ಬಾಕ್ಸ್ ಆಫೀಸ್‌ನಲ್ಲಿ ಕಾಟೇರನಿಗೆ ಗೆಲುವು, ಇನ್ನೊಂದೆಡೆ ದರ್ಶನ್ ತಾಯಿ ಮೀನಾ ತೂಗುದೀಪಗೂ ಭರ್ಜರಿ ಜಯಭೇರಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾವು ಕರ್ನಾಟಕ ಮಾತ್ರವಲ್ಲದೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಸಮಯದಲ್ಲಿ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ಸುದ್ದಿ ಬಂದಿದೆ.
ಬೆಂಗಳೂರು: ದರ್ಶನ್ ತಾಯಿ ಮೀನಾ ತೂಗುದೀಪ ಅವರು ಮೈಸೂರಿನ ತ್ಯಾಗರಸ್ತೆಯಲ್ಲಿರುವ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ಇವರು ಈ ಬ್ಯಾಂಕ್‌ನ ಹಳೆಯ ಸದಸ್ಯೆ. ಇತ್ತೀಚೆಗೆ ಬ್ಯಾಂಕ್ ಸದಸ್ಯರ ಸ್ಥಾನಕ್ಕೆ ಎಲೆಕ್ಷನ್ ನಡೆಸಿತ್ತು. ಹತ್ತೊಂಬತ್ತು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೀನಾ ತೂಗುದೀಪ ಅವರು ಗೆಲುವು ಪಡೆದಿದ್ದಾರೆ.
ಕೋ ಆಪರೇಟಿವ್ ಬ್ಯಾಂಕ್‌ನ ಈ ಚುನಾವಣೆಯಲ್ಲಿ ಸುಮಾರು 1200 ಸದಸ್ಯರು ಮತ ಚಲಾವಣೆ ಮಾಡಿದ್ದರು. ದರ್ಶನ್ ತಾಯಿ ಮೀನಾ ಅವರಿಗೆ 642 ಮತಗಳು ಚಲಾವಣೆಗೊಂಡಿವೆ. ಅಂತಿಮವಾಗಿ ಮೀನಾ ತೂಗುದೀಪ ಅವರು ಗೆಲುವಿನ ನಗೆ ಬೀರಿದರು.
ದರ್ಶನ್ ಯಶಸ್ಸಿನಲ್ಲಿ ತಾಯಿ ಮೀನಾ ಅವರ ಪಾಲೂ ಇದೆ. ಬಾಲ್ಯದಿಂದಲೇ ತನ್ನ ಮಕ್ಕಳನ್ನು ಇವರು ಕಣ್ರೆಪ್ಪೆಯಂತೆ ನೋಡಿಕೊಂಡಿದ್ದರು. ತಮ್ಮ ಪತಿ ತೂಗುದೀಪ ಶ್ರೀನಿವಾಸ್ ಅವರ ಎರಡು ಕಿಡ್ನಿ ವೈಫಲ್ಯವಾದಗ ತನ್ನ ಒಂದು ಕಿಡ್ನಿಯನ್ನೇ ನೀಡಿದ್ದರು. "ಈಕೆ ನನಗೆ ಪುನರ್‌ಜನ್ಮ ನೀಡಿದ ದೇವತೆ" ಎಂದು ತಮ್ಮ ಪತ್ನಿ ಕುರಿತು ಶ್ರೀನಿವಾಸ್ ತೂಗುದೀಪ ಹೇಳುತ್ತಿದ್ದರಂತೆ.
ಇನ್ನೊಂದೆಡೆ ದರ್ಶನ್ ಅಭಿನಯದ ಕಾಟೇರ ಸಿನಿಮಾವು ಜಯಭೇರಿ ಮುಂದುವರೆಸಿದೆ. ಸಂಕ್ರಾಂತಿಯ ದಿನ ಭರ್ಜರಿ ಟಿಕೆಟ್ ಕಲೆಕ್ಷನ್ ಆಗುತ್ತಿದೆ ಎಂಬ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತದೆ. ಬುಕ್ ಮೈ ಶೋ ಒಂದರಲ್ಲಿಯೇ ಗಂಟೆಗೆ ಎರಡು ಸಾವಿರ ಟಿಕೆಟ್‌ಗಳು ಬುಕ್ ಆಗುತ್ತಿವೆ ಎಂದು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಕಾಟೇರ ಸಿನಿಮಾ ಬಿಡುಗಡೆಯಾಗಿ ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಕಾಟೇರ ಸಿನಿಮಾವು ಡಿಸೆಂಬರ್ 29, 2023ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನಾ ರಾಮ್ ನಟನೆಯ ಕಾಟೇರ ಸಿನಿಮಾ ಬಿಡುಗಡೆಯಾಗಿತ್ತು. ಎರಡು ವಾರ ಕಳೆದು ಇದೀಗ ಮೂರನೇ ವಾರದ ಮೊದಲ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಕಾಟೇರ ಕಮಾಲ್ ಮಾಡುತ್ತಿದೆ. ಇಂದು ರಜೆ ಇರುವ ಕಾರಣ ಸಾಕಷ್ಟು ಜನರು ಕುಟುಂಬ ಸಮೇತ ಕಾಟೇರ ವೀಕ್ಷಣೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಮೊದಲ ವಾರ 406 ಚಿತ್ರಮಂದಿರಗಳಲ್ಲಿ ಕಾಟೇರ ಸಿನಿಮಾ ಬಿಡುಗಡೆಯಾಗಿತ್ತು. ಎರಡನೇ ವಾರ 462 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಕರ್ನಾಟಕದ 27 ಚಿತ್ರಮಂದಿರಗಳಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿರುವ ದರ್ಶನ್ ಸಿನಿಮಾವು ಹೊಸ ದಾಖಲೆ ಬರೆದಿತ್ತು. ಈಗ ವಿದೇಶಗಳಲ್ಲಿಯೂ ಕಾಟೇರ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಆರಂಭದಲ್ಲಿ ಕಾಟೇರ ಸಿನಿಮಾ ಹಿಟ್ ಆಗಬಹುದೇ ಇಲ್ಲವೇ ಎಂಬ ಸಂದೇಹ ಇತ್ತು. ಚಿತ್ರಮಂದಿರಗಳಲ್ಲಿ ಮೊದಲ ದಿನದ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಇದು ಅದ್ಭುತ ಚಿತ್ರ ಎಂದು ಷರಾ ಬರೆದಿದ್ದರು. ಕಾಟೇರ ಚಿತ್ರದಲ್ಲಿ ದರ್ಶನ್ ಅಭಿನಯ ಮಾತ್ರವಲ್ಲದೆ, ಒಂದೊಳ್ಳೆ ಕಥೆ ಮತ್ತು ಸಂಭಾಷಣೆಯೂ ಗಮನ ಸೆಳೆದಿತ್ತು. ದರ್ಶನ್ ಅವರ ಈ ಹಿಂದಿನ ಫ್ಯಾನ್ ಇಮೇಜ್ ಚಿತ್ರಗಳಿಗಿಂತ ಭಿನ್ನವಾಗಿತ್ತು. ಇದಾದ ಬಳಿಕ ಕರ್ನಾಟಕದಲ್ಲಿ ಕಾಟೇರ ಕ್ರೇಜ್ ಹೆಚ್ಚಾಗಿ, ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಗಳಿಕೆ ಮಾಡಲು ಆರಂಭಿಸಿತ್ತು.