Blink Movie: ಬ್ಲಿಂಕ್ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್ ಆಗುತ್ತಂತೆ ಬ್ಲಿಂಕ್
Blink Kannada Movie: ಶ್ರೀನಿಧಿ ಬೆಂಗಳೂರು ನಿರ್ದೇಶನದ, ದೀಕ್ಷಿತ್ ಶೆಟ್ಟಿ- ಚೈತ್ರಾ ಜೆ ಆಚಾರ್ ನಟನೆಯ ಬ್ಲಿಂಕ್ ಸಿನಿಮಾದ ಕುರಿತು ಒಟಿಟಿ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಮುಂದುವರೆದಿವೆ. ಇದೇ ಸಂದರ್ಭದಲ್ಲಿ ಬ್ಲಿಂಕ್ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಕುರಿತೂ ಸುದ್ದಿ ಬಂದಿದೆ.
ಬೆಂಗಳೂರು: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಜನಮೆಚ್ಚಿದ ಚಿತ್ರ "ಬ್ಲಿಂಕ್" ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಮುಂದುವರೆದಿವೆ. ಸಾಕಷ್ಟು ಜನರು ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ "ಬಹಳ ಒಳ್ಳೆಯ ಸಿನಿಮಾ" ಎಂದು ಹೊಗಳುತ್ತಿದ್ದಾರೆ. ಇನ್ನು ಕೆಲವರು ಈ ಸಿನಿಮಾದಲ್ಲಿ ಇಷ್ಟವಾದ ಸಂಗತಿಗಳು, ಇಷ್ಟವಾಗದ ಸಂಗತಿಗಳ ಕುರಿತು ಮಾತನಾಡಿದ್ದಾರೆ. ಟೈಮ್ ಟ್ರಾವೆಲ್ ಕುರಿತು ಬಂದ ಈ ಸಿನಿಮಾ ಕೆಲವರಿಗೆ ಸಂಪೂರ್ಣವಾಗಿ ಅರ್ಥವಾಗಿಲ್ಲ. ಇದೇ ಸಂದರ್ಭದಲ್ಲಿ ಒಟಿಟಿಯಲ್ಲಿ ಬ್ಲಿಂಕ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಾದರೆ ತೆಲುಗು, ತಮಿಳು, ಮಲಯಾಳಂಗೂ ಡಬ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎಂಬ ಸುದ್ದಿ ಬಂದಿದೆ.
ಕಣ್ಣು ಮಿಟುಕಿಸದೆ ನೋಡಲೇಬೇಕಾದ ಕನ್ನಡ ಚಿತ್ರ ಬ್ಲಿಂಕ್
ಸೋಷಿಯಲ್ ಮೀಡಿಯಾದಲ್ಲಿ ರಾಜೀವ್ ಹೆಗಡೆ ಬ್ಲಿಂಕ್ ಸಿನಿಮಾದ ಕುರಿತು ಹೀಗೆ ಬರೆದಿದ್ದಾರೆ. "ಸಾಕಷ್ಟು ಬಾರಿ ಕೆಲಸ ಮಾಡುತ್ತಿರುವಾಗಲೇ ಅದೆಷ್ಟೋ ಸಿನಿಮಾಗಳನ್ನು ನೋಡಿ ಮುಗಿಸಿರುತ್ತೇನೆ. ಅದಕ್ಕಾಗಿಯೇ ಒಂದಿಷ್ಟು ಡಬ್ಬಾ ಚಿತ್ರಗಳನ್ನು ಕೂಡ ನಾನು ನೋಡಿದ ಚಿತ್ರಗಳ ಪಟ್ಟಿಯಲ್ಲಿವೆ. ಹಾಗೆಯೇ ನಿನ್ನೆ ಕೂಡ 'ಬ್ಲಿಂಕ್' ಸಿನಿಮಾ ಆರಂಭಿಸಿದೆ. ಮೊದಲ ದೃಶ್ಯ ನೋಡಿದ್ಕೂಡಲೇ ಪಾಸ್ ಮಾಡಿ, ಇದು ಈಗ ನೋಡುವ ಚಿತ್ರವಲ್ಲವೆಂದು ರಾತ್ರಿ ಕೆಲಸ ಮುಗಿಸಿ ನೋಡಲಾರಂಭಿಸಿದೆ.
ಮೊಬೈಲ್ ಪಕ್ಕಕ್ಕಿಟ್ಟು, ಕಣ್ಣನ್ನು ಬ್ಲಿಂಕ್ ಮಾಡದೇ ಅಕ್ಷರಶಃ ಕಾರನ್ನು 150 ಕಿ.ಮೀ ವೇಗದಲ್ಲಿ ಓಡಿಸುವಾಗಿನ ಸ್ಥಿತಿಯಲ್ಲಿ ನೋಡಿಸಿಕೊಂಡು ಹೋಯಿತು. ಕೊನೆಯ 10 ನಿಮಿಷವು ಚಿತ್ರದುರ್ಗ ಹೆದ್ದಾರಿಯಲ್ಲಿನ ಕಾರಿನ ವೇಗ ನೆನಪಿಸಿತು. ಫ್ಲೈಟ್ ಟೇಕಾಫ್ ಆದ ಅನುಭವವಾಯಿತು. ಸಿನಿಮಾ ನೋಡಿ ಮುಗಿದು ಮೇಲೂ ಒಂತರಾ ಗುಂಗನ್ನು ಸೃಷ್ಟಿಸಿತು. ಚಿತ್ರಕಥೆ ಅಷ್ಟೊಂದು ಆಪ್ತವಾಗಿದೆ ಎಂದಲ್ಲ. ಆದರೆ ಒಂದು ವಿಷಯ ಇರಿಸಿಕೊಂಡು ಅಚ್ಚುಕಟ್ಟಾಗಿ ಚಿತ್ರವನ್ನು ಹೆಣೆಯಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ತಲೆಗೆ ಹುಳ ಬಿಡುವ, ತಲೆ ಖರ್ಚು ಮಾಡಿಸುವ ಚಿತ್ರವಿದು. ಆದರೆ ಬೇಸರದ ಸಂಗತಿಯೆಂದರೆ ಈ ಚಿತ್ರ ಬಿಡುಗಡೆಯಾದಾಗಲೂ ನಮ್ಮ ಸಮಯಕ್ಕೆ ಹೋಗಿ ನೋಡಲು ಅವಕಾಶ ಇರಲಿಲ್ಲ. ಈಗಲೂ ಪ್ರೈಮ್ ಅಲ್ಲಿ ಕನ್ನಡ ವಿಭಾಗಕ್ಕೆ ಹೋದರೂ ಕಾಣಿಸುವುದಿಲ್ಲ. Blink ಎಂದು ಸರ್ಚ್ ಮಾಡಬೇಕಷ್ಟೆ" ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿರೋ ವಾಚ್ ಬೇಕಿತ್ತು
ಛಾಯಾ ರಾವ್ ಅವರು ಬ್ಲಿಂಕ್ ಕುರಿತು ಹೀಗೆ ಬರೆದಿದ್ದಾರೆ. "ಮೊದಲಿಗೆ ಈ ಸಿನಿಮಾ ನೋಡಿದ್ಮೇಲೆ ನಂಗೆ ಈ ಸಿನಿಮಾದಲ್ಲಿರೋ ವಾಚ್ ಸಿಕ್ಕಿದ್ರೆ ಹಿಂದೆ ಆಗಿರೋ ಒಂದಷ್ಟು ತಪ್ಪುಗಳನ್ನು ತಿದ್ದಿ ಬರ್ಬೋದಿತ್ತು ಅಂತ ಅನ್ನಿಸ್ತು. ಸಿನಿಮಾ ಶುರು ಆದ್ಮೇಲೆ ಚುರುಕಾಗಿ ಮುಂದಕ್ಕೆ ಹೋಗ್ತಾ ಹೋಯ್ತು. ಒಳ್ಳೇ ಪ್ರಯತ್ನ ಮಾಡಿದಾರೆ. ಸಿನಿಮಾ ನೋಡಿದ್ಮೇಲೆ ಅನ್ನಿಸಿದ್ದು ಈ ಜೀವನವೇ ಮಾಯಾಲೋಕ, ಎಲ್ಲವೂ ನಿಮಿತ್ತ ಮಾತ್ರ. ನನ್ ಪ್ರಕಾರ ಸಿನಿಮಾ ಮುಗಿದ್ಮೇಲೆ ಸಂಪೂರ್ಣ ಅದರ ಬಗ್ಗೆ ಎಲ್ಲಾ ಆ್ಯಂಗಲ್ನಲ್ಲು ಯೋಚಿಸುವ ಹಾಗೆ ಮಾಡೋ ಸಿನಿಮಾ ಹಿಟ್ ಮೂವಿ ಅಂತ. ಬ್ಲಿಂಕ್ ಹಾಗೇ ಇದೆ. ಇನ್ನೂ ನೋಡಿಲ್ದಿದ್ರೆ ನೋಡಿ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ನಂಗೆ ಇಷ್ಟ ಆಯ್ತು, ನಿಮಗೂ ಇಷ್ಟ ಆಗ್ಬೋದು" ಎಂದು ಛಾಯಾ ರಾವ್ ಬರೆದಿದ್ದಾರೆ.
ಇತರೆ ಭಾಷೆಗಳಿಗೂ ಡಬ್ ಆಗುತ್ತಾ ಬ್ಲಿಂಕ್
ಈ ವೀಕೆಂಡ್‌ನಲ್ಲಿ ಬ್ಲಿಂಕ್ ಸಿನಿಮಾದ ಒಟಿಟಿ ವೀಕ್ಷಣೆ ಇನ್ನಷ್ಟು ಏರಿಕೆ ಕಂಡರೆ ನಾವು ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಿಗೂ ಬ್ಲಿಂಕ್ ಸಿನಿಮಾವನ್ನು ಡಬ್ಬಿಂಗ್ ಮಾಡಲು ಆರಂಭಿಸುವುದಾಗಿ ಸೂರ್ಯ ಮೆಹ್ರಾ ಎಂಬವರು ಎಕ್ಸ್‌ಕ್ಲೂಸಿವ್ ಅಪ್‌ಡೇಟ್ ನೀಡಿದ್ದಾರೆ.