ಕನ್ನಡ ಸುದ್ದಿ  /  Entertainment  /  Sandalwood News Kannada Actor Ramesh Aravind Look In Kd-the Devil Movie Dhruva Sarja Pan India Film Updates Pcp

KD-The Devil: ಲಾಂಗ್‌ ಹಿಡಿದ ಕನ್ನಡ ನಟ ರಮೇಶ್‌ ಅರವಿಂದ್‌; ರಜನಿಕಾಂತ್‌ ಅಂದ್ಕೊಂಡ್ವಿ ಅಂದ್ರು ಫ್ಯಾನ್ಸ್‌

Kannada Actor Rameh Aravind: ಕೆಡಿ- ದಿ ಡೆವಿಲ್‌ ಚಿತ್ರದಲ್ಲಿ ಕನ್ನಡ ನಟ ರಮೇಶ್‌ ಅರವಿಂದ್‌ ಅವರು ನಾಯಕ ಧ್ರುವ ಸರ್ಜಾರ ಸಹೋದರನಾಗಿ ನಟಿಸುತ್ತಿದ್ದಾರೆ. ಕೆಡಿ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಹೇಗೆ ಇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರಮೇಶ್‌ ಹೊಸ ಲುಕ್‌ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

KD-The Devil: ಲಾಂಗ್‌ ಹಿಡಿದ ಕನ್ನಡ ನಟ ರಮೇಶ್‌ ಅರವಿಂದ್‌
KD-The Devil: ಲಾಂಗ್‌ ಹಿಡಿದ ಕನ್ನಡ ನಟ ರಮೇಶ್‌ ಅರವಿಂದ್‌

ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ನಟ ರಮೇಶ್‌ ಅರವಿಂದ್‌ ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕೆಡಿ ದಿ ಡೆವಿಲ್‌ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರು ಲಾಂಗ್‌ ಹಿಡಿದು ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಚಿತ್ರದಲ್ಲಿ ಸರ್ಜಾ ಅವರ ಸಹೋದರನಾಗಿ ರಮೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಬಾಲಿವುಡ್‌ ನಟ ಸಂಜಯ್‌ ದತ್‌, ಕನ್ನಡದ ರವಿಚಂದ್ರನ್‌ ಸೇರಿದಂತೆ ಪ್ರಮುಖ ತಾರಾಗಣವಿದೆ.

ಕೆಡಿ ಚಿತ್ರದಲ್ಲಿ ಧರ್ಮನಾಗಿ ರಮೇಶ್‌ ಅರವಿಂದ್‌ ನಟಿಸುತ್ತಿದ್ದಾರೆ. ಮಾಸ್‌ ಲುಕ್‌ನಲ್ಲಿ ಕೈಯಲ್ಲಿ ಲಾಂಗ್‌ ಹಿಡಿದ ಚಿತ್ರಕ್ಕೆ ಅಭಿಮಾನಿಗಳು ಬಗೆಬಗೆಯ ಕಾಮೆಂಟ್‌ ಮಾಡಿದ್ದಾರೆ. ರಮೇಶ್‌ ಅರವಿಂದ್‌ ಅವರ ಈ ಹಿಂದಿನ ಚಿತ್ರಗಳಲ್ಲಿ ಎಲ್ಲೂ ಮಚ್ಚು ಹಿಡಿದಿರಲಿಲ್ಲ. ಆದರೆ, ಜೋಗಿ ಪ್ರೇಮ್‌ ಇದೇ ಮೊದಲ ಬಾರಿಗೆ ರಮೇಶ್‌ ಅರವಿಂದ್‌ ಕೈಗೆ ಮಚ್ಚು ನೀಡಿದ್ದಾರೆ. ಜತೆಗೆ, ಇವರ ಸ್ಟೈಲ್‌ ಕೂಡ ಈ ಚಿತ್ರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೋಡಲು ರಜನಿಕಾಂತ್‌ ರೀತಿ ಕಾಣಿಸ್ತಿರಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಹಳೆಯ ಬಜಾಜ್‌ ಸ್ಕೂಟರ್‌ನಲ್ಲಿ ರಮೇಶ್‌ ಅರವಿಂದ್‌ ಅವರು ಲಾಂಗ್‌ ಹಿಡಿದುಕೊಂಡು ಬರುವ ಫೋಟೋವನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಕೆಡಿ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಕೂಡ ನಟಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ ಕೆಡಿ ಚಿತ್ರದಲ್ಲಿ ಮಚ್‌ಲಕ್ಷ್ಮಿಯಾಗಿದ್ದಾರೆ. ಇದು 1968ರಿಂದ 1978ರ ಕಾಲಘಟ್ಟದ ಚಿತ್ರ. ಇದೇ ಕಾರಣಕ್ಕೆ ರಮೇಶ್‌ ಅರವಿಂದ್‌ ಈ ಚಿತ್ರದಲ್ಲಿ ರೆಟ್ರೊ ಲುಕ್‌ನಲ್ಲಿ ಕಾಣಿಸಿದ್ದಾರೆ. ಧ್ರುವ ಸರ್ಜಾ ಅವರು ಈ ಚಿತ್ರಕ್ಕಾಗಿ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ.

 

ರಮೇಶ್‌ ಅರವಿಂದ್‌ ಲುಕ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ಕೆವಿಎನ್‌ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಪ್ರೇಮ್ ರವರ ‘K.D’ ಚಿತ್ರದಲ್ಲಿ ‘ಧರ್ಮ’ ಪಾತ್ರದಲ್ಲಿ, ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ರಮೇಶ್‌ ಅರವಿಂದ್‌ ನಿನ್ನೆ ತಮ್ಮ ಲುಕ್‌ ರಿವೀಲ್‌ ಮಾಡಿದ್ದರು. "ಸರ್ ನಿಮ್ಮಿಂದ ಈ ರೀತಿ ಪಾತ್ರಗಳಿಗಾಗಿ ಕಾಯ್ತ ಇದ್ವಿ ಸರ್ ನಿಮ್ಮನ್ನು ಒಳ್ಳೆ ಆಕ್ಷನ್ ಮೂವೀಗಳಲ್ಲಿ ನೋಡ್ಬೇಕು ಅಂತ ಕಾಯ್ತ ಇದ್ವಿ. ತಮಿಳ್ನಲ್ಲಿ ಕಮಲಹಾಸನ್ ಅವ್ರು ಎಲ್ಲ ಪಾತ್ರಗಳನ್ನು ಮಾಡ್ತಾರೆ. ಅದ್ರಲ್ಲಿ ಅವ್ರ ಫೈಟ್ಗಳು ನಮ್ಮಂಥ ಹುಡುಗರಿಗೆ ಇಷ್ಟ ಆಗುತ್ತೆ ಆದ್ರೆ ನಮ್ಮ ಕನ್ನಡಕ್ಕೆ ನೀವೇ ನಮಗೆ ಕಮಲಹಾಸನ್. ಆದ್ರೆ ನೀವು ಫ್ಯಾಮಿಲಿ ವರ್ಗದವರಿಗೆ ಮಾತ್ರ ಸಿನಿಮಾ ಮಾಡ್ತಿರಾ ಕರ್ನಾಟಕದಲ್ಲಿ ನಮ್ಮಂಥ ಹುಡಗೂರು ನಿಮ್ಮ ಆಕ್ಷನ್ ಫೈಟ್ ಗಳನ್ನು ನೋಡಲು ಕಾಯ್ತ ಇದೀವಿ ಸರ್ ನಮಗೋಸ್ಕರ ಒಳ್ಳೆ ಆಕ್ಷನ್ ಮೂವಿ ಮಾಡಿ ಸರ್ ಅದ್ರಲ್ಲಿ ಫೈಟ್ಗಳಿಗೆ ರವಿವರ್ಮಾ ಅವ್ರನ್ನೆ ಹಾಕಿಕೊಳ್ಳಿ" ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

"ರಜನಿಕಾಂತ್‌ ಅನ್ಕೊಂಡ್ವಿ", "ನಿಮ್ಮದೆ ಶೈಲಿಯ ಪಾತ್ರಗಳಲ್ಲಿ ನೋಡಿ ಇಂತಹ ಒಂದು ಪಾತ್ರದಲ್ಲಿ ನೋಡಲು ಕಾತರರಾಗಿದ್ವಿ", "ನೈಜ ನಟನೆಯ ಕಲಾಕಾರ ಈ ರೂಪದಲ್ಲಿ ಸೂಪರ್", "ಸರ್ ನಿಮ್ಮ ವಯಸ್ಸು ಬರ್ತಾ ಬರ್ತ್ ತುಂಬಾ ನೇ ಕಡಿಮೆ ಆಕ್ತೀದೆ ಸರ್ ಸೂಪರ್ ಸರ್ ನೀವು" ಹೀಗೆ ಹಲವು ರೀತಿಯ ಕಾಮೆಂಟ್‌ಗಳನ್ನು ಅಭಿಮಾನಿಗಳು ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಕೆಡಿ ಚಿತ್ರದ ರೀಷ್ಮಾ ನಾಣಯ್ಯ ಅವರ ಲುಕ್‌ ರಿವೀಲ್‌ ಮಾಡಲಾಗಿತ್ತು. ರೀಷ್ಮಾ ನಾಣಯ್ಯ ಹುಟ್ಟುಹಬ್ಬದಂದು ಆ ಚಿತ್ರದಲ್ಲಿ ಅವರು ಮಚ್‌ಲಕ್ಷ್ಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ರಿವೀಲ್‌ ಮಾಡಲಾಗಿತ್ತು. ಏಕ್‌ ಲವ್‌ ಯಾ ಚಿತ್ರದ ನಾಯಕಿ ರೀಷ್ಮಾ ಈ ಚಿತ್ರದಲ್ಲಿ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಆ ಫಸ್ಟ್‌ ಲುಕ್‌ ಚಿತ್ರದಲ್ಲಿ ಗೋಚರಿಸಿತ್ತು. ಇದೀಗ ರಮೇಶ್‌ ಅರವಿಂದ್‌ ಕೂಡ ಮಚ್ಚು ಹಿಡಿದಿರುವುದು ನೋಡಿದರೆ ಕೆಡಿ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ.