Shraddha Srinath: ‘ಅಸುರಕ್ಷಿತ’ ಚಿತ್ರರಂಗದ ಮತ್ತೊಂದು ಕರಾಳ ಮುಖದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಏನಂದ್ರು, ಆದ ಅನುಭವ ಎಂಥದ್ದು?
Shraddha Srinath Casting Couch Experience: ಪಾತ್ರಕ್ಕಾಗಿ ಪಲ್ಲಂಗ ಪದ್ಧತಿ ಇನ್ನೂ ಚಿತ್ರೋದ್ಯಮಗಳಲ್ಲಿ ಜೀವಂತವಾಗಿದೆ. ಇತ್ತೀಚೆಗಷ್ಟೇ ಮಲಯಾಳಂ ಚಿತ್ರೋದ್ಯಮದ ಸರಣಿ ಕರಾಳ ಘಟನೆಗಳು ಬೆಳಕಿಗೆ ಬಂದಿದ್ದವು. ಇದೀಗ ಈ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿದ್ದಾರೆ.
Shraddha Srinath about Casting Couch: ಮಲಯಾಳಂ ಚಿತ್ರೋದ್ಯಮದಲ್ಲಿ ನಿವೃತ್ತ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಹೊರಬಿದ್ದ ಬೆನ್ನಲ್ಲೇ, ಹಲವು ಸೆಲೆಬ್ರಿಟಿಗಳು ಒಬ್ಬೊಬ್ಬರಾಗಿ ಹೊರಬಂದು ಮಾಧ್ಯಮಗಳೊಂದಿಗೆ ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಕರಾಳತೆ ಇನ್ನೂ ತಾಂಡವವಾಡುತ್ತಿದೆ ಎಂಬುದನ್ನು ಸಾಕಷ್ಟು ಮಂದಿ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಆ ಕಾರಣಕ್ಕೆ ಎಲ್ಲ ಚಿತ್ರೋದ್ಯಮಗಳಲ್ಲಿಯೂ ಹೇಮಾ ಸಮಿತಿ ರಚಿಸಬೇಕೆಂದು ಸಾಕಷ್ಟು ಮಂದಿ ಧ್ವನಿಗೂಡಿಸುತ್ತಿದ್ದಾರೆ. ಟಾಲಿವುಡ್ ನಟಿಯರಾದ ಸಮಂತಾ ಹಾಗೂ ಅನುಷ್ಕಾ ಶೆಟ್ಟಿ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಟಿ ಶ್ರದ್ಧಾ ಶ್ರೀನಾಥ್ ಸಹ ಮಾತನಾಡಿದ್ದಾರೆ.
ಕಾಸ್ಟಿಂಗ್ ಕೌಚ್ ಬಗ್ಗೆ ಶ್ರದ್ಧಾ ಶ್ರೀನಾಥ್ ಏನಂದ್ರು?
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ಶ್ರೀನಾಥ್, "ನಾನು ಈ ರೀತಿಯ ಕಿರುಕುಳವನ್ನು ಎದುರಿಸಿಲ್ಲ. ನಾನು ಮುಖ್ಯವಾಗಿ ಮಲಯಾಳಂ ಇಂಡಸ್ಟ್ರಿಯಲ್ಲಿಯೂ ಕೆಲಸ ಮಾಡಿದ್ದೇನೆ. ಅಲ್ಲಿ ಪಾರ್ಟಿಗಳಿಗೂ ಹೋಗಿದ್ದೆ. ಆದರೆ ಯಾರು ನನ್ನೊಂದಿಗೆ ಅನುಚಿತವಾಗಿ ವರ್ತಿಸಲಿಲ್ಲ. ಅದರಲ್ಲೂ ನನ್ನ ಸುತ್ತಮುತ್ತ ಏನಾಗುತ್ತಿದೆ ಎನ್ನುವುದನ್ನು ಗಮನಿಸುತ್ತಿದ್ದೆ. ಡ್ರೈವರ್ ಏನನ್ನು ನೋಡುತ್ತಿದ್ದಾನೆ ಎಂದು ನಾನು ಯಾವಾಗಲೂ ಎಚ್ಚರವಾಗಿರುತ್ತಿದ್ದೆ. ಆ ಕ್ಷಣ ನನಗೆ ಅಸುರಕ್ಷಿತ ಎನಿಸುತ್ತಿತ್ತು. ನನ್ನ ಎಂಟನೇ ವಯಸ್ಸಿನಿಂದ ಎಚ್ಚರಿಕೆಯಿಂದ ಇರಲು ಕಲಿತೆ. ಹಾಗಾಗಿಯೇ ನಾನು ಇಂಡಸ್ಟ್ರಿಯಲ್ಲಿ ಯಾವತ್ತೂ ಕಿರುಕುಳ ಎದುರಿಸಿಲ್ಲ. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈಗ ಸುರಕ್ಷಿತವಾಗಿದ್ದೇನೆ" ಎಂದಿದ್ದಾರೆ.
ಮಹಿಳೆಯರಿಗೆ ಕನಿಷ್ಠ ಅವಶ್ಯಕತೆಗಳೂ ಸಿಗ್ತಿಲ್ಲ..
"ಚಿತ್ರರಂಗದಲ್ಲಿ ಮಹಿಳೆಯರಿಗೆ ನೈರ್ಮಲ್ಯ ಸೌಲಭ್ಯಗಳು ಇರುವುದಿಲ್ಲ. ಅಂತಹ ಕನಿಷ್ಠ ಅವಶ್ಯಕತೆಗಳನ್ನು ಚಿತ್ರತಂಡವು ಪೂರೈಸಬೇಕು. ಹೇಮಾ ಕಮಿಟಿಯ ವರದಿ ನೋಡಿ ಬೆಚ್ಚಿಬಿದ್ದಿದ್ದೇನೆ. ಅದರಲ್ಲೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಯಾರೊಂದಿಗೆ ಮಾತನಾಡಬೇಕು ಎಂದು ತಿಳಿಯದೆ ತಮ್ಮಲ್ಲೇ ಕಳೆದು ಹೋಗಿದ್ದಾರೆ. ಇಂಡಸ್ಟ್ರಿಯಲ್ಲಿ ಕಿರುಕುಳ ನಿಲ್ಲಬೇಕು ಅಂದರೆ ಸರಿಯಾಗಿ ಕೆಲಸ ಮಾಡುವ ಸಂಘಟನೆಗಳು ಬರಬೇಕು ಎಂದು ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ.
ಇನ್ನು ಶ್ರದ್ಧಾ ಶ್ರೀನಾಥ್ ಸಿನಿಮಾಗಳ ವಿಚಾರಕ್ಕೆ ಬಂದರೆ, ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿ ಶ್ರದ್ಧಾ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಿಂತ ಪರಭಾಷೆಯ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ.
ಮಲಯಾಳಂ ಸಿನಿಮಾ ಮೂಲಕ ಎಂಟ್ರಿ
2015ರಲ್ಲಿ ಮಲಯಾಳಂ ಚಿತ್ರ ಕೊಹಿನೂರ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ, ಶ್ರದ್ಧಾ ಅದಾದ ಮೇಲೆ 2016ರಲ್ಲಿ ಕನ್ನಡದ ಯೂಟರ್ನ್ ಚಿತ್ರದಲ್ಲಿ ನಟಿಸಿ ಮೊದಲ ಚಿತ್ರದಲ್ಲಿಯೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2017ರಲ್ಲಿ ತೆರೆಗೆ ಬಂದ ಆಪರೇಷನ್ ಅಲಮೇಲಮ್ಮ ಸಿನಿಮಾ ಶ್ರದ್ಧಾಗೆ ಕನ್ನಡದಲ್ಲಿ ದೊಡ್ಡ ಹಿಟ್ ತಂದುಕೊಟ್ಟಿತು. ಕನ್ನಡದ ಜತೆಗೆ ಬಾಲಿವುಡ್‌ನಲ್ಲಿಯೂ ಗುರುತಿಸಿಕೊಂಡರು. ತೆಲುಗಿನಲ್ಲಿ ಜೆರ್ಸಿ ಸಿನಿಮಾದಿಂದ ಖ್ಯಾತಿ ಪಡೆದರು.
ಮೂರು ಸಿನಿಮಾಗಳ ಶೂಟಿಂಗ್ ಮುಕ್ತಾಯ
ಸದ್ಯ ತೆಲುಗಿನಲ್ಲಿ ಮೆಕಾನಿಕ್ ರಾಕಿ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜತೆಗೆ ತಮಿಳಿನ ಕಲಿಯುಗಂ ಮತ್ತು ಬಾಲಿವುಡ್‌ನ ಲೆಟರ್ಸ್ ಟು ಮಿಸ್ಟರ್ ಖನ್ನಾ ಚಿತ್ರಗಳ ಶೂಟಿಂಗ್ ಮುಗಿಸಿದ್ದು, ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಗಳಿಗೆ ಆಗಮಿಸಲಿದ್ದಾರೆ.
ವಿಭಾಗ