Dr Vishnuvardhan: ಮೈಸೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣವಾದ್ರೂ ಅಭಿಮಾನಿಗಳಿಗಿಲ್ಲ ಖುಷಿ; ಮತ್ತೆ ಕಾನೂನು ಹೋರಾಟಕ್ಕೆ ನಿರ್ಧಾರ
ಕನ್ನಡ ಸುದ್ದಿ  /  ಮನರಂಜನೆ  /  Dr Vishnuvardhan: ಮೈಸೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣವಾದ್ರೂ ಅಭಿಮಾನಿಗಳಿಗಿಲ್ಲ ಖುಷಿ; ಮತ್ತೆ ಕಾನೂನು ಹೋರಾಟಕ್ಕೆ ನಿರ್ಧಾರ

Dr Vishnuvardhan: ಮೈಸೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣವಾದ್ರೂ ಅಭಿಮಾನಿಗಳಿಗಿಲ್ಲ ಖುಷಿ; ಮತ್ತೆ ಕಾನೂನು ಹೋರಾಟಕ್ಕೆ ನಿರ್ಧಾರ

ಡಾ. ವಿಷ್ಣುವರ್ಧನ್‌ ನಿಧನರಾಗಿ 14 ವರ್ಷಗಳಾಗುತ್ತಾ ಬಂದರೂ ಅವರ ಸ್ಮಾರಣ ನಿರ್ಮಾಣ ವಿಚಾರದ ಗೊಂದಲ ಇನ್ನೂ ಇತ್ಯರ್ಥವಾಗಿಲ್ಲ. ಅಂತ್ಯಕ್ರಿಯೆ ನಡೆದ ಅಭಿಮಾನ್‌ ಸ್ಟುಡಿಯೋದಲ್ಲಿ 20 ಗುಂಟೆ ಜಾಗ ನೀಡುವಂತೆ ಮನವಿ ಮಾಡಿ ವಿಷ್ಣು ಅಭಿಮಾನಿಗಳು ಇಂದಿಗೂ ಹೋರಾಟ ಮಾಡುತ್ತಾ ಬಂದಿದ್ದಾರೆ.

ವಿಷ್ಣುವರ್ಧನ್‌ ಸ್ಮಾರಕ ಸಂಬಂಧ ಮತ್ತೆ ಕಾನೂನು ಹೋರಾಟಕ್ಕೆ ಮುಂದಾದ ಅಭಿಮಾನಿಗಳು
ವಿಷ್ಣುವರ್ಧನ್‌ ಸ್ಮಾರಕ ಸಂಬಂಧ ಮತ್ತೆ ಕಾನೂನು ಹೋರಾಟಕ್ಕೆ ಮುಂದಾದ ಅಭಿಮಾನಿಗಳು

ಸಾಹಸಸಿಂಹ ಡಾ ವಿಷ್ಣುವರ್ಧನ್‌ ನಮ್ಮನ್ನು ಅಗಲಿ 14 ವರ್ಷಗಳಾಗುತ್ತಾ ಬಂದಿದೆ. ಇಷ್ಟು ವರ್ಷಗಳ ಹೋರಾಟದ ಬಳಿಕ ಇದೇ ವರ್ಷ ಜನವರಿಯಲ್ಲಿ ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ ಆಗಿದೆ. ಆದರೆ ಅಭಿಮಾನಿಗಳು ಮಾತ್ರ ಈ ವಿಚಾರದ ಬಗ್ಗೆ ಖುಷಿ ಆಗಿಲ್ಲ. ವಿಷ್ಣು ಸ್ಮಾರಕದ ವಿಚಾರವಾಗಿ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಅಭಿಮಾನ್‌ ಸ್ಟುಡಿಯೋದಲ್ಲಿ ಭೂಮಿ ನೀಡಲು ಮನವಿ

ವಿಷ್ಣು ಅವರು ನಿಧನರಾದಾಗ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಅಂತ್ಯಕ್ರಿಯೆ ಮಾಡಲಾದ ಸ್ಥಳದಲ್ಲೇ ಅವರ ಸಮಾಧಿ ನಿರ್ಮಾಣ ಆಗಬೇಕೆಂಬುದು ವಿಷ್ಣು ಅಭಿಮಾನಿಗಳ ಒತ್ತಾಯ. ಆದ್ದರಿಂದ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿ ಸ್ಥಾಪಿಸಲು ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕೆಂದು ಕೋರಿ ಡಾ. ವಿಷ್ಣು ಸೇನಾ ಸಮಿತಿ 2015 ರಲ್ಲಿ ಕೇಸ್‌ ದಾಖಲಿಸಿತ್ತು. ಜೊತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ನೀಡಿರುವಂತಹ ಜಮೀನು ಅರಣ್ಯ ಇಲಾಖೆಗೆ ಒಳಪಟ್ಟಿರುತ್ತದೆ ಮತ್ತು ಅವರು ನಿಧನರಾದ ನಂತರ ಅವರ ಮಕ್ಕಳು, ಮೊಮ್ಮಕ್ಕಳು 10 ಎಕರೆ ಜಾಗ ಮಾರಾಟ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ವಾದ ಮಂಡಿಸಿತ್ತು.

ದಿವಂಗತ ನಟ ಬಾಲಕೃಷ್ಣ ಅವರಿಗೆ ಸರ್ಕಾರ ನೀಡಿದ್ದ ಭೂಮಿ

ಈ ಸಂಬಂಧ ವಾದ ವಿವಾದ ಆಲಿಸಿದ್ದ ನ್ಯಾಯಾಲಯವು ಈ ವಿಚಾರದಲ್ಲಿ ಡಾ.ವಿಷ್ಣು ಸೇನಾ ಸಮಿತಿಗೆ ಯಾವ ಹಕ್ಕು ಇಲ್ಲವೆಂದು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಸರ್ಕಾರದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ನಂತರ ನ್ಯಾಯಾಧೀಶರ ಸೂಚನೆ ಮೇರೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನಟ ಬಾಲಕೃಷ್ಣ ಅವರ ಕಲಾ ಸೇವೆಗೆ ಮೆಚ್ಚಿ ಸರ್ಕಾರವು ನೀಡಿದ್ದ 20 ಎಕರೆಯ ಭೂಮಿಯನ್ನು ಅವರ ಮಕ್ಕಳು ಖಾಸಗಿ ಸ್ವತ್ತಿನಂತೆ ಭಾವಿಸಿ 10 ಎಕರೆಯನ್ನು ಮಾರಾಟ ಮಾಡಿರುತ್ತಾರೆ. ಇದು ಸರ್ಕಾರದ ಭೋಗ್ಯ ಹಕ್ಕುಗಳ ಕಾಯ್ದೆಗೆ ವಿರುದ್ಧವಾಗಿರುತ್ತದೆ. ಮತ್ತು ಸದರಿ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಜಾಗದ ಅನುದಾನ ಸಹ ತಪ್ಪಾಗಿದ್ದು ಅದನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಡಾ.ವಿಷ್ಣು ಸೇನಾ ಸಮಿತಿ ಬಂದಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆ ಮತ್ತು ಹೋರಾಟಕ್ಕೆ ಡಾ ವಿಷ್ಣು ಸೇನಾ ಸಮಿತಿಯು ಚಾಲನೆ ನೀಡಲಿದೆ ಎಂದು ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ.

ಡಾ ವಿಷ್ಣುವರ್ಧನ್‌ 30 ಡಿಸೆಂಬರ್‌ 2009 ರಂದು ನಿಧನರಾದರು. ಅಂದಿನಿಂದ ಇದುವರೆಗೂ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದರೂ ಸರ್ಕಾರ ಮೇರುನಟನ ಪುಣ್ಯಭೂಮಿ ನಿರ್ಮಿಸಲು ಭೂಮಿ ನೀಡುವ ಕಡೆ ಗಮನ ಹರಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ.

Whats_app_banner