Kaatera: ‘ನಮ್ಮ ಸಿನಿಮಾ, ನಮ್ಮ ಜಾಗ, ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ?’ ಕಾಟೇರನಿಗಾಗಿ ದರ್ಶನ್‌ ಗುಡುಗು
ಕನ್ನಡ ಸುದ್ದಿ  /  ಮನರಂಜನೆ  /  Kaatera: ‘ನಮ್ಮ ಸಿನಿಮಾ, ನಮ್ಮ ಜಾಗ, ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ?’ ಕಾಟೇರನಿಗಾಗಿ ದರ್ಶನ್‌ ಗುಡುಗು

Kaatera: ‘ನಮ್ಮ ಸಿನಿಮಾ, ನಮ್ಮ ಜಾಗ, ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ?’ ಕಾಟೇರನಿಗಾಗಿ ದರ್ಶನ್‌ ಗುಡುಗು

ಡಿಸೆಂಬರ್‌ ತಿಂಗಳಲ್ಲಿ ಬಿಗ್‌ ಬಜೆಟ್‌ನ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಆ ಪೈಕಿ ಕನ್ನಡದಲ್ಲಿ ದರ್ಶನ್‌ ನಟನೆಯ ಕಾಟೇರ ಚಿತ್ರ ಡಿ. 29ರಂದು ರಿಲೀಸ್‌ ಆಗಲಿದೆ. ಈ ಬಗ್ಗೆ ನಟ ದರ್ಶನ್‌ ಮಾತನಾಡಿದ್ದಾರೆ.

Kaatera: ‘ನಮ್ಮ ಸಿನಿಮಾ, ನಮ್ಮ ಜಾಗ, ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ?’; ಕಾಟೇರನಿಗಾಗಿ ದರ್ಶನ್‌ ಗುಡುಗು
Kaatera: ‘ನಮ್ಮ ಸಿನಿಮಾ, ನಮ್ಮ ಜಾಗ, ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ?’; ಕಾಟೇರನಿಗಾಗಿ ದರ್ಶನ್‌ ಗುಡುಗು

Kaatera: ಸ್ಯಾಂಡಲ್‌ವುಡ್‌ ನಟ ದರ್ಶನ್‌, ಸದ್ಯ ಕಾಟೇರ ಸಿನಿಮಾ ಬಿಡುಗಡೆಯ ಸನಿಹದಲ್ಲಿದ್ದಾರೆ. ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಘೋಷಣೆ ಮಾಡಿ, ರಿಲೀಸ್‌ಗೆ ರೆಡಿಯಾಗುತ್ತಿದೆ ಕಾಟೇರ ಸಿನಿಮಾ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲೂ ತೊಡಗಿಸಿಕೊಂಡಿದೆ. ಎರಡು ಹಾಡುಗಳ ಮೂಲಕ ಅಭಿಮಾನಿ ವಲಯದಲ್ಲಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ, ಇದೇ ಡಿ. 29ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ನಡುವೆ ಭಾನುವಾರ ಟ್ರೇಲರ್‌ ಝಲಕ್‌ ಕೂಡ ನೋಡಲು ಸಿಗಲಿದೆ.

ದರ್ಶನ್‌ ಸಿನಿಮಾ ಅಂದರೆ ಅಲ್ಲಿ ಹಬ್ಬದ ಕಳೆ. ಆ ಹಬ್ಬಕ್ಕೆ ಇದೀಗ ದಿನಗಣನೆ ಆರಂಭವಾಗಿದೆ. ಚಿತ್ರಮಂದಿರದ ಮುಂದಿನ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಲು ಅಭಿಮಾನಿಗಳೂ ಕಾತರದಿಂದ ಕಾದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾಟೇರನ ಒಂದೊಂದೆ ಸಣ್ಣ ಝಲಕ್‌ಅನ್ನು ಹೊರಗೆಡವುತ್ತಲೇ ಬಂದಿದೆ. ಚಿತ್ರತಂಡ. ಈ ನಡುವೆ ಸಿನಿಮಾ ಬಗ್ಗೆ ಮಾತನಾಡಲೆಂದೇ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಇಡೀ ತಂಡ ಭಾಗವಹಿಸಿತ್ತು. ಸಿನಿಮಾ ಮೂಡಿ ಬಂದ ರೀತಿಯ ಬಗ್ಗೆ ಎಲ್ಲರೂ ಎಳೆ ಎಳೆಯಾಗಿಯೇ ಬಿಚ್ಚಿಟ್ಟರು.

ಈ ವೇಳೆ ನಟ ದರ್ಶನ್‌ ಆಡಿದ ಮಾತುಗಳಿಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು. ಹಾಗಾದರೆ, ದರ್ಶನ್‌ ಹೇಳಿದ್ದೇನು? "ಡಿಸೆಂಬರ್ 29ಕ್ಕೆ ಏಕೆ ರಿಲೀಸ್ ಮಾಡ್ತಿದ್ದೇವೆ ಅಂದ್ರೆ, ಇದು ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಕೂರ್ಬೇಕ್ರಿ? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ? ನಮ್ಮ ಕನ್ನಡ ಜನ ಇದ್ದಾರಾ ಇಲ್ಲ ಅಂತ ನಮಗೆ ಡೌಟ್ ಬಂದು ಬಿಡ್ತು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಕನ್ನಡಿಗರು ಯಾವಾಗಲೂ ಕೈ ಹಿಡಿದೇ ಹಿಡಿದಿದ್ದಾರೆ. ನಾವು ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿಲ್ಲ ಸ್ವಾಮಿ. ಅಪ್ಪಟ ಕನ್ನಡ ಸಿನಿಮಾ ಮಾಡಿದ್ದೇವೆ. ಕರ್ನಾಟಕದ ಜನತೆಗೋಸ್ಕರ ಮಾಡಿದ ಸಿನಿಮಾ" ಎಂದಿದ್ದಾರೆ ದರ್ಶನ್.‌

ಪರಭಾಷೆ ಸಿನಿಮಾಗಳಿಗೆ ಕೌಂಟರ್‌

ಅಂದಹಾಗೆ, ದರ್ಶನ್‌ ಹೀಗೆ ಮಾತನಾಡುವುದಕ್ಕೂ ಕಾರಣವಿದೆ. ಡಿ. 21ರಂದು ಬಹುನಿರೀಕ್ಷಿತ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಾಲಿವುಡ್‌ನಲ್ಲಿ ಶಾರುಖ್‌ ಖಾನ್‌ ಅಭಿನಯದ ಡಂಕಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅದೇ ರೀತಿ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಸಲಾರ್‌ ಚಿತ್ರವೂ ಅದೇ ದಿನ ರಿಲೀಸ್‌ ಆಗುತ್ತಿದೆ. ಈ ಎರಡೂ ಸಿನಿಮಾಗಳು ಬಿಡುಗಡೆಯಾದ ಒಂದು ವಾರದ ಬಳಿಕ ಕಾಟೇರ ಬಿಡುಗಡೆ ಆಗುತ್ತಿದೆ. ಈ ಎರಡು ಸಿನಿಮಾ ನಡುವೆ ಕಾಟೇರ ಚಿತ್ರ ಬೇಕಿತ್ತ ಎಂಬ ಪ್ರಶ್ನೆಯೂ ಮೂಡಿತ್ತು. ಹಾಗಾಗಿ ಅದಕ್ಕೆ ಈ ರೀತಿಯಲ್ಲಿ ಉತ್ತರಿಸಿದ್ದಾರೆ ದರ್ಶನ್.

ಸಿನಿಮಾ ತಡವಾಗಿದ್ದೇಕೆ? ಹೀಗಿತ್ತು ದರ್ಶನ್‌ ಉತ್ತರ

"ಎಲ್ಲವೂ ಪ್ಲಾನ್‌ ಪ್ರಕಾರ ಆಗಿದ್ದರೆ, ಒಂದಷ್ಟು ತಿಂಗಳ ಮುಂಚೆಯೇ ಕಾಟೇರ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಸೆಟ್‌ ವಿಚಾರದಲ್ಲಿ ನಮ್ಮ ನಿರ್ಮಾಪಕರು ಕಾಂಪ್ರಮೈಸ್‌ ಆಗಲಿಲ್ಲ. ಕಲಾವಿದರ ಡೇಟ್‌ ಸಿಕ್ಕಿಲ್ಲ ಎಂಬ ವಿಚಾರಕ್ಕೆ ಸಿನಿಮಾ ತಡವಾಗಿಲ್ಲ. ಬದಲಾಗಿ, ನಮ್ಮ ಸಿನಿಮಾಕ್ಕೆ ಎರಡು ಹಳ್ಳಿಗಳ ಸೆಟ್‌ ಬೇಕಿತ್ತು. ಒಂದು ಆದ ಬಳಿಕ ಅದನ್ನೇ ಬದಲಾಯಿಸಿ, ಇನ್ನೊಂದನ್ನು ಅಲ್ಲಿಯೇ ಮಾಡಬಹುದಿತ್ತು. ಆದರೆ, ಹಾಗೆ ಬೇಡ, ಇನ್ನೊಂದು ಹಳ್ಳಿ ಮಾಡಿಯೇ ಬಿಡೋಣ ಎಂದು ಎರಡು ತಿಂಗಳೂ ದೂಡಿದರು. ನಾನೂ ಎರಡು ತಿಂಗಳೂ ಖಾಲಿ ಕೂತೆ. ಇದೀಗ ಕೊನೆಗೂ ಅಂದುಕೊಂಡಂತೆ ಸಿನಿಮಾ ಮೂಡಿದೆ ಬಂದಿದೆ. ನಿರ್ಮಾಪಕರಿಗೆ ಧನ್ಯವಾದಗಳು" ಎಂದಿದ್ದಾರೆ ದರ್ಶನ್‌.

Whats_app_banner