KTM Movie: 25 ದಿನ ಪೂರೈಸಿದ ಕೆಟಿಎಂ ಸಿನಿಮಾ; ಈ ಟ್ರೋಫಿ ಕೈಸೇರಲು ಹತ್ತು ವರ್ಷ ಬೇಕಾಯ್ತು ಎಂದ ದೀಕ್ಷಿತ್ ಶೆಟ್ಟಿ
Kannada KTM Movie: ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಕೆಟಿಎಂ ಎಂಬ ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟಿಸಿರುವ ಈ ಚಿತ್ರ ಜನರ ಮೆಚ್ಚುಗೆ ಪಡೆಯುತ್ತಿದೆ.
ಬೆಂಗಳೂರು: ಕನ್ನಡ ಚಿತ್ರಗಳ ಪಾಲಿಗೆ ಸಂಭ್ರಮವೆಂಬುದು ವಾರ, ತಿಂಗಳ ಸುತ್ತ ಬಂಧಿಯಾಗಿರೋ ಕಾಲಮಾನ. ಇಂಥಾ ಹೊತ್ತಿನಲ್ಲಿ ಸಿನಿಮಾವೊಂದು ಯಶಸ್ವಿಯಾಗಿ ಒಂದು ವಾರ ಪೂರೈಸೋದೇ ಕನಸಿನ ಮಾತು ಎನ್ನುವಂಥಾ ವಾತಾವರಣವಿದೆ. ಈ ವಾತಾವರಣದ ನಡುವೆಯೇ ಕೆಟಿಎಂ ಸಿನಿಮಾ 25 ದಿನ ಪೂರೈಸಿದೆ. ಈ ಖುಷಿ ಕ್ಷಣಗಳನ್ನು ಚಿತ್ರತಂಡ ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದೆ.
ಈ ಸಾಧನೆಗೆ ಹತ್ತು ವರ್ಷ ಬೇಕಾಯ್ತು ಎಂದ ದೀಕ್ಷಿತ್ ಶೆಟ್ಟಿ
"ಈ ಟ್ರೋಫಿ ನೋಡ್ತಾ ಇದ್ರೆ, ನನ್ನ ಮೊದಲ 25 ದಿನ. ಇದು ಕೈ ಸೇರೋದಿಕ್ಕೆ 10 ವರ್ಷ ಬೇಕಾಯ್ತು. 2014ರಲ್ಲಿ ಶುರುವಾದ ಪ್ರಯಾಣ. ಇದು ನೋಡ್ತಾ ಇದ್ದಾರೆ ನನಗೊಂದು ಹಾಡು ನೆನಪು ಆಗುತ್ತದೆ. ನನಗೆ ನಾನು ಹೇಳಿಕೊಳ್ಳುತ್ತಿದ್ದ ಹಾಡು. ಏನೇ ಮಾಡು ಹೆದರುವೇನೋ, ಬಾಳುವೆನು ನೋಡು, ಬದುಕುವೆನೇನೂ ನೋಡು,. ನನ್ನ ಪ್ರಾರಂಭದ ದಿನದಲ್ಲಿ ಈ ಹಾಡನ್ನು ಯಾವಾಗಲೂ ಕೇಳ್ತಾ ಇದ್ದೆ. ನನ್ನನ್ನು ನಾನು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಈ 25 ದಿನಗಳ ಹಿಂದೆ 4 ವರ್ಷಗಳ ಜರ್ನಿ ಇದೆ. ಈ 4 ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಸಿನಿಮಾ ಮಾಡ್ತಾ, ಮಾಡ್ತಾ ಮಧ್ಯ ಬೇರೆಯದ್ದನ್ನೂ ಮಾಡಿದೆ. ಈ ಸಿನಿಮಾ ಇಲ್ಲಿ ನೋಡುತ್ತಾ ಇತ್ತು. ಎದೆಗೆ ಒತ್ತಿಕೊಂಡು ಮಾಡಿದ ಸಿನಿಮಾ ಇದು" ಎಂದು ನಟ ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.
"ಕೆಟಿಎಂ 25 ದಿನ ಪೂರೈಸಿದೆ. ಇನ್ನೂ ಶೋ ಇದೆ. 12 ಸಿನಿಮಾ ರಿಲೀಸ್ ಆಯ್ತು. 12 ಸಿನಿಮಾದಲ್ಲಿ ನಮ್ಮ ಸಿನಿಮಾ 25 ದಿನ ಆಗಿದೆ. ಅದೇ ಸಂತೋಷ. ಈಗ 2 ವಾರ ಉಳಿಯುವುದೇ ಕಷ್ಟ. ನಮ್ಮದು 25 ದಿನ ಆಗಿದೆ. ಕಾರಣ ಮೀಡಿಯಾ, ಜನರು ಸಪೋರ್ಟ್ ನಿಂದ ಇದು ಆಗಿದೆ. ಈ ಚಿತ್ರ ಆಗೋದಿಕ್ಕೆ ಮುಖ್ಯ ಕಾರಣ ನನ್ನ ಟೆಕ್ನಿಷಿಯನ್ಸ್. ಅವರನ್ನು ನೆನಪಿಸಿಕೊಳ್ಳೋದಿಕ್ಕೆ ಇಷ್ಟಪಡುತ್ತೇನೆ. ಕಲಾವಿದರ ನಟನೆ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ" ಎಂದು ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.
ಕೆಟಿಎಂ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ದೀಕ್ಷಿತ್ ಶೆಟ್ಟಿಗೆ ಸಂಜನಾ ದಾಸ್, ಕಾಜಲ್ ಕುಂದರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಈ ಸಿನಿಮಾದಲ್ಲಿದ್ದಾರೆ.
ಕೆಟಿಎಂ ಎಂಬ ಈ ಸಿನಿಮಾಕ್ಕೆ ಅರುಣ್ ಆಕ್ಷನ್ ಕಟ್ ಹೇಳಿದ್ದಾರೆ. ಇವರು ಈ ಹಿಂದೆ ಅಥರ್ವ ಎಂಬ ಸಿನಿಮಾಕ್ಕೆ ಡೈರೆಕ್ಷನ್ ಮಾಡಿದ್ದರು. ‘ಮಹಾಸಿಂಹ ಮೂವೀಸ್’ ಬ್ಯಾನರ್ ಅಡಿಯಲ್ಲಿ ಕೆಟಿಎಂ ಆಗಮಿಸಿದೆ. ರಕ್ಷಯ್ ಸಹ ನಿರ್ಮಾಣ, ನವೀನ್ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಚೇತನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ ಇದೆ. ಅಭಿನಂದನ್ ದೇಶಪ್ರಿಯ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದ ಕಥೆ ಕರಾವಳಿಯಿಂದ ಆರಂಭವಾಗುತ್ತದೆ. ಉಡುಪಿ, ಕೋಟ, ಕುಂದಾಪುರದ ಘಮಲು ಇದೆ. ಆ ಊರುಗಳಲ್ಲಿ ಆಡಿ ಬೆಳೆದ ಹುಡುಗನ ಕಹಾನಿ ಇದಾಗಿದೆ. ಮುಗ್ಧ ಕಥಾನಾಯಕನ ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸುತ್ತದೆ. ಬಳಿಕ ಆತ ಬೆಂಗಳೂರಿಗೆ ಬರುತ್ತಾನೆ. ಬಳಿಕ ನಡೆಯುವ ಹಲವು ಘಟನೆಗಳ ಸುತ್ತ ಈ ಸಿನಿಮಾ ಸುತ್ತುತ್ತದೆ.