Actor Darshan Case: ಕಾಣೆಯಾದ 2 ಮೊಬೈಲ್ ಫೋನ್‌ಗಳಿಗಾಗಿ ಸುಮನಹಳ್ಳಿ ಸಮೀಪದ ಮೋರಿ ನೀರಲ್ಲಿ ಪೊಲೀಸರ ಶೋಧ
Kannada Actor Darshan Case: ಕನ್ನಡ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಣೆಯಾದ ಎರಡು ಮೊಬೈಲ್ ಫೋನ್‌ಗಳಿಗಾಗಿ ಸುಮನಹಳ್ಳಿ ಸಮೀಪದ ಮೋರಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಹತ್ಯೆಯಾದ ರೇಣುಕಾ ಸ್ವಾಮಿ ಮತ್ತು ಆರೋಪಿಗೆ ಸೇರಿದ ಒಟ್ಟು ಎರಡು ಮೊಬೈಲ್ ಫೋನ್‌ಗಳಿಗಾಗಿ ಪೊಲೀಸರು ಸೋಮವಾರ ಸುಮನಹಳ್ಳಿ ಸಮೀಪದ ಮೋರಿ ನೀರಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೊಲೆ ಬಳಿಕ ರೇಣುಕಾಸ್ವಾಮಿಯ ಶವವನ್ನು ಬಿಸಾಕಿದ ಸ್ಥಳದ ಆಸುಪಾಸಿನಲ್ಲಿ ಪೊಲೀಸರು ಮೊಬೈಲ್ ಫೋನ್‌ಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಮತ್ತು ಇತರರು ಸೇರಿ ರೇಣುಕಾಸ್ವಾಮಿ ಹತ್ಯೆಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸೋಮವಾರ ರೇಣುಕಾಸ್ವಾಮಿಯ ಶವವನ್ನು ಎಸೆದ ಸುಮನಹಳ್ಳಿ ಬಳಿಯ ಮೋರಿ ನೀರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎರಡು ಮೊಬೈಲ್ ಫೋನ್‌ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಮೊಬೈಲ್ ಫೋನ್‌ಗಳು ದೊರಕಿದರೆ, ಈ ಫೋನ್‌ಗಳ ಡೇಟಾವನ್ನು ರಿಟ್ರೈವ್ ಮಾಡಿದರೆ ಮಹತ್ವದ ಮಾಹಿತಿ ದೊರಕುವ ನಿರೀಕ್ಷೆಯಿಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಟನ ಅಭಿಮಾನಿಯಾಗಿದ್ದ 33 ವರ್ಷದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ಮತ್ತು ಅವರ 12 ಮಂದಿ ಆಪ್ತರನ್ನು ಮಂಗಳವಾರ ಬಂಧಿಸಲಾಗಿದೆ. ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಎಂಬವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕೆ ಕುಪಿತಗೊಂಡ ದರ್ಶನ್ ಮತ್ತು ಇತರರು ಈ ಕೊಲೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟ್ರು ಸಾಕ್ಷ್ಯ ಸಂಗ್ರಹಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಬಿಸಿ ಪಾಟೀಲ್ ಪ್ರತಿಕ್ರಿಯೆ
ಕೊಲೆ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಕುರಿತು ಮಾಜಿ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾಧ್ಯಮಗಳು ಇವರಿಗೆ ದರ್ಶನ್ ಕುರಿತು ಪ್ರಶ್ನೆ ಕೇಳಿದಾಗ "ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ. "ರೇಣುಕಾಸ್ವಾಮಿ ಹತ್ಯೆ ದುರದೃಷ್ಟಕರ ಘಟನೆ. ಇಂತಹ ಕೃತ್ಯ ಅತ್ಯಂತ ಹೇಯವಾಗಿದ್ದು, ಕ್ಷಮಿಸಲಾಗದ ತಪ್ಪಾಗಿದೆ. ಹತ್ಯೆಯಾದ ರೇಣುಕಾಸ್ವಾಮಿಯ ಜೀವ ವಾಪಸ್ ಬರುವುದಿಲ್ಲ. ಇವರ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸವಾಗಬೇಕು. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕಾನೂನು ಎಲ್ಲಕ್ಕಿಂತ ಮಿಗಿಲು. ಕಾನೂನಿನ ಪ್ರಕಾರ ಈ ಅಪರಾಧದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು" ಎಂದು ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.