Shiva Rajkumar: ಮತ್ತೆ ನರಸಿಂಹನಾಗುವ ಸೂಚನೆ ನೀಡಿದ ಶಿವರಾಜ್ ಕುಮಾರ್; ಜೈಲರ್ ಅತಿಥಿ ಪಾತ್ರವೇ ಹೊಸ ಸಿನಿಮಾವಾಗುವ ಸಾಧ್ಯತೆ
Shiva Rajkumar: ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಸ್ನೇಹಿತನಾಗಿ ನರಸಿಂಹನಾಗಿ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಮಿಂಚಿದ್ದರು. ಇದೀಗ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ನರಸಿಂಹ ಪಾತ್ರದ ಹೊಸ ಸಿನಿಮಾವಾಗುವ ಸಾಧ್ಯತೆ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಬೆಂಗಳೂರು: ಕನ್ನಡ ನಟ ಶಿವರಾಜ್ ಕುಮಾರ್ ಅವರು ಜೈಲರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ "ನರಸಿಂಹ"ನಾಗಿ ನಟಿಸಿದ್ದರು. ಈ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನರಸಿಂಹನ ಪಾತ್ರಕ್ಕೆ ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಜನಿಕಾಂತ್ ಸ್ನೇಹಿತನಾಗಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್ ಕೆಲವು ನಿಮಿಷ ಕಾಣಿಸಿಕೊಂಡ ಈ ನರಸಿಂಹ ಪಾತ್ರವೇ ಪ್ರತ್ಯೇಕ ಸಿನಿಮಾವಾಗಿ ಮುಂದಿನ ದಿನಗಳಲ್ಲಿ ಮುಂದಿನ ದಿನಗಳಲ್ಲಿ ತೆರೆ ಕಂಡರೂ ಅಚ್ಚರಿಯಿಲ್ಲ. ಈ ರೀತಿ ನರಸಿಂಹ ಎಂಬ ಸಿನಿಮಾ ಮಾಡಲು ನನ್ನದೇನು ಅಭ್ಯಂತರ ಇಲ್ಲ ಎಂದು ಇಂಡಿಯಾ ಟುಡೇ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಹೇಳಿದ್ದಾರೆ.
ಜೈಲರ್‌ನ ನರಸಿಂಹ ಪ್ರತ್ಯೇಕ ಸಿನಿಮಾವಾಗುತ್ತ?
ಜೈಲರ್ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಅವರು ಮೋಹನ್‌ಲಾಕ್ ಮತ್ತು ಜಾಕಿ ಶ್ರಾಫ್ ಜತೆಗೆ ನರಸಿಂಹನಾಗಿ ಕಾಮಿಯೋ ರೋಲ್ ಮಾಡಿದ್ದರು. ಸುಧಾರಣೆ ಕಂಡ ಅಪರಾಧಿ ನರಸಿಂಹ ಪಾತ್ರದಲ್ಲಿ ಶಿವಣ್ಣ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ರಜನಿಕಾಂತ್ ಪಾತ್ರ ಟೈಗರ್ ಮುತ್ತುವೇಲ್ ಪಾಂಡಿಯನ್‌ಗೆ ಸಹಾಯ ಮಾಡುವ ಪಾತ್ರ ಅದಾಗಿತ್ತು. ಸಣ್ಣ ಪಾತ್ರದಲ್ಲಿಯೂ ಶಿವಣ್ಣನ ಗತ್ತು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಶಿವಣ್ಣನ ನರಸಿಂಹ ಪಾತ್ರದ ಸ್ಪಿನ್‌ಆಫ್ ಸಿನಿಮಾ ಬರಲಿ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದರು.
ಇಂಡಿಯಾಟುಡೇಗೆ ನೀಡಿದ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಅವರು "ನರಸಿಂಹ ಹೆಸರಿನ ಹೊಸ ಸಿನಿಮಾ ಮಾಡಲು ನನ್ನ ಅಭ್ಯಂತರ ಇಲ್ಲ. ನಿಜಕ್ಕೂ ಇದು ಹೇಗಿರಬಹುದು, ಹೇಗೆ ಆಗಬಹುದು ಎಂದು ನನಗೆ ತಿಳಿದಿಲ್ಲ. ನೆಲ್ಸನ್ ದಿಲೀಪ್ ಕುಮಾರ್ (ಜೈಲರ್ ನಿರ್ದೇಶಕ) ಮಾತ್ರ ಇದನ್ನು ರಚಿಸಬಲ್ಲರು. ಜೈಲರ್ ಸಿನಿಮಾದ ಬಳಿಕ ಅವರ ಮುಂದಿನ ಚಿತ್ರದ ಕುರಿತು ಜವಾಬ್ದಾರಿ ಹೆಚ್ಚಾಗಿದೆ. ಆದರೆ, ಒಂದು ದೃಶ್ಯವನ್ನು ಜೈಲಿನಲ್ಲಿ ಶೂಟ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಬಳಿಕ ನಿರ್ದೇಶಕರು "ಇದು ಅಗತ್ಯವಿಲ್ಲ ಸರ್" ಎಂದಿದ್ದರು. ಅದು ಏನಾಗಿದೆ ಎಂದು ನಗೆ ಗೊತ್ತಿಲ್ಲ. ಈ ರೀತಿ ನರಸಿಂಹ ಚಿತ್ರ ತೆಗೆಯಲು ನನ್ನ ಅಭ್ಯಂತರ ಇಲ್ಲ. ಇಂತಹ ಗ್ರೇ ಕ್ಯಾರೆಕ್ಟರ್ ಚಿತ್ರಗಳನ್ನು ತೆಗೆಯುವುದರಲ್ಲಿ ನೆಲ್ಸನ್ ಅತ್ಯುತ್ತಮ ಪ್ರತಿಭಾನ್ವಿತ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಜೈಲರ್ ಯಶಸ್ಸಿನ ಕುರಿತು ಶಿವಣ್ಣ ಪ್ರತಿಕ್ರಿಯೆ
"ರಜನಿಕಾಂತ್ ಸಹವರ್ತಿಯಾಗಿ ನರಸಿಂಹ ಪಾತ್ರಕ್ಕೆ ದೊರಕಿದೆ ಪ್ರತಿಕ್ರಿಯೆ ನನಗೆ ನಿಜಕ್ಕೂ ಅಚ್ಚರಿ ತಂದಿದೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವು ಏನು ಮಾಡಿದ್ದೀರಿ ಎಂದು ನನ್ನ ಪತ್ನಿ ಕೇಳಿದ್ದಾಳೆ. ಎಷ್ಟು ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ನನಗೆ ನಿಜಕ್ಕೂ ಗೊತ್ತಿಲ್ಲ. ಇದು ಹೇಗೆ ಆಯಿತೆಂದು, ಈ ಸಿನಿಮಾದಲ್ಲಿ ನನ್ನ ಪುಟ್ಟ ಪಾತ್ರಕ್ಕೆ ನಿಜಕ್ಕೂ ಅದ್ಭುತ ಪ್ರತಿಕ್ರಿಯೆ ದೊರಕಿದೆ. ಕೆಲವೊಮ್ಮೆ ಜನರು, ಪ್ರೇಕ್ಷಕರು ಏನು ಇಷ್ಟಪಡುತ್ತಾರೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ನಿರ್ದೇಶಕರು ರಚಿಸಿದ ಆ ಪಾತ್ರದಲ್ಲಿ ಮ್ಯಾಜಿಕ್ ನಡೆದಿದೆ. ಅನಿರುದ್ಧ್ ಸಂಗೀತವೂ ಮ್ಯಾಜಿಕ್ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ" ಎಂದು ಶಿವರಾಜ್ ಕುಮಾರ್ ಅವರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಜೈಲರ್ ಚಿತ್ರದಲ್ಲಿ ನರಸಿಂಹನ ಪಾತ್ರವು ಕರ್ನಾಟಕದ ಮಂಡ್ಯದಲ್ಲಿಯೂ ಶೂಟ್ ಆಗಿದೆ. ಟೈಗರ್ (ರಜನಿಕಾಂತ್) ಕಷ್ಟಬಂದಾಗ ತನ್ನ ಸ್ನೇಹಿತ ನರಸಿಂಹನ ಬಳಿಗೆ ಬರುತ್ತಾನೆ. ಒಂದಾನೊಂದು ಕಾಲದ ಅಪರಾಧಿ ತನ್ನ ಅಪರಾಧ ಚಟುವಟಿಕೆ ಬಿಟ್ಟು ಒಳ್ಳೆಯವನಾಗಿ ಮಂಡ್ಯದಲ್ಲಿ ಜೀವನ ನಡೆಸುತ್ತ ಇರುವ ಪಾತ್ರವದು. ನರಸಿಂಹ ಕಳುಹಿಸುವ ಶಾರ್ಪ್ ಶೂಟರ್‌ಗಳ ನೆರವಿನಿಂದ ಟೈಗರ್ ವಿಲನ್‌ಗಳ ಜತೆ ಹೋರಾಟ ನಡೆಸುತ್ತಾನೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಟೈಗರ್ ಕುಟುಂಬ ಕಾಪಾಡಲು ಬರುವ ಸೀನ್ ಪ್ರೇಕ್ಷಕರ ಸಿಳ್ಳೆಗಿಟ್ಟಿಸಿಕೊಂಡಿತ್ತು.
ಇದೀಗ ನರಸಿಂಹ ಪಾತ್ರದ ಹೊಸ ಸಿನಿಮಾವಾಗಲು ತನ್ನ ಅಭ್ಯಂತರವಿಲ್ಲ, ಈ ಕುರಿತು ಆಸಕ್ತಿಯನ್ನು ಶಿವರಾಜ್ ಕುಮಾರ್ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಿವಣ್ಣ ನಟನೆಯ ನರಸಿಂಹ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬಂದರೆ ಅಚ್ಚರಿಯಿಲ್ಲ.