ಕನ್ನಡ ಸುದ್ದಿ  /  ಮನರಂಜನೆ  /  ನಟ ದರ್ಶನ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106; ಅಭಿಮಾನಿಗಳಿಗೆ ಧೈರ್ಯ ತುಂಬಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ದರ್ಶನ್‌

ನಟ ದರ್ಶನ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106; ಅಭಿಮಾನಿಗಳಿಗೆ ಧೈರ್ಯ ತುಂಬಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ದರ್ಶನ್‌

Kannada Actor Darshan: ಕನ್ನಡ ನಟ ದರ್ಶನ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಎಲ್ಲರಿಗೂ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.

ಅಭಿಮಾನಿಗಳಿಗೆ ಧೈರ್ಯ ತುಂಬಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ದರ್ಶನ್‌
ಅಭಿಮಾನಿಗಳಿಗೆ ಧೈರ್ಯ ತುಂಬಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ದರ್ಶನ್‌

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ. ಇದೀಗ ಇವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಿ ಬ್ಯಾರಕ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸ್‌ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಪೊಲೀಸರು ಇಂದು ದರ್ಶನ್‌ ಮತ್ತು ಇತರೆ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪೊಲೀಸರು ಹೆಚ್ಚಿನ ಅವಧಿಗೆ ಕಸ್ಟಡಿಗೆ ಕೇಳದೆ ಇದ್ದ ಕಾರಣ ನ್ಯಾಯಾಲಯವು ದರ್ಶನ್‌ ಮತ್ತು ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೀಗ ಇವರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ.

ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆ

ಕನ್ನಡ ನಟ ಮತ್ತು ರೇಣುಕಾ ಸ್ವಾಮಿ ಹತ್ಯೆ ಆರೋಪಿ ದರ್ಶನ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಎರಡು ದಿನದ ಹಿಂದೆ ಜೈಲು ಸೇರಿರುವ ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ಸಂಖ್ಯೆ 6024 ನೀಡಲಾಗಿತ್ತು. ಆರೋಪಿ ಧನರಾಜ್​ಗೆ 6107, ಆರೋಪಿ ವಿನಯ್​ಗೆ 6108, ಆರೋಪಿ ಪ್ರದೂಶ್​ಗೆ 6109 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.

ಪೊಲೀಸ್‌ ವ್ಯಾನಲ್ಲೇ ಅಭಿಮಾನಿಗಳಿಗೆ ಕೈಬೀಸಿದ ದರ್ಶನ್‌

ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪರಪ್ಪನ ಅಗ್ರಹಾರದತ್ತ ತೆರಳುವ ಸಂದರ್ಭದಲ್ಲಿ ನಟ ದರ್ಶನ್‌ ಇದೇ ಮೊದಲ ಬಾರಿಗೆ ರಿಯಾಕ್ಷನ್‌ ನೀಡಿದ್ದಾರೆ. ತಮ್ಮ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ್ದಾರೆ. "ನನಗೆ ಏನೂ ಆಗದು, ಧೈರ್ಯವಾಗಿರಿ" ಎಂದು ಫ್ಯಾನ್ಸ್‌ಗೆ ತಿಳಿಸಿದ್ದಾರೆ. ಇವರು ಫ್ಯಾನ್ಸ್‌ ಕಡೆಗೆ ಫ್ಲಯಿಂಗ್‌ ಕಿಸ್‌ ನೀಡಿ ಧೈರ್ಯ ತುಂಬಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸರಕಾರದ ಪರ ಪ್ರಸನ್ನ ಕುಮಾರ್‌ ಮತ್ತು ಅವರ ಟೀಮ್‌ ಹಾಜರಿತ್ತು. ಇದೇ ಸಮಯದಲ್ಲಿ ಆರೋಪಿಗಳ ಪರ ವಕೀಲರು ಹಾಜರಿದ್ದರು. ಪೊಲೀಸರಿಂದ ಏನಾದರೂ ತೊಂದರೆ ಆಯ್ತೇ ಎಂದು ನ್ಯಾಯಾಧೀಶರು ಕೇಳಿದಾಗ ದರ್ಶನ್‌ "ಇಲ್ಲ ಸ್ವಾಮಿ ಏನೂ ತೊಂದರೆ ಆಗಿಲ್ಲ" ಎಂದು ವಿನಮ್ರವಾಗಿ ಹೇಳಿದ್ದಾರೆ. ಬೇರೆ ಏನಾದರೂ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವುದೇ ಎಂದು ಕೇಳಿದ್ದಕ್ಕೂ "ಇಲ್ಲ" ಎಂದು ದರ್ಶನ್‌ ಉತ್ತರಿಸಿದ್ದಾರೆ.

ಅಭಿಮಾನಿಗಳಿಗೆ ಕೈಬೀಸಿದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಷ್ಟದ ಸಮಯದಲ್ಲೂ ಕೂಡ ನಿಮ್ಮನ್ನ ಪ್ರೀತಿಸೋ ಸೆಲೆಬ್ರಿಟಿಗಳಿಗೆ ಕೈ ಮುಗಿದ ನಮ್ಮ ಪ್ರೀತಿಯ ಡಿಬಾಸ್ ಎಂದು ದರ್ಶನ್‌ ಕೈಬೀಸಿದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಅಪಹರಣ ಮಾಡಿ ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ಶವವನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿ ದೊಡ್ಡ ಮೋರಿಯಲ್ಲಿ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಪಾಲ್ಗೊಳ್ಳುವಿಕೆ ಜಾಹೀರಾದ ಬಳಿಕ ರಾಷ್ಟ್ರಪಟ್ಟದಲ್ಲಿ ಈ ಪ್ರಕರಣ ಸುದ್ದಿಯಾಗುತ್ತಿದೆ. ಇದೀಗ ದರ್ಶನ್‌ ಮತ್ತು ಇತರೆ ಆರೋಪಿಗಳು ನ್ಯಾಯಾಂಗ ಬಂಧನದ ಮೂಲಕ ಜೈಲು ಸೇರಿದ್ದಾರೆ.