ದಚ್ಚು ಕಂಡು ಸೈಲೆಂಟ್‌ ಆದ ಹುಲಿರಾಯ; ದುಬೈನಲ್ಲಿ ವ್ಯಾಘ್ರನ ಜತೆ ಕಾಲಕಳೆದ ಕಾಟೇರ ನಟ ದರ್ಶನ್‌
ಕನ್ನಡ ಸುದ್ದಿ  /  ಮನರಂಜನೆ  /  ದಚ್ಚು ಕಂಡು ಸೈಲೆಂಟ್‌ ಆದ ಹುಲಿರಾಯ; ದುಬೈನಲ್ಲಿ ವ್ಯಾಘ್ರನ ಜತೆ ಕಾಲಕಳೆದ ಕಾಟೇರ ನಟ ದರ್ಶನ್‌

ದಚ್ಚು ಕಂಡು ಸೈಲೆಂಟ್‌ ಆದ ಹುಲಿರಾಯ; ದುಬೈನಲ್ಲಿ ವ್ಯಾಘ್ರನ ಜತೆ ಕಾಲಕಳೆದ ಕಾಟೇರ ನಟ ದರ್ಶನ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಪ್ರಾಣಿಪಕ್ಷಿಗಳೆಂದರೆ ಅಚ್ಚುಮೆಚ್ಚು. ಕಾಟೇರ ಪ್ರಮೋಷನ್‌ಗಾಗಿ ದುಬೈಗೆ ತೆರಳಿರುವ ದರ್ಶನ್‌ ಅಲ್ಲಿ ಹುಲಿಯ ಮೈದಡವಿ ಸಂಭ್ರಮಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದುಬೈನಲ್ಲಿ ವ್ಯಾಘ್ರನ ಜತೆ ಕಾಲಕಳೆದ ದರ್ಶನ್‌
ದುಬೈನಲ್ಲಿ ವ್ಯಾಘ್ರನ ಜತೆ ಕಾಲಕಳೆದ ದರ್ಶನ್‌

ಕಾಟೇರ ಸಿನಿಮಾದ ಪ್ರಮೋಷನ್‌ಗಾಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ದುಬೈನಲ್ಲಿದ್ದಾರೆ. ದುಬೈ ಕನ್ನಡಿಗರ ಜತೆ ಕಾಲ ಕಳೆದ ದಚ್ಚು ಅಲ್ಲಿ ತನ್ನ ಆಸಕ್ತಿಯ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗುವುದನ್ನು ಮರೆಯಲಿಲ್ಲ. ದರ್ಶನ್‌ ಅವರು ಹುಲಿಯ ಮೈ ಸವರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪರಚುತ್ತದೆ ಎಂದು ಬೆಕ್ಕಿನ ಮೈ ಸವರಲು ಸಾಕಷ್ಟು ಜನರು ಭಯ ಪಡಬಹುದು. ಆದರೆ, ದರ್ಶನ್‌ ಯಾವುದೇ ಭಯವಿಲ್ಲದೆ ಹುಲಿಯ ಮೈ ಸವರುವ ವಿಡಿಯೋವನ್ನು ಡಿಬಾಸ್‌ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ದುಬೈನಲ್ಲಿ ಕೆಲವು ಖಾಸಗಿ ಮೃಗಾಲಯಗಳಲ್ಲಿ ಈ ರೀತಿ ಹುಲಿ ಸಿಂಹಗಳ ಜತೆ ಕಾಲ ಕಳೆಯಬಹುದು. ಹುಲಿಯಂತಹ ಕ್ರೂರ ಪ್ರಾಣಿಗಳೂ ಅಲ್ಲಿ ಸಾಧು ಪ್ರಾಣಿಗಳಾಗಿವೆ. ಅವುಗಳನ್ನು ಸಾಕು ಪ್ರಾಣಿಗಳಂತೆ ಸಾಕಲಾಗುತ್ತದೆ. ಇಲ್ಲಿ ದರ್ಶನ್‌ ಅವರು ಮೈ ಸವರುತ್ತಿರುವ ಹುಲಿಯ ಕೊರಳಿಗೆ ಸರಪಳಿ ಬಿಗಿದಿರುವುದನ್ನು ಗಮನಿಸಬಹುದು. ನಾವು ಸಾಕು ಪ್ರಾಣಿಗಳನ್ನು ಹೇಗೆ ಕಟ್ಟಿ ಹಾಕುತ್ತವೆಯೋ ಅದೇ ರೀತಿ ಅಲ್ಲಿ ಹುಲಿಯ ಕೊರಳಿಗೆ ಸರಪಣಿ ಹಾಕಲಾಗಿದೆ. ವ್ಯಾಘ್ರನ ಕುರಿತು ಕ್ರೂರ ಕಥೆಗಳನ್ನು, ಸುದ್ದಿಗಳನ್ನು ಓದಿರುವ ನಮಗೆ ಈ ರೀತಿ ಕ್ರೂರ ಪ್ರಾಣಿಯೊಂದರ ಮೈ ಸವರಲು ಭಯವಾಗಬಹುದು. ಆದರೆ, ದರ್ಶನ್‌ ಯಾವುದೇ ಭಯವಿಲ್ಲದೆ ತನ್ನ ಅಚ್ಚುಮೆಚ್ಚಿನ ಪ್ರಾಣಿಯ ಮೈ ಸವರಿದ್ದಾರೆ. ಇದೇ ರೀತಿ ವಿವಿಧ ದೇಶಗಳಲ್ಲಿ ಹುಲಿ ಸಿಂಹಗಳ ಜತೆ ಕಾಲ ಕಳೆಯುವ ಅವಕಾಶ ನೀಡಲಾಗುತ್ತದೆ. ಸಾಕಷ್ಟು ಪ್ರವಾಸಿಗರು ಹುಲಿಯನ್ನು ಬೆಕ್ಕಿನ ಮರಿಯಂತೆ ಮೈದಡವಿ ಸಂಭ್ರಮಿಸುತ್ತಾರೆ.

ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಕಂಡಿರುವ ದರ್ಶನ್‌ ನಟನೆಯ ಕಾಟೇರ ಸಿನಿಮಾ ಇತರೆ ರಾಜ್ಯಗಳಲ್ಲೂ ಬಿಡುಗಡೆಯಾಗಿತ್ತು. ಇದಾದ ಬಳಿಕ ಜಾಗತಿಕ ಬಾಕ್ಸ್‌ ಆಫೀಸ್‌ನತ್ತ ಚಿತ್ರತಂಡ ಗಮನ ಹರಿಸಿತ್ತು. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಕಾಟೇರ ನೋಡಲು ಅವಕಾಶ ನೀಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿತ್ತು. ಕಾಟೇರ ಸಿನಿಮಾ ದುಬೈನಲ್ಲೂ ಬಿಡುಗಡೆಯಾಗಿ ಹೌಸ್‌ಫುಲ್‌ ಆಗಿತ್ತು. ಇದೇ ಖುಷಿಯಲ್ಲಿ ದರ್ಶನ್‌ ದುಬೈಗೆ ಭೇಟಿ ನೀಡಿ ಅಲ್ಲಿನ ಕನ್ನಡಿಗರನ್ನು ಭೇಟಿಯಾಗಿದ್ದಾರೆ. ದುಬೈ ಕನ್ನಡಿಗರು ಪ್ರೀತಿಯಿಂದ ಇವರಿಗೆ ಕರುನಾಡ ಅಧಿಪತಿ ಎಂಬ ಬಿರುದು ನೀಡಿದ್ದಾರೆ.

ಸದ್ಯ ದರ್ಶನ್‌ ಅಭಿಮಾನಿಗಳು ಹುಲಿಯ ಜತೆಗಿರುವ ದರ್ಶನ್‌ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಎರಡು ಹುಲಿಗಳು ಎಂದು ಕ್ಯಾಪ್ಷನ್‌ ನೀಡುತ್ತಿದ್ದಾರೆ. ದರ್ಶನ್‌ಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ವನ್ಯಜೀವಿಗಳ ಕುರಿತು ವಿಶೇಷ ಕಾಳಜಿ ಹೊಂದಿರುವ ದರ್ಶನ್‌ ಅವರು ಹುಲಿ, ಆನೆ ಸೇರಿದಂತೆ ಮೃಗಾಲಯಗಳ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಇವರ ಫಾರ್ಮ್‌ ಹೌಸ್‌ನಲ್ಲೂ ಕುದುರೆಗಳು, ವಿಶೇಷ ತಳಿಯ ಹಸುಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಇವೆ.

ಕಾಟೇರ ಸಿನಿಮಾವನ್ನು ಇತ್ತೀಚೆಗೆ ಮೃತಪಟ್ಟ ಮೈಸೂರು ದಸರಾ ಆನೆ ಅರ್ಜುನನಿಗೆ ಅರ್ಪಿಸಲಾಗಿತ್ತು. ಎಂಟು ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ನಡೆದಿದ್ದ ಅರ್ಜುನನ ಸಾವು ಕರ್ನಾಟಕದ ಜನತೆಗೆ ಆಘಾತ ತಂದಿತ್ತು. ಕಾಟೇರ ಸಿನಿಮಾದ ಆರಂಭದಲ್ಲಿಯೇ ಅರ್ಜುನಾ ಆನೆಗೆ ಈ ಸಿನಿಮಾ ಅರ್ಪಣೆ ಮಾಡಲಾಗಿತ್ತು. ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ- ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ ಎಂಬ ಸಂದೇಶ ನೋಡಿ ಚಿತ್ರಪ್ರೇಮಿಗಳು ಖುಷಿಪಟ್ಟಿದ್ದರು.

Whats_app_banner