Kaatera: ‘ಅಯ್ಯೋ ಡಾ. ರಾಜ್‌ಕುಮಾರ್ ಕಾಲಿನ ಧೂಳಿಗೂ ನಾವು ಸಮವಲ್ಲ!’ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಮಾತು
ಕಾಟೇರ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಇಡೀ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಅದರಲ್ಲೂ ನಟ ದರ್ಶನ್ ಸಿನಿಮಾ ಅಪ್ಪಿಕೊಂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ ಡಾ. ರಾಜ್‌ಕುಮಾರ್ ಬಗ್ಗೆಯೂ ಮಾತನಾಡಿದರು.
Kaatera: ಕರ್ನಾಟಕದಲ್ಲೀಗ ಕಾಟೇರನದ್ದೇ ಸದ್ದು. ಕಾಟೇರನದ್ದೇ ಹವಾ. ಕಾಟೇರನದ್ದೇ ಮಾತು. ಆ ಮಟ್ಟಿಗೆ ಸುದ್ದಿಯಲ್ಲಿದೆ ಈ ಸಿನಿಮಾ. ಕರುನಾಡಿನ ಸಿನಿಮಾಪ್ರೇಕ್ಷಕರು ಕಾಟೇರನನ್ನು ಹೊತ್ತು ಮೆರೆಸುತ್ತಿದ್ದಾರೆ. ಕಲೆಕ್ಷನ್ ವಿಚಾರದಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ 77 ಕೋಟಿ ಗಳಿಸಿ 100 ಕೋಟಿಯತ್ತ ಮುನ್ನುಗ್ಗುತ್ತಿದೆ. ದರ್ಶನ್ ಅವರ ಹೊಸ ಅವತಾರ, ನೈಜ ಘಟನೆ ಹಿನ್ನೆಲೆಯ ಎಳೆ ಎಲ್ಲರಿಗೂ ಇಷ್ಟವಾಗಿದೆ. ಇದಕ್ಕೆ ಧನ್ಯವಾದ ಅರ್ಪಿಸಲೆಂದೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಿತ್ತು.
ಈ ಹಿಂದೆ ರಾಬರ್ಟ್ ಸಿನಿಮಾ ಮಾಡಿ ಗೆದ್ದಿದ್ದ ತರುಣ್ ಕಿಶೋರ್ ಸುಧೀರ್ ಮತ್ತು ದರ್ಶನ್ ಜೋಡಿ ಇದೀಗ ಕಾಟೇರ ಚಿತ್ರದ ಮೂಲಕ ಅದೇ ಗೆಲುವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಮೇಕಿಂಗ್ ಮತ್ತು ಅಬ್ಬರದ ಆಕ್ಷನ್ ಮೂಲಕ ಕಾಟೇರ ನಾಡಿನ ಜನರ ಮನಗೆದ್ದಿದೆ. ಮಾಸ್ ಪ್ರೇಕ್ಷಕರಿಗೂ, ಕ್ಲಾಸ್ ಪ್ರೇಕ್ಷಕರಿಗೂ ಸಿನಿಮಾ ಹಿಡಿಸಿದೆ. ಈ ಮೂಲಕ ಕೇವಲ ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಫಸಲನ್ನು ತೆಗೆದ ನಾನ್ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಖ್ಯಾತಿಗೂ ಕಾಟೇರ ಪಾತ್ರವಾಗಿದೆ.
ಹೀಗಿರುವಾಗಲೇ ಸಿನಿಮಾ ಮೆಚ್ಚಿ, ಪ್ರೀತಿ ತೋರಿದ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಇಡೀ ತಂಡ ಧನ್ಯವಾದ ಹೇಳಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಬಗ್ಗೆಯೂ ನಟ ದರ್ಶನ್ ಮಾತನಾಡಿದ್ದಾರೆ. ಕಾಟೇರ ಸಿನಿಮಾದ ದೃಶ್ಯವೊಂದರಲ್ಲಿ ಡಾ. ರಾಜ್‌ಕುಮಾರ್ ಅವರ ಭಕ್ತ ಪ್ರಹ್ಲಾದ ಚಿತ್ರದ ಸನ್ನಿವೇಶ ಬರುತ್ತದೆ. ನಾಟಕದ ವೇದಿಕೆ ಮೇಲೆ ವೈಜನಾಥ್ ಬಿರಾದಾರ್ ಅಬ್ಬರದ ಹಿರಣ್ಯ ಕಶಿಪುವಾದರೆ, ಅವರಿಗೆ ಹಿನ್ನೆಲೆಯಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ ದರ್ಶನ್. ದರ್ಶನ್ ಅವರ ಆ ನಟನೆ ಕಂಡು ಆ ಕ್ಷಣಕ್ಕೆ ರಾಜ್‌ಕುಮಾರ್ ಅವರನ್ನೇ ನೋಡಿದಂತಾಯ್ತು ಎಂದು ಸಾಕಷ್ಟು ಮಂದಿ ಪೋಸ್ಟ್ ಹಂಚಿಕೊಂಡಿದ್ದರು.
ಡಾ. ರಾಜ್ ಬಗ್ಗೆ ದರ್ಶನ್ ಮಾತು
ಮಾಧ್ಯಮಗೋಷ್ಠಿಯಲ್ಲಿ ಈ ಡೈಲಾಗ್ ಹೇಳಿದ ದರ್ಶನ್ ಅವರನ್ನು ಡಾ. ರಾಜ್‌ಕುಮಾರ್‌ಗೆ ಹೋಲಿಸಿ ಪ್ರಶ್ನೆ ಮಾಡಲಾಗುತ್ತದೆ. ಅದಕ್ಕೆ ಉತ್ತರಿಸಿದ ದರ್ಶನ್, "ಡಾ. ರಾಜ್‌ಕುಮಾರ್ ಹೆಸರು ಹೇಳುವುದಕ್ಕಲ್ಲ, ಅವರ ಕಾಲಿನ ಧೂಳಿಗೂ ನಾವು ಸಮವಲ್ಲ. ನೀವು ದಯವಿಟ್ಟು ನಮ್ಮನ್ನು ಅಲ್ಲಿಯವರೆಗೂ ಹೋಗಲೇಬೇಡಿ. ಪ್ರಯತ್ನಪಡಬಹುದಷ್ಟೇ. ಅವ್ರು ಮಾಡಿದ್ರಲ್ಲಿ 5% ಪರ್ಸೆಂಟ್ ಅಲ್ಲ.. 0.000% ಸಹ ನಾವಲ್ಲ. ಬಿಟ್ಬಿಡಿ" ಎಂದಿದ್ದಾರೆ ದರ್ಶನ್.
ಪರಭಾಷೆಗಳಿಗೂ ಕಾಟೇರ ಪ್ರಯಾಣ
ಕಾಟೇರ ಸಿನಿಮಾ ಸದ್ಯ ಕರುನಾಡಿನಲ್ಲಿ ಮಾತ್ರ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಇದೀಗ ಇದೇ ಚಿತ್ರವನ್ನು ಪರಭಾಷಿಕರಿಗೂ ತೋರಿಸುವ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಇದೇ ಜನವರಿಯಲ್ಲಿಯೇ ಪಕ್ಕದ ತೆಲುಗು, ತಮಿಳು, ಹಿಂದಿಯಲ್ಲಿಯೂ ಈ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ ರಾಕ್‌ಲೈನ್. ಅದೇ ರೀತಿ ವಿದೇಶಗಳಲ್ಲೂ ಕಾಟೇರ ಸಿನಿಮಾ ರಿಲೀಸ್ ಆಗಲಿದೆ. ಜ. 5ರಂದು ಕೆನಡಾ, ದುಬೈ, ಇಂಗ್ಲೆಂಡ್, ಅಮೆರಿಕಾಗಳಲ್ಲೂ ಸಿನಿಮಾ ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.