ನಟ ಡಾಲಿ ಧನಂಜಯ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರ? ಟಗರು ಪಲ್ಯ ನಿರ್ದೇಶಕರಿಂದ ಬಂತು ಮಾಹಿತಿ
Daali Dhananjay: ಲಿಡ್ಕರ್ ರಾಯಭಾರಿಯಾಗಿರುವ ಕನ್ನಡ ಸಿನಿಮಾ ನಟ ಡಾಲಿ ಧನಂಜಯ್ ಅವರು ಲೋಕ ಸಭೆ ಚುನಾವಣೆಗೆ ಮೈಸೂರಿನಿಂದ ಸ್ಪರ್ಧಿಸುವ ಕುರಿತು ವದಂತಿಗಳಿದ್ದವು. ಇದೀಗ ಈ ಸುದ್ದಿಗೆ ಸ್ವತಃ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಟಗರು, ಬಡವ ರಾಸ್ಕಲ್, ಗುರುದೇವ ಹೊಯ್ಸಳ, ಹೆಡ್‌ಬುಷ್, ಡಾಲಿ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟರಾಗಿರುವ ಡಾಲಿ ಧನಂಜಯ್ ಅವರು ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಗೆ ನಿಲ್ಲುತ್ತಾರೆ ಎಂಬ ವದಂತಿಗಳಿದ್ದವು. ಇದೀಗ ಈ ಕುರಿತು ಟಗರು ಪಲ್ಯದಂತಹ ಸಿನಿಮಾದ ನಿರ್ಮಾಣ ಮಾಡಿರುವ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ. "ಹೈದರಾಬಾದ್‌ಗೆ ಹೋಗಿ ಬರುವಷ್ಟರಲ್ಲಿ ಇಂತಹ ಊಹಾಪೋಹ ಎದ್ದಿದೆ. ನನಗೇ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಮಾಧ್ಯಮದವರೇ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸಿಬಿಟ್ಟಿದ್ದೀರಿ" ಎಂದು ಹೇಳಿದ್ದಾರೆ. ಈ ಮೂಲಕ ಈ ವದಂತಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಫೋಟೋ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾಲಿ ಧನಂಜಯ್ ಅವರು ಈ ಕುರಿತ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. "ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡ್ತಾ ಇದ್ದೇನೆ. ಜನರಿಂದ ದೊರಕಿರುವ ಪ್ರೀತಿ ದೊಡ್ಡದು. ಸಿನಿಮಾ ಇರಲಿ ಯಾವುದೇ ಕ್ಷೇತ್ರವಿರಲಿ ಯಾವುದೇ ಕ್ಷೇತ್ರಕ್ಕೆ ಹೋದರೂ ಚೆನ್ನಾಗಿ ಕೆಲಸ ಮಾಡಬೇಕು. ನಾನು ಸಿನಿಮಾ ಆಯ್ಕೆ ಮಾಡಿಕೊಂಡಿದ್ದೇನೆ. ಸಾಕಷ್ಟು ಕನಸಿನಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಇದ್ದುಕೊಂಡೆ ಕೆಲಸ ಮಾಡಬಹುದು. ಎಲೆಕ್ಷನ್ ಕುರಿತು ಯಾವುದೇ ಚರ್ಚೆ ನಡೆದಿಲ್ಲ" ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ನಾನು ಲಿಡ್ಕರ್ (ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ)ಕ್ಕೆ ರಾಯಭಾರಿಯಾಗಿದ್ದೇನೆ. ಇದು ಬಡವರ ಬದುಕಿಗೆ ಸಂಬಂಧಪಟ್ಟ ವಿಚಾರ. ಇದರ ಹಿಂದೆ ಪಾಲಿಟಿಕ್ಸ್ ಇಲ್ಲ. ನಾನು ಸಿನಿಮಾ ಕ್ಷೇತ್ರಕ್ಕೆ ಸೀಮಿತ. ಪಾಲಿಟಿಕ್ಸ್ ಬೇರೆ, ಸಿನಿಮಾ ಬೇರೆ. ಈ ಹಿಂದೆಯೂ ನಾನು ಚುನಾವಣೆ ಪ್ರಚಾರಕ್ಕೆ ಹೋಗಿಲ್ಲ. ಎಲ್ಲಾ ಪಾರ್ಟಿಯಲ್ಲೂ ನನಗೆ ಪರಿಚಿತರು, ಸ್ನೇಹಿತರು ಇದ್ದಾರೆ. ಈ ಬಾರಿ ಎಲೆಕ್ಷನ್ ಪ್ರಚಾರ ಮಾಡುವ ಕುರಿತು ಯೋಚನೆ ಮಾಡಿಲ್ಲ. ಕೆಳವರ್ಗದ ಜನರನ್ನು ಮೇಲಕ್ಕೆ ಎತ್ತುವವರು ನಿಜವಾದ ನಾಯಕರು" ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಫೋಟೋ ಸಿನಿಮಾದ ಟ್ರೇಲರ್ ಬಿಡುಗಡೆ
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಕಷ್ಟಗಳನ್ನು ಆಧರಿಸಿ ಫೋಟೋ ಎಂಬ ಸಿನಿಮಾ ಮಾಡಲಾಗಿದೆ. ಉತ್ಸವ್ ಗೋನಾವರ ನಿರ್ದೇಶನದ ಈ ಸಿನಿಮಾವನ್ನು ಪ್ರಕಾಶ್ ರಾಜ್ ಮತ್ತು ಮಸಾರಿ ಟಾಕೀಸ್ ನಿರ್ಮಿಸಿದೆ. ಫೋಟೋ ಸಿನಿಮಾ ಮಾರ್ಚ್ 15ರಂದು ಬಿಡುಗಡೆಯಾಗಲಿದೆ. ಈ ಟ್ರೇಲರ್ ನರೇಂದ್ರ ಮೋದಿಯವರು 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡುವ ಧ್ವನಿಯಿಂದ ಆರಂಭವಾಗುತ್ತದೆ. ಆತನಿಗೆ ಹುಚ್ಚು ಹಿಡಿದಿದೆಯೇ 21 ದಿನಗಳ ಕಾಲ ಲಾಕ್‌ಡೌನ್ ಮಾಡಲು ಎಂದು ಕಾರ್ಮಿಕನೊಬ್ಬನ ಸ್ವಗತವೂ ಇದೆ. ಕೆಲಸಗಾರರು ಕೆಲಸವಿಲ್ಲದೆ ವಲಸೆ ಹೋಗುವ ಚಿತ್ರಣವೂ ಇದೆ.
ವಿಭಾಗ