ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW
ಕನ್ನಡ ಸುದ್ದಿ  /  ಮನರಂಜನೆ  /  ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? Interview

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

ಕನ್ನಡದ ಸಿನಿಮಾ ಪ್ರೇಕ್ಷಕ ಸ್ಟಾರ್‌ ಹೀರೋಗಳ ಚಿತ್ರಗಳಿಗಷ್ಟೇ ಕಾಯುತ್ತಿದ್ದಾನಾ? ಆತನಿಗೆ ಕನ್ನಡದಲ್ಲಿ ನಿರ್ಮಾಣವಾದ ಪ್ಯಾನ್‌ ಇಂಡಿಯಾ ಚಿತ್ರಗಳಷ್ಟೇ ಬೇಕಾ? ಅದರಾಚೆಗೆ ಕನ್ನಡದಲ್ಲಿ ಎಷ್ಟೋ ಒಳ್ಳೊಳ್ಳೆಯ ಸಿನಿಮಾಗಳು ಬಂದರೂ, ಅದರತ್ತ ನೆಲದ ಪ್ರೇಕ್ಷಕ ಮೂಸಿಯೂ ನೋಡುತ್ತಿಲ್ಲವಲ್ಲ. ಇದಕ್ಕೆ ಕಾರಣ ಏನಿರಬಹುದು? ಬ್ಲಿಂಕ್‌ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳಿದ್ದಾರೆ.

ಒಂದು ವೇಳೆ ಕನ್ನಡದ ಬ್ಲಿಂಕ್ ಸಿನಿಮಾ ಮಲಯಾಳಂ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW
ಒಂದು ವೇಳೆ ಕನ್ನಡದ ಬ್ಲಿಂಕ್ ಸಿನಿಮಾ ಮಲಯಾಳಂ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Blink movie: "ಈ ಸಿನಿಮಾ ತುಂಬ ಚೆನ್ನಾಗಿತ್ತು, ನಾನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡೆ" -ನಮ್ಮವರನ್ನು ನಾವೇ ಸಲುಹದಿದ್ದರೆ, ಮತ್ಯಾರು ಪೋಷಿಸುತ್ತಾರೆ? ಅವ್ರ ಗತಿ ಏನು? ಅಲ್ಲೊಂದು ಇಲ್ಲೊಂದು ಮೆಚ್ಚುಗೆ ಪಡೆದ ಕನ್ನಡದ ಸಿನಿಮಾಗಳು ಚಿತ್ರಮಂದಿರದಿಂದ ಕಾಲ್ಕಿತ್ತು, ಒಟಿಟಿಯಲ್ಲಿ ಮೆಚ್ಚುಗೆ ಪಡೆದ ಬಳಿಕ ದಕ್ಕುವ ಮೆಚ್ಚುಗೆ ಮಾತಿದು. ಇಂಥ ಮಾತುಗಳಿಂದ ಎಲ್ಲರೂ ಹೌದೌದು ಎನ್ನುವಂತೆ ಸಿನಿಮಾ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಪ್ರಶಂಸೆ ಮಾತ್ರವೇ ಹೊರತು, ಅದರಿಂದ ಕಿಂಚಿತ್ತೂ ಲಾಭವಿಲ್ಲ! ಇತ್ತೀಚೆಗಷ್ಟೇ ಬಿಡುಗಡೆಯಾದ ಬ್ಲಿಂಕ್‌ ಚಿತ್ರದ್ದೂ ಇದೇ ಕಥೆ ವ್ಯಥೆ.

ಅದ್ಯಾಕೋ ಕನ್ನಡದ ಸಿನಿಮಾ ಪ್ರೇಕ್ಷಕ ಸ್ಟಾರ್‌ ಹೀರೋಗಳ ಸಿನಿಮಾಗಳಿಗಷ್ಟೇ ಕಾಯುತ್ತಿದ್ದಾನಾ? ಆತನಿಗೆ ಕನ್ನಡದಲ್ಲಿ ನಿರ್ಮಾಣವಾದ ಪ್ಯಾನ್‌ ಇಂಡಿಯಾ ಚಿತ್ರಗಳಷ್ಟೇ ಬೇಕಾ? ಅದರಾಚೆಗೆ ಕನ್ನಡದಲ್ಲಿ ಎಷ್ಟೋ ಒಳ್ಳೊಳ್ಳೆಯ ಸಿನಿಮಾಗಳು ಬಂದರೂ, ಅದರತ್ತ ನೆಲದ ಪ್ರೇಕ್ಷಕ ಮೂಸಿಯೂ ನೋಡುವುದಿಲ್ಲವಲ್ಲ. ಇದಕ್ಕೆ ಕಾರಣ ಏನಿರಬಹುದು? ಕನ್ನಡ ಪ್ರೇಕ್ಷಕರ ಸಿನಿಮಾ ಸಂಸ್ಕೃತಿಯೇ ಅಂಥದ್ದಾ? ಇದಕ್ಕೆ ಉತ್ತರ ಕಂಡುಕೊಳ್ಳುವುದು ಕೊಂಚ ಕಷ್ಟವೇ! ಬೆರಳೆಣಿಕೆ ಸ್ಟಾರ್‌ಗಳನ್ನೇ ನಂಬಿ ಕೂತಿರುವ ಸ್ಯಾಂಡಲ್‌ವುಡ್‌ಗೆ ಹೊಸಬರು ಬಂದರೆ, ಅವರಿಗೆ ಸಿಕ್ಕುವ ಸ್ವಾಗತವೂ ಅಷ್ಟಕಷ್ಟೇ.‌

ಏನಿದು ಬ್ಲಿಂಕ್?‌ ಇಲ್ಲಿದೆ ಕಿರು ವಿಮರ್ಶೆ

ಶ್ರೀನಿಧಿ ಬೆಂಗಳೂರು ಅನ್ನೋ ಬಿಸಿರಕ್ತದ ಯುವಕ, ಊಹೆಗೂ ಮೀರಿದ ಕಥೆಯೊಂದನ್ನು ಮಾರ್ಚ್‌ 9ರಂದು ಚಿತ್ರಮಂದಿರಕ್ಕೆ ಹಿಡಿದು ತಂದಿದ್ದರು. ಅದರ ಹೆಸರು ಬ್ಲಿಂಕ್.‌ ಕನ್ನಡದ ಜತೆಗೆ ಪಕ್ಕದ ತೆಲುಗು ನಾಡಿನಲ್ಲಿ, ಇಲ್ಲಿಗಿಂತ ಹೆಚ್ಚಿನ ನೇಮು ಫೇಮು ಗಿಟ್ಟಿಸಿಕೊಂಡ ದಿಯಾ ಸಿನಿಮಾದಿಂದ ಹೆಚ್ಚು ಪ್ರಚಲಿತಕ್ಕೆ ಬಂದ ದೀಕ್ಷಿತ್‌ ಶೆಟ್ಟಿ ಈ ಚಿತ್ರದ ನಾಯಕ. ಸಿದ್ಧ ಸೂತ್ರಗಳನ್ನು ಬದಿಗೊತ್ತಿ, ಹೊಸ ಚಿಗುರನ್ನು ನೋಡುಗನಿಗೆ ನೀಡಬೇಕು ಎಂಬ ಕಾರಣಕ್ಕೆ, ನಿರ್ದೇಶಕರು ಇಲ್ಲಿ ಆಯ್ಕೆ ಮಾಡಿಕೊಂಡಿದ್ದು ಸಮಯದ ಹಿಂದೆ ಸಾಗುವ ಟೈಮ್‌ ಟ್ರಾವೆಲಿಂಗ್‌ ಕಥೆಯನ್ನು.

ಭೂತ, ವರ್ತಮಾನ ಮತ್ತು ಭವಿಷ್ಯದ ನಡುವೆ ಕಥಾನಾಯಕನ ನಿಲ್ಲದ ಓಟ ಇಲ್ಲಿ ಕಾಣಿಸುತ್ತದೆ. ಕಣ್ಣು ಮಿಟುಕುವಷ್ಟರಲ್ಲಿ ಏನೆನೋ ಘಟಿಸಿ ಮತ್ತಿನ್ನೇನೋ ಆಗಿರುತ್ತದೆ. ಹುಟ್ಟಿನ ಕುರಿತು ತಿಳಿದುಕೊಳ್ಳಬೇಕೆಂಬ ಆತನ ಹಪಹಪಿ ನೋಡುಗನನ್ನು ಸೆಳೆಯುತ್ತದೆ. ಈ ಹಿಂದೆ ಘಟಿಸಿದ ತಪ್ಪುಗಳನ್ನು ಆ ಕಾಲಘಟ್ಟಕ್ಕೆ ಹೋಗಿ ಸರಿಪಡಿಸಲು ಆತ ಹೆಣಗಾಡುತ್ತಾನೆ. ನೋಡುಗನನ್ನೂ ಅರೇ ಕ್ಷಣ ಗೊಂದಲಕ್ಕೀಡು ಮಾಡುತ್ತಾನೆ. ಕೊನೆಗೆ ಅಂದುಕೊಂಡಿದ್ದನ್ನು ಆತ ಸಾಧಿಸುತ್ತಾನಾ? ಆತ ಹಾಗೆ ಮಾಡಲು ಬಲವಾದ ಕಾರಣವಾದರೂ ಏನು? ಅದೆಲ್ಲವನ್ನು ನೀವು ಸಿನಿಮಾದಲ್ಲಿ ನೋಡಿ.

ಇದೇ ಬ್ಲಿಂಕ್‌ ಮಲಯಾಳಂನಲ್ಲಿ ಬಂದಿದ್ದರೆ..

ಹೀಗೆ ಸಿನಿಮಾ ನೋಡಿದವರಿಂದ, ವಿಮರ್ಶಕರಿಂದ ಮೆಚ್ಚುಗೆ ಪಡೆದ ಬ್ಲಿಂಕ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಕನ್ನಡಿಗರು ಅದನ್ನು ಅಪ್ಪಿ ಒಪ್ಪಲಿಲ್ಲ. ಚಿತ್ರಕ್ಕೆ ಕೊಂಚ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಕಂಟೆಂಟ್‌ ಚೆನ್ನಾಗಿದೆ. ಒಳ್ಳೇ ರೆಸ್ಪಾನ್ಸ್‌ ಸಿಕ್ಕಿದೆ. ಆದರೆ ಥಿಯೇಟರ್‌ಗೆ ಜನಾನೇ ಬರ್ತಿಲ್ಲ ಅನ್ನೋ ಮಾತೇ ಜಾಸ್ತಿ. ಇನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ, "ಒಂದು ವೇಳೆ ಬ್ಲಿಂಕ್‌ ಸಿನಿಮಾ, ಪಕ್ಕದ ಮಲಯಾಳಂನಲ್ಲಿ ಮೂಡಿಬಂದಿದ್ದರೆ, ಅಲ್ಲಿನ ಪ್ರೇಕ್ಷಕ ಈ ಚಿತ್ರವನ್ನು ಹೊತ್ತು ಮೆರೆಸುತ್ತಿದ್ದ. ಕನ್ನಡ ಪ್ರೇಕ್ಷಕರಿಗೆ ಏನಾಗಿದೆಯೋ?" ಎಂದು ಅಸಮಾಧಾನ ತೋಡಿಕೊಂಡಿದ್ದರು.

ಬ್ಲಿಂಕ್‌ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳುವುದೇನು?

"ಯೂಟ್ಯೂಬ್‌ ಮತ್ತು ಮೀಡಿಯಾಗಳಲ್ಲಿನ ಸಿನಿಮಾ ಬಗೆಗಿನ ಮೆಚ್ಚುಗೆ ಮಾತೇ ನಮಗೆ ಚೂರು ಸಹಾಯ ಮಾಡ್ತು. ಹಾಗಂತ ಎಲ್ಲ ಕಡೆಗೆ ರೀಚ್‌ ಆಗಲಿಲ್ಲ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ತುಂಬ ಚೆನ್ನಾಗಿ ಓಡ್ತು. ಸಿನಿಮಾ ಬಗ್ಗೆ ಟಾಕ್‌ ಕ್ರಿಯೆಟ್‌ ಆಗಲಿಲ್ಲ. ಬಾಯಿ ಮಾತಿನ ಪ್ರಚಾರ ಸಿಗಲಿಲ್ಲ. ಹಾಗಾಗಿಯೇ ಹೆಚ್ಚು ದಿನ ನಮ್ಮ ಸಿನಿಮಾ ಥಿಯೇಟರ್‌ಗಳಲ್ಲಿ ಉಳಿಯಲ್ಲಿಲ್ಲ. ಈಗ ಒಟಿಟಿಗೆ ಬಂದ ಬಳಿಕ, ಕನ್ನಡಕ್ಕಿಂತಲೂ ತೆಲುಗು ಮತ್ತು ತಮಿಳಿಂದ ಜಾಸ್ತಿ ಮೆಚ್ಚುಗೆ ಬರ್ತಿದೆ. ಇದೆಲ್ಲವನ್ನು ನೋಡಿದರೆ, ಅಲ್ಲಿನವರು ಸೆಲೆಬ್ರೇಟ್‌ ಮಾಡಿದಷ್ಟು ನಮ್ಮವರು ಸೆಲೆಬ್ರೇಟ್‌ ಮಾಡುತ್ತಿಲ್ಲ"

"ನಮ್ಮವರಿಗೆ ಇಲ್ಲಿನ ಸಿನಿಮಾಗಳ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ನಮ್ಮಲ್ಲಿನ ಸಿನಿಮಾ ಚೆನ್ನಾಗಿ ಬರಲ್ಲ ಅಂತ ಡಿಸೈಡ್‌ ಆಗಿಬಿಟ್ಟಿದ್ದಾರೆ. ನಾನೇ ಕೆಲವರನ್ನು ಕೇಳಿದಾಗ, ನಮಗೂ ಹೋಪ್‌ ಇರಲಿಲ್ಲ ಸರ್‌, ಸೋಷಿಯಲ್‌ ಮೀಡಿಯಾದಲ್ಲಿ ನೋಡಿ ಬಂದ್ವಿ ಎಂದು ಹೇಳಿದವರಿದ್ದಾರೆ. ಇಲ್ಲಿನ ಜನಕ್ಕೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ನಮ್ಮವರ ಸಿನಿಮಾ ನೋಡುವ ಕಲ್ಚರ್‌ ಬೇರೆ ಇದೆ. ಚಿತ್ರಮಂದಿರಕ್ಕೆ ಬರುವುದಕ್ಕೂ ಮುನ್ನ ವಿಚಾರಿಸಿ ನಿರ್ಧಾರ ಮಾಡಿರ್ತಾರೆ. ಹೊಸಬರ ಸಿನಿಮಾ ಅಂದ ತಕ್ಷಣ, ಒಟಿಟಿಯಲ್ಲಿ ಬರುತ್ತಲ್ಲ ಎಂದವರೇ ಹೆಚ್ಚು. ಹಾಗಂತ ಸಿನಿಮಾ ನೋಡುವ ಮನೊಭಾವ ಇಲ್ಲ ಅಂತಲ್ಲ"

"ಸ್ಟಾರ್‌ ಸಿನಿಮಾಗಳು ಹೆಚ್ಚೆಚ್ಚು ಬಂದರೆ, ಕನ್ಸಿಸ್ಟನ್ಸಿ ಕಾಣುತ್ತೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸ್ಟಾರ್‌ಗಳ ಸಿನಿಮಾಗಳು ಸರತಿಯಲ್ಲಿ ಬರುತ್ವೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇರುತ್ತೆ. ಹೀಗೆ ಮುಂದುವರಿಯುವುದರಿಂದ ಒಂದು ಸ್ಥಿರತೆಯೂ ಇರುತ್ತೆ. ಆದರೆ, ನಮ್ಮಲ್ಲಿ ಆ ಸ್ಥಿರತೆ ಇಲ್ಲ. ಪಕ್ಕದ ತೆಲುಗಿನವ್ರು ಸಿನಿಮಾಗಳನ್ನು ತುಂಬ ಸೆಲೆಬ್ರೇಟ್‌ ಮಾಡ್ತಿದ್ದಾರೆ. ಬ್ಲಿಂಕ್‌ ಸಿನಿಮಾವನ್ನು ತೆಲುಗಿನಲ್ಲಿ ರಿಲೀಸ್‌ ಮಾಡಿ ಎನ್ನುತ್ತಿದ್ದಾರೆ. ಕನ್ನಡದ ಸಿನಿಮಾ ನೋಡಿ ವಿಮರ್ಶೆ ಮಾಡಿ, ತೆಲುಗಿಗೂ ಡಬ್‌ ಮಾಡಿ ಎಂದು ಡಿಮಾಂಡ್‌ ಮಾಡುತ್ತಿದ್ದಾರೆ"

"ನಮ್ಮಲ್ಲಿ ಸ್ಪೇಸ್‌ ಕ್ರಿಯೆಟ್‌ ಆಗ್ತಿಲ್ಲ. ಕನ್ನಡದ ಸಿನಿಮಾಗಳು ಚರ್ಚೆ ಆಗ್ತಿಲ್ಲ. ಸ್ಟಾರ್‌ ಸಿನಿಮಾಗಳಿಗಷ್ಟೇ ಇಲ್ಲಿನ ಜನ ಕಾಯ್ತಿದ್ದಾರೆ. ತಮಿಳಲ್ಲಿ ಎಷ್ಟು ಜನ ಹೀರೋಗಳು ಕಾಣಿಸ್ತಾರೆ. ಅವರ ಒಂದಿಲ್ಲೊಂದು ಸಿನಿಮಾ ಚಿತ್ರಮಂದಿರದಲ್ಲಿ ಓಡ್ತಾನೆ ಇರುತ್ತೆ. ಆದ್ರೆ ನಮ್ಮಲ್ಲಿ ಮಾತ್ರ ಹಾಗಾಗ್ತಿಲ್ಲ. ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಸ್ಟಾರ್‌ ನಟರೇ ಮೂರು ವರ್ಷಕ್ಕೊಂದು ಸಿನಿಮಾ ಮಾಡ್ತಿದ್ದಾರೆ. ಈ ಮನಸ್ಥಿತಿ ಕಡಿಮೆ ಆಗಬೇಕು. ವರ್ಷಕ್ಕೊಂದು ಸಿನಿಮಾ ಮಾಡಬೇಕು. ಆಗ ಹೊಸಬರಿಗೂ ಸ್ಪೇಸ್‌ ಸಿಗುತ್ತೆ. ಆಗ ಮಾತ್ರ ಬದಲಾವಣೆ ಸಾಧ್ಯ" ಎಂಬುದು ಬ್ಲಿಂಕ್‌ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಮಾತು.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner