Ranganayaka Review: ‘ಇದು ರಿವರ್ಸ್ ಇಂಜಿನಿಯರಿಂಗ್’ ರಂಗನಾಯಕ ಚಿತ್ರದ ವಿಲನ್ನೇ ನಿರ್ದೇಶಕ ಗುರುಪ್ರಸಾದ್!
ರಂಗನಾಯಕ ಸಿನಿಮಾ ತೆರೆಕಂಡಿದೆ. ಆರಂಭದಿಂದಲೂ ಬಹು ನಿರೀಕ್ಷೆ ಮೂಡಿಸಿದ್ದ ಈ ಚಿತ್ರಕ್ಕೆ ಕಾದಿದ್ದ ಗುರುಪ್ರಸಾದ್ ಮತ್ತು ಜಗ್ಗೇಶ್ ಅಭಿಮಾನಿ ಬಳಗವಿದೆ. ಈಗ ಆ ಕಾಯುವಿಕೆ ತೃಪ್ತಿ ತಂದಿದೆಯೇ? ಸಿನಿಮಾ ಹೇಗಿದೆ? ಕಾಂಬಿನೇಷನ್ ವರ್ಕೌಟ್ ಆಯ್ತಾ? ಈ ರಂಗನಾಯಕ ಚಿತ್ರವನ್ನು ಶ್ರೀನಿವಾಸ ಮಠ ವಿಮರ್ಶಿಸಿದ್ದಾರೆ.
Ranganayaka Review: ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರು ಪ್ರಸಾದ್ ಜೋಡಿಯ ಮೂರನೇ ಸಿನಿಮಾ ರಂಗನಾಯಕ. ಈ ಹಿಂದೆ ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾವನ್ನು ಪ್ರೇಕ್ಷಕನ ತಟ್ಟೆಗೆ ಹಾಕಿ, ಮೆಚ್ಚುಗೆ ಪಡೆದಿತ್ತು ಈ ಜೋಡಿ. ಈಗ ಸುಮಾರು ವರ್ಷಗಳ ಬಳಿಕ ರಂಗನಾಯಕ ಸಿನಿಮಾ ಮೂಲಕ ಮತ್ತೆ ಆಗಮಿಸಿದೆ. ರಾಜ್ಯಾದ್ಯಂತ ಇಂದು (ಮಾ. 8) ಬಿಡುಗಡೆ ಆಗಿರುವ ಈ ಸಿನಿಮಾಕ್ಕೆ ಬಗೆಬಗೆ ಪ್ರತಿಕ್ರಿಯೆ ಸಂದಾಯವಾಗುತ್ತಿದೆ.
ಹೀಗಿದೆ ವಿಮರ್ಶೆ..
"ನಾನು ಈ ಸಿನಿಮಾದಲ್ಲಿ ಕಲಾವಿದ ಮಾತ್ರ. ಈ ಕಥೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಗುರುಪ್ರಸಾದ್ ಅವರದೇ. ಅವರು ಹೇಳಿದಂತೆ ನಾನು ನಟಿಸಿದ್ದೇನೆ" ಎಂಬ ಮಾತನ್ನು ನಟ ಜಗ್ಗೇಶ್ ಅವರು ಒತ್ತಿ ಒತ್ತಿ ಹೇಳಿದಾಗಲೇ ಅರ್ಥವಾಗಬೇಕಿತ್ತು; ರಂಗನಾಯಕ ಬೇರೆ ಥರದ ಸಿನಿಮಾ ಎಂದು. ಈ ಸಿನಿಮಾದಲ್ಲಿ ಜಗ್ಗೇಶ್ ಸ್ಥಿತಿ ಅಯ್ಯೋ ಪಾಪ ಎನಿಸುತ್ತದೆ. ಏಕೆಂದರೆ ನೋಡುಗರಿಗೆ ಬೇಜಾರಾಗಿ, ಇದೇನು ಅಸಹ್ಯ ಎಂದುಕೊಳ್ಳುವಷ್ಟು ಗುರುಪ್ರಸಾದ್ ತೆರೆಮೇಲೆ ಇದ್ದಾರೆ.
ನಿರ್ದೇಶಕ ಗುರುಪ್ರಸಾದ್ ಹಾಗೂ ಪೂರ್ವಜನ್ಮದ ನಿರ್ದೇಶಕ ಪದ್ಮನಾಭ ಶರ್ಮ ಇಬ್ಬರದೂ ಕೆಟ್ಟ ಅಭಿರುಚಿ. ತನ್ನನ್ನು ದತ್ತು ಮಗನಾಗಿ ತೆಗೆದುಕೊಂಡ ತಾಯಿಗೆ, ಹೊಕ್ಕಳು ಕಾಣ್ತಿದೆ, ಸೆರಗು ಮುಚ್ಚಿಕೋ ಅನ್ನುವಂಥ ಡೈಲಾಗ್ ಅನ್ನು ಪದ್ಮನಾಭ ಶರ್ಮ ತಮ್ಮ ಸಿನಿಮಾದಲ್ಲಿ ಜಗ್ಗೇಶ್ ಅವರಿಂದ ಹೇಳಿಸಿದರೆ, ನಾನು ಸುಂದರ ಹುಡುಗಿಯ ಬೆರಳಾಗಬೇಕು ಎಂದು ಹೇಳುವ ಮೂಲಕ ನಿರ್ದೇಶಕ ಗುರುಪ್ರಸಾದ್ ತಾನೆಂಥ ಅಸಹ್ಯ ಎಂಬುದನ್ನು ತೋರಿಸಿದ್ದಾರೆ.
ಈ ಸಿನಿಮಾ ಗುರುಪ್ರಸಾದ್ ಅವರಿಂದ ಬಂದಿರುವ ಅಸಹ್ಯದ ಪರಮಾವಧಿ. ಆತ್ಮರತಿಯ ಗಟಾರದಲ್ಲಿ ಬಿದ್ದಿರುವ ಅವರು ಪ್ರೇಕ್ಷಕರನ್ನೂ ಒಳಗೊಂಡಂತೆ ಅದರೊಳಗೆ ಎಲ್ಲರನ್ನೂ ಇಳಿಸಿಕೊಂಡು ಬಿಡುತ್ತಾರೆ. ಕನ್ನಡದಲ್ಲಿ ಬಂದಂಥ ಮೊದಲ ಸಿನಿಮಾ ರಂಗನಾಯಕ, ಅದನ್ನು ಬಾರದಂತೆ ತಡೆದ ಪರಭಾಷಿಕರು, ಇಂದಿಗೂ ಅದು ಅದೇ ಪರಿಸ್ಥಿತಿಯಲ್ಲಿದೆ ಎಂದೆಲ್ಲ ಹೇಳುತ್ತಾ ತಮ್ಮ ಬಗ್ಗೆ ತುತ್ತೂರಿ, ತಮಟೆ, ಜಾಗಟೆ, ಶಂಖ ಎಲ್ಲವನ್ನೂ ಊದಿ, ಬಡಿದು, ಬಾರಿಸಿದ್ದಾರೆ ಗುರು.
ಎಡಿಟಿಂಗ್ ವೇಳೆ ಸಿದ್ಧವಾಗಿರುವ ಸಿನಿಮಾ ಇದು. ಏನು ಮಾಡುತ್ತಾ ಇದ್ದೀನಿ ಎಂಬ ಅರಿವೇ ಇಲ್ಲದೆ, ಸಿನಿಮಾ ಅಂದರೆ ಅದರ ಅವಧಿ ಇಷ್ಟಿರಬೇಕು ಎಂಬ ಕಾರಣಕ್ಕೆ ಹಿಗ್ಗಿಸಿ, ದೊಡ್ಡದು ಮಾಡಿ, ಪೋಲಿ ಮಾತುಗಳು, ಅಸಹ್ಯದ ದೃಶ್ಯಗಳನ್ನು ಪೋಣಿಸಿದ್ದಾರೆ. ಮೇಕಿಂಗ್ ದೃಷ್ಟಿಯಿಂದಲೂ ಸಿನಿಮಾಗೆ ಏನೇನೂ ಖರ್ಚು ಮಾಡಿಲ್ಲ. ನಿರ್ಮಾಪಕರಾದ ವಿಖ್ಯಾತ್ ಅವರಿಗಿಂತ ಸದ್ಯಕ್ಕೆ ಹತಾಶ ಪ್ರೇಕ್ಷಕರು ಯಾರೂ ಇರುವುದಕ್ಕೆ ಸಾಧ್ಯವಿಲ್ಲ. ಅವರಿಗೆ ತಮ್ಮ ಹಣ ಹೇಗೆ ಬಂದೀತೋ?
ಬರಹ: ಶ್ರೀನಿವಾಸ್ ಮಠ