Friday Release: ಮಾರ್ಚ್ 15ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು, ಕೆರೆಬೇಟೆಯಿಂದ ಹೈಡ್ ಆಂಡ್ ಸೀಕ್‌ವರೆಗೆ 6 ಸಿನಿಮಾ ರಿಲೀಸ್
Movies Release on 15 march 2024: ಮಾರ್ಚ್ 15ರ ಶುಕ್ರವಾರ ಹಲವು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೆರೆಬೇಟಿ, ಹೈಡ್ ಆಂಡ್ ಸೀಕ್, ಮೆಹಬೂಬಾ, ಫೋಟೋ, ಚೌ ಚೌ ಬಾತ್, ಸೋಮು ಸೌಂಡ್ ಎಂಜಿನಿಯರ್ ಎಂಬ ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಬೆಂಗಳೂರು: ಇತ್ತೀಚೆಗೆ ಪ್ರತಿವಾರ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿರುವುದು ಗುಡ್‌ನ್ಯೂಸ್. ಆದರೆ, ಬಿಡುಗಡೆಯಾದ ಸಿನಿಮಾಗಳಲ್ಲಿ ಯಾವುವೂ ಕಾಟೇರದಂತೆ ಸೂಪರ್‌ಹಿಟ್ ಆಗದೆ ಇರುವುದು ಬ್ಯಾಡ್ ನ್ಯೂಸ್. ಕಳೆದ ವಾರ ಕರಟಕ ದಮನಕ, ರಂಗನಾಯಕ ಸಿನಿಮಾಗಳು ರಿಲೀಸ್ ಆಗಿವೆ. ಕಳೆದ ವಾರ ಬಿಡುಗಡೆಯಾದ ಬ್ಲಿಂಕ್ ಸಿನಿಮಾ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಾರ ಯಾವೆಲ್ಲ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಕೆರೆಬೇಟೆ, ಹೈಡ್ ಆಂಡ್ ಸೀಕ್, ಮೆಹಬೂಬಾ, ಫೋಟೋ, ಚೌ ಚೌ ಬಾತ್, ಸೋಮು ಸೌಂಡ್ ಎಂಜಿನಿಯರ್ ಎಂಬ ಆರು ಸಿನಿಮಾಗಳು ಈ ವಾರ ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿವೆ.
ಕೆರೆಬೇಟೆ
ಅಪ್ಪಟ ಹಳ್ಳಿ ಸೊಗಡಿನ ಕೆರೆಬೇಟೆ ಸಿನಿಮಾ ಮಾರ್ಚ್ 15ರಂದು ಬಿಡುಗಡೆಯಾಗುತ್ತಿದೆ. ಜನಮನ ಸಿನಿಮಾ ಸಂಸ್ಥೆ ನಿರ್ಮಿಸಿದ ಈ ಸಿನಿಮಾ ಜನರ ಮನಸ್ಸಿಗೆ ಹತ್ತಿರವಾಗುತ್ತ ಕಾದು ನೋಡಬೇಕಿದೆ. ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಜತೆಗೆ ಇತರೆ ಹಲವು ವಿಚಾರಗಳು ಈ ಸಿನಿಮಾದಲ್ಲಿ ಇರುವ ನಿರೀಕ್ಷೆಯಿದೆ. ರಾಜ್ ಗುರು ನಿರ್ದೇಶನದ ಈ ಸಿನಿಮಾದಲ್ಲಿ ಗೌರಿಶಂಕರ್ ನಾಯಕರಾಗಿ, ಬಿಂದು ಶಿವರಾಮ್ ನಾಯಕಿಯಾಗಿ ನಟಿಸಿದ್ದಾರೆ.
ಮೆಹಬೂಬಾ
ಮೆಹಬೂಬಾ ಸಿನಿಮಾ ಎಂದಾಕ್ಷಣ ನಿಮಗೆ ಮಾಡರ್ನ್ ರೈತ ಶಶಿ ನೆನಪಿಗೆಬರಲೇಬೇಕು. ಬಿಗ್‌ಬಾಸ್ ಸ್ಪರ್ಧಿಯಾಗಿ ಗೆಲುವು ಪಡೆದಿದ್ದ ಶಶಿ ನಾಯಕ ನಟನಾಗಿ ನಟಿಸಿರುವ ಈ ಚಿತ್ರ ಮಾರ್ಚ್ 15ರಂದು ರಿಲೀಸ್ ಆಗುತ್ತಿದೆ. ಅನೂಪ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ಶಶಿ ಅವರು ಸ್ಯಾಂಡಲ್‌ವುಡ್ ನಟರಾಗಿ ಲಾಂಚ್ ಆಗುತ್ತಿದ್ದಾರೆ.
ಫೋಟೋ
ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟದ ಕಥೆಗಳನ್ನು ಹೊಂದಿರುವ ಫೋಟೋ ಸಿನಿಮಾ ಕೂಡ ಮಾರ್ಚ್ 15ರಂದು ಬಿಡುಗಡೆಯಾಗುತ್ತಿದೆ. ಇದು ಪ್ರಕಾಶ್ ರಾಜ್ ಸಿನಿಮಾ.
ಹೈಡ್ ಆಂಡ್ ಸೀಕ್
ಈ ಶುಕ್ರವಾರ ಹೈಡ್ ಆಂಡ್ ಸೀಕ್ ಎಂಬ ಸಿನಿಮಾವೂ ಬಿಡುಗಡೆಯಾಗುತ್ತಿದೆ. ಅನೂಪ್ ರೇವಣ್ಣ, ಧನ್ಯಾ ರಾಮ್ಕುಮಾರ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಪುನೀತ್ ನಾಗರಾಜು ನಿರ್ದೇಶಿಸಿದ್ದಾರೆ. ಇದು ಅಪಹರಣದ ಕುರಿತ ಕಥೆ ಹೊಂದಿದೆ. ಹೈಡ್ ಆಂಡ್ ಸೀಕ್ ಎಂದರೆ ಕಳ್ಳ ಪೊಲೀಸ್ ಆಟವೇ ಎಂದು ಕಾದು ನೋಡಬೇಕಿದೆ.
ಚೌ ಚೌ ಬಾತ್
ಇದು ಉಪ್ಪಿಟ್ಟು ಕೇಸರಿಬಾತ್ ಅಲ್ಲ. ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾವಿದು. ಕೇಂಜ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರವು ಹೈಪರ್‌ಲಿಂಕ್ ಜಾನರ್ ಹೊಂದಿದೆಯಂತೆ. ಹಾಗೆಂದರೆ ಏನು ಎಂದು ನಾಳೆ ಚಿತ್ರಮಂದಿರಗಳಲ್ಲಿ ನೋಡಬಹುದು. ಚೌ ಚೌ ಬಾತ್ ಸಿನಿಮಾದಲ್ಲಿ ಮೂವರು ನಾಯಕರು ಮತ್ತು ನಾಯಕಿಯರಿದ್ದಾರೆ.
ಸೋಮು ಸೌಂಡ್ ಎಂಜಿನಿಯರ್
ಸೋಮು ಸೌಂಡ್ ಇಂಜಿನಿಯರ್' ಸಿನಿಮಾದಲ್ಲಿ ಸಲಗ ಸಿನಿಮಾದ ಕೆಂಡ ಖ್ಯಾತಿಯ ಶ್ರೇಷ್ಠ ಹೀರೋ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೂರಿ ಶಿಷ್ಯ ಅಭಿ ನಿರ್ದೇಶನದ ಈ ಸಿನಿಮಾವೂ ಈ ವಾರ ನಿರೀಕ್ಷೆ ಹೆಚ್ಚಿಸಿದೆ.
