Sudeep: ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಆರೋಪ ಬೆನ್ನಲ್ಲೇ ಕಿಚ್ಚನತ್ತ ಬೆರಳು ತೋರಿದ ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್, ಆಗಿದ್ದೇನು?
ಸಿನಿಮಾ ಮಾಡಲು ಸುದೀಪ್ ಅವರಿಗೆ 5 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ನೀಡಿದ್ದೆ, ಆದರೆ ಸಿನಿಮಾದಲ್ಲಿ ಕೂಡಾ ನಟಿಸಲಿಲ್ಲ, 1.5 ಲಕ್ಷ ರೂ. ವಾಪಸ್ ನೀಡಿ, ಉಳಿದ ಹಣವನ್ನು ಇನ್ನೂ ನೀಡಿಲ್ಲ ಎಂದು ನಿರ್ಮಾಪಕ ರೆಹಮಾನ್ ಸುದೀಪ್ ವಿರುದ್ದ ಆರೋಪಿಸಿದ್ದಾರೆ.
ಸುದೀಪ್ ನಮ್ಮ ಬಳಿ ಹಣ ಪಡೆದು ಸಿನಿಮಾದಲ್ಲಿ ನಟಿಸದೆ , ಹಣ ಕೂಡಾ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕಳೆದು ಒಂದು ವಾರದ ಹಿಂದೆ ನಿರ್ಮಾಪಕ ಕುಮಾರ್ ಆರೋಪಿಸಿದ್ದರು. ಇದೇ ವಿಚಾರವಾಗಿ ಸುದ್ದಿಗೋಷ್ಠಿ ಕೂಡಾ ನಡೆಸಿದ್ದರು. ಇದೀಗ ಮತ್ತೊಬ್ಬ ನಿರ್ಮಾಪಕ ಕೂಡಾ ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ.
ಹುಚ್ಚ ಸಿನಿಮಾ ನಿರ್ಮಾಪಕ ಆರೋಪ
ಯಜಮಾನ ಹಾಗೂ ಹುಚ್ಚ ಸಿನಿಮಾಗಳ ನಿರ್ಮಾಪಕ ರೆಹಮಾನ್ ಕೂಡಾ ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ರೆಹಮಾನ್, ಸುದೀಪ್ ಅವರಿಂದ ನನಗೆ 36 ಲಕ್ಷ ರೂಪಾಯಿ ನಷ್ಟ ಆಗಿದೆ. ನಿಮ್ಮ ಸಿನಿಮಾ ಮಾಡುತ್ತೇನೆ ಎಂದು ಅವರು ಹೇಳಿದ್ದರಿಂದಲೇ ನಾನು ಕೋಟಿ ಹಣ ಸುರಿದು ಬೇರೆ ಭಾಷೆಗಳ ರೀಮೇಕ್ ರೈಟ್ಸ್ ಪಡೆದೆ. ಕಾಲ್‌ಶೀಟ್ ಪಡೆದು ಸುದೀಪ್ ಅವರಿಗೆ 5 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟೆ. ಆದರೆ ನಂತರ ನನಗೆ 1.5 ಲಕ್ಷ ವಾಪಸ್ ಕೊಟ್ಟರು, ಉಳಿದ ಹಣ ಮಾತ್ರ ಇದುವರೆಗೂ ವಾಪಸ್ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ನಿರ್ಮಾಪಕರ ಸಂಘಕ್ಕೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ
ಉಳಿದ ಹಣ ಕೇಳಿ ನಾನು ಸುದೀಪ್ ಅವರಿಗೆ ಅನೇಕ ಬಾರಿ ಕರೆ ಮಾಡಿದ್ದೆ, ಅದರೆ ಅವರು ನನಗೆ ಸೂಕ್ತ ರೀತಿ ಸ್ಪಂದಿಸಲಿಲ್ಲ. ವಿಧಿ ಇಲ್ಲದೆ ನಿರ್ಮಾಪಕರ ಸಂಘಕ್ಕೂ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಆದರೆ ಈಗ ನಿರ್ಮಾಪಕ ಕುಮಾರ್ ಅವರು ತಮಗೆ ಆದ ಅನ್ಯಾಯದ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ನನಗೂ ಹೇಳಿಕೊಳ್ಳಬೇಕು ಎನಿಸಿತು. ಆದ್ದರಿಂದ ನಿಮ್ಮ ಮುಂದೆ ಬಂದಿದ್ದೇನೆ. ಸುದೀಪ್ ನನಗೆ ಹಣ ವಾಪಸ್ ನೀಡಿಲ್ಲ. ಕುರಾನ್, ಭಗವದ್ಗೀತೆ, ಬೈಬಲ್ ಯಾವುದರ ಮೇಲಾದರೂ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ರೆಹಮಾನ್ ಸುದೀಪ್ ವಿರುದ್ದ ಆರೋಪಿಸಿದ್ದಾರೆ.
ಕಿಚ್ಚನ ಪ್ರತಿಕ್ರಿಯೆ ಏನು?
ನಿರ್ಮಾಪಕ ಕುಮಾರ್ ತಮ್ಮ ಮೇಲೆ ಮಾಡಿದ ಆರೋಪವನ್ನು ಸುದೀಪ್ ನಿರಾಕರಿಸಿದ್ದರು. ನನ್ನ ಮೇಲೆ ಸುಖಾ ಸುಮ್ಮನೆ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ ರೆಹಮಾನ್ ಕೂಡಾ ಕಿಚ್ಚನ ಮೇಲೆ ಆರೋಪ ಮಾಡುತ್ತಿದ್ದು ಇದಕ್ಕೆ ಸುದೀಪ್ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.
ಕಾನೂನು ಹೋರಾಟಕ್ಕೆ ಸಿದ್ಧ ಎಂದ ಜಾಕ್ ಮಂಜು
ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ಆಪ್ತ ಜಾಕ್ ಮಂಜು, ನಡೆದಿರುವ ಎಲ್ಲಾ ಘಟನೆ ನನಗೆ ಗೊತ್ತು. ನಿಮ್ಮೊಂದಿಗೆ ಸಿನಿಮಾ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದು ನಿಜ, ಆದರೆ ಸಿನಿಮಾ ಮಾಡಲು ಸುದೀಪ್ ಅವರಿಗೆ ಕುಮಾರ್, ಒಂದು ಪೈಸೆ ಹಣ ಕೂಡಾ ನೀಡಿಲ್ಲ. ಹಾಗಿದ್ದಲ್ಲಿ ಅವರಿಗೆ ಹಣ ವಾಪಸ್ ನೀಡುವುದು ಎಲ್ಲಿಂದ ಬಂತು? ಅವರು ಕಾನೂನು ಹೋರಾಟ ಮಾಡಲಿ, ನಾವೂ ಕೂಡಾ ಕಾನೂನಿನ ಮೂಲಕವೇ ನ್ಯಾಯ ಪಡೆಯುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿವಾದ ಮುಂದೆ ಯಾವ ರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕು.