ಈ ವಾರ ಚಿತ್ರಮಂದಿರಕ್ಕೆ ‘ದೇವರ’ ಜತೆಗೆ ಯಾರೆಲ್ಲ ಬರ್ತಿದ್ದಾರೆ? ಅದೃಷ್ಟ ಪರೀಕ್ಷೆಗಿಳಿದ ಇಬ್ಬರು ‘ಕಾಮಿಡಿ ಕಿಲಾಡಿಗಳು’
Friday Releasing Kannada Movies List: ಈ ಶುಕ್ರವಾರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಪೈಕಿ ಕಾಮಿಡಿ ಕಿಲಾಡಿ ಶೋ ಮೂಲಕವೇ ಗಮನ ಸೆಳೆದ ಇಬ್ಬರು ಹಾಸ್ಯ ನಟರ ಎರಡು ಪ್ರತ್ಯೇಕ ಸಿನಿಮಾ ರಿಲೀಸ್ ಆಗುತ್ತಿದ್ದರೆ, ಜೂನಿಯರ್ ಎನ್‌ಟಿಆರ್ ಅವರ ದೇವರ ಸಹ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿದೆ.
Friday Movies: ಶುಕ್ರವಾರ ಬಂತೆಂದರೆ ಸಿನಿಮಾ ಪ್ರಿಯರಿಗೆ ಹಬ್ಬ. ಚಿತ್ರಮಂದಿರಗಳಿಗೆ ಹೋಗಿ ಹೊಸ ಹೊಸ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವುದೇ ಖುಷಿ. ಅದೇ ರೀತಿ, ಈಗ ಶುಕ್ರವಾರದ ಆಗಮನಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಈ ನಡುವೆ ಈ ವಾರವೂ ಸಾಕಷ್ಟು ಸಿನಿಮಾಗಳು ಥಿಯೇಟರ್‌ಗೆ ಎಂಟ್ರಿಕೊಡುತ್ತಿವೆ. ಹೊಸಬರ ಸಿನಿಮಾಗಳಿಂದ ಹಿಡಿದು, ಸ್ಟಾರ್ ಹೀರೋಗಳ ಚಿತ್ರಗಳೂ ಆಗಮಿಸುತ್ತಿವೆ. ಪರಭಾಷೆಯಲ್ಲಿಯೂ ಹತ್ತು ಹಲವು ಸಿನಿಮಾಗಳು ಈ ವಾರ ಚಿತ್ರಮಂದಿರದತ್ತ ಮುಖ ಮಾಡಲಿವೆ. ಹಾಗಾದರೆ ಸೆಪ್ಟೆಂಬರ್ 27ರಂದು ಬಿಡುಗಡೆ ಆಗಲಿರುವ ಕನ್ನಡದ ಸಿನಿಮಾಗಳು ಯಾವವು? ಇಲ್ಲಿದೆ ನೋಡಿ ಪಟ್ಟಿ.
ದೇವರ ಪಾರ್ಟ್ 1
ಟಾಲಿವುಡ್‌ನ ಬಹು ನಿರೀಕ್ಷಿತ ದೇವರ ಸಿನಿಮಾ ಈ ವಾರ ಅಂದರೆ ಸೆಪ್ಟೆಂಬರ್ 27ರಂದು ತೆರೆಗೆ ಬರಲಿದೆ. ಜೂನಿಯರ್ ಎನ್‌ಟಿಆರ್, ಬಾಲಿವುಡ್ ನಟ ಸೈಫ್ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಮುಂಗಡ ಬುಕಿಂಗ್ ವಿಚಾರದಲ್ಲಿಯೂ ದಾಖಲೆ ಬರೆದಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾದ ಹೈಪ್ ಮುಗಿಲು ಮುಟ್ಟಿದೆ.
ಕಾಮಿಡಿ ಕಿಲಾಡಿಯ ಕೇದಾರ್‌ನಾಥ್ ಕುರಿಫಾರಂ
ಕಾಮಿಡಿ ಕಿಲಾಡಿಗಳು ಶೋ ಮೂಲಕ ಹಾಸ್ಯದ ಹೊನಲನ್ನು ಹರಿಸಿದ ನಟ ಮಡೆನೂರ್ ಮನು ನಾಯಕನಾಗಿ ನಟಿಸಿದ ಕೇದಾರ್‌ನಾಥ್ ಕುರಿಫಾರಂ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಜೆ.ಕೆ. ಮೂವೀಸ್ ಬ್ಯಾನರ್‌ನಲ್ಲಿ ಕೆ.ಎಂ ನಟರಾಜ್ ಈ ಸಿನಿಮಾ ನಿರ್ಮಿಸಿದ್ದಾರೆ. ಶೀನು ಸಾಗರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಗ್ರಾಮೀಣ ಸೊಗಡಿನ ಹಾಗೂ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ರಾಜೇಶ್ ಸಾಲುಂಡಿ ಕಥೆ, ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ನಿರ್ದೇಶಕ ಶೀನು ಸಾಗರ್ ಬರೆದಿದ್ದಾರೆ. ರಾಕೇಶ್ ತಿಲಕ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಸನ್ನಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಡೆನೂರ್ ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತು ಮುಂತಾದವರಿದ್ದಾರೆ.
ಚಿತ್ರಮಂದಿರಕ್ಕೆ ಸೀರುಂಡೆ ರಘು ನಟನೆಯ ರಣಾಕ್ಷ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿರುವ ರಣಾಕ್ಷ ಸಿನಿಮಾ ಇದೀಗ ಚಿತ್ರಮಂದಿರಕ್ಕೆ ಬರಲು ರೆಡಿಯಾಗಿದೆ. ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ ಸಸ್ಪೆನ್ಸ್ , ಥ್ರಿಲ್ಲರ್ ಜಾನರರ್‌ನ ಈ ಚಿತ್ರ ಇದೇ ಶುಕ್ರವಾರ (ಸೆ. 27) ಥಿಯೇಟರ್ ಬಾಗಿಲು ತಟ್ಟಲಿದೆ. 20ಕ್ಕೂ ಅಧಿಕ ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಘು, ಈ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ರಾಘವ್ ಈ ಚಿತ್ರ ನಿರ್ದೇಶಿಸಿದರೆ, ನಿರ್ಮಾಪಕ ರಾಮು ಚಿತ್ರ ನಿರ್ಮಿಸಿದ್ದಾರೆ. ನಾಯಕಿಯಾಗಿ ರಕ್ಷಾ ನಟಿಸಿದ್ದಾರೆ.
ನೈಟ್ ರೋಡ್
ಗೋಪಾಲ್ ಹಳೆಪಾಳ್ಯ ನಿರ್ದೇಶನದ ನೈಟ್ ರೋಡ್ ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ಈ ಹಿಂದೆ ನೈಸ್ ರೋಡ್ ಹೆಸರಿನ ಶೀರ್ಷಿಕೆ ಈ ಚಿತ್ರಕ್ಕಿಡಲಾಗಿತ್ತು. ಬಳಿಕ ನೈಟ್ ರೋಡ್ ಎಂದು ಟೈಟಲ್ ಬದಲಿಸಲಾಗಿದೆ. ಈ ಚಿತ್ರದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್ ಸೇರಿ ಇನ್ನೂ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಪುನರ್ ಗೀತಾ ಸಿನಿಮಾಸ್ ಬ್ಯಾನರ್‌ನಲ್ಲಿ, ನಿರ್ದೇಶಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ನೀಡಿದರೆ, ಪ್ರವೀಣ್ ಶೆಟ್ಟಿ ಛಾಯಾಗ್ರಾಹಣ ಈ ಚಿತ್ರಕ್ಕಿದೆ. ಜೀವನ್ ಪ್ರಕಾಶ್ ಸಂಕಲನ ಮಾಡಿದ್ದಾರೆ.
ಸಂಜು
ನಟ- ನಿರ್ದೇಶಕ ಯತಿರಾಜ್ ನಿರ್ದೇಶನದ ಸಂಜು ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನಾಯಕಿಯಾಗಿ ಸಾತ್ವಿಕಾ, ನಾಯಕನಾಗಿ ಮನ್ವಿತ್ ನಟಿಸಿದ್ದಾರೆ. ಸಂಜೀವ ರೆಡ್ಡಿ ಅವರ ಸಂಕಲನ ಮತ್ತು ಸೋನುಸಾಗರ, ಅರುಣ್ ಕುಮಾರ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.