Darshan: ‘ದೇಹ ತೂಕ ಇದ್ರೆ ಸಾಲದು, ಮಾತುಗಳೂ ತೂಕವಾಗಿರಬೇಕು!’ ದರ್ಶನ್ ‘ತಗಡು’ ಹೇಳಿಕೆಗೆ ಉಮಾಪತಿ ಗೌಡ ಕೌಂಟರ್
ಕಾಟೇರ ಸಿನಿಮಾ ಬಿಡುಗಡೆಯಾಗಿ 50ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಿಶೇಷ ಕಾರ್ಯಕ್ರಮ ನಡೆದಿತ್ತು. ಇದೇ ಕಾರ್ಯಕ್ರಮದಲ್ಲಿ ರಾಬರ್ಟ್ ನಿರ್ಮಾಪಕರಿಗೆ ಶೀರ್ಷಿಕೆ ವಿಚಾರವಾಗಿ ವೇದಿಕೆ ಮೇಲೆಯೇ ಹರಿಹಾಯ್ದಿದ್ದರು ದರ್ಶನ್. ಈ ಬಗ್ಗೆ ಉಮಾಪತಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Darshan: ಕಳೆದ ಕೆಲ ದಿನಗಳಿಂದ ಕಾಟೇರ ಸಿನಿಮಾ ಸುದ್ದಿಯಲ್ಲಿದೆ. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡು, 50 ದಿನ ಪೂರೈಸಿದ ಈ ಸಿನಿಮಾ ದರ್ಶನ್‌ಗೂ ದೊಡ್ಡ ಹಿಟ್ ನೀಡಿದೆ. ಈ ನಡುವೆ ಇದೇ ಸಿನಿಮಾದ ಶೀರ್ಷಿಕೆ ವಿಚಾರವೂ ಕಳೆದ ಕೆಲ ದಿನಗಳ ಹಿಂದಿನಿಂದಲೂ ಸುದ್ದಿಯಲ್ಲಿದೆ. ಇದೀಗ ಕಾಟೇರ ಚಿತ್ರದ 50ನೇ ದಿನದ ಸಂಭ್ರಮದಲ್ಲಿ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ನೇರವಾಗಿ ರಾಬರ್ಟ್ ಸಿನಿಮಾ ನಿರ್ಮಾಪಕರಾಗಿದ್ದ ಉಮಾಪತಿ ಶ್ರೀನಿವಾಸ್ ಗೌಡಗೆ ವೇದಿಕೆ ಮೇಲೆಯೇ ಕೊಂಚ ಖಾರವಾಗಿ ಪ್ರತಿಕ್ರಿಸಿದ್ದರು. ಈಗ ಅದೇ ಮಾತಿಗೆ ಉಮಾಪತಿಯೂ ಉತ್ತರಿಸಿದ್ದಾರೆ.
ದರ್ಶನ್ ಹೇಳಿದ್ದೇನು?
ವೇದಿಕೆ ಮೇಲೆ ಮಾತನಾಡಿದ್ದ ದರ್ಶನ್, "ಕಾಟೇರ ಸಿನಿಮಾದ ಯಶಸ್ಸಿನ ಬಗ್ಗೆ ಏನೂ ಹೇಳುವುದಿಲ್ಲ. ಈಗಾಗಲೇ ಮಾತನಾಡಿದ್ದೇವೆ. ಈ ಸಂದರ್ಭದಲ್ಲಿ ಕೆಲವು ಕ್ಲಾರಿಫಿಕೇಷನ್ ಕೊಟ್ಟು ಬಿಡುತ್ತೇನೆ. ಕಾಟೇರ ಚಿತ್ರದ ಕಥೆ ನಾನು ಮಾಡಿಸ್ಧೆ, ಟೈಟಲ್ ನಾನು ಮಾಡಿಸ್ದೆ, ಟೈಟಲ್ ಇಟ್ಟಿದ್ದೇ ನಾನು.. ಎಂದೆಲ್ಲ ಹೇಳ್ತಾರೆ. ಅಯ್ಯೋ ತಗಡೇ... ನಿನಗೆ ರಾಬರ್ಟ್ ಟೈಟಲ್ ಕೊಡಿಸಿರೋದೇ ನಾನು. ನೀನೇ ಟೈಟಲ್ ಮಾಡಿಸ್ದೆ ಎಂದಾದರೆ ಇಂತಹ ಒಳ್ಳೆಯ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದ್ದರೆ ನೀನೇ ಮಾಡಬಹುದಿತ್ತಲ್ವ?" ಎಂದು ಉಮಾಪತಿ ಬಗ್ಗೆ ಮಾತನಾಡಿದ್ದರು.
ದೇಹ ಅಷ್ಟೇ ಅಲ್ಲ, ಮಾತೂ ತೂಕವಾಗಿರಬೇಕು,
ಕಾಟೇರ ಶೀರ್ಷಿಕೆ ಬಗ್ಗೆ ದರ್ಶನ್ ಹೀಗೆ ಓಪನ್ ಆಗಿಯೇ ಮಾತನಾಡುತ್ತಿದ್ದಂತೆ, ಉಮಾಪತಿ ಶ್ರೀನಿವಾಸ್ ಗೌಡ ಸಹ ಪ್ರತಿಕ್ರಿಯಿಸಿದ್ದಾರೆ. "ಈವರೆಗೂ ಇದ್ದಿದ್ದನ್ನೇ ನಾನು ಹೇಳಿದ್ದೇನೆ. ನಂಗೇನು ಭಯ? ಕೈಲಾಗದವನಾ ನಾನು? ನಾನು ಇನ್ನೊಬ್ಬರ ಆಶ್ರಯದಲ್ಲಿ ಬೆಳೆದಿಲ್ಲ. ನಮಗೂ ತಾಕತ್ತಿದೆ. ಯಾವುದೇ ವ್ಯಕ್ತಿ ಏನೇ ಮಾತನಾಡುವುದಿದ್ದರೂ ತೂಕವಾಗಿಯೇ ಮಾತನಾಡಬೇಕಾಗುತ್ತದೆ. ನಮ್ಮ ದೇಹ ತೂಕ ಇದ್ದರೆ ಸಾಲದು, ಮಾತೂ ತೂಕ ಇರಬೇಕು. ಅವರು ನನ್ನ ಬಗ್ಗೆ ಹೇಗೆ ಬೇಕಾದರೂ ಮಾತನಾಡಲಿ ನನಗೆ ಬೇಜಾರಿಲ್ಲ. ನನಗೆ ಬೇರೆ ಕೆಲಸಗಳಿವೆ. ನಾನು ಸೀರಿಯಸ್ ಸಿನಿಮಾ ಮೇಕರ್ ಅಲ್ಲ, ನಾನು ಸೀರಿಯಸ್ ಉದ್ಯಮಿ ಎಂದಿದ್ದಾರೆ.
ನಾನು ಕಾಟೇರ ಸಿನಿಮಾ ನೋಡಿಲ್ಲ, ನನಗದು ಬೇಕಿಲ್ಲ!
ಮುಂದೇನು ಎಂದಾಗ ದರ್ಶನ್ ಮತ್ತು ತರುಣ್ ಅವರ ಬಳಿ ನಾನು ಕೇಳಿದ್ದೆ. ಆಗ ಹೀಗೊಂದು ಕಥೆ ಇದೆ ಎಂದು ಹೇಳಿದ್ರು. ಚೆನ್ನಾಗಿದೆ ಎಂಬ ಕಾರಣಕ್ಕೆ, ನಾನೂ ಒಕೆ ಎಂದಿದ್ದೆ. ಕಥೆ ಮಾಡಲು ಹೋಗ್ತಾರೆ. ನಾನೇಆ ರೆಸಾರ್ಟ್‌ಗೆ ಪೇಮೆಂಟ್ ಸಹ ಮಾಡ್ತಿನಿ. ಕೊನೆಗೆ ವರಮಹಾಲಕ್ಷ್ಮೀ ಹಬ್ಬದ ದಿನ ಪೂಜೆಯೂ ಆಗುತ್ತೆ. ಕೊನೆಗೆ ಏನೇನೋ ವ್ಯತ್ಯಾಸಗಳಾಯ್ತು. ಹಾಗಾಗಿ ಅದು ನಮಗೆ ಆಗಲಿಲ್ಲ. ಕಾಟೇರ ಕಥೆ ಪೂರ್ತಿ ಕೇಳಿದ್ದೇನೆ. ಆದರೆ ಸಿನಿಮಾ ನೋಡಿಲ್ಲ. ನನಗೆ ನನ್ನದೇ ಆದ ಕೆಲಸ ಇದೆ. ಅದಕ್ಕೆ ಅಂತಲೇ ಮೂರು ತಾಸು ಸಿನಿಮಾ ನೋಡುವಷ್ಟು ಟೈಮ್ ಸಹ ನನಗಿಲ್ಲ. ನನಗೂ ಅವಮಾನ ಆಗಿತ್ತು ಅಂತ ಗೊತ್ತಿತ್ತು. ನನಗೆ ಗೌರವ ಸಿಗದೇ ಇರೋವಲ್ಲಿ ನಾನೇಕೆ ಇರಲಿ." ಎಂದಿದ್ದಾರೆ ಉಮಾಪತಿ.
ಮಾಂಸ ತಿಂತೀನಿ ಅಂತ ಮೈಮೇಲೆ ಹಾಕ್ಕೋಳೊಕೆ ಆಗಲ್ಲ..
ಜನ ನೋಡುತ್ತಿರುತ್ತಾರೆ, ಜನ ದಡ್ಡರೇನಲ್ಲ, ಯಾರು ಏನು ಪದ ಬಳಕೆ ಮಾಡ್ತಾರೆ, ಹೇಗೆ ನಡೆದುಕೊಳ್ತಾರೆ ಎಂಬುದನ್ನು ನೋಡ್ತಾರೆ. ಮಾಂಸ ತಿಂತೀನಿ ಅಂತ ಮೈಮೇಲೆ ಮೂಳೆ ಹಾಕಿಕೊಂಡು ತಿರುಗಾಡಿದ್ರೆ ಹೇಗೆ? ತಿನ್ನಬೇಕು ಮನೆಯಲ್ಲಿ ನಾಲ್ಕು ಗೋಡೆ ಮಧ್ಯೆ ತಿನ್ನಬೇಕು. ನಮ್ಮ ಅಭಿರುಚಿ ನಮ್ಮ ಮನೆಯಲ್ಲಿರಬೇಕು. ರೋಡಲ್ಲಿ ಬಂದು ರೋಡೇ ನಂದು ಎಂದ್ರೆ ಆಗುತ್ತಾ? ಸಾರ್ವಜನಿಕ ವೇದಿಕೆಗಳಲ್ಲಿ ತಗ್ಗಿ ಬಗ್ಗೆ ನಡೆದುಕೊಳ್ಳಬೇಕು. ಅವರು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಶ್ರಮವಹಿಸಿದ್ದಾರೆ. ಬಂದಾಗ ಅದನ್ನು ಉಳಿಸಿಕೊಂಡು ಹೋಗಬೇಕು.
ಅವ್ರು ದೊಡ್ಡವರು ಮಾತನಾಡಿದ್ದಾರೆ
ಸಿನಿಮಾ ಗೆದ್ದಿತು ಎಂದಾಗ, ಅದೇ ಜೀವನ ಅಲ್ಲ. ಈಗ ನಾನು ಈ ರೀತಿ ಸಾಕಷ್ಟು ನೋಡಿದ್ದೇನೆ. ಗೆದ್ದಾಗ ಜನ ಶಿಳ್ಳೆ ಹೊಡೀತಾರೆ, ಸೋತಾಗ ಇನ್ನೊಂದು ಅಂತಾರೆ. ಹಾಗಾಗಿ ಇವತ್ತು ಸಾಯುವವರೆಗೂ ಗೆಲುವಿರಲ್ಲ, ಸಾಯುವರೆಗೂ ಸೋಲಿರಲ್ಲ. ಜೀವನದಲ್ಲಿ ಏಳುಬೀಳು ಇದ್ದೇಯಿರುತ್ತದೆ. ಈ ರೀತಿ ಮಾತನಾಡೋದಲ್ಲ. ನಾನು ನಂಬಿರೋದು ಏನೆಂದರೆ, ತಾತ್ಕಾಲಿಕ ವೇದಿಕೆಗೆ ತಾತ್ಕಾಲಿಕ ಪ್ರಶಸ್ತಿಗೆ ಪರ್ಮನೆಂಟ್ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅವ್ರು ದೊಡ್ಡವರು ಮಾತನಾಡಿದ್ದಾರೆ. ಅದಕ್ಕೆ ಅವರೇ ಜವಾಬ್ದಾರರಾಗುತ್ತಾರೆ" ಎಂದಿದ್ದಾರೆ ಉಮಾಪತಿ.
