ಕನ್ನಡ ಸುದ್ದಿ  /  Entertainment  /  Sandalwood News Kannada Late Actor Power Star Birthday Fans Bengaluru Kanteerava Studio Pcp

ನಾಡಿನೆಲ್ಲಡೆ ಇಂದು ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿ ದಿನ; ಅಪ್ಪು ನೆನೆದು ಅಭಿಮಾನಿಗಳು ಭಾವುಕ

ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ನಾಡಿನೆಲ್ಲೆಡೆ ಇಂದು ಸ್ಪೂರ್ತಿ ದಿನವಾಗಿ ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಪ್ಪು ಸಮಾದಿ, ರಾಜ್ಯದ ಇತರೆ ಕಡೆಗಳಲ್ಲಿ ಅಪ್ಪು ಹುಟ್ಟುಹಬ್ಬವನ್ನು ಅಭಿಮಾನಿಗಳು ಭಾವುಕರಾಗಿ ಆಚರಿಸುತ್ತಿದ್ದಾರೆ. (ವರದಿ: ಮನೋಜ್‌ ವಿಜಯಿಂದ್ರ)

ನಾಡಿನೆಲ್ಲಡೆ ಇಂದು ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿ ದಿನ
ನಾಡಿನೆಲ್ಲಡೆ ಇಂದು ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿ ದಿನ

ಬೆಂಗಳೂರು: ಪವರ್ ಸ್ಟಾರ್‌ ಪುನೀತ್ ರಾಜ್​ಕುಮಾರ್ ಅವರು ಇಂದು ನಮ್ಮೊಂದಿಗೆ ಇದ್ದಿದ್ರೇ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತ ಇದ್ರು. ಆದರೆ, ಅವರು ನಮ್ಮೊಂದಿಗೆ ಇಲ್ಲ ಅಂದ್ರು ಕೂಡ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು‌ ಆಚರಿಸಿ‌,‌ ಅವರ ಆದರ್ಶಗಳನ್ನ‌ ಮುಂದುವರೆಸಿಕೊಂಡು ಬರುತ್ತಾ ಇದ್ದಾರೆ. ಮಧ್ಯರಾತ್ರಿಯಿಂದಲೇ ಅವರ ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಅವರ ಪುಣ್ಯಭೂಮಿ ಬಳಿ ಅವರ ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದಾರೆ. ಇನ್ನೂ ಕಳೆದ ಎರಡು ದಿನಗಳಿಂದಲೂ ಅಪ್ಪು ಸ್ಮಾರಕಕ್ಕೆ ಭೇಟಿ ನೀಡುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಹುಟ್ಟುಹಬ್ಬವಾದ್ದರಿಂದ ಮಧ್ಯರಾತ್ರಿಯಿಂದಲೇ ಹಲವು ಕಾರ್ಯಕ್ರಮಗಳನ್ನ ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಸ್ಮಾರಕ ಬಳಿ ಅಭಿಮಾನಿಗಳು ಹಮ್ಮಿಕೊಂಡಿದ್ರು. ಮಧ್ಯರಾತ್ರಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ರು. ಅಂದಹಾಗೆ ಅಪ್ಪು ಅವರ ಹುಟ್ಟುಹಬ್ಬವನ್ನ ‘ಸ್ಪೂರ್ತಿಯ ದಿನ’ವನ್ನಾಗಿ ಆಚರಿಸುತ್ತಿರುವುದು ವಿಶೇಷ.

ಹುಟ್ಟುಹಬ್ಬದ ಅಂಗವಾಗಿ ಅಪ್ಪುವಿನ ಸಮಾಧಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಸಿಂಗರಿಸಲಾಗಿದೆ. ಅಭಿಮಾನಿಗಳ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಇವತ್ತು ಪವರ್ ಸ್ಟಾರ್ ಹುಟ್ಟುಹಬ್ಬದ ದಿನವಾದ ಇಂದು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸ್ಮಾರಕಕ್ಕೆ ದಿನ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನ ದೊಡ್ಮನೆಯವರು ಮಾಡಿದ್ದಾರೆ. ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಅಪ್ಪುಗೆ ಇಷ್ಟವಾದ ಚಿಕನ್ ಬಿರಿಯಾನಿಯನ್ನ ಅಭಿಮಾನಿಗಳಿಗೆ ಉಣಬಡಿಸುತ್ತಿದ್ದಾರೆ. ಈ ಊಟದ ಜವಾಬ್ದಾರಿಯನ್ನ ಯುವ ರಾಜ್​ಕುಮಾರ್ ಹೊತ್ತುಕೊಂಡಿದ್ದಾರೆ.

ಇನ್ನೂ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿವೆ. ಅಪ್ಪು ಸಿನಿಮಾದ ಹಾಡುಗಳು ಇಂದು ಸ್ಮಾರಕದ ಬಳಿ ಕೇಳಿ ಬರುತ್ತಿವೆ.. ಜೊತೆಗೆ ಅಭಿಮಾನಿಗಳು ಸ್ಮಾರಕದ ಬಳಿಯೇ ರಕ್ತದಾನ, ನೇತ್ರದಾನ ಶಿಬಿರಗಳನ್ನು ಸಹ ಏರ್ಪಡಿಸಿದ್ದಾರೆ. ಪ್ರತಿ ಹುಟ್ಟುಹಬ್ಬದಂತೆ ಇಂದು ಸಹ ಲಕ್ಷಾಂತರ ಜನ ರಕ್ತದಾನ ಹಾಗೂ ನೇತ್ರದಾನಗಳನ್ನು ಮಾಡಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ಅಪ್ಪು ಪುತ್ರಿ ಆಗಮಿಸಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ, ಭಾವುಕರಾದ್ರು. ರಾಘವೇಂದ್ರ ರಾಜ್​ಕುಮಾರ್ ಹಾಗೂ ಕುಟುಂಬದವರು ಆಗಮಿಸಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ರು.

ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ ಇಡೀ ರಾಜ್ಯದೆಲ್ಲೆಡೆ ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಹಲವು ನಗರಗಳಲ್ಲಿ ಅಭಿಮಾನಿಗಳು ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನ ಅಭಿಮಾನಿಗಳು ಆಯೋಜಿಸಿದ್ದಾರೆ. ಅಪ್ಪು ಅಭಿಮಾನಿಗಳು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ತೆರಳಿ ಸೇವೆಗಳನ್ನು ಸಹ ಮಾಡುತ್ತಿದ್ದಾರೆ. ಒಟ್ಟಾರೆ ಅಪ್ಪು ಬದುಕಿದ್ದಾಗ ಮಾಡಿದ್ದ ಸಮಾಜಮುಖಿ ಕೆಲಸವನ್ನ ಅವರ ಅಭಿಮಾನಿಗಳು ಮುಂದುವರೆಸಿದ್ದಾರೆ.

  • ವರದಿ: ಮನೋಜ್ ವಿಜಯೀಂದ್ರ

IPL_Entry_Point