ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ನವಿರು ನಿರೂಪಣೆಯ ಸುಂದರ ಪ್ರೇಮಕಾವ್ಯ, ಪ್ರೇಕ್ಷಕರ ಹೃದಯತಟ್ಟಿದ ಚಂದ್ರಜಿತ್‌ ಬೆಳ್ಳಿಯಪ್ಪ-sandalwood news ibbani tabbida ileyali kannada movie review chandrajith belliappa enchants audience love story pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ನವಿರು ನಿರೂಪಣೆಯ ಸುಂದರ ಪ್ರೇಮಕಾವ್ಯ, ಪ್ರೇಕ್ಷಕರ ಹೃದಯತಟ್ಟಿದ ಚಂದ್ರಜಿತ್‌ ಬೆಳ್ಳಿಯಪ್ಪ

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ನವಿರು ನಿರೂಪಣೆಯ ಸುಂದರ ಪ್ರೇಮಕಾವ್ಯ, ಪ್ರೇಕ್ಷಕರ ಹೃದಯತಟ್ಟಿದ ಚಂದ್ರಜಿತ್‌ ಬೆಳ್ಳಿಯಪ್ಪ

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ಇಬ್ಬನಿ ತಬ್ಬಿದ ಇಳೆಯಲಿ ಒಂದು ನವಿರಾದ, ಹೃದಯಸ್ಪರ್ಶಿ ಪ್ರೇಮಕಥೆಯನ್ನು ಹೊಂದಿದೆ. ಪರಿಚಿತ ಕಥೆಯನ್ನು ಹೊಸತನದೊಂದಿಗೆ ಹೇಳಿರುವ ರೀತಿ ಆಪ್ತವಾಗಿದೆ. ಈ ವರ್ಷ ವಿಹಾನ್‌ ಮತ್ತು ಅಂಕಿತಾ ಪ್ರೇಕ್ಷಕರ ಹೃದಯದಲ್ಲಿ ಸ್ಥಾನಪಡೆಯುವ ಸೂಚನೆ ಇದೆ.

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ಗೌರಿ ಗಣೇಶ ಹಬ್ಬದ ದೀರ್ಘ ರಜೆಯನ್ನು ಗಮನದಲ್ಲಿಟ್ಟುಕೊಂಡು ರಕ್ಷಿತ್‌ ಶೆಟ್ಟಿ ನಿರ್ಮಾಣದ, ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ಪ್ರೇಮಕಾವ್ಯ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಎಲ್ಲೆಡೆ ಪಾಸಿಟಿವ್‌ ರಿವ್ಯೂ ಕೇಳಿ ಬರುತ್ತಿದೆ. ಕಳೆದ ವರ್ಷ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮನು ಮತ್ತು ಪ್ರಿಯ ಎಲ್ಲರ ಗಮನ ಸೆಳೆದ ಜೋಡಿಯಾದರೆ, ಈ ಬಾರಿ ವಿಹಾನ್‌ ಮತ್ತು ಅಂಕಿತಾ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆಯುವ ಸೂಚನೆಯಿದೆ. ಈ ಕನ್ನಡ ಸಿನಿಮಾವನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪೋರ್ಟಲ್‌ ಒಟಿಟಿ ಪ್ಲೇಯ ಪ್ರತಿಭಾ ಜಾಯ್‌ ನೋಡಿ ವಿಮರ್ಶೆ ಬರೆದಿದ್ದಾರೆ. ಆ ವಿಮರ್ಶೆಯ ಕನ್ನಡ ರೂಪ ಇಲ್ಲಿದೆ.

ಸಿನಿಮಾ ವಿಮರ್ಶೆ

ಚಲನಚಿತ್ರದ ಹೆಸರು: ಇಬ್ಬನಿ ತಬ್ಬಿದ ಇಳೆಯಲಿ
ಭಾಷೆ: ಕನ್ನಡ
ನಿರ್ದೇಶನ: ಚಂದ್ರಜಿತ್‌ ಬೆಳ್ಳಿಯಪ್ಪ
ನಿರ್ಮಾಣ: ರಕ್ಷಿತ್‌ ಶೆಟ್ಟಿ (ಪರಂವಃ ಸ್ಟುಡಿಯೋಸ್‌), ಜಿಎಸ್‌ ಗುಪ್ತಾ
ತಾರಾಗಣ: ವಿಹಾನ್‌ ಗೌಡ, ಅಂಕಿತಾ ಅಮರ್‌, ಗಿರಿಜಾ ಶೆಟ್ಟರ್‌, ಮಯೂರಿ ನಟರಾಜ, ಶಂಕರ್‌ ಮೂರ್ತಿ, ಸಲ್ಮಾನ್‌ ಶೆರಿಫ್‌
ಸಂಗೀತ: ಗಗನ್‌ ಬಡೇರಿಯಾ
ಕ್ಯಾಮೆರಾ: ಶ್ರೀವಸ್ತನ್‌ ಸೆಲ್ವರಾಜನ್‌
ಸಂಕಲನ: ರಕ್ಷಿತ್‌ ಕಾಪು

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಕಥೆ

ಕ್ರಿಕೆಟ್‌ ಕುರಿತು ಮಹಾತ್ವಕಾಂಕ್ಷೆ ಹೊಂದಿರುವ ಸಿದ್ದಾರ್ಥ್‌ ಅಶೋಕ್‌ (ವಿಹಾನ್‌) ಬಿಸಿರಕ್ತದ ಯುವಕ. ಜೂನಿಯರ್‌ ಹುಡುಗಿಯನ್ನು ಭೇಟಿಯಾದ ಸಂದರ್ಭದಲ್ಲಿ ಆಕೆಯ ಆಕರ್ಷಣೆಗೆ ಒಳಗಾಗುತ್ತಾನೆ. ಅವಳು ಯಾರೆಂದು ತಿಳಿಯಲು ಮತ್ತು ಅವರಿಬ್ಬರ ನಡುವಿನ ಸಂಬಂಧ ಏನೆಂದು ಅರ್ಥ ಮಾಡಿಕೊಳ್ಳಲು ಈತನಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈಗನ ಕೋಪವೇ ಪ್ರೀತಿಗೆ ಶಾಪವಾಗುತ್ತದೆ. ಈತನ ಆಂಗ್ರಿಮ್ಯಾನ್‌ ಅವತಾರದಿಂದಾಗಿ ಇಬ್ಬರೂ ದೂರವಾಗುತ್ತಾರೆ. 7 ವರ್ಷಗಳ ಬಳಿಕ ಇವರಿಬ್ಬರು ಬೇರೆಯದ್ದೇ ಆದ ಸಂದರ್ಭಗಳಲ್ಲಿ ಮರುಸಂಪರ್ಕಿಸಲು ಯತ್ನಿಸುತ್ತಾರೆ. ಹಳೆ ಪ್ರೀತಿ ಮತ್ತೆ ಚಿಗುರೋಡೆಯುವ ಕಥೆಯನ್ನು ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಹೇಗಿದೆ?

ಒಂದು ಸರಳ ಪ್ರೇಮಕಥೆ, ಇಬ್ಬರ ಮುದ್ದಾದ ಆಪ್ತವಾದ ಭೇಟಿಯಿಂದ ಆರಂಭವಾಗಿ ಈ ಪ್ರೇಮಿಗಳ ಆರಂಭಿಕ ಹಿಂಜರಿಕೆ, ಒಬ್ಬರನೊಬ್ಬರು ಗೌರವಿಸುವ ರೀತಿ, ಹಿಂಜರಿಕೆ, ಬ್ರೇಕಪ್‌ ಆಗುವ ನೋವು, ಪ್ರೀತಿಯ ಗಾಢತೆ, ಸಂತೋಷ, ನೋವು, ದುಃಖ... ಹೀಗೆ ಎಲ್ಲವನ್ನೂ ತನ್ನ ಚೊಚ್ಚಲ ಚಲನಚಿತ್ರದಲ್ಲೇ ಚಂದ್ರಜಿತ್‌ ಬೆಳ್ಳಿಯಪ್ಪ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ನಿರ್ದೇಶಕ ಚಂದ್ರಜಿತ್‌ ಸ್ವತಃ ಕವಿ. ಇದೇ ಕಾರಣಕ್ಕೆ ಈ ಸಿನಿಮಾದಲ್ಲಿ ನಿರೂಪಣೆಯಲ್ಲಿ ಕಾವ್ಯವು ಪ್ರಮುಖ ಅಂಶವಾಗಿದೆ. ಇವರು ತನ್ನ ಸಿನಿಮಾವನ್ನು ಸುಂದರ ಕವಿತೆಯಂತೆ ಪ್ರಸ್ತುತಪಡಿಸಿದ್ದಾರೆ. ಇದೇ ಕಾರಣಕ್ಕೆ ಕಿವಿಗೆ ಸಂಗೀತದ ಇಂಪಿನಂತೆ ಭಾಸವಾಗಿದೆ. ಗಗನ್‌ ಬಡೇರಿಯಾ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಮುದನೀಡುತ್ತದೆ. ಸಿನಿಮಾದ ಸಂಗೀತವೂ ಸಿದ್‌, ಅನಾಹಿತಾ ಮತ್ತು ರಾಧಾ ಪಾತ್ರದಂತೆಯೇ ಇದೆ. ಹಾಗಂತ, ಸಂಗೀತ ತುಂಬಾ ರೋಮಾಂಚನ ನೀಡುತ್ತದೆ ಎಂದರ್ಥವಲ್ಲ. ಆಹ್ಲಾದಕರ ಮತ್ತು ಹಿತವಾದ ಮತ್ತು ಸುಂದರ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಹೇಮಂತ್‌ ಎಂ ರಾವ್‌ಗೆ ಚರಣರಾಜ್‌ ಹೇಗಿದ್ದಾನೋ ಅದೇ ರೀತಿ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಗಗನ್‌ ಅವರನ್ನು ಪರಿಗಣಿಸಿದಂತೆ ಇದೆ.

ವೈಯಕ್ತಿಕವಾಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ "ಮನು ಮತ್ತು ಪ್ರಿಯ ಇಬ್ಬರ ನಡುವಿನ ಪ್ರೀತಿಯ ಗಾಢತೆಯನ್ನು ಪ್ರಸ್ತುತಪಡಿಸಿದ ರೀತಿ" ನನಗೆ ಇಷ್ಟವಾದ ಅಂಶ. ಆದರೆ, ಇಬ್ಬನಿ ತಬ್ಬಿದ ಇಳೆಯಲ್ಲಿ ಚಂದ್ರಜಿತ್‌ಗೆ ಇಂತಹ ಪ್ರೀತಿಯ ಗಾಢತೆಯನ್ನು ನೀಡುವಲ್ಲಿ ಸಾಕಷ್ಟು ಸವಾಲು, ಕಷ್ಟಕರ ಇತ್ತು. ಯಾಕೆಂದರೆ ಸಿನಿಮಾದ ಕಥೆ ಹಾಗಿತ್ತು. ಈ ಜೋಡಿ ಈಗಷ್ಟೇ ಭೇಟಿಯಾಗಿದ್ದಾರೆ, ಮೊದಲ ನೋಟದಲ್ಲೇ "ಇದು ನಿಜವಾದ ಪ್ರೀತಿ" ಎಂಬ ಖಚಿತತೆ ದೊರಕಿಲ್ಲ. ಆರಂಭಿಕ ಆಕರ್ಷಣೆಯಂತೆ ಪ್ರೀತಿ ಕಾಣಿಸಿದೆ. ನಂತರ ನಿರ್ದೇಶಕರಿಗೆ ರೋಮ್ಯಾಂಟಿಕ್‌ ಜವಾಬ್ದಾರಿ ಬಂದಿದೆ. ಬಳಿಕ ಒಂದು ಸುಂದರವಾದ ಪ್ರಣಯಕಾವ್ಯದ ಕಥೆ ಹೇಳುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಸಂವೇದನಶೀಲ, ಆಧುನಿಕ ಕಾಲದ ಸಂಬಂಧದ ಚಿತ್ರಣವನ್ನು ಸಿನಿಮಾದಲ್ಲಿ ನೋಡುವುದು ಉಲ್ಲಾಸಕರ ಅನುಭವ ನೀಡುತ್ತದೆ.

ಚಂದ್ರಜಿತ್‌ ಅವರ ಬರವಣಿಗೆಯೇ ಈ ಸಿನಿಮಾದ ಹೀರೋ ಎನ್ನಬಹುದು. ವಿಹಾನ್‌, ಅಂಕಿತಾ ಮತ್ತು ಮಯೂರಿ ಎಂಬ ಮೂವರು ಕಲಾವಿದರ ಕಣ್ಣುಗಳಲ್ಲಿಯೇ ಸಾಕಷ್ಟು ಮಾತನಾಡಿಸಿದ್ದಾರೆ. ಹೇಳದೆ ಉಳಿದಿರುವ ಎಷ್ಟೋ ಸಂಗತಿಗಳನ್ನು ಕೇವಲ ಒಂದೇ ನೋಟದಲ್ಲಿ ತಿಳಿಸಲಾಗಿದೆ.

ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಮನು (ರಕ್ಷಿತ್‌ ಶೆಟ್ಟಿ) ಮತ್ತು ಪ್ರಿಯಾ (ರುಕ್ಮಿಣಿ ವಸಂತ್‌) 2023ರ ಜೋಡಿಯಾಗಿದ್ದರೆ ಸಿದ್‌ ಮತ್ತು ಅನಾಹಿತ ಪಾತ್ರದಲ್ಲಿ ವಿಹಾನ್‌ ಮತ್ತು ಅಂಕಿತಾ ಈ ವರ್ಷ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆಯುವ ಜೋಡಿಯಾಗಬಹುದು.

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ: ಅಂತಿಮ ತೀರ್ಪು

ಪರಿಚಿತವೆನಿಸುವ ಸರಳ ಕಥೆಯನ್ನು ಆಯ್ಕೆಮಾಡಿಕೊಂಡು ಅದನ್ನು ಆಕರ್ಷಕವಾಗಿ, ಹೃದಯ ಬೆಚ್ಚಗಾಗಿಸುವಂತೆ ಪ್ರಸ್ತುತಪಡಿಸಿರುವುದಕ್ಕೆ ಚಂದ್ರಜಿತ್‌ ಬೆಳ್ಳಿಯಪ್ಪ ಅವರು ಚಪ್ಪಾಳೆಗೆ ಅರ್ಹತೆ ಪಡೆದಿದ್ದಾರೆ. ಅತ್ಯುತ್ತಮ ರೋಮ್ಯಾಂಟಿಕ್‌ ಕ್ಷಣಗಳನ್ನು, ಮಧುರ ಪ್ರೇಮಕಾವ್ಯ ಸಿನಿಮಾಗಳನ್ನು, ಸುಂದರವಾದ ಸಂಗೀತವನ್ನು, ಸಹಜ ಲಯದಲ್ಲಿ ಸಾಗುವ ಲವ್‌ ಸ್ಟೋರಿಯನ್ನು, ಪ್ರೇಮಿಗಳ ಹೃದಯದ ಮಾತುಗಳನ್ನು ಕೇಳಲು ಇಷ್ಟಪಡುವವರಿಗೆ ಖಂಡಿತವಾಗಿಯೂ ಇಬ್ಬನಿ ತಬ್ಬಿದ ಇಳೆಯಲಿ ಇಷ್ಟವಾಗಬಹುದು.

ಮೂಲ ವಿಮರ್ಶೆ: ಪ್ರತಿಭಾ ಜಾಯ್‌, ಒಟಿಟಿ ಪ್ಲೇ
ಕನ್ನಡಕ್ಕೆ: ಪ್ರವೀಣ್‌ ಚಂದ್ರ ಪುತ್ತೂರು, ಎಚ್‌ಟಿ ಕನ್ನಡ
ರೇಟಿಂಗ್‌: 3.5/5