ಕನ್ನಡ ಸುದ್ದಿ  /  Entertainment  /  Sandalwood News Iffi 2023 I Will Not Go Anywhere Except Kannada Film Industry Says Kantara Hero Rishab Shetty Mnk

Rishab Shetty: ‘ಬೇರೆ ಭಾಷೆಗೆ ಹೋಗಲ್ಲ, ಕನ್ನಡದ ಚಿತ್ರವನ್ನೇ ಡಬ್‌ ಮಾಡಿ ಅಲ್ಲಿಗೆ ಕೊಂಡೊಯ್ಯುವೆ’; ರಿಷಬ್‌ ಶೆಟ್ಟಿ

ಒಂದು ಸಿನಿಮಾ ಹಿಟ್‌ ಆದ ತಕ್ಷಣ ನಾನು ಪರಭಾಷೆಗಳಿಗೆ ಹೋಗಲಾರೆ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಮತ್ತು ಪ್ರಶಾಂತ್‌ ನೀಲ್‌ಗೆ ಟಾಂಗ್‌ ನೀಡಿದ್ದಾರೆ. ಹೀಗಿದೆ ಅವರ ಮಾತಿನ ವಿವರ.

Rishab Shetty: ʼಬೇರೆ ಭಾಷೆಗೆ ಹೋಗಲ್ಲ, ಕನ್ನಡದ ಚಿತ್ರವನ್ನೇ ಡಬ್‌ ಮಾಡಿ ಅಲ್ಲಿಗೆ ಕೊಂಡೊಯ್ಯುವೆʼ; ರಿಷಬ್‌ ಶೆಟ್ಟಿ
Rishab Shetty: ʼಬೇರೆ ಭಾಷೆಗೆ ಹೋಗಲ್ಲ, ಕನ್ನಡದ ಚಿತ್ರವನ್ನೇ ಡಬ್‌ ಮಾಡಿ ಅಲ್ಲಿಗೆ ಕೊಂಡೊಯ್ಯುವೆʼ; ರಿಷಬ್‌ ಶೆಟ್ಟಿ

Rishab Shetty: ಕಾಂತಾರ ಸಿನಿಮಾ ಮೂಲಕ ಕನ್ನಡ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡವರು ನಟ, ನಿರ್ದೇಶಕ ರಿಷಬ್‌ ಶೆಟ್ಟಿ. ಕಾಂತಾರ ಚಿತ್ರದಿಂದ ಸ್ಯಾಂಡಲ್‌ವುಡ್‌ನ ಚಹರೆಯನ್ನೇ ಬದಲಿಸಿದರು ರಿಷಬ್.‌ ಅದಾದ ಮೇಲೆ ಪರಭಾಷಿಕರು ಕನ್ನಡದ ಸಿನಿಮಾ ನೋಡುವ ದೃಷ್ಟಿಯೇ ಬೇರೆಯಾಯಿತು. ಇತ್ತ ರಿಷಬ್‌ ಶೆಟ್ಟಿಗೂ ಪರಭಾಷೆಗಳಿಂದ ಬುಲಾವ್‌ ಬರಲು ಶುರುವಾದವು. ಆದರೆ, ನಾನು ಎಲ್ಲೂ ಹೋಗಲ್ಲ, ಕನ್ನಡದಲ್ಲೇ ನಾನು ಮುಂದುವರಿಯುವೆ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ ರಿಷಬ್!

ಇದೀಗ ಇದೇ ಮಾತನ್ನು ಮತ್ತೊಮ್ಮೆ ಹೇಳಿದ್ದಾರೆ ರಿಷಬ್.‌ ನನಗೀಗ ಕಾಂತಾರ ಸಿನಿಮಾ ಮೇಲಷ್ಟೇ ಗಮನ ಇದೆ, ಬೇರೆ ಭಾಷೆಗಳ ಸಿನಿಮಾಗಳಿಂದಲೂ ಆಫರ್‌ ಬಂದಿವೆ. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಎಂದು ಹೇಳುವ ಮೂಲಕ ಮತ್ತೆ ಕನ್ನಡಿಗರ ಮನಗೆದ್ದಿದ್ದಾರೆ ರಿಷಬ್.‌ 54ನೇ ಗೋವಾ ಸಿನಿಮೋತ್ಸವದಲ್ಲಿ ಭಾಗವಹಿಸಿದ ರಿಷಬ್‌ಗೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ವಿಚಾರದ ಪ್ರಶ್ನೆ ಎದುರಾಗಿದೆ.

ಈ ವೇಳೆ ಈ ಮೇಲಿನ ಉತ್ತರ ನೀಡಿದ್ದಾರೆ. ಒಂದು ಸಿನಿಮಾ ಹಿಟ್‌ ಆದ ತಕ್ಷಣ ನಾನು ಪರಭಾಷೆಗಳಿಗೆ ಹೋಗಲಾರೆ ಎಂದು ರಿಷಬ್‌ ಶೆಟ್ಟಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಮತ್ತು ಪ್ರಶಾಂತ್‌ ನೀಲ್‌ಗೆ ಟಾಂಗ್‌ ನೀಡಿದ್ದಾರೆ. ಹೀಗಿದೆ, ರಿಷಬ್‌ ಮಾತಿನ ಪೂರ್ತಿ ಅಕ್ಷರ ರೂಪ.

ಬೇರೆ ಭಾಷೆಗೆ ಹೋಗಲ್ಲ, ಕನ್ನಡವನ್ನೆ ಅಲ್ಲಿಗೆ ಕೊಂಡೊಯ್ಯುವೆ

"ಸದ್ಯ ಕಾಂತಾರದ ಮೇಲೆ ನನ್ನ ಗಮನ ಇದೆ. ಬೇರೆ ಬೇರೆ ಭಾಷೆಗಳ ಸಾಕಷ್ಟು ಸಿನಿಮಾ ಅವಕಾಶಗಳು ಬಂದಿವೆ. ಆ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಬರೀ ಹಿಂದಿ ಅಷ್ಟೇ ಅಲ್ಲ ಸಾಕಷ್ಟು ಭಾಷೆಗಳಿಂದ ಸಿನಿಮಾ ಆಫರ್‌ಗಳು ಬಂದಿವೆ. ಹಾಗೇ ಸಿನಿಮಾ ಕಥೆ ಹೇಳಿದವರ ಅಭಿಮಾನಿ ಕೂಡ ಹೌದು. ಮುಂದೆಯೂ ಅವರ ಅಭಿಮನಿಯೇ. ನಿಜಕ್ಕೂ ನನಗಿದು ಒಳ್ಳೆಯ ಅವಕಾಶ. ನಾನು ಈ ಅವಕಾಶವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ. ಅದೊಂದು ಭಾವನಾತ್ಮಕ ನಂಟು. ಕಾಂತಾರ ಸಿನಿಮಾ ಈ ಮಟ್ಟದಲ್ಲಿ ಹಿಟ್‌ ಆಗಿದ್ದಕ್ಕೆ ನನ್ನ ಕನ್ನಡಿಗರ ಕೊಡುಗೆ ಅದರಲ್ಲಿ ಅಪಾರ ಇದೆ. ಅವರಿಂದಲೇ ಅದು ಗಡಿ ದಾಟಿ ಸದ್ದು ಮಾಡಿದ್ದು. ಅದಾದ ಬಳಿಕ ಅವರೂ ಸಿನಿಮಾ ಮೆಚ್ಚಿಕೊಂಡರು. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಸದಾ ಚಿರಋಣಿ. ಒಂದು ಸಿನಿಮಾ ಹಿಟ್‌ ಆಗ್ತಿದ್ದಂತೆ, ಇಂಡಸ್ಟ್ರಿ ಬಿಟ್ಟು ಹೊರಟ ನೋಡು ಎಂಬ ಮಾತು ಬರಬಾರದು.

ಇದೀಗ ಇನ್ನೂ ಸುಲಭವಾಗಿದೆ. ಸಿನಿಮಾಗಳಿಗೆ ಭಾಷೆಯ ಮಿತಿಯಿಲ್ಲ. ಎಲ್ಲೆಡೆ ಸಲ್ಲುವ ಕಂಟೆಂಟ್‌ ಕೊಟ್ಟರೆ, ಎಲ್ಲರೂ ಸಿನಿಮಾ ನೋಡುತ್ತಾರೆ. ನಾನು ಕನ್ನಡದ ಸಿನಿಮಾನೇ ಮಾಡ್ತಿನಿ. ಜಾಗತಿಕ ಮಟ್ಟದಲ್ಲಿ ಅದರ ಕಂಟೆಂಟ್‌ ಸಿದ್ಧಪಡಿಸಿ, ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡಿ ಬಿಡುಗಡೆ ಮಾಡುತ್ತೇವೆ. ಈಗಿನ ತಂತ್ರಜ್ಞಾನವೂ ಅಷ್ಟೇ ವೇಗದಲ್ಲಿದೆ. ಅಲ್ಲಿ ಸರಳವಾಗಿ ಲಿಪ್‌ ಸಿಂಕ್‌ ಮಾಡಬಹುದು, ಭಾವನೆಗಳನ್ನು ಡಬ್ಬಿಂಗ್‌ ಮೂಲಕ ವ್ಯಕ್ತಪಡಿಸಬಹುದು.

ಕಾಂತಾರ ಚಾಪ್ಟರ್‌ 1 ಟೀಸರ್‌ಗೆ ಮೆಚ್ಚುಗೆ

ಇನ್ನು ಉಡುಪಿಯ ಕುಂಭಾಶಿ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಕಾಂತಾರ ಚಾಪ್ಟರ್‌ 1ರ ಅದ್ಧೂರಿ ಮುಹೂರ್ತ ನೆರವೇರಿದೆ. ಇದಕ್ಕೂ ಮೊದಲು ಕಾಂತಾರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಬಹುದಿನಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದರು. ಟೀಸರ್‌ಗೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ