೆ ಅನ್ನೋ ಪಾಪಪ್ರಜ್ಞೆ ಅವರನ್ನು ಕಾಡುತ್ತಿರಬಹುದು. ಸಾಧ್ಯವಾದ ಮಟ್ಟಿಗೆ ಪಾಸಿಟಿವ್ ಆಗಿರಿ. ಪುಸ್ತಕ ಓದಿ ಎಂದು ಹೇಳಿದ್ದೇನೆ" ಎಂದಿದ್ದಾರೆ ಸಿದ್ಧಾರೂಢ.
ವಿಭಾಗ