ಕನ್ನಡ ಸುದ್ದಿ  /  Entertainment  /  Sandalwood News Kannada Actor Kishor Wrote About Late Actor Daniel Balaji Anna Eppadi Irukkeenga Pcp

Daniel Balaji: ಅಣ್ಣಾ .. ಎಪ್ಪಡಿ ಇರುಕ್ಕೀಂಗ, ಅಗಲಿದ ಡೇನಿಯಲ್‌ ಬಾಲಾಜಿ ನೆನೆದು ಕನ್ನಡ ನಟ ಕಿಶೋರ್‌ ಭಾವುಕ ಪೋಸ್ಟ್‌

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ತಮಿಳು ಮೂಲದ ನಟ ಡೇನಿಯಲ್‌ ಬಾಲಾಜಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಇವರೊಂದಿಗೆ ಕೆಲಸ ಮಾಡಿದ್ದ ಕನ್ನಡ ನಟ ಕಿಶೋರ್‌ ಭಾವುಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಗೆಳೆಯನ ಕುರಿತು ಬರೆದಿದ್ದಾರೆ.

ಅಗಲಿದ ಡೇನಿಯಲ್‌ ಬಾಲಾಜಿ ನೆನೆದು ಕನ್ನಡ ನಟ ಕಿಶೋರ್‌ ಭಾವುಕ ಪೋಸ್ಟ್‌
ಅಗಲಿದ ಡೇನಿಯಲ್‌ ಬಾಲಾಜಿ ನೆನೆದು ಕನ್ನಡ ನಟ ಕಿಶೋರ್‌ ಭಾವುಕ ಪೋಸ್ಟ್‌

ಬೆಂಗಳೂರು: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಡೇನಿಯಲ್‌ ಬಾಲಾಜಿ ಮಾರ್ಚ್‌ 29ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಜತೆ ಕನ್ನಡದ ಹಲವು ಪ್ರಮುಖ ನಟರು ನಟಿಸಿದ್ದರು. ಡೇನಿಯಲ್‌ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದರು. ಕನ್ನಡದ ಪ್ರತಿಭಾನ್ವಿತ ನಟ ಕಿಶೋರ್‌ ಕೂಡ ಹಲವು ಸಿನಿಮಾಗಳಲ್ಲಿ ಡೇನಿಯಲ್‌ ಜತೆ ನಟಿಸಿದ್ದರು. ನಟ ಕಿಶೋರ್‌ ಸೋಷಿಯಲ್‌ ಮೀಡಿಯಾದಲ್ಲಿ ಡೇನಿಯಲ್‌ ನೆನಪಿನಲ್ಲಿ ಹೀಗೆಂದು ಬರೆದಿದ್ದಾರೆ.

ದಿವಂಗತ ಡೇನಿಯಲ್‌ ಕುರಿತು ಕಿಶೋರ್‌ ಪೋಸ್ಟ್‌

"ಗುಡ್ ಬೈ ಬ್ರದರ್.. ವಿಲ್ ಮಿಸ್ ಯು… ಪೊಲ್ಲಾದವನ್ ನಮಗೆಲ್ಲರಿಗೆ ಕೇವಲ ಸಿನಿಮಾ ಆಗಿರಲಿಲ್ಲ ಮನೆಯಾಗಿತ್ತು, ಕುಟುಂಬವಾಗಿತ್ತು. ನಿಯಮಿತವಾಗಿ ಯಾವುದೇ ಮಾತುಕತೆಯಿಲ್ಲದಿದ್ದರೂ... ನಮ್ಮಲ್ಲಿ ಒಬ್ಬರ ಆಲೋಚನೆಗಳು, ಚಲನಚಿತ್ರಗಳು ಮತ್ತು ಯಶಸ್ಸಿನ ಬಗ್ಗೆ ಯಾವಾಗಲಾದರೂ ಬರುವ ಸುದ್ದಿ ಅಥವಾ ವೀಡಿಯೊವನ್ನು ನೋಡಿದಾಗ ನಮ್ಮ ಮುಖದಲ್ಲಿ ಮೂಡುವ ಆ ಮುಗುಳ್ನಗೆ .. ನಾವು ಪರಸ್ಪರರ ಬಗ್ಗೆ ಮಾತನಾಡುವಾಗ .. ಹೊಮ್ಮುವ ಆ ಹೆಮ್ಮೆಯ ಭಾವ .." ಎಂದು ನಟ ಕಿಶೋರ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ."ನಮ್ಮೊಂದಿಗೆ ಅಥವಾ ನಾವಿಲ್ಲದೆ ನಮ್ಮಲ್ಲಿ ಯಾರು ಯಾವ ಕೆಲಸ ಮಾಡಿದರೂ ನಾವು ಪಡುವ ಆ ಸಂತೋಷ … ಏನೆಂದು ಹೇಳಲಿ.. ನಾನು ಎಲ್ಲಿ ಹೋದರೂ ಜನ ಯಾವಾಗ ವಡಚೆನ್ನೈ -2 ಎಂದು ಕೇಳುತ್ತಲೇ ಇರುತ್ತಾರೆ . ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ ವೆಟ್ರಿ ಒಪ್ಪಿಕೊಂಡಿರುವ ಸಿನಿಮಾಗಳ ಸಾಲು ನೋಡಿದರೆ ನಾವು 70 ವರ್ಷ ವಯಸ್ಸಿನವರಾದಾಗ ಮಾತ್ರ ಮಾಡಲು ಸಾಧ್ಯವಾಗಬಹುದು ಎಂದು. ಆದರೆ… ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ ... ಅಣ್ಣಾ .. ಎಪ್ಪಡಿ ಇರುಕ್ಕೀಂಗ .." ಎಂದು ಕಿಶೋರ್‌ ಬರೆದಿದ್ದಾರೆ.

ಕಿಶೋರ್‌ ಪೋಸ್ಟ್‌ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. "ಓಂ ಶಾಂತಿ ಬಾಲಾಜಿ ಸರ್ , ನಿಮ್ಮ ದ್ವನಿ, ನಿಮ್ಮ ನಟನೆ, ನಿಮ್ಮ ಕಣ್ಣು ಮತ್ತು ನಿಮ್ಮ ವ್ಯಕ್ತಿತ್ವವನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ . ಸಾವು ಯಾರನ್ನು ಬಿಡುವುದಿಲ್ಲ ಏನು ಸ್ವಲ್ಪ ಬೇಗ ಹೋಗಿದ್ದೀರಿ ಅಷ್ಟೇ" ಎಂದು ಒಬ್ಬರು ಬರೆದಿದ್ದಾರೆ. "ಬಾಲಾಜಿ ಅವರು ತುಂಬಾ ಸಹಜವಾಗಿ ನಟಿಸುತ್ತಿದ್ದರು. ಅವರ ಹಲವು ಪಾತ್ರಗಳನ್ನು ನಾನು ಇಷ್ಟಪಟ್ಟಿದ್ದೇನೆ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಡೇನಿಯಲ್‌ ಬಾಲಾಜಿಗೆ ಶುಕ್ರವಾರ ತಡ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಚೆನ್ನೈನ ಕೊಟ್ಟಿಕಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಡೇನಿಯಲ್ ಬಾಲಾಜಿ ದಕ್ಷಿಣ ಭಾರತದ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳಲ್ಲಿ ಮರೆಯಲಾಗದ ಖಳನಾಯಕರಾಗಿದ್ದರು.

ಡೇನಿಯಲ್‌ ಬಾಲಾಜಿ ಅವರು ಕನ್ನಡದಲ್ಲಿ ಯಶ್‌ ಅಭಿನಯದ ಕಿರಾತಕ ಚಿತ್ರದಲ್ಲೂ ಖಳನಾಗಿದ್ದರು. ಇನ್ನುಳಿದಂತೆ ಶಿವಾಜಿನಗರ, ಬೆಂಗಳೂರು ಅಂಡರ್‌ವರ್ಲ್ಡ್, ಡವ್ ಸಿನಿಮಾಗಳಲ್ಲೂ ನಟಿಸಿದ್ದರು.

IPL_Entry_Point