ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಚೇತನ್‌ ವೀಸಾ ರದ್ದು; ಜೈಲು, ಗಡಿಪಾರು ಅತಿರೇಕ ಎಂದು ಭಾರತ ಸರ್ಕಾರದ ನಡೆ ಪ್ರಶ್ನಿಸಿದ ನಟ ಕಿಶೋರ್

Chetan Ahimsa: ಚೇತನ್‌ ವೀಸಾ ರದ್ದು; ಜೈಲು, ಗಡಿಪಾರು ಅತಿರೇಕ ಎಂದು ಭಾರತ ಸರ್ಕಾರದ ನಡೆ ಪ್ರಶ್ನಿಸಿದ ನಟ ಕಿಶೋರ್

ಹಿಂದುತ್ವ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ.

ಚೇತನ್‌ ಅಹಿಂಸಾ ಪರ ನಿಂತ ನಟ ಕಿಶೋರ್‌
ಚೇತನ್‌ ಅಹಿಂಸಾ ಪರ ನಿಂತ ನಟ ಕಿಶೋರ್‌

'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್‌ ಅಹಿಂಸಾ ಪ್ರತಿದಿನ ಒಂದಲ್ಲಾ ಒಂದು ವಿಚಾರವಾಗಿ ಚರ್ಚೆಯ ವಿಷಯವಾಗುತ್ತಾ ಬಂದಿದ್ದಾರೆ. ಹಿಂದುತ್ವದ ಬಗ್ಗೆ ಟ್ವೀಟ್‌ ಮಾಡಿ ಅರೆಸ್ಟ್‌ ಆಗಿದ್ದ ಚೇತನ್‌, ಜಾಮೀನು ಪಡೆದು ಹೊರ ಬಂದಿದ್ದರು. ಆಗಲೂ ಸುಮ್ಮನಿರದ ಚೇತನ್‌ ಗಾಂಜಾ ಕೃಷಿ, ತಿರುಪತಿ ದೇವಸ್ಥಾನದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಚೇತನ್‌ ವೀಸಾ ರದ್ದು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಚೇತನ್‌ ಅಹಿಂಸಾ ವೀಸಾ ರದ್ದಾಗಿದೆ ಎಂದು ತಿಳಿಯುತ್ತಿದ್ದಂತೆ ಕೇಂದ್ರ ಸರ್ಕಾರದ ನಿರ್ಧಾರ ಸರಿ ಇದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಚೇತನ್‌ ಪರ ನಿಂತಿದ್ದಾರೆ. ಸ್ಯಾಂಡಲ್‌ವುಡ್‌ ನಟ ಕಿಶೋರ್‌ ಕೂಡಾ ಈಗ ಚೇತನ್‌ ಪರ ನಿಂತಿದ್ದು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಿಶೋರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

''ಹಿಂದುತ್ವ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ.

ಆದರೆ 'ಹಿಂದುತ್ವ' ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ??

ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು??'' ಎಂದು ಕಿಶೋರ್‌ ಚೇತನ್‌ ವೀಸಾ ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಕಿಶೋರ್‌ ಮಾತುಗಳಿಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮ್ಮ ಪರವಾಗಿ ಮಾತನಾಡಿದ ಕಿಶೋರ್‌ಗೆ ಚೇತನ್‌ ಧನ್ಯವಾದ ಅರ್ಪಿಸಿದ್ದಾರೆ.

ರಾಜ್ಯದಲ್ಲಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದ ಚೇತನ್‌

"ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸುಖು, ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿದ್ದಾರೆ. ಕರ್ನಾಟಕದಲ್ಲಿಯೂ ಅದು ಜಾರಿಯಾಗಲಿ" ಎಂದು ಚೇತನ್‌ ಇತ್ತೀಚೆಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಜೊತೆಗೆ ಹಿಮಾಚಲಪ್ರದೇಶದ ಸಿಎಂ ನಡೆಗೆ ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ದರು. ಚೇತನ್‌ ಅವರ ಈ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ತಿರುಪತಿ ದೇವಸ್ಥಾನದ ಬಗ್ಗೆ ಚೇತನ್‌ ವಿವಾದಾತ್ಮಕ ಮಾತು

ನ್ಯಾಷನಲ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಚೇತನ್‌ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಬುದ್ಧನ ಮಂದಿರವನ್ನು ಕೆಡವಿ ಆ ಜಾಗದಲ್ಲಿ ತಿರುಪತಿ ದೇವಸ್ಥಾನ ಕಟ್ಟಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಪೋಸ್ಟ್‌ ಹಂಚಿಕೊಂಡಿದ್ದರು. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಟಿ20 ವರ್ಲ್ಡ್‌ಕಪ್ 2024