Baby Shamlee: ಅಂದಿನ ಪುಟಾಣಿ ಬೇಬಿ ಶಾಮಿಲಿ ಈಗ ಬಳುಕೋ ಬಳ್ಳಿ; ಈ ನಟಿಗೆ ಈಗೆಷ್ಟು ವಯಸ್ಸು, ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ?
ಸೌತ್ ಸಿನಿಮಾರಂಗದಲ್ಲಿ 10 ವರ್ಷಗಳ ಕಾಲ ಬಾಲನಟಿಯಾಗಿಯೇ ಆಳಿದವರು ನಟಿ ಬೇಬಿ ಶಾಮಿಲಿ. ಏನೂ ತಿಳಿಯದ ವಯಸ್ಸಲ್ಲಿಯೇ ಬಣ್ಣದ ಲೋಕಕ್ಕೆ ಬಂದ ಈ ಪುಟಾಣಿ, ಈಗ ತುಂಬ ಬದಲಾಗಿದ್ದಾರೆ. ಸದ್ಯ ಈ ನಟಿ ಏನ್ಮಾಡ್ತಿದ್ದಾರೆ, ಈಗ ಇವರ ವಯಸ್ಸೆಷ್ಟು, ಮದುವೆ ಆಗಿದ್ದಾರಾ? ಎಂಬಿತ್ಯಾದಿ ವಿವರ ಇಲ್ಲಿದೆ.
Baby Shamlee: ಸಿನಿಮಾಗಳಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡ ಎಷ್ಟೋ ನಟಿಯರು ಇಂದು ಪೂರ್ಣ ಪ್ರಮಾಣದ ನಾಯಕಿಯರಾಗಿ ಬಡ್ತಿ ಪಡೆದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಇನ್ನು ಕೆಲವರು ಸಿನಿಮಾ ಸಹವಾಸವೇ ಸಾಕೆಂದು ಹಿಂದೆ ಸರಿದು ತಾವಾಯ್ತು ತಮ್ಮ ಜೀವನವಾಯ್ತು ಎಂದು ಬಣ್ಣದ ಲೋಕದಿಂದ ದೂರವೇ ಉಳಿದವರೂ ಇಲ್ಲಿದ್ದಾರೆ. ಆ ಪೈಕಿ ಬಾಲನಟಿಯಾಗಿಯೇ ಖ್ಯಾತಿ ಪಡೆದು ಬೇಡಿಕೆಯ ಉತ್ತುಂಗದಲ್ಲಿದ್ದ ನಟಿಯರಲ್ಲಿ ಬೇಬಿ ಶಾಮಿಲಿ ಕೂಡ ಒಬ್ಬರು.
ಕೇರಳದ ತಿರುವಲ್ಲಿ ಮೂಲದ ಶಾಮಿಲಿ, ಕೇವಲ ಎರಡೇ ವರ್ಷದವರಿದ್ದಾಗ ಸಿನಿಮಾ ಲೋಕಕ್ಕೆ ಆಗಮಿಸಿದರು. ಆಗಿನ ಕಾಲದಲ್ಲಿ ಬಾಲ ಕಲಾವಿದರಿಗೆ ಅತೀವ ಬೇಡಿಕೆ. ಆದರೆ, ತಮಗೆ ಬೇಕಾದ ಬಾಲ ಕಲಾವಿದರೇ ಆಗಿನ ಕಾಲದಲ್ಲಿ ಸಿಗುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ತಿಳಿವಳಿಕೆ ಇಲ್ಲದ ಹೊತ್ತಲ್ಲೇ 1989ರಲ್ಲಿ ತಮಿಳಿನ ರಾಜಾನದಾಯ್ ಚಿತ್ರದ ಮೂಲಕ ನಟನೆ ಆರಂಭಿಸಿದರು. ವಿಜಯ್ ಕಾಂತ್ ಈ ಚಿತ್ರದ ನಾಯಕರಾಗಿದ್ದರು.
ಅದಾದ ಮೇಲೆ ತಮಿಳಿನಲ್ಲಿ ಅಂಜಲಿ ಸಿನಿಮಾ ಮೂಲಕ ಎಂಟ್ರಿಕೊಟ್ಟು ಅಲ್ಲಿಯೂ ಗಮನ ಸೆಳೆದರು. ಕೇವಲ 3 ವರ್ಷದವಳಿದ್ದಾಗ ಮಲಯಾಳಂನಲ್ಲಿ ಮಾಲೂಟಿ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮತ್ತೆ ಹಾಡಿತು ಕೋಗಿಲೆ ಚಿತ್ರದ ಮೂಲಕ 1990ರಲ್ಲಿ ಕನ್ನಡಕ್ಕೂ ಆಗಮಿಸಿದರು. ಅದಾದ ಮೇಲೆ ಸೌತ್‌ನ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಬಾಲನಟಿಯಾಗಿ ಶಾಮಿಲಿ ನಟಿಸಿದರು.
ಕನ್ನಡದಲ್ಲಿ ಹತ್ತಾರು ಸಿನಿಮಾಗಳಲ್ಲಿ ನಟನೆ
ಕನ್ನಡದಲ್ಲಿ ಭೈರವಿ, ಶ್ವೇತಾಗ್ನಿ, ಪೊಲೀಸ್ ಲಾಕ್‌ಅಪ್, ಕಾದಂಬರಿ, ಶಾಂಭವಿ, ದಾಕ್ಷಾಯಿಣಿ, ಹೂವು ಹಣ್ಣು, ಮಕ್ಕಳ ಸಾಕ್ಷಿ, ಚಿನ್ನ ನೀ ನಗುತಿರು, ಭುವನೇಶ್ವರಿ, ಕರುಳಿನ ಕುಡಿ, ಜಗದೀಶ್ವರಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಿಟ್ಟಿಸಿಕೊಂಡರು. ತಮಿಳಿನ ಅಂಜಲಿ ಸಿನಿಮಾಕ್ಕೆ ಅತ್ಯುತ್ತಮ ಬಾಲ ನಟಿ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯೂ ಅವರಿಗೆ ಒಲಿಯಿತು. 1989ರಿಂದ 2000 ವರೆಗೂ ಬಾಲನಟಿಯಾಗಿ ನಟಿಸಿದ ಶಾಮಿಲಿ, ಇದಾದ ಮೇಲೆ ನಾಯಕಿಯಾಗಿಯೂ ಎಂಟ್ರಿ ಕೊಟ್ಟರು.
ನಾಯಕಿಯಾಗಿಯೂ ಅದೃಷ್ಟಪರೀಕ್ಷೆ
2009ರಲ್ಲಿ ತಮಿಳಿನಲ್ಲಿ ಓಯ್ ಚಿತ್ರದಲ್ಲಿ ಸಿದ್ಧಾರ್ಥ್‌ಗೆ ನಾಯಕಿಯಾಗಿ ಶಾಮಿಲಿ ನಟಿಸಿದರು. ಗ್ಯಾಪ್‌ನ ಬಳಿಕ 2016ರಲ್ಲಿ ಮಲಯಾಳಂನಲ್ಲಿ ವಲ್ಲೇಮ್ ತೆಟ್ಟಿ ಪುಲ್ಲೇಮ್ ತೆಟ್ಟಿ ಮತ್ತು ತಮಿಳಿನ ವೀರ ಸಿವಾಜಿ ಚಿತ್ರದಲ್ಲಿ ನಟಿಸಿದರು. 2018ರಲ್ಲಿ ತೆಲುಗಿನ ಅಮ್ಮಮ್ಮಗಾರಿಲೋ ಸಿನಿಮಾ ಬಳಿಕ ಮತ್ಯಾವ ಚಿತ್ರಗಳಲ್ಲೂ ನಟಿಸಿಲ್ಲ. ನಾಯಕಿಯಾಗಿ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಂಥ ಹಿಟ್ ಆಗಲಿಲ್ಲ. ಆ ಕಾರಣಕ್ಕೂ ನಟನೆಯಿಂದ ಶಾಮಿಲಿ ದೂರವೇ ಉಳಿದಿದ್ದಾರೆ.
ಚೈನ್ನೈನಲ್ಲಿ ವಾಸ, ಪೇಂಟಿಂಗ್ ಸಹವಾಸ
ಬೇಬಿ ಶಾಮಿಲಿಗೆ ಸದ್ಯ 36 ವರ್ಷ ವಯಸ್ಸು. ಸದ್ಯ ಚೈನ್ನೈನಲ್ಲಿಯೇ ವಾಸವಾಗಿರುವ ಶಾಮಿಲಿ, ಸ್ಟಿಲ್ ಸಿಂಗಲ್. ನಟಿಯಾಗಿ ಹೆಸರು ಮಾಡಿರುವ ಶಾಮಿಲಿಗೆ ಪೇಂಟಿಂಗ್ ಗೀಳೂ ಅಂಟಿಕೊಂಡಿದೆ. ಇವರೊಳಗೆ ಒಬ್ಬ ಅತ್ಯುತ್ತಮ ಚಿತ್ರಕಲಾವಿದೆಯೂ ಇದ್ದಾಳೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅವುಗಳ ಫೋಟೋಗಳನ್ನೂ ಶೇರ್ ಮಾಡುತ್ತಿರುತ್ತಾರೆ. ಅಕ್ಕ ಶಾಲಿನಿ ಸಹ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಅಕ್ಕನ ಗಂಡ ತಲಾ ಅಜಿತ್ ಕಾಲಿವುಡ್‌ನ ಸ್ಟಾರ್ ಹೀರೋ.