Sandalwood News: ವಿಜಯ ರಾಘವೇಂದ್ರ ಪ್ರಪಂಚದಲ್ಲಿ ಪತ್ನಿ ಸ್ಪಂದನಾಗೆ ಮೊದಲ ಸ್ಥಾನ, ನಂತರ ಉಳಿದದ್ದು: ಲವ್‌ ಸ್ಟೋರಿ ಬಿಚ್ಚಿಟ್ಟ ನಿರ್ದೇಶಕಿ
ಕನ್ನಡ ಸುದ್ದಿ  /  ಮನರಂಜನೆ  /  Sandalwood News: ವಿಜಯ ರಾಘವೇಂದ್ರ ಪ್ರಪಂಚದಲ್ಲಿ ಪತ್ನಿ ಸ್ಪಂದನಾಗೆ ಮೊದಲ ಸ್ಥಾನ, ನಂತರ ಉಳಿದದ್ದು: ಲವ್‌ ಸ್ಟೋರಿ ಬಿಚ್ಚಿಟ್ಟ ನಿರ್ದೇಶಕಿ

Sandalwood News: ವಿಜಯ ರಾಘವೇಂದ್ರ ಪ್ರಪಂಚದಲ್ಲಿ ಪತ್ನಿ ಸ್ಪಂದನಾಗೆ ಮೊದಲ ಸ್ಥಾನ, ನಂತರ ಉಳಿದದ್ದು: ಲವ್‌ ಸ್ಟೋರಿ ಬಿಚ್ಚಿಟ್ಟ ನಿರ್ದೇಶಕಿ

ಸ್ಪಂದನಾ ಆಸೆ ಪಟ್ಟಿದ್ದನ್ನು ನೆರವೇರಿಸಲು ಆಕೆಯ ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯ ರಾಘವೇಂದ್ರ ಅಂತೂ, ದೇವಾ! ಅಳತೆ ಮಾಡಿಟ್ಟ ಹಾಗೆ ಆಕೆಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ, ನಂತರ ಉಳಿದದ್ದು.

ವಿಜಯ ರಾಘವೇಂದ್ರ ಸ್ಪಂದನಾ ಲವ್‌ ಸ್ಟೋರಿ ಬಿಚ್ಚಿಟ್ಟ ನಿರ್ದೇಶಕಿ ರೇಖಾ ರಾಣಿ
ವಿಜಯ ರಾಘವೇಂದ್ರ ಸ್ಪಂದನಾ ಲವ್‌ ಸ್ಟೋರಿ ಬಿಚ್ಚಿಟ್ಟ ನಿರ್ದೇಶಕಿ ರೇಖಾ ರಾಣಿ

ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶರಾಗಿದ್ದಾರೆ. ಸ್ಪಂದನಾಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಕಿಟೋ ಡಯರ್‌ ಮಾಡಿದ್ರಿಂದ ಹೀಗೇ ಆಗಿರಬಹುದು, ಕೋವಿಡ್‌ ವ್ಯಾಕ್ಸಿನ್‌ನಿಂದ ಹೀಗೆ ಆಗಿರಬಹುದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಎಲ್ಲವೂ ವ್ಯರ್ಥ ಚರ್ಚೆ. ಎಷ್ಟು ಮಾತನಾಡಿದರೂ, ಏನೇ ಮಾತನಾಡಿದರೂ ಸ್ಪಂದನ ಮತ್ತೆ ವಾಪಸ್‌ ಬರುವುದಿಲ್ಲ.

ಪತ್ನಿಯನ್ನು ಬಹಳ ಪ್ರೀತಿಸುತ್ತಿದ್ದ ವಿಜಯ್‌ ರಾಘವೇಂದ್ರ ಈ ನೋವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂಬುದನ್ನು ನೆನಪಿಸಿಕೊಂಡರೆ ಬಹಳ ಬೇಸರವಾಗುತ್ತದೆ. ವಿಧಿ ಇಬ್ಬರನ್ನೂ ದೂರ ಮಾಡಿದ್ದು ನಿಜಕ್ಕೂ ಬೇಸರದ ವಿಚಾರ. ಈ ನಡುವೆ ಸ್ಯಾಂಡಲ್‌ವುಡ್‌ ನಿರ್ದೇಶಕಿ ರೇಖಾ ರಾಣಿ, ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಲವ್‌ ಸ್ಟೋರಿ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ವಿಜಯ ರಾಘವೇಂದ್ರ ಆತ್ಮೀಯರು ಹೇಳುವ ಪ್ರಕಾರ, ಮೊದಲ ಬಾರಿಗೆ ಸ್ಪಂದನಾ ಅವರನ್ನು ಕಾಫಿ ಡೇಯಲ್ಲಿ ನೋಡಿದ ಅವರು ಮೊದಲ ನೋಟದಲ್ಲೇ ಸೋತಿದ್ದರಂತೆ.

ರೇಖಾ ರಾಣಿ ಹಂಚಿಕೊಂಡಿರುವ ಪೋಸ್ಟ್‌ ಈ ರೀತಿ ಇದೆ

''ಸ್ಪಂದನಾ ಹುಟ್ಟಿದಾಗಿನಿಂದ ಇದುವರೆಗೂ ಅವಳನ್ನು ಆ ಹೆಸರಿನಿಂದ ಕರೆದೇ ಇಲ್ಲ. ಅಚ್ಚು ಎಂದೇ ಕರೆಯುತ್ತಿದ್ದೆ. ಅವಳು ಸೌಮ್ಯ ಮುಖದ ಸುಂದರ ಹಟಮಾರಿ. ಆಸೆ ಪಟ್ಟಿದ್ದನ್ನು ನೆರವೇರಿಸಲು ಆಕೆಯ ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯ ರಾಘವೇಂದ್ರ ಅಂತೂ, ದೇವಾ! ಅಳತೆ ಮಾಡಿಟ್ಟ ಹಾಗೆ ಆಕೆಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ, ನಂತರ ಉಳಿದದ್ದು. ಮುಗ್ದೆಯಾಗಿದ್ದ ಸ್ಪಂದನಾಳನ್ನು ಒಮ್ಮೆ ಸದಾಶಿವನಗರ ಪಾರ್ಕ್ ಬಳಿ ಹುಡುಗನೊಬ್ಬನ ಜೊತೆ ಕಾರಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದುದ್ದನ್ನು ಕಂಡು ಜೀವ ಬಾಯಿಗೆ ಬಂದ ಹಾಗೆ ಆಗಿತ್ತು.''

''ಸ್ಪಂದನಾ ತಂದೆ ಬಿಕೆ ಶಿವರಾಂ ಮೊದಲೇ ಹುಲಿ. ನಿನ್ನ ಪ್ರಾಣಪಕ್ಷಿ ಎಲ್ಲಿಟ್ಟಿದ್ದೀಯ ಹೇಳು ಎಂದು ಅವರನ್ನು ರೇಗಿಸಿದಾಗಲೆಲ್ಲಾ ಮಗಳನ್ನು ಮುದ್ದು ಮಾಡುತ್ತಾ ಅಚ್ಚು ಒಳಗಿದೆ ನನ್ನ ಪ್ರಾಣಪಕ್ಷಿ ಎನ್ನುತ್ತಿದ್ದರು. ಅಪ್ಪನ ಪ್ರೀತಿ ಅವಳ ಆತ್ಮವಿಶ್ವಾಸವನ್ನು ಸದಾ ಉತ್ತುಂಗದಲ್ಲಿಟ್ಟಿತ್ತು. ಮಗಳ ಹಿತ ದೃಷ್ಟಿಯಿಂದ ಈ ವಿಚಾರವನ್ನು ಹೇಳುವುದೋ ಬೇಡವೋ ಎಂದು ಬಹಳ ದಿನ ಒದ್ದಾಡಿದ್ದೆ. ಒಮ್ಮೆ ಸ್ಪಂದನಾಗೆ ಕರೆ ಮಾಡಿ ನಿನ್ನ ಜೊತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. ಆಂಟಿ, ನಾನು ಮದುವೆಯಾದರೆ ಅವರನ್ನೇ, ಅಪ್ಪನಿಗೆ ಹೇಳಿ ಒಪ್ಪಿಸಿ ಎಂದಳು. ಎಷ್ಟು ಹಟ ಮಾಡಿದರೂ ಹುಡುಗ ಯಾರೆಂದು ಹೇಳುತ್ತಿಲ್ಲ. ಸಿನಿಮಾದವನು ಅಂದರೆ ನೀವೆಲ್ಲಾ ಬೇಡ ಅನ್ನುತ್ತೀರಿ. ಅದಕ್ಕೆ ಅವರ ಹೆಸರು ಹೇಳೊಲ್ಲ ಎಂದಳು. ಹಾಗಾದರೆ ನಾನೂ ನಿನ್ನ ಪ್ರೀತಿಗೆ ಸಪೋರ್ಟ್ ಮಾಡೊಲ್ಲ ಎಂದೆ. ಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಎಲ್ಲೂ ಸಿಕ್ಕಿ ಹಾಕಿಕೊಳ್ಳದ ಜಾಣತನ ತೋರುವಷ್ಟು ದೊಡ್ಡವಳಾಗಿಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಸಣ್ಣ ಧ್ವನಿಯಲ್ಲಿ ಕೊನೆಗೂ ಚಿನ್ನಾರಿ ಮುತ್ತ ಹೆಸರು ಹೇಳಿದಳು.''

ಮಗಳ ಪ್ರೀತಿಗೆ ಅಪ್ಪನ ಒಪ್ಪಿಗೆ

''ಸ್ಪಂದನಾ ವಿಚಾರವನ್ನು ಅವರ ತಂದೆಗೆ ಹೇಳಬೇಕು ಎನಿಸಿದರೂ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದರಿಂದ ಹೇಳಲು ಸಾಧ್ಯವಾಗಲಿಲ್ಲ. ಒಮ್ಮೆ ನನ್ನ ಆಪ್ತ ಶಿವರಾಂ ಕರೆ ಮಾಡಿ ಅಚ್ಚುಗೆ ಮದುವೆ ಮಾಡ್ತಿದ್ದೀನಿ ಎಂದರು. ಮತ್ತೆ ನನ್ನ ಜೀವ ಬಾಯಿಗೆ ಬಂತು. ನಡುಗುವ ಧ್ವನಿಯಲ್ಲಿ ಹುಡುಗ ಯಾರು? ಎಂದು ಕೇಳಿದೆ. ಅಚ್ಚು ಕನಸು ಛಿದ್ರವಾಗುವುದು ನನಗೆ ಇಷ್ಟವಿರಲಿಲ್ಲ. ಏಕೆಂದರೆ ನಮ್ಮ ಪಾಲಿಗೆ ಅವಳು ಸ್ವರ್ಗದಿಂದ ನೇರವಾಗಿ ನಮ್ಮ ಕೈಗೆ ಸಿಕ್ಕ ಹೂವು. ನಿಧಾನವಾಗಿ, ಸಮಾಧಾನಕರವಾದ ಧ್ವನಿಯಲ್ಲಿ ಶಿವರಾಂ ಹೇಳಿದ್ದು ಅಚ್ಚುನೇ ಆರಿಸಿಕೊಂಡಿದ್ದಾಳೆ, ವಿಜಯರಾಘವೇಂದ್ರ. ಒಳ್ಳೆ ಹುಡುಗನನ್ನೇ ಆರಿಸಿಕೊಂಡಿದ್ದಾಳಲ್ವಾ? ಎಂದರು.''

''ಶಿವರಾಂ ಮಾತು ಕೇಳುತ್ತಿದ್ದಂತೆ ನೂರಾರು ಬಂಡೆಗಳು ತಲೆಯಿಂದ ಕೆಳಗೆ ಇಳಿದ ಸುಂದರ ಅನುಭವ. ಇಲ್ಲಿ ವಿಜಯರಾಘವೇಂದ್ರ ಪುಣ್ಯ ಮಾಡಿದ್ದನೋ? ಅಚ್ಚು ಪುಣ್ಯ ಮಾಡಿದ್ದಳೋ ಗೊತ್ತಿಲ್ಲ ಅವರ ದಾಂಪತ್ಯ ಜೀವನ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು. ಅಚ್ಚು ಚಿಕ್ಕವಳಿದ್ದಾಗ ಅವಳ ಮಾವನ ಮನೆ ಬೆಳ್ತಂಗಡಿಯಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಹಗಲು ರಾತ್ರಿ ನಡೆಯುತ್ತಿದ್ದ ಧಾರಾವಾಹಿ, ಪುಟ್ಟಿ ನನ್ನ ಹೆಗಲಿಗೆ ಅಂಟಿಕೊಂಡು ಹಗಲೂ ರಾತ್ರಿ ಬೇಸರವಿಲ್ಲದೆ ಆಸಕ್ತಿಯಿಂದ ಶೂಟಿಂಗ್ ನೋಡುತ್ತಿದ್ದಳು. ಒಮ್ಮೆ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಾ ಕುಳಿತಿದ್ದೆ. ಮುಖ ಊದಿಸಿಕೊಂಡು ಹತ್ತಿರ ಬಂದು ಸೌಮ್ಯವಾದ ಕೋಪದಿಂದ ಆಂಟಿ ನಾನು ಅವತ್ತಿಂದ ನೋಡ್ತಿದ್ದೀನಿ. ಧಾರಾವಾಹಿಯಲ್ಲಿ ನನ್ನ ಹೆಸರು ಯಾಕೆ ಇನ್ನೂ ಬಂದಿಲ್ಲ ? ಎಂದು ಕೇಳಿದಳು. ಪಟ್ಟನೆ ನಾನು ಎಚ್ಚೆತ್ತು ಹೇಳಿದೆ ಅಚ್ಚು, ಮುಂದಿನ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇರುತ್ತೆ ನೋಡು, ಪ್ರಾಮಿಸ್‌ ಎಂದೆ. ಅದರಂತೆ ನನ್ನ ಮುಂದಿನ ಮಕ್ಕಳ ಧಾರಾವಾಹಿ 'ಜಿಂ ಜಿಂ ಜಿಂಬಾ'ದಲ್ಲಿ ಮುಖ್ಯ ಪಾತ್ರಧಾರಿಯ ಹೆಸರನ್ನು ಅಚ್ಚು ಅಂತಾನೇ ಇಟ್ಟೆ.''

ಸ್ಪಂದನಾಗೆ ಭೂಮಿಯಲ್ಲೇ ಸ್ವರ್ಗ ಸೃಷ್ಟಿಸಿದ್ದ ದೇವರು

''ಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಅಚ್ಚುಗಳು ನನ್ನ ಎಲ್ಲಾ ಸೀರಿಯಲ್ ಗಳಲ್ಲೂ ಓಡಾಡಿಬಿಟ್ಟರು. ಅಚ್ಚು, ಈ ಭೂಮಿಗೆ ಬರಲು ಒಳ್ಳೆಯ ಅಪ್ಪ, ಅಮ್ಮಂದಿರ ಆಯ್ಕೆ ಸರಿಯಾಗಿತ್ತು. ಅಣ್ಣನ ಆಯ್ಕೆ ಅದೃಷ್ಟದಿಂದ ಕೂಡಿತ್ತು, ಗಂಡನ ಆಯ್ಕೆಗೆ ಸ್ವರ್ಗದಿಂದ ದೇವತೆಗಳೆಲ್ಲಾ ಬಂದು ಹರಸಿದರು. ಮಗನ ಆಯ್ಕೆಯೂ ಸ್ವರ್ಗದಿಂದ ಬಂದ ಮುದ್ದಾದ ದೇವರಾಗಿತ್ತು. ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟುಬೇಗ ನಿನ್ನ ತವರುಮನೆ, ಆ ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ, ಅಲ್ಲೂ ಹೀಗೆ ಸುಖವಾಗಿರು ಕಂದಾ'' ಎಂದು ರೇಖಾ ರಾಣಿ ಸ್ಪಂದನಾ ಬಗ್ಗೆ ಬರೆದುಕೊಂಡಿದ್ದಾರೆ.

ರೇಖಾ ರಾಣಿ ಬರೆದ ಸಾಲುಗಳನ್ನು ಓದುತ್ತಿದ್ದರೆ ನಿಜಕ್ಕೂ ಯಾರ ಕಣ್ಣುಗಳಲ್ಲೇ ಆಗಲಿ, ನೀರು ಜಿನುಗದೆ ಇರದು. ನಿಜಕ್ಕೂ ಸ್ವರ್ಗದಂತಿದ್ದ ಆ ಕುಟುಂಬವನ್ನು ನೋಡಿ ವಿಧಿಗೂ ಸಹಿಸಲಾಗಲಿಲ್ಲವೇನೋ.

Whats_app_banner