ಕಾಲಿವುಡ್‌ಗೆ ಎಂಟ್ರಿ ನೀಡಿದ ರೂಪೇಶ್ ಶೆಟ್ಟಿ; ಸನ್ನಿಧಾನಂ ಪಿಒ ಸಿನಿಮಾದಲ್ಲಿ ಯೋಗಿಬಾಬು ಜತೆ ಶೆಟ್ರು ಮಿಂಚಿಂಗ್
Sannidhanam PO: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ, ಕನ್ನಡ, ತುಳು, ಕೊಂಕಣಿ ಚಿತ್ರನಟ ಮತ್ತು ನಿರ್ದೇಶಕ ರೂಪೇಶ್ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿ ಅವಕಾಶ ಪಡೆದಿದ್ದಾರೆ. ಯೋಗಿಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ.

ಬೆಂಗಳೂರು: ಕನ್ನಡ, ತುಳು, ಕೊಂಕಣಿ ಚಿತ್ರನಟ ರೂಪೇಶ್ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿ ಅವಕಾಶ ಪಡೆದಿದ್ದಾರೆ. ಯೋಗಿಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಸರ್ಕಸ್ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸಕ್ಸಸ್ ಕಂಡಿದ್ದ ರೂಪೇಶ್ ಶೆಟ್ಟಿ ಕನ್ನಡದಲ್ಲಿ ಅಧಿಪತ್ರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಧಿಪತ್ರ ಚಿತ್ರದ ಜೊತೆಗೆ ಮತ್ತೆರೆಡು ಹೊಸ ಕನ್ನಡ ಚಿತ್ರಗಳಿಗೂ ರೂಪೇಶ್ ಸಹಿಹಾಕಿದ್ದಾರೆ.
ಸನ್ನಿಧಾನಂ ಪಿಒ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿರುವ ರಾಕ್ ಸ್ಟಾರ್ ರೂಪೇಶ್, ಸನ್ನಿಧಾನಮ್ ಪಿಒ ಎಂಬ ತಮಿಳು ಸಿನಿಮಾ ನಟಿಸುತ್ತಿದ್ದಾರೆ. ತಮಿಳು ಸಿನಿರಂಗದ ಹಾಸ್ಯ ದಿಗ್ಗಜ ಯೋಗಿಬಾಬು ಈ ಸನ್ನಿಧಾನಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜತೆ ನಟಿಸುವ ಖುಷಿಯಲ್ಲಿದ್ದಾರೆ ರೂಪೇಶ್ ಶೆಟ್ಟಿ. ಅಂದಹಾಗೆ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಕೂಡ ಇದ್ದಾರೆ.
ಸನ್ನಿಧಾನಂ ಪಿಒ ಸಿನಿಮಾವು ಶಬರಿಮಲೆಯ ಕಥೆ ಹೊಂದಿದೆ. ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇದು ಮಗುವಾಗಿದ್ದಾಗ ನಾಪತ್ತೆಯಾದ ಮಗನನ್ನು ಹುಡುಕುವ ತಾಯಿಯ ಕಥೆ ಇದರಲ್ಲಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಈ ಸಿನಿಮಾದಲ್ಲಿ ನಟ ರೂಪೇಶ್ ಶೆಟ್ಟಿ ನಟಿಸುವುದನ್ನು ನಿರ್ಮಾಪಕರು ಖಚಿತಪಡಿಸಿದರು. ನಟ ಈಗ ಸನ್ನಿಧಾನಂ ಪಿಒ ಸೆಟ್‌ಗೆ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ನಟ ಮತ್ತು ಹಾಸ್ಯನಟ ಯೋಗಿ ಬಾಬು ಅವರೊಂದಿಗೆ ಚಿತ್ರದ ಶೂಟಿಂಗ್ ಸ್ಥಳದಿಂದ ರೂಪೇಶ್ ಶೆಟ್ಟಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ಸಂತೋಷದ ದಿನ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸದ್ಯ ರೂಪೇಶ್ ಶೆಟ್ಟಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಯೋಗಿ ಬಾಬು ಜತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯೋಗಿ ಬಾಬು ಕೆಂಪು ಲುಂಗಿ ಮತ್ತು ನೀಲಿ ಅಂಗಿ ತೊಟ್ಟಿದ್ದಾರೆ. ರೂಪೇಶ್ ಶೆಟ್ಟಿ ಎಂದಿನಂತೆ ನೀಲಿ ಡೆನಿಮ್ ಜೀನ್ಸ್ ಮತ್ತು ಕಪ್ಪು ಶರ್ಟ್ ಧರಿಸಿದ್ದಾರೆ. "ಇಂದು ತುಂಬಾ ಖುಷಿಯ ದಿವಸ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ “ಸನ್ನಿಧಾನಮ್ P. O” ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಜತೆ ನಟಿಸುತ್ತಿದ್ದೇನೆ. ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ನಿಮ್ಮೆಲ್ಲರ ಆಶೀರ್ವಾದ ಇರಲಿ" ಎಂದು ರೂಪೇಶ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಧುರಾವ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಅಮುದ ಸಾರಥಿ ನಿರ್ದೇಶನ ಮಾಡಲಿದ್ದಾರೆ. ಸನ್ನಿಧಾನಂ ಪಿಒ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಇದೇ ಜೂನ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸೂಚನೆಗಳಿವೆ. ಕನ್ನಡ ತಮಿಳು ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ ಸನ್ನಿಧಾನಂ ಪಿಒ ಸಿನಿಮಾ ನಿರ್ಮಾಣವಾಗುತ್ತಿದೆ.
ತುಳು ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ, ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದವರು ರೂಪೇಶ್ ಶೆಟ್ಟಿ. ಬಿಗ್‌ಬಾಸ್ ಕನ್ನಡದಲ್ಲೂ ಗೆಲುವು ಪಡೆದಿದ್ದರು. ಬಿಗ್ ಬಾಸ್ ವಿನ್ನರ್ ಆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿನ ಅವಕಾಶ ಪಡೆದರು. ತುಳು, ಕನ್ನಡ ಮಾತ್ರವಲ್ಲ ತೆಲುಗು, ಕೊಂಕಣಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರೂಪೇಶ್ ಇದೀಗ ತಮಿಳು ಚಿತ್ರರಂಗದಲ್ಲೂ ಅವಕಾಶ ಪಡೆದಿದ್ದಾರೆ.
