ಹಂಸಗೀತೆಗೆ ಹೆಜ್ಜೆ ಹಾಕಲಿದ್ದಾರೆ ಭಾವನಾ ರಾಮಣ್ಣ, ನೃತ್ಯ ರೂಪಕವಾಗುತ್ತಿದೆ ತರಾಸು ಕಾದಂಬರಿ
ತರಾಸು ಕಾದಂಬರಿ ಹಂಸಗೀತೆ ಈಗಾಗಲೇ ಸಿನಿಮಾವಾಗಿದೆ. ಇದೀಗ ನಟಿ ಭಾವನಾ ರಾಮಣ್ಣ ಅವರು ಹಂಸಗೀತೆಯನ್ನು ನೃತ್ಯ ರೂಪಕವಾಗಿ ಪ್ರಸ್ತುತಪಡಿಸುತ್ತಿದ್ದಾರೆ. . ಜನವರಿ 30ರ ಸಂಜೆ 6.30ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಸಕ್ತರು ಹಂಸಗೀತೆಯನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರು: "ಚಂದ್ರಮುಖಿ ಪ್ರಾಣಸಖಿ" ಸೇರಿದಂತೆ ಅನೇಕ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕನ್ನಡದ ಜನಪ್ರಿಯ ಕಾದಂಬರಿಕಾರ ತ.ರಾ.ಸುಬ್ಬರಾಯರ ‘ಹಂಸಗೀತೆ’ ಕಾದಂಬರಿಯನ್ನು ಜಿ.ವಿ.ಅಯ್ಯರ್ ಅವರು ಚಲನಚಿತ್ರವಾಗಿಸಿದ್ದರು. ಈಗ ನಟಿ ಭಾವನ "ಹಂಸಗೀತೆ" ಯನ್ನು ನೃತ್ಯ ರೂಪಕವಾಗಿ ತರುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಭಾವನ ರಾಮಣ್ಣ ತಮ್ಮ ಮನೆಯಲ್ಲೇ ಪತ್ರಿಕಾಗೋಷ್ಟಿ ಆಯೋಜಿಸಿದ್ದರು. ನಟಿ ಭಾವನಾ, ಅವರ ಸಹೋದರ ಅರವಿಂದ್ ರಾಮಣ್ಣ, ಸಹೋದರಿ ಶ್ಯಾಲಿನಿ ರಾಮಣ್ಣ ಹಾಗೂ ಬರಹಗಾರ ವಿಕ್ರಂ ಹತ್ವಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾವು ಚಿತ್ರರಂಗಕ್ಕೆ ಬರಲು ಕಾರಣರಾದವರನ್ನು ನೆನೆದು ಭಾವುಕರಾಗಿ ಮಾತು ಆರಂಭಿಸಿದ ಭಾವನ, ಹಿಂದೆ ತಮ್ಮ "ಹೋಮ್ ಟೌನ್ " ಬ್ಯಾನರ್ ನಲ್ಲಿ "ನಿರುತ್ತರ" ಚಿತ್ರವನ್ನು ನಿರ್ಮಿಸಿದ್ದನ್ನು ನೆನಪಿಸಿಕೊಂಡರು. ಮುಂದೆ ಕೂಡ ಚಿತ್ರ ನಿರ್ಮಿಸುವ ಆಸೆ ಇದೆ ಎಂದರು. "ಹೂವು ಫೌಂಡೇಶನ್" ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವದಾಗಿಯೂ ಭಾವನ ಹೇಳಿದರು. ನಂತರ "ಹಂಸಗೀತೆ" ನೃತ್ಯ ಕಾವ್ಯದ ಬಗ್ಗೆ ಭಾವನ ಮಾಹಿತಿ ನೀಡಿದರು. ತ.ರಾ.ಸು ಅವರ "ಹಂಸಗೀತೆ" ಯ ಬಗ್ಗೆ ಇವತ್ತಿನ ಪೀಳಿಗೆಗೆ ತಿಳಿಸಿಕೊಡಬೇಕು. ಹಾಗಾಗಿ ಈ ಪ್ರಯತ್ನ ಮಾಡುತ್ತಿದ್ದೇನೆ. ಜನವರಿ 30ರ ಸಂಜೆ 6.30ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವೀಣಾ ಮೂರ್ತಿ ಅವರ ನೃತ್ಯ ನಿರ್ದೇಶನದಲ್ಲಿ ಈ ನೃತ್ಯಕಾವ್ಯ ಮೂಡಿಬರಲಿದೆ.
ಭಾವನ ಅವರೆ ಒಂದುವರೆ ಗಂಟೆಗಳ ಕಾಲ ನಡೆಸಿಕೊಡುವ ಏಕ ವ್ಯಕ್ತಿ ಪ್ರದರ್ಶನದ ಈ ನೃತ್ಯ ಕಾವ್ಯದಲ್ಲಿ ಹಾಡು, ನೃತ್ಯ ಹಾಗೂ ಸಂಭಾಷಣೆಗಳು ಇರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಅವರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಚಿತ್ರರಂಗದಿಂದ ಗುರುಗಳಾದ ಡಾ.ಬರಗೂರು ರಾಮಚಂದ್ರಪ್ಪ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತಾರಾ ಅನುರಾಧ ಅವರನ್ನೂ ಆಹ್ವಾನಿಸಿರುವುದಾಗಿ ಭಾವನಾ ರಾಮಣ್ಣ ತಿಳಿಸಿದ್ದಾರೆ. ಇದು ಮೊದಲ ಪ್ರಯತ್ನ. ಮುಂದೆ ಬೇರೆಬೇರೆ ಕಡೆಗಳಲ್ಲೂ ಈ ನೃತ್ಯಕಾವ್ಯವನ್ನು ಮಾಡುವ ಯೋಜನೆಯಿದೆ ಎನ್ನುತ್ತಾರೆ ಭಾವನಾ ರಾಮಣ್ಣ.