ದರ್ಶನ್ ಸಹೋದರ ದಿನಕರ್ ತೂಗುದೀಪ ‘ಕುಚೇಲ’ನಲ್ಲ! ಬಾಡಿಗೆ ಮನೆಯಲ್ಲಿರಲು ಇದೆ ಹೀಗೊಂದು ಬಲವಾದ ಕಾರಣ
ಸಹೋದರ ದಿನಕರ್ ತೂಗುದೀಪಗೆ ಒಂದು ಸ್ವಂತ ಮನೆ ಕಟ್ಟಿಸಿಕೊಡದ ನಟ ದರ್ಶನ್, ಗೆಳತಿ ಪವಿತ್ರಾ ಗೌಡಗೆ ಮೂರಂತಸ್ತಿನ ಬಂಗಲೆ ಕಟ್ಟಿಸಿಕೊಟ್ಟಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ ಜನ. ಈ ಬಗ್ಗೆ ನಿರ್ದೇಶಕ ಎಚ್ ವಾಸು ಸ್ಪಷ್ಟನೆ ನೀಡಿದ್ದಾರೆ.

Dinakar Thoogudeepa: ನಟ ದರ್ಶನ್ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಜತೆಗೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ಆರೋಪದಡಿ ಇನ್ನುಳಿದ 16 ಮಂದಿಯೂ ಕಂಬಿಹಿಂದಿದ್ದಾರೆ. ಹೀಗೆ ದರ್ಶನ್ ಮತ್ತೆ ಜೈಲು ಸೇರುತ್ತಿದ್ದಂತೆ, ಅವರ ಈ ಹಿಂದಿನ ಕಾಂಟ್ರವರ್ಸಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅನ್ಯಾಯಕ್ಕೆ ಒಳಗಾದವರು ಧ್ವನಿ ಎತ್ತುತ್ತಿದ್ದಾರೆ. ಹೊರಗಿನ ವಿಷಯವಷ್ಟೇ ಅಲ್ಲ ಅವರದೇ ಕುಟುಂಬದ ಕೆಲ ವಿಚಾರಗಳೂ ಮತ್ತೆ ಪ್ರಸ್ತುತತೆಗೆ ಬಂದಿವೆ. ಆ ಪೈಕಿ ಹೆಚ್ಚು ಚರ್ಚೆಯಾಗಿದ್ದು ದಿನಕರ್ ತೂಗುದೀಪ ಬಾಡಿಗೆ ಮನೆ ವಿಚಾರ!
ನಟ ದರ್ಶನ್ ಕನ್ನಡದ ಸ್ಟಾರ್ ನಟ. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ನಟನ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. ಈ ನಡುವೆ ದರ್ಶನ್ ಗೆಳತಿ ಪವಿತ್ರಾ ಗೌಡ ಮೂರಂತಸ್ತಿನ ಸ್ವಂತ ಐಶಾರಾಮಿ ಬಂಗಲೆಯಲ್ಲಿದ್ದಾರೆ. ಈ ಎರಡು ವಿಚಾರ ನಟ ದರ್ಶನ್ ಜೈಲಿಗೆ ಹೋದ ಬಳಿಕ ಚರ್ಚೆಯ ಮುನ್ನೆಲೆಗೆ ಬಂದಿವೆ. ಸಹೋದರನಿಗೆ ಒಂದು ಮನೆ ಕಟ್ಟಿಸಿಕೊಡದ ದರ್ಶನ್, ಪವಿತ್ರಾ ಗೌಡಗೆ ಮೂರಂತಸ್ತಿನ ಬಂಗಲೆ ಕಟ್ಟಿಸಿಕೊಟ್ಟಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ಕುಬೇರ ದರ್ಶನ್, ಕುಚೇಲ ದಿನಕರ್ ಹೀಗೊಂದು ಚರ್ಚೆ..
ನಟ ದರ್ಶನ್ ಅವರ ಸಹೋದರ ದಿನಕರ್ ಇಂದಿಗೂ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವುದಕ್ಕೆ ಎಷ್ಟೋ ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಕುಬೇರನಂಥ ಅಣ್ಣನಿದ್ದರೂ, ದಿನಕರ್‌ಗ್ಯಾಕೆ ಕುಚೇಲನ ಸ್ಥಿತಿ ಎನ್ನುತ್ತಿದ್ದಾರೆ. ದಿನಕರ್‌ಗೆ ಅಷ್ಟೊಂದು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರಾ? ಎಂದೂ ಊಹಿಸುತ್ತಿದ್ದಾರೆ. ಈ ನಡುವೆ ಇದೇ ವಿಚಾರದ ಬಗ್ಗೆ ದರ್ಶನ್ ಅವರ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ ಎಚ್ ವಾಸು ವಾಸ್ತವ ತೆರೆದಿಡುವ ಕೆಲಸ ಮಾಡಿದ್ದಾರೆ. ಎಲ್ಲರೂ ಭಾವಿಸಿರುವಂತೆ ದಿನಕರ್ ಕುಚೇಲ ಅಲ್ಲ, ಆರ್ಥಿಕವಾಗಿ ಅವರು ಸದೃಢವಾಗಿದ್ದಾರೆ ಎಂದಿದ್ದಾರೆ.
ದಿನಕರ್ ಆರ್ಥಿಕವಾಗಿ ಚೆನ್ನಾಗಿದ್ದಾರೆ..
“ನಟ ದರ್ಶನ್ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. ಅದು ನಿಜ ಸಂಗತಿ. ಆದರೆ ಅವರಿರುವ ಮನೆ ಬಡವರ ಮನೆಯಂತೆನೂ ಇಲ್ಲ. 2 BHK ಮನೆಯಲ್ಲಿಯೇ ಅವರು ವಾಸವಿದ್ದಾರೆ. ಒಬ್ಬ ಸ್ಟಾರ್ ಮನೆ ಹೇಗಿರಬೇಕೋ ಹಾಗೆಯೇ ಇದೆ. ಅದೇ ರೀತಿ ದಿನಕರ್‌ಗೆ ಮನೆ ಬಗ್ಗೆ ಅವರದೇ ಆದ ಒಂದಷ್ಟು ಆಸೆ, ಕನಸುಗಳಿವೆ. ಸ್ವಂತ ಮನೆಯನ್ನು ಸ್ವಂತ ದುಡ್ಡಿನಲ್ಲಿಯೇ ಕಟ್ಟಿಸಬೇಕು ಎಂಬ ಕನಸಿದೆ. ತೆರೆಮರೆಯಲ್ಲಿಯೇ ಅದರ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ಇನ್ನೂ ಬಾಡಿಗೆ ಮನೆಯಲ್ಲಿದ್ದಾರೆ. ಕೆಎಲ್‌ಇ ಕಾಲೇಜು ಬಳಿ ಮನೆ ಕಟ್ಟಿಸುವ ಪ್ಲಾನ್ ಅವರಿಗಿದೆ. ದರ್ಶನ್ ಸಹ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ಒಂದು ವೇಳೆ ದರ್ಶನ್ ಮುಂದಾಗಿದ್ದೇ ಆದರೆ, ಇಷ್ಟೊತ್ತಿಗೆ ದೊಡ್ಡ ಬಂಗಲೆಯಲ್ಲಿಯೇ ದಿನಕರ್ ಇರುತ್ತಿದ್ದರು” ಎಂದಿದ್ದಾರೆ ನಿರ್ದೇಶಕ ಎಚ್ ವಾಸು.
ಈ ಹಿಂದೆ ಸಂದರ್ಶನದಲ್ಲಿ ದಿನಕರ್ ಹೇಳಿದ್ದೇನು?
"ಜೊತೆ ಜೊತೆಯಲಿ ಸಿನಿಮಾ ರಿಲೀಸ್ ಆಗಿ, ದುಡ್ಡು ಬರೋವರೆಗೂ ನನ್ನ ಬ್ಯಾಂಕ್ ಅಕೌಂಟ್ ಇರಲಿಲ್ಲ. ವಿಜಯ್ ಕಿರಗಂದೂರು ಅವರೇ ವಿಜಯ್ ಬ್ಯಾಂಕ್‌ನಲ್ಲಿ ಅಕೌಂಟ್ ಮಾಡಿಸಿಕೊಟ್ರು. ಈಗಲೂ ಅದೇ ಇದೆ. ಅದೇ ಅಕೌಂಟ್‌ಗೆ ಒಂದು ಲಕ್ಷ ಹಣ ಹಾಕಿ ಕೊಟ್ಟು. ಜತೆಗೆ ಬೆಂಗಳೂರಿನಲ್ಲಿ ಒಂದು ಸೈಟ್ ಕೊಡಿಸಿದ್ರು. ಈಗಲೂ ಆ ಸೈಟ್ ಇದೆ. ಮನೆ ಕಟ್ಟಿಲ್ಲ. ಬಾಡಿಗೆ ಮನೆಯಲ್ಲಿಯೇ ಇದ್ದೇವೆ. ನಮ್ಮ ಅಮ್ಮ ಹೇಳೋವ್ರು, ನೀನು ನಿರ್ದೇಶಕ, ಸಿನಿಮಾದಲ್ಲಿ ನೀನು ಎಷ್ಟು ನೆಮ್ಮದಿಯಿಂದ ಇರುತ್ತೀಯ ಅಷ್ಟು ನಿನ್ನ ತಲೆ ಓಡುತ್ತೆ. ಮೊದಲಿಗೆ ಆದಾಯ ಬರೋ ಹಾಗೆ ಮಾಡ್ಕೋ ಅಂದಿದ್ರು. ಅದರಂತೆ ಇದೀಗ ಆ ಜಾಗದಿಂದ ಒಂದಷ್ಟು ಬಾಡಿಗೆ ಬರುತ್ತೆ. ಮನೆಗಾಗಿ ಜಾಗವೂ ಇದೆ. ಮಕ್ಕಳು ಓದುತ್ತಿದ್ದಾರೆ. ಹಾಗಾಗಿ ಇನ್ನೂ ಮನೆ ಮಾಡಿಕೊಂಡಿಲ್ಲ. ಸದ್ಯಕ್ಕೆ ಬಾಡಿಗೆ ಮನೆಯೇ ಎಲ್ಲ" ಎಂದಿದ್ದರು ದಿನಕರ್.

ವಿಭಾಗ