ಕನ್ನಡ ಸುದ್ದಿ  /  ಮನರಂಜನೆ  /  Kaatera Ott: ದರ್ಶನ್‌ ಸಿನಿಮಾವನ್ನು ಮನೆಯಲ್ಲೇ ನೋಡಬಯಸುವಿರಾ? ಕಾಟೇರ ಒಟಿಟಿ ಬಿಡುಗಡೆ ವಿವರ

Kaatera OTT: ದರ್ಶನ್‌ ಸಿನಿಮಾವನ್ನು ಮನೆಯಲ್ಲೇ ನೋಡಬಯಸುವಿರಾ? ಕಾಟೇರ ಒಟಿಟಿ ಬಿಡುಗಡೆ ವಿವರ

Kaatera OTT Release Date And Platform: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲಾಗದೆ ಇರುವವರು ಒಟಿಟಿಯಲ್ಲಿ ಬಿಡುಗಡೆಯಾದಗ ನೋಡಬಹುದು. ಕಾಟೇರ ಸಿನಿಮಾ ಒಟಿಟಿ ಸ್ಟ್ರೀಮಿಂಗ್‌ ಹಕ್ಕುಗಳನ್ನು ಝೀ5 ಖರೀದಿಸಿದೆ ಎಂದು ವರದಿಗಳು ತಿಳಿಸಿವೆ.

 ಕಾಟೇರ ಒಟಿಟಿ ಬಿಡುಗಡೆ ವಿವರ
ಕಾಟೇರ ಒಟಿಟಿ ಬಿಡುಗಡೆ ವಿವರ

ತರುಣ್‌ ಸುಧೀರ್‌ ನಿರ್ದೇಶನದ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಮಾಲಾಶ್ರಿ ಪುತ್ರಿ ಆರಾಧನಾ ರಾಮ್‌ ನಟನೆಯ ಕನ್ನಡ ಬ್ಲಾಕ್‌ಬಸ್ಟರ್‌ ಸಿನಿಮಾ ಕಾಟೇರ ಈಗ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸದ್ಯದ ಕಾಟೇರ ಕ್ರೇಜ್‌ ಗಮನಿಸಿದರೆ ಈ ಚಿತ್ರ ಇನ್ನೂ ಹಲವು ದಿನಗಳ ಕಾಲ ಕರ್ನಾಟಕದ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಬೋರ್ಡ್‌ನೊಂದಿಗೆ ಪ್ರದರ್ಶನಗೊಳ್ಳುವ ಸೂಚನೆಯಿದೆ. ಇದೇ ಸಂದರ್ಭದಲ್ಲಿ ಒಟಿಟಿಯಲ್ಲಿ ಕಾಟೇರ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಝೀ5 ಒಟಿಟಿ ಪ್ಲಾಟ್‌ಫಾರ್ಮ್‌ ಕಾಟೇರ ಸಿನಿಮಾದ ಪ್ರಸಾರದ ಹಕ್ಕುಗಳನ್ನು ಪಡೆದಿದೆ.

ಟ್ರೆಂಡಿಂಗ್​ ಸುದ್ದಿ

ಕಾಟೇರ ಸಿನಿಮಾವು 1970ರ ಕಾಲಘಟ್ಟದ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಈಗಲೂ ಪ್ರಚಲಿತದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲಲಾಗಿದೆ. ಗಟ್ಟಿಯಾದ ಕಥೆಯು ಕಾಟೇರಕ್ಕೆ ವರವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈಗಲೂ ಕಾಟೇರ ಟ್ರೆಂಡ್‌ನಲ್ಲಿದೆ. ಕಾಟೇರ ಸಿನಿಮಾ ಡಿಸೆಂಬರ್‌ 29ರಂದು ಬಿಡುಗಡೆಯಾಗಿತ್ತು.

ತರುಣ್‌ ಸುಧೀರ್‌ ಅವರು ದರ್ಶನ್‌ ಹುಟ್ಟುಹಬ್ಬದಂದು ಅಂದರೆ 2022ರ ಫೆಬ್ರವರಿ 16ರಂದು ಕಾಟೇರ ಸಿನಿಮಾದ ಕುರಿತು ಮೊದಲು ಮಾಹಿತಿ ನೀಡಿದ್ದರು. ರಾಕ್‌ಲೈನ್‌ ವೆಂಕಟೇಶ್‌ ಅವರು ಇದೇ ದಿನ ಕಾಟೇರದ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಈ ಸಿನಿಮಾದಲ್ಲಿ ತೆಲುಗು ನಟ ಜಗಪತಿ ಬಾಬು ಕೂಡ ನಟಿಸಿದ್ದಾರೆ. ಕನಸಿನ ರಾಣಿ ಮಾಲಾಶ್ರಿ ಮಗಳು ಆರಾಧನಾ ರಾಮ್‌ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಕಾಟೇರ ಸಿನಿಮಾ ಒಟಿಟಿ ಬಿಡುಗಡೆ ವಿವರ

ಕಾಟೇರ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸದ್ಯ ಕೋಟ್ಯಾಂತರ ರೂಪಾಯಿ ಬಾಚಿಕೊಳ್ಳುತ್ತಿದೆ. ಕೆಲವು ವರದಿಗಳ ಪ್ರಕಾರ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತು ಸಿನಿಮಾ ತಂಡ ಮಾತುಕತೆ ಮುಗಿಸಿದೆಯಂತೆ. ಈ ಚಿತ್ರವು ಝೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರಗೊಳ್ಳಲಿದೆ ಎನ್ನಲಾಗಿದೆ. ಆದರೆ, ಒಟಿಟಿಯಲ್ಲಿ ಕಾಟೇರ ಬಿಡುಗಡೆ ದಿನಾಂಕ ಸದ್ಯದಲ್ಲಿ ಪ್ರಕಟಗೊಳ್ಳುವ ಸೂಚನೆಯಿಲ್ಲ.

ಕಾಟೇರ ಸಿನಿಮಾವನ್ನು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲು ಕೂಡ ಬೇಡಿಕೆ ಬಂದಿದೆ. ಹೀಗಾಗಿ, ಈ ಡಬ್ಬಿಂಗ್‌ ಪ್ರಕ್ರಿಯೆ ಮುಗಿದು ತಮಿಳು ಮತ್ತು ತೆಲುಗು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಬಳಿಕವಷ್ಟೇ ಕಾಟೇರವು ಒಟಿಟಿಗೆ ಆಗಮಿಸಲಿದೆ. ಕಾಟೇರ ಸಿನಿಮಾದ ಹಕ್ಕುಗಳನ್ನು ಖರೀದಿಸಿರುವ ಕುರಿತು ಝೀ5 ಕಡೆಯಿಂದ ಯಾವುದೇ ಅಧಿಕೃತ ಅಪ್‌ಡೇಟ್‌ ಬಂದಿಲ್ಲ.

ಕಾಟೇರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಾಟೇರ ಸಿನಿಮಾಕ್ಕೆ ಹಣದ ಹೊಳೆಯೇ ಹರಿದುಬರುತ್ತಿದೆ. ಕಾಟೇರ ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನ ಅಂದರೆ ಸೋಮವಾರ ಕಾಟೇರ ಸಿನಿಮಾವು 18.26 ಕೋಟಿ ರೂಪಾಯಿ ಗಳಿಸಿದೆ. ಕಾಟೇರ ಸಿನಿಮಾವು ಮೊದಲ ದಿನ 19.79 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕಾಟೇರ ಬಿಡುಗಡೆಯಾದ ಎರಡನೇ ದಿನವೂ ಬಾಕ್ಸ್‌ ಆಫೀಸ್‌ನಲ್ಲಿ 17.35 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಮೂರನೇ ದಿನ 20.94 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇವಲ ನಾಲ್ಕೇ ದಿನದಲ್ಲಿ 77.6 ಕೋಟಿ ರೂಪಾಯಿ ಗಳಿಕೆ ಮಾಡಿ, ಸದ್ಯದಲ್ಲಿಯೇ 100 ಕೋಟಿ ಕ್ಲಬ್‌ಗೆ ಸೇರುವತ್ತ ಕಾಟೇರ ದಾಪುಗಾಲಿಡುತ್ತಿದೆ.

ಟಿ20 ವರ್ಲ್ಡ್‌ಕಪ್ 2024