Actor Darshan Case: ನ್ಯಾಯಾಧೀಶರ ಮುಂದೆ ಇಂದು ನಟ ದರ್ಶನ್ ಮತ್ತು ಇತರೆ ಆರೋಪಿಗಳು ಹಾಜರು; ಮನೆ ಊಟ ದೊರಕಬಹುದೇ?
Actor Darshan Case: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಇಂದು ಮುಗಿಯುತ್ತಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಮನೆ ಊಟ ಬೇಡಿಕೆಗೆ ಸಂಬಂಧಪಟ್ಟ ರಿಟ್ ಅರ್ಜಿಯ ವಿಚಾರಣೆಯೂ ನಡೆಯಲಿದೆ. ದರ್ಶನ್‌ಗೆ ಜಾಮೀನು ನೀಡಬಾರದು ಎಂದು ಪೊಲೀಸರು ರಿಮಾಂಡ್ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕನ್ನಡ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಇಂದು ಮುಗಿಯುತ್ತಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಆದರೆ, ಇವರ ನ್ಯಾಯಾಂಗ ಬಂಧನ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಜೂನ್ 11ರಂದು ನಟ ದರ್ಶನ್ ಮತ್ತು ಇತರರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಹೀಗಾಗಿ, ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಕಳೆದ ಬಾರಿಯಂತೆ ಈ ಬಾರಿಯೂ ದರ್ಶನ್ ಅವರನ್ನು ಜಡ್ಜ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತದೆ. ನಟ ದರ್ಶನ್‌ಗೆ ಜಾಮೀನು ದೊರಕುವುದು ಕಷ್ಟ ಎನ್ನಲಾಗಿದೆ. ದರ್ಶನ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ವಿದೇಶಕ್ಕೆ ಪರಾರಿಯಾಗಬಹುದು ಎಂಬ ಆತಂಕ ಪೊಲೀಸರಿಗೆ ಇದೆ. ದರ್ಶನ್ ಅಥವಾ ದರ್ಶನ್ ಪರ ವಕೀಲರು ನ್ಯಾಯಾಧೀಶರ ಮುಂದೆ ಊಟದ ತೊಂದರೆ ಕುರಿತು ಮನವಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮನೆ ಊಟ ಬೇಕೆಂದು ರಿಟ್ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಅಪರಾಹ್ನ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ದರ್ಶನ್‌ಗೆ ಏಕೆ ಜಾಮೀನು ನೀಡಬಾರದು?
ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಏಕೆ ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಬಳಿಕ ದರ್ಶನ್ ಮತ್ತು ಇತರೆ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದರು. ದರ್ಶನ್ ಅವರಿಗೆ ಇರುವ ಪ್ರಭಾವವೂ ತುಂಬಾ ದೊಡ್ಡದು. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎನ್ನುವುದು ಪೊಲೀಸರ ಅಭಿಪ್ರಾಯ.
ತಾವು ಮಾಡುತ್ತಿರುವುದು ತಪ್ಪು, ಅಪರಾಧ ಎಂದು ಗೊತ್ತಿದ್ದರೂ ಈ ಕೃತ್ಯ ಎಸಗಲಾಗಿದೆ. ಹತ್ಯೆ ಬಳಿಕ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶ ಮಾಡಲಾಗಿದೆ. ಸಾಕ್ಷ್ಯನಾಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟೇ ಎಫ್‌ಎಸ್‌ಎಲ್ ವರದಿಗಳು ಬರಬೇಕಿದೆ. ಜಾಮೀನು ಎಲ್ಲಾದರೂ ಇವರಿಗೆ ಸಿಕ್ಕರೆ ಸಾಕ್ಷ್ಯ ನಾಶ ಮಾಡುತ್ತಾರೆ. ಜಾಮೀನು ದೊರಕಿದರೆ ವಿಚಾರಣೆಯಿಂದ ಪಾರಾಗುವ ಕುರಿತು ಪ್ಲ್ಯಾನ್ ಮಾಡಬಹುದು. ದರ್ಶನ್ ಅವರಿಗೆ ಹಣ ಮತ್ತು ಅಭಿಮಾನಿಗಳ ಪ್ರಭಾವವೂ ಇದೆ. ಆರೋಪಿಗಳು ವಿದೇಶಕ್ಕೂ ಪರಾರಿಯಾಗಬಹುದು. ಜಾಮೀನು ದೊರಕಿದರೆ ತನಿಖೆ ಮೇಲೆ ಪರಿಣಾಮ ಬೀರಬಹುದು ಇತ್ಯಾದಿ ಕಾರಣಗಳನ್ನು ನೀಡಿ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಶ್ಲೀಲ ಸಂದೇಶ ಕಳುಹಿಸುವವರಿಗೆ ಎಚ್ಚರಿಕೆ: ಚಂದನ್ ಶೆಟ್ಟಿ
ದರ್ಶನ್ ಪ್ರಕರಣವನ್ನು ಅಶ್ಲೀಲ ಸಂದೇಶ ಕಳುಹಿಸುವವರು ಎಚ್ಚರಿಕೆಯಾಗಿ ಪರಿಗಣಿಸಬೇಕು ಎಂದು ರಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಕಾರಾತ್ಮಕ ಸಂದೇಶಗಳು, ಕೆಟ್ಟ ಸಂದೇಶಗಳು ಹೆಚ್ಚಾಗುತ್ತಿರುವುದರ ವಿರುದ್ಧ ಚಂದನ್ ಶೆಟ್ಟಿ ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದ ಪ್ರಚಾರದ ವೇಳೆ ಸೋಷಿಯಲ್ ಮೀಡಿಯಾದ ಕುರಿತು ಮಾತನಾಡಿದ್ದಾರೆ.
"ಸೋಷಿಯಲ್ ಮೀಡಿಯಾದಿಂದ ಇಂದು ಸಾಕಷ್ಟು ಉಪಯೋಗ ಇದೆ. ಆದರೆ, ಇದನ್ನು ಕೆಟ್ಟದ್ದಾಗಿ ಬಳಸಿಕೊಳ್ಳಲಾಗುತ್ತದೆ. ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಕೆಟ್ಟದ್ದಾಗಿ ಸಂದೇಶ ಕಳುಹಿಸುತ್ತಾರೆ. ಹೆಣ್ಣು ಮಕ್ಕಳ ಬಾಡಿ ಪಾರ್ಟ್ ಬಗ್ಗೆ ಮಾತನಾಡುತ್ತಾರೆ. ನಾವು ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಏನೂ ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿ ಇದೆ. ಇದಕ್ಕೆ ಭಾರತ ಸರಕಾರವೇ ಕಡಿವಾಣ ಹಾಕಬೇಕಿದೆ" ಎಂದು ಚಂದನ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.