ನೆಲ ಜಲ ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ; ದರ್ಶನ್ ನಂತರ ಸುದೀಪ್ ಟ್ವೀಟ್
ಪ್ರತಿ ಬಾರಿಯೂ ಕಾವೇರಿ ನದಿ ಸಮಸ್ಯೆ ಉದ್ಭವವಾಗುತ್ತಿದ್ದಂತೆ ಕನ್ನಡ ಜನರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ಆದರೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಸಿನಿಮಾ ನಟ-ನಟಿಯರು ದನಿ ಎತ್ತುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಾವೇರಿ ಜಲ ವಿವಾದ ಮತ್ತೆ ಭುಗಿಲೆದ್ದಿದೆ. ರಾಜ್ಯದ ಹಲವೆಡೆ ಬರದ ಪರಿಸ್ಥಿತಿ ನಿರ್ಮಾಣವಾಗಿ ರೈತರಿಗೆ ನೀರಿನ ಸಮಸ್ಯೆ ಕಾಡುತ್ತಿದೆ. ಇಷ್ಟಾದರೂ ಎಂದಿನಂತೆ ತಮಿಳುನಾಡು ಈ ಬಾರಿಯೂ ಹೆಚ್ಚುವರಿ ನೀರಿಗಾಗಿ ಕ್ಯಾತೆ ತೆಗೆಯುತ್ತಿದೆ.
ಮತ್ತೆ ಭುಗಿಲೆದ್ದ ಕಾವೇರಿ ಜಲ ವಿವಾದ
ಕಾವೇರಿ ವಿವಾದ ಹಾಗೂ ರಾಜ್ಯದ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನವ ದೆಹಲಿಯ ತಾಜ್‌ಮಾನ್ ಸಿಂಗ್ ಹೋಟೆಲ್‌ನಲ್ಲಿ ಸಭೆ ನಡೆದಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಚೆಲುವರಾಯ ಸ್ವಾಮಿ ಸಂಸದರಾದ ಗದ್ದಿಗೌಡರ್, ಬಚ್ಚೇಗೌಡ, ಸುಮಲತಾ ಅಂಬರೀಶ್ ಹಾಗೂ ಇನ್ನಿತರರು ಸಭೆಗೆ ಹಾಜರಾಗಿದ್ದಾರೆ. ಈ ಸಭೆಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲು ಸಂಸದರಿಗೆ ಸಿಎಂ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ತಮಿಳುನಾಡಿಗೆ ಪ್ರತಿದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆಪ್ಟೆಂಬರ್ 19ರಂದು ಆದೇಶ ನೀಡಿದೆ.
ಪ್ರತಿ ಬಾರಿಯೂ ಕಾವೇರಿ ನದಿ ಸಮಸ್ಯೆ ಉದ್ಭವವಾಗುತ್ತಿದ್ದಂತೆ ಕನ್ನಡ ಜನರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ಆದರೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಸಿನಿಮಾ ನಟ-ನಟಿಯರು ದನಿ ಎತ್ತುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ನಟರ ಫೋಟೊಗಳನ್ನು ಹಂಚಿಕೊಂಡು ಕಾವೇರಿ ಬಗ್ಗೆ ದನಿ ಎತ್ತದ ಕನ್ನಡ ಸಿನಿಮಾ ನಟರಿಗೆ ಧಿಕ್ಕಾರ ಎಂಬ ಪೋಸ್ಟರ್ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ನಟ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಕಾವೇರಿ ಪರ ನಿಂತು ಪೋಸ್ಟ್ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್
ದರ್ಶನ್ ನಂತರ ಸುದೀಪ್ ಕೂಡಾ ಕಾವೇರಿ ವಿಚಾರವಾಗಿ ಟ್ವೀಟ್ ಮಾಡಿ, ನಾವೆಲ್ಲರೂ ಮೌನವಾಗಿಲ್ಲ, ಕಾವೇರಿ ವಿವಾದದ ವಿರುದ್ಧ ದನಿಯೆತ್ತುತ್ತಿದ್ದೇವೆ ಎಂಬುದನ್ನು ಸಾಬೀತು ಮಾಡಿದ್ಧಾರೆ. ''ಸ್ನೇಹಿತರೇ ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈ ಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ'' ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಮನರಂಜನೆ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ